ಗುರುವಾರ , ಏಪ್ರಿಲ್ 22, 2021
30 °C

ಅತ್ಯಂತ ಅಪಾಯಕಾರಿ ಪ್ರಾಣಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Prajavani

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ಕಾಡಿನಲ್ಲಿ ವೃಕ್ಷದೇವತೆಯಾಗಿ ಜನ್ಮತಾಳಿದ್ದ. ಅದರಿಂದ ಸ್ವಲ್ಪದೂರದಲ್ಲಿ ಮತ್ತೊಂದು ದಟ್ಟವಾದ ಕಾಡಿನಲ್ಲಿ ಮತ್ತೊಂದು ವೃಕ್ಷದೇವತೆ ವಾಸವಾಗಿತ್ತು. ಬೋಧಿಸತ್ವ ವಾಸವಾಗಿದ್ದ ಅರಣ್ಯ ಅಷ್ಟೊಂದು ಒತ್ತೊತ್ತಾಗಿರಲಿಲ್ಲವಾದ್ದರಿಂದ ಹಿಂಸ್ರಮೃಗಗಳು ವಾಸವಾಗದೆ ಕೇವಲ ಜಿಂಕೆ, ಮೊಲಗಳಂತಹ ಸಾಧು ಪ್ರಾಣಿಗಳು ಮನೆಮಾಡಿಕೊಂಡಿದ್ದವು ಆದರೆ ಇನ್ನೊಂದು ಕಾಡಿನಲ್ಲಿ ಅನೇಕ ಸಿಂಹಗಳು, ಹುಲಿ, ಚಿರತೆಗಳು ತುಂಬಿದ್ದವು. ಈ ವನ್ಯ ಮೃಗಗಳು ಪ್ರಾಣಿಗಳನ್ನು ಕೊಂದು ಎಳೆದುಕೊಂಡು ಬಂದು, ಮಾಂಸವನ್ನು ತಿಂದು ಉಳಿದುದನ್ನು ಹಾಗೆಯೇ ಬಿಟ್ಟು ಹೋಗುತ್ತಿದ್ದವು. ಇದರಿಂದಾಗಿ ಬಿದ್ದ ಮಾಂಸ ಕೊಳೆತು ದುರ್ಗಂಧ ಪಸರಿಸುತ್ತಿತ್ತು.

ಎರಡನೆಯ ವೃಕ್ಷದೇವತೆಗೆ ಇದು ಬೇಸರ ತಂದಿತು. ಒಂದು ದಿನ ಅದು ಬಂದು ಬೋಧಿಸತ್ವನಿಗೆ ತನ್ನ ಕಷ್ಟವನ್ನು ಹೇಳಿಕೊಂಡಿತು. ಈ ಹುಲಿಸಿಂಹಗಳಿಂದ ತನಗೆ ಆಗುತ್ತಿರುವ ಹಿಂಸೆಯನ್ನು ತಾಳಲಾಗುತ್ತಿಲ್ಲ ಆದ್ದರಿಂದ ಅವನ್ನೆಲ್ಲ ಹೆದರಿಸಿ ಕಾಡಿನಿಂದ ಓಡಿಸಿಬಿಡಲೇ ಎಂದು ಕೇಳಿತು. ಆಗ ಬೋಧಿಸತ್ವ ವೃಕ್ಷದೇವತೆ ಇನ್ನೊಂದು ದೇವತೆಗೆ ಛೀಮಾರಿ ಹಾಕಿ, ‘ಸ್ನೇಹಿತ, ಈ ಪ್ರಾಣಿಗಳಿಂದಾಗಿಯೇ ನಿನ್ನ ಅರಣ್ಯ ಕ್ಷೇಮವಾಗಿದೆ. ಅವುಗಳ ಹೆದರಿಕೆಯಿಂದಲೇ ಮನುಷ್ಯರು ಅರಣ್ಯದ ಕಡೆಗೆ ಬರುತ್ತಿಲ್ಲ. ನನ್ನ ಕಾಡೂ ಹತ್ತಿರದಲ್ಲೇ ಇರುವುದರಿಂದ ಅದು ಭದ್ರವಾಗಿದೆ. ವನ್ಯಮೃಗಗಳೇನಾದರೂ ಕಾಡಿನಿಂದ ಮರೆಯಾದರೆ ಈ ಆಸೆಬುರುಕ ಮನುಷ್ಯ ಕಾಡನ್ನೇ ಕಡಿದು ನಗರವನ್ನಾಗಿ ಮಾಡುತ್ತಾನೆ. ಎಚ್ಚರ’ ಎಂದ ಹೇಳಿತು. ಎರಡನೆಯ ವೃಕ್ಷದೇವತೆ ಈ ಮಾತುಗಳಿಗೆ ಒಪ್ಪಿಗೆ ಕೊಟ್ಟಂತೆ ಮಾಡಿ ಮರಳಿ ಹೋದರೂ ಅದರ ಮನಸ್ಸು ಮಾತ್ರ ಪ್ರಾಣಿಗಳನ್ನು ಓಡಿಸುವುದರಲ್ಲಿಯೇ ಇತ್ತು. ಒಂದು ದಿನ ಅದು ಕೋಪವನ್ನು ತಡೆಯಲಾಗದೆ ತನ್ನ ಉಗ್ರರೂಪವನ್ನು ಧರಿಸಿ ಹುಲಿ, ಸಿಂಹಗಳ ಮುಂದೆ ನಿಂತಿತು. ಎಲ್ಲ ಪ್ರಾಣಿಗಳು ವೃಕ್ಷದೇವತೆಯ ಈ ಘೋರ ರೂಪವನ್ನು ಕಂಡು ಗಾಬರಿಯಾಗಿ ಕಾಡನ್ನು ತೊರೆದು ಹೋಗಿಬಿಟ್ಟವು.

ಕೆಲವು ದಿನಗಳ ನಂತರ ಕಾಡಿನ ಸುತ್ತಮುತ್ತ ಇದ್ದ ಜನರಿಗೆ ಹುಲಿ-ಸಿಂಹಗಳ ಗರ್ಜನೆ ಕೇಳಿಸದ್ದರಿಂದ, ಹೆಜ್ಜೆ ಗುರುತುಗಳು ಕಾಣದಿದ್ದುದರಿಂದ ಧೈರ್ಯವಾಗಿ ಕಾಡಿನೊಳಗೆ ಬರತೊಡಗಿದರು. ಮತ್ತಷ್ಟು ದಿನಗಳ ನಂತರ ಗುಂಪು ಗುಂಪಾಗಿ ಬಂದು ಮರಗಳನ್ನು ಕಡಿದು ಊರಿಗೆ ಸಾಗಿಸಲು ಪ್ರಾರಂಭಿಸಿದರು. ಮತ್ತೆ ಕೆಲವರಂತೂ ವೃಕ್ಷದೇವತೆ ವಾಸವಾಗಿದ್ದ ಮರದ ಕೊಂಬೆಗಳನ್ನೇ ಕಡಿದರು. ನೋಡನೋಡುತ್ತಿದ್ದಂತೆ ಎರಡು ವರ್ಷಗಳಲ್ಲಿ ಕಾಡು ಬಯಲಾಗತೊಡಗಿತು. ಗಾಬರಿಯಾದ ವೃಕ್ಷದೇವತೆ ಮತ್ತೆ ಬೋಧಿಸತ್ವನ ಕಡೆಗೆ ಓಡಿ ಬಂದಿತು.

ತನ್ನ ಗೋಳನ್ನು ಹೇಳಿಕೊಂಡಿತು. ಆಗ ಬೋಧಿಸತ್ವ, ‘ನಿನ್ನ ಕಾಡಿನಿಂದ ಓಡಿಹೋದ ಪ್ರಾಣಿಗಳು ಎಲ್ಲಿವೆ ಎಂಬುದನ್ನು ಪತ್ತೆ ಮಾಡು. ದೇವತೆಯ ಪ್ರಸನ್ನರೂಪದಿಂದ ಅವುಗಳನ್ನು ಮಾತನಾಡಿಸಿ ಮತ್ತೆ ಕಾಡಿಗೆ ಕರೆದು ತಾ. ಒಂದು ವಿಷಯವನ್ನು ಎಂದಿಗೂ ಮರೆಯಬೇಡ. ಈ ಎಲ್ಲ ಹಿಂಸ್ರ ಮೃಗಗಳಿಗಿಂತ ಮನುಷ್ಯ ಹೆಚ್ಚು ಕ್ರೂರಿ ಮತ್ತು ಅಪಾಯಕಾರಿ. ಪ್ರಾಣಿಗಳು ಹೊಟ್ಟೆ ತುಂಬಿದ ಮೇಲೆ ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ಮನುಷ್ಯ ಹೊಟ್ಟೆ ತುಂಬಿದ ಮೇಲೂ ತೊಂದರೆ ಕೊಡುವುದನ್ನು ಬಿಡುವುದಿಲ್ಲ. ಅವನನ್ನು ಕಾಡಿನಲ್ಲಿ ಬರಲು ಬಿಡಬೇಡ’. ವೃಕ್ಷದೇವತೆ ಹಾಗೆಯೇ ಮಾಡಿತು, ಕಾಡು ಮತ್ತೆ ಸಮೃದ್ಧವಾಯಿತು.

ಬೋಧಿಸತ್ವ ವೃಕ್ಷದೇವತೆಯ ಮಾತು ಎಷ್ಟು ಸತ್ಯವಲ್ಲವೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.