ಗುರುವಾರ , ಸೆಪ್ಟೆಂಬರ್ 19, 2019
24 °C

ಮೋಸಕ್ಕೆ ಪ್ರತಿಮೋಸ

Published:
Updated:

ಹಿಂದೆ ವಾರಾಣಸಿಯನ್ನು ಬ್ರಹ್ಮದತ್ತ ಆಳುತ್ತಿದ್ದಾಗ ಬೋಧಿಸತ್ವ ಒಂದು ವೃಕ್ಷದೇವತೆಯಾಗಿ ಹುಟ್ಟಿದ್ದ. ಆ ವೃಕ್ಷ ಘನವಾದ ಕಾಡಿನಲ್ಲಿದ್ದು ಅಲ್ಲಿಯ ಪ್ರಪಂಚವನ್ನು ಸಾಕ್ಷಿಯಾಗಿ ನೋಡುತ್ತಿತ್ತು.

ಆ ವರ್ಷ ಮಳೆಗಾಲ ಭಯಂಕರವಾಗಿತ್ತು. ಆಕಾಶ ಭೂಮಿಗಳು ಒಂದಾದಂತೆ ಮಳೆ ಸುರಿಯುತ್ತಲೇ ಇತ್ತು. ಬಿಡುವಿಲ್ಲದೆ ಏಳು ವಾರ ಮಳೆ ಬಿದ್ದಿತು. ಆಗ ಕಾಡಿನ ಪ್ರಾಣಿಗಳು, ಪಕ್ಷಿಗಳು ಕಂಗಾಲಾದವು. ಎಲ್ಲಿ ನೋಡಿದರೆ ನೀರೇ ನೀರು. ಎಲ್ಲ ಪ್ರಾಣಿಗಳು ನಿಲ್ಲಲೊಂದು ನೆಲೆ ಹುಡುಕು
ತ್ತಿದ್ದವು. ಅವೆಲ್ಲ ಚಳಿಗೆ ಒದ್ದಾಡುತ್ತಿದ್ದವು. ಒಂದು ಪುಟ್ಟ ಕೆಂಪು ಮೂತಿಯ ಕಪಿ ಮಾತ್ರ ಹೇಗೋ ಒಂದು ಪುಟ್ಟ ಗುಹೆಯನ್ನು ಸೇರಿಕೊಂಡಿತ್ತು. ಅಲ್ಲಿ ನೀರಿನ ಎರಚಲು ಬರದೇ ಒಣಗಿದ್ದರಿಂದ ಕಪಿ ಬೆಚ್ಚಗಿತ್ತು. ಒಂದು ದಿನ ಈ ಕಪಿ ಗುಹೆಯ ಬಾಗಿಲಲ್ಲಿ ಕುಳಿತು ಹೊರಗೆ ಒಂದೇ ಸಮನೆ ಬೀಳುತ್ತಿದ್ದ ಮಳೆಯನ್ನು ನೋಡುತ್ತಿತ್ತು.

ದೂರದಿಂದ ಈ ಕೋತಿಯನ್ನು ಮತ್ತೊಂದು ದೊಡ್ಡ ಕಪ್ಪು ಮುಖದ ಕಪಿ ನೋಡಿತು. ‘ಎಲಾ, ಇಷ್ಟು ಪುಟ್ಟ ಕೋತಿಯೊಂದು ಒಳ್ಳೆಯ ಗುಹೆಯನ್ನು ಹಿಡಿದುಕೊಂಡಿದೆಯಲ್ಲ. ಅದನ್ನು ಅಲ್ಲಿಂದ ಓಡಿಸಿ ತಾನೇ ಅಲ್ಲಿ ಕುಳಿತುಕೊಳ್ಳಬೇಕು’ ಎಂದುಕೊಂಡು ಅಲ್ಲಿಗೆ ಬಂದಿತು. ಅದಾಗಲೇ ಮಳೆಯಲ್ಲಿ ನೆನೆದು, ಚಳಿಯಲ್ಲಿ ನಡುಗುತ್ತಿತ್ತು. ದೊಡ್ಡ ಕಪಿ ಪುಟ್ಟ ಕೋತಿಯ ಮುಂದೆ ತನ್ನ ಹೊಟ್ಟೆಯನ್ನು ಊದಿಸಿಕೊಂಡು, ‘ಅಬ್ಬಾ, ಈ ಮಳೆಗಾಲದಿಂದ ಕಷ್ಟವೇನೋ ನಿಜ. ಆದರೆ ಇಲ್ಲಿ ಪಕ್ಕದಲ್ಲೇ ಇರುವ ಮರಗಳಲ್ಲಿರುವಷ್ಟು ಸ್ವಾದಿಷ್ಟವಾದ, ರಸಪೂರಿತವಾದ ಹಣ್ಣುಗಳನ್ನು ನಾನೆಲ್ಲಿಯೂ ಕಂಡಿರಲಿಲ್ಲ. ಆಸೆಯಿಂದ ತುಂಬ ಹೆಚ್ಚಾಗಿಯೇ ತಿಂದುಬಿಟ್ಟೆ. ನೋಡು ನನ್ನ ಹೊಟ್ಟೆ ಹೇಗೆ ಊದಿಕೊಂಡಿದೆ’ ಎಂದಿತು. ಪುಟ್ಟ ಕಪಿ ಬೆಚ್ಚಗೇನೋ ಇತ್ತು, ಆದರೆ ಹೊಟ್ಟೆಗೆ ತಿನ್ನಲು ಏನೂ ಸಿಗದೆ ಸಂಕಟಪಡುತ್ತಿತ್ತು. ದೊಡ್ಡ ಕಪಿ ಹಣ್ಣಿನ ಮರಗಳ ವಿಷಯ ಹೇಳಿದೊಡನೆ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಓಡಿತು.
ಆಗ ದೊಡ್ಡ ಕಪಿ ಗುಹೆಯನ್ನು ತನ್ನದಾಗಿಯೇ ಮಾಡಿಕೊಂಡಿತು.

ಪುಟ್ಟ ಕಪಿ ಅಲ್ಲಲ್ಲಿ ಓಡಾಡಿ, ಹಾರಾಡಿ ನೋಡಿದರೂ ಒಂದು ಹಣ್ಣಿನ ಗಿಡವೂ ಕಾಣಲಿಲ್ಲ. ಅದಕ್ಕೆ ತಾನು ಮೋಸ ಹೋದದ್ದು ಗೊತ್ತಾಯಿತು. ಮರಳಿ ಗುಹೆಗೆ ಹೋದರೆ ಅಲ್ಲಿ ಇಬ್ಬರಿಗೆ ಇರುವಷ್ಟು ಜಾಗವಿಲ್ಲ. ದೊಡ್ಡ ಕಪಿ ಹೊರಗೆ ಹೋಗುವ ತನಕ ತನಗೆ ಅವಕಾಶವಿಲ್ಲ. ಹೀಗೆ ಚಿಂತಿಸಿ ಮತ್ತೆ ಗುಹೆಗೆ ಬಂದು, ‘ಮಿತ್ರಾ, ನೀನು ಹೇಳಿದ್ದು ಒಳ್ಳೆಯದಾಯಿತು. ಅತ್ತಿಯ, ಬೇಲದ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿತು. ಇನ್ನು ಎರಡು ದಿನ ಏನೂ ಸಿಗದೇ ಹೋದರೂ ತೊಂದರೆಯಿಲ್ಲ’ ಎಂದಿತು. ಆಗ ದೊಡ್ಡ ಕಪಿ, ‘ಹೋಗಯ್ಯ, ನೀನೊಬ್ಬ ಕಾಡಿನ ಕಪಿ, ಮತ್ತೊಂದು ಕಪಿಗೆ ಸುಳ್ಳು ಹೇಳುತ್ತೀಯಾ? ನನಗೆ ನಿನಗಿಂತ ಹೆಚ್ಚು ವಯಸ್ಸಾಗಿದೆ. ಬೇರೆ ಗುಹೆ ಹುಡುಕಿಕೋ ಹೋಗು’ ಎಂದಿತು.

ಆಗ ಪುಟ್ಟ ಕಪಿ, ‘ಅಯ್ಯಾ, ನೀನು ನಮಗೆ ಹಿರಿಯ. ನಿನಗೇಕೆ ಮೋಸ ಮಾಡಲಿ? ನಾನು ಬಂದದ್ದು ಹಣ್ಣಿನ ವಿಷಯ ಹೇಳಲಿಕ್ಕಲ್ಲ. ಈ ಕೆಳಗಿನ ಕಣಿವೆಯಲ್ಲಿ ಬಲಗಡೆಗೆ ಒಂದು ವಿಶಾಲವಾದ ಕಲ್ಲಿನ ಗುಹೆ ಇದೆ. ಅಲ್ಲಿ
ನೀರು ಬರುವುದು ಸಾಧ್ಯವೇ ಇಲ್ಲ. ನಿನ್ನ ದೊಡ್ಡ ದೇಹಕ್ಕೆ ಅದು ಸರಿಯಾದದ್ದು. ನನಗೆ ಅದು ತುಂಬ ದೊಡ್ಡದು. ಅದನ್ನು ನಿನಗೆ ಹೇಳಲು ಬಂದೆ’ ಎಂದಿತು. ದೊಡ್ಡ ಕಪಿಗೆ ಹೌದೆನ್ನಿಸಿತು. ಈ ಗುಹೆ ತುಂಬ
ಇಕ್ಕಟ್ಟಾದದ್ದು. ಇದು ಈ ಕಪಿಗೇ ಇರಲಿ, ನಾನು ದೊಡ್ಡ ಗುಹೆಗೆ ಹೋಗುತ್ತೇನೆ ಎಂದು ಹೊರಗೆ ಓಡಿತು. ಪುಟ್ಟ ಕಪಿ ತನ್ನ ಗುಹೆಯನ್ನು ಸ್ವಾಧೀನಪಡಿಸಿಕೊಂಡಿತು.

ಮತ್ತೊಬ್ಬರಿಗೆ ಮೋಸ ಮಾಡಿದಾಗ ತುಂಬ ಸಂತೋಷಪಡುವುದು ಬೇಡ. ಅದು ನಿಮಗೇ ಮರಳಿ ಬಡ್ಡಿ ಸಮೇತ ಬಂದು ಅಪ್ಪಳಿಸುತ್ತದೆ. ಮೋಸಕ್ಕೆ ಪ್ರತಿಮೋಸ ತಪ್ಪಿದ್ದಲ್ಲ.

Post Comments (+)