ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯ ಸೇಡು

Last Updated 17 ಡಿಸೆಂಬರ್ 2019, 19:35 IST
ಅಕ್ಷರ ಗಾತ್ರ

ಮಹಾಪ್ರತಾಪ ವಾರಾಣಸಿಯ ಕ್ರೂರ ರಾಜನಾಗಿದ್ದ. ಆಗ ಬೋಧಿಸತ್ವ ಅವನ ಪಟ್ಟದ ರಾಣಿ ಚಂದಾದೇವಿಯ ಗರ್ಭದಲ್ಲಿ ಮಗನಾಗಿ ಹುಟ್ಟಿದ್ದ. ಅವನು ಏಳು ತಿಂಗಳ ಮಗುವಾಗಿದ್ದಾಗ ತಾಯಿ ಅವನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಳು. ಆಗ ರಾಜ ಅಲ್ಲಿಗೆ ಬಂದ. ರಾಣಿಗೆ ಮೇಲೇಳಲು ಆಗದ್ದರಿಂದ ಅವನಿಗೆ ಕೋಪ ಬಂದಿತು. ಮಗ ಇಷ್ಟು ಸಣ್ಣ
ವನಿದ್ದಾಗಲೇ ಆಕೆಗೆ ಇಷ್ಟು ಅಹಂಕಾರ ಬಂದಿದೆ. ಆತ ದೊಡ್ಡವನಾದ ಮೇಲೆ ನನಗೆ ಯಾವ ಮರ್ಯಾದೆಯೂ ಇರುವುದಿಲ್ಲ ಎಂದುಕೊಂಡು ದರ್ಬಾರಿಗೆ ಬಂದ. ಅರಮನೆಯ ಕಟುಕನಿಗೆ ಹೇಳಿ ಕಳುಹಿಸಿದ. ಅವನು ಬಂದ ಮೇಲೆ, ‘ಅರಮನೆಗೆ ಹೋಗಿ ಮಗು ಧರ್ಮಪಾಲನನ್ನು ಎತ್ತಿಕೊಂಡು ಬಾ’ ಎಂದು ಹೇಳಿದ. ಅವನು ಮಗುವನ್ನು ಎತ್ತಿಕೊಂಡು ಬಂದಾಗ ಅವನ ಹಿಂದೆಯೇ ರಾಜನ ಕೋಪವನ್ನು ಕಂಡಿದ್ದ ರಾಣಿ ಚಂದಾದೇವಿ ಓಡಿ ಬಂದಳು. ರಾಜ ಮಗುವನ್ನು ತನ್ನ ಸಿಂಹಾಸನದ ಮುಂದೆ ಒಂದು ಮಣೆಯ ಮೇಲೆ ಮಲಗಿಸಲು ಹೇಳಿ ಮಗುವಿನ ಕೈಗಳನ್ನು ಕತ್ತರಿಸುವಂತೆ ಆಜ್ಞೆ ಮಾಡಿದ. ತಾಯಿ ಗೋಗರೆದಳು, ಮಗುವಿನ ಬದಲು ತನ್ನ ಕೈಗಳನ್ನು ಕತ್ತರಿಸಿ ಎಂದು ಬೇಡಿದಳು. ಕಟುಕ ಕರುಣೆಯಿಲ್ಲದೆ ಮಗುವಿನ ಕೈಗಳನ್ನು ಕತ್ತರಿಸಿದ. ಆದರೆ ಹುಟ್ಟುತ್ತಲೇ ಜ್ಞಾನಿಯಾಗಿದ್ದ ಮಗು ಅಳಲೂ ಇಲ್ಲ, ಕಿರುಚಲೂ ಇಲ್ಲ. ನಂತರ ರಾಜ ಮಗುವಿನ ಎರಡೂ ಕಾಲುಗಳನ್ನು ಕತ್ತರಿಸಲು ಹೇಳಿದ. ತನ್ನ ಮಗುವಿನ ರಕ್ತಸಿಕ್ತವಾಗಿದ್ದ ಕತ್ತರಿಸಿದ್ದ ಕೈಗಳನ್ನು ತನ್ನ ಸೀರೆಯ ಮಡಿಲಲ್ಲಿ ಇಟ್ಟುಕೊಂಡು ರೋದಿಸುತ್ತಿದ್ದ ತಾಯಿ ತನ್ನ ಕಾಲುಗಳನ್ನೂ ಕತ್ತರಿಸಲು ಕೇಳಿಕೊಂಡಳು. ಕಟುಕ ಮಗುವಿನ ಎರಡೂ ಕಾಲುಗಳನ್ನು ತುಂಡರಿಸಿದ. ತಾಯಿ ಅವೆರಡು ಕಾಲುಗಳನ್ನು ತನ್ನ ಮಡಿಲಲ್ಲಿ ತುಂಬಿಕೊಂಡು ಹೊರಳಾಡಿ ಅತ್ತಳು.

ಇಷ್ಟಕ್ಕೇ ರಾಜನ ಕ್ರೌರ್ಯ ನಿಲ್ಲಲಿಲ್ಲ. ಮಗುವಿನ ತಲೆಯನ್ನು ಕತ್ತರಿಸಲು ಆಜ್ಞೆ ಮಾಡಿದ. ಅದೂ ಆಯಿತು. ಇನ್ನೇನು ಮಾಡಲಿ ಎಂದು ಕಟುಕ ಕೇಳಿದ. ಇನ್ನೂ ಕೋಪವನ್ನು ಕಳೆದುಕೊಳ್ಳದ ರಾಜ, ‘ಮಗುವನ್ನು ಮೇಲೆ ತೂರಿ ಖಡ್ಗದ ಮೊನೆಯ ಮೇಲೆ ಬೀಳಿಸಿ ಅದನ್ನು ಸೀಳಿಬಿಡು’. ಕಟುಕ ಖಡ್ಗದ ಮೊನೆಯಿಂದ ಮೇಲಿನಿಂದ ಬೀಳುವ ಮಗುವನ್ನು ಸೀಳಿ ಹಾಕಿದ. ಕಣ್ಣ ಮುಂದೆಯೇ ತನ್ನ ಮಗುವಿಗೆ ಆಗುತ್ತಿರುವುದನ್ನು ಕಂಡ ತಾಯಿಗೆ ಏನಾಗಿರಬೇಡ? ಆಕೆ ತನ್ನ ದೈವವನ್ನು ಹಳಿಯುತ್ತ ಮಗುವಿನ ದೇಹದ ಚೂರುಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ನೆಲಕ್ಕೆ ಬಿದ್ದು ಹೊರಳಾಡ
ತೊಡಗಿದಳು. ತಾಯಿಯ ಹೃದಯ ಇದನ್ನು ಹೇಗೆ ತಡೆದೀತು?
ಕ್ಷಣಾರ್ಧದಲ್ಲಿ ಆಕೆಯು ಹೃದಯ ಒಡೆದು ಪ್ರಾಣಬಿಟ್ಟಳು.

ಸಿಂಹಾಸನದ ಮೇಲೆ ಕುಳಿತ ರಾಜನಿಗೆ ಭೂಕಂಪನದ ಅನುಭವ ವಾಯಿತು. ಇಂಥ ಕ್ರೂರತೆಯನ್ನು ಪ್ರಕೃತಿಯೂ ತಡೆದುಕೊಳ್ಳಲಾರದು. ಸಿಂಹಾಸನದ ಕೆಳಗಿನ ನೆಲ ಬಿರಿಯಿತು. ಪೃಥ್ವಿಯೂ ಅವನ ದುರ್ನಡತೆಯನ್ನು ಸಹಿಸದೆ ಒಡೆಯಿತು. ನೆಲದಿಂದ ಕುದಿಯುವ ಲಾವಾ ಮತ್ತು ಬೆಂಕಿ ಎದ್ದಿತು. ಅವನನ್ನು ಸುತ್ತಿ, ಹೊರಳಾಡಿಸಿ ಬೆಂಕಿಯ ಮಧ್ಯಭಾಗಕ್ಕೆ ಎಳೆದುಕೊಂಡು ಹೋಯಿತು.

ನಮ್ಮ ಅಪರಾಧಗಳನ್ನು ದೈವ ಗಮನಿಸುತ್ತದೆ. ತಿದ್ದಿಕೊಳ್ಳಲು ಅವಕಾಶವನ್ನು ನೀಡುತ್ತದೆ. ಆದರೆ ತಿದ್ದಿಕೊಳ್ಳಲಾಗದ ಮನುಷ್ಯನನ್ನುನಿರ್ದಾಕ್ಷಿಣ್ಯವಾಗಿ ದಂಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT