ಶುಕ್ರವಾರ, ಡಿಸೆಂಬರ್ 13, 2019
27 °C

ವಾಮಮಾರ್ಗದ ಅಧಿಕಾರ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಅತ್ಯಂತ ಪ್ರಸಿದ್ಧನಾದ ಆಚಾರ್ಯನಾಗಿದ್ದ. ಅವನ ಬಳಿ ಕಲಿಯಲು ಅನೇಕ ರಾಜಕುಮಾರರು ಬರುತ್ತಿದ್ದರು. ಅವರಲ್ಲಿ ವಾರಾಣಸಿಯ ರಾಜಪುತ್ರನೂ ಒಬ್ಬ. ಬೋಧಿಸತ್ವ ಈ ತರುಣನ ಅಂಗ ಲಕ್ಷಣಗಳನ್ನು ತಿಳಿದುಕೊಂಡು ಬೇರೆಯಾಗಿ ಯೋಚಿಸುತ್ತಿದ್ದ. ಅವನ ತರಬೇತಿ ಮುಗಿದೊಡನೆ ಅವನನ್ನು ಕರೆದುಕೊಂಡು ಹೋಗಲು ರಾಜನೇ ಬಂದಿದ್ದ.

ಬೋಧಿಸತ್ವ ರಾಜನನ್ನು ಬೇರೆಯಾಗಿ ಕರೆದು ಹೇಳಿದ, ‘ನಿಮ್ಮ ರಾಜಕುಮಾರ ಸಮರ್ಥನಾಗಿದ್ದಾನೆ, ವಿದ್ಯೆ ಕಲಿತಿದ್ದಾನೆ, ಆದರೆ ಅವನ ಮನಸ್ಸಿನಲ್ಲಿ ಅತಿಯಾದ ಮಹತ್ವಾಕಾಂಕ್ಷೆ ಇದೆ. ಆತ ಅಧಿಕಾರಕ್ಕೆ ಬರುವ ಆತುರದಲ್ಲಿ ನಿಮಗೆ ತೊಂದರೆಯನ್ನು ಕೊಡಬಹುದು. ಅದಕ್ಕೆ ನಾನು ನಿಮಗೆ ನಾಲ್ಕು ಮಾತುಗಳನ್ನು ಹೇಳುತ್ತೇನೆ. ಅವುಗಳನ್ನು ನೀವು ನೆನಪಿಟ್ಟುಕೊಂಡು ಆತ ನಿಮ್ಮ ಜೊತೆಗೆ ಊಟ ಮಾಡುವಾಗ, ದರ್ಬಾರನ್ನು ಪ್ರವೇಶಿಸುವಾಗ, ಅರಮನೆಯ ಮೆಟ್ಟಿಲುಗಳನ್ನು ಹತ್ತುತ್ತಿರುವಾಗ ಮತ್ತು ನಿಮ್ಮ ಶಯನಾಗಾರದಲ್ಲಿ ಹೋಗುವಾಗ ಹೇಳಬೇಕು’. ರಾಜನಿಗೆ ಆಶ್ಚರ್ಯವಾದರೂ ಗುರುಗಳ ಮನಸ್ಸಿನಲ್ಲಿ ಏನಿದೆಯೋ ತಿಳಿಯದು ಎಂದು ಒಪ್ಪಿಕೊಂಡು ನಡೆದ.

ರಾಜಕುಮಾರ ಅರಮನೆಗೆ ಬಂದ ಮೇಲೆ ಕೆಲವು ಹಿಂಬಾಲಕರು ಅವನ ತಲೆ ತುಂಬತೊಡಗಿದರು. ವಯಸ್ಸಿದ್ದಾಗಲೇ ರಾಜನಾದರೆ ವೈಭೋಗವನ್ನು ಅನುಭವಿಸಬಹುದು. ಮುದುಕನಾದ ಮೇಲೆ ರಾಜ್ಯದಿಂದ ಏನು ಪ್ರಯೋಜನ? ಈಗ ರಾಜರಿಗೆ ಹೇಗಿದ್ದರೂ ವಯಸ್ಸಾಗಿದೆ. ಅವರನ್ನು ಮುಗಿಸಿಬಿಡುವುದು ಒಳ್ಳೆಯದು ಎಂದು ಬೋಧನೆ ಮಾಡಿದರು. ರಾಜಕುಮಾರ ಈ ಮಾತುಗಳನ್ನು ಕೇಳಿಕೇಳಿ ಅದನ್ನೇ ಸರಿಯೆಂದು ಒಪ್ಪಿಕೊಂಡ. ಸಂಜೆಗೆ ತಂದೆಯ ಜೊತೆಗೇ ಊಟಕ್ಕೆ ಕುಳಿತಾಗ ಅವರಿಗೆ ವಿಷ ಹಾಕಿಬಿಡಬೇಕೆಂದು ವಿಷವನ್ನು ಪಕ್ಕದಲ್ಲೇ ಇಟ್ಟುಕೊಂಡು ಕುಳಿತ. ಅವನ ಮುಖವನ್ನು ನೋಡುತ್ತ ರಾಜ, ಬೋಧಿಸತ್ವ ಕಲಿಸಿದ ಮೊದಲ ಮಾತನ್ನು ಹೇಳಿದ, ‘ಇಲಿಗೆ ಹೊಟ್ಟು ಮತ್ತು ಅಕ್ಕಿಯ ವ್ಯತ್ಯಾಸ ತಿಳಿದಿದೆ. ಅದು ಹೊಟ್ಟನ್ನು ಬಿಟ್ಟು ಅಕ್ಕಿಯನ್ನೇ ತಿನ್ನುತ್ತದೆ’.

ರಾಜಕುಮಾರನಿಗೆ ಗಾಬರಿಯಾಯಿತು. ತಂದೆಗೆ ಸಂಶಯ ಬಂದಿದೆ ಎಂದು ಹಾಗೆಯೇ ಹೊರಟುಹೋದ. ಮರುದಿನ ರಾಜ ದರ್ಬಾರಿಗೆ ಹೋಗುವಾಗ ಎದುರಿಗೆ ಬಂದ. ಖಡ್ಗದಿಂದ ತಂದೆಯನ್ನು ಕೊಲ್ಲುವ ಹೊಂಚು ಅವನದು. ದೂರದಿಂದ ಅವನನ್ನು ಕಂಡೊಡನೆ, ‘ಗೆಳೆಯರೊಡನೆ ಮಾಡಿದ ಸಮಾಲೋಚನೆ, ಗುಸುಗುಸು ಮಾತು ಮತ್ತು ಅವಕಾಶಕ್ಕಾಗಿ ಕಾಯುತ್ತಿರುವುದು ನನಗೆ ತಿಳಿದಿದೆ’ ಎಂದು ಎರಡನೆಯ ಮಾತನ್ನು ಹೇಳಿದ.

ರಾಜಕುಮಾರ ಹೆದರಿ ಅಲ್ಲಿಂದ ಹೊರಟುಹೋದ. ಇದೇ ರೀತಿ ಮುಂದೆರಡು ಬಾರಿಯೂ ಸರಿಯಾದ ಸಮಯಕ್ಕೆ ರಾಜ ಬೋಧಿಸತ್ವ ಹೇಳಿದ ಮಾತುಗಳನ್ನು ಹೇಳಿದ. ಈಗ ರಾಜಕುಮಾರನಿಗೆ ತನ್ನ ಯೋಜನೆ ರಾಜನಿಗೆ ತಿಳಿದಿದೆ ಎಂದು ಖಚಿತವಾಗಿ, ಬಂದು ತಂದೆಯ ಕಾಲುಹಿಡಿದುಕೊಂಡು ಕ್ಷಮಾಪಣೆ ಕೇಳಿದ. ರಾಜ ಮಗನನ್ನು ಕೂಡ್ರಿಸಿಕೊಂಡು ಹೇಳಿದ, ‘ಮಗೂ, ನೀನು ನನಗೆ ಒಬ್ಬನೇ ಮಗ. ನೀನೇ ಮುಂದೆ ರಾಜ್ಯಕ್ಕೆ ಅಧಿಕಾರಿಯಾಗುವವನು. ಅದಕ್ಕೆ ಅವಸರವೇಕೆ? ನೀನು ಕೆಲವರ್ಷಗಳ ಕಾಲ ಯುವರಾಜನಾಗಿದ್ದು, ರಾಜ್ಯವನ್ನು ನಡೆಸುವುದು ಹೇಗೆ ಎಂಬುದನ್ನು ತಿಳಿದುಕೋ. ಮುಖ್ಯವಾಗಿ ನಿನ್ನನ್ನು ನಿನ್ನ ತಂದೆಯ ವಿರುದ್ದವೇ ಎತ್ತಿಕಟ್ಟುವ ಜನರನ್ನು ನಿಗ್ರಹಿಸು. ನೀನು ಕೇವಲ ಅಧಿಕಾರಕ್ಕಾಗಿ ಯಾವುದೇ ಕುಟಿಲ ಮಾರ್ಗವನ್ನು ಹಿಡಿದರೆ ಅದೇ ನಿನಗೆ ಮುಂದೆ ಶತ್ರುವಾಗುತ್ತದೆ. ನ್ಯಾಯವಾಗಿ ಪಡೆದ ಅಧಿಕಾರ ಸಂತೃಪ್ತಿ ನೀಡುತ್ತದೆ, ವಾಮಮಾರ್ಗದಿಂದ ಪಡೆದದ್ದು ಅಪರಿಮಿತ ಸಂಕಟ, ದುಃಖವನ್ನೇ ಕೊಡುತ್ತದೆ’. ಈ ಮಾತಿಗೆ ಮಗ ಒಪ್ಪಿದ.

ಇಂದಿಗೂ ಆ ಮಾತು ತುಂಬ ಪ್ರಸ್ತುತ ಎನ್ನಿಸುವುದಿಲ್ಲವೇ? 

ಪ್ರತಿಕ್ರಿಯಿಸಿ (+)