ಬುಧವಾರ, ಜನವರಿ 29, 2020
29 °C

ಬೇಯಿಸುವ ತಪ್ಪಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧರೆ ಸಸ್ಯಫಲದಿ ಜೀವಿಗೆ ಪುಷ್ಟಿಯಿತ್ತೊಡೇಂ ? |

ಮರಳಿ ತಾಂ ಪಡೆಯಳೇನ್ ಅವನಿನರ್ಧವನು ? ||

ಧರಣೀ ಗೀ ನಮ್ಮೊಡಲು ಹುಯ್ಗಡುಬು ತಪ್ಪಲೆಯೋ ! |

ಪರಮೇಷ್ಠಿ ಯುಕ್ತಿಯದು – ಮಂಕುತಿಮ್ಮ || 235 ||

ಪದ-ಅರ್ಥ: ಪುಷ್ಟಿಯಿತ್ತೊಡೇಂ = ಪುಷ್ಟಿ (ಶಕ್ತಿ) + ಇತ್ತೊಡೆ (ನೀಡಿದರೆ) + ಏಂ (ಏನು), ಪಡೆಯಳೇನ್ = ಪಡೆಯಳು + ಏನ್, ಹುಯ್ಗಡುಬು = ಇಡ್ಲಿಯಂಥ ಬೇಯಿಸಿದ ಪದಾರ್ಥ.

ವಾಚ್ಯಾರ್ಥ: ಭೂಮಿ ತಾನು ಬೆಳೆಯುವ ಸಸ್ಯ ಮತ್ತು ಫಲಗಳಿಂದ ಮನುಷ್ಯ ದೇಹಕ್ಕೆ ಶಕ್ತಿಯನ್ನು ಕೊಟ್ಟರೇನು? ಅದನ್ನು ಮತ್ತೆ ತಾನು ಮರಳಿ ಪಡೆಯುವುದಿಲ್ಲವೇ? ಭೂಮಿಗೆ ಈ ನಮ್ಮ ದೇಹ ಇಡ್ಲಿಯನ್ನು ಬೇಯಿಸುವ ತಪ್ಪಲೆಯೇ? ಇದು ಪರಬ್ರಹ್ಮನ ಯುಕ್ತಿ.

ವಿವರಣೆ: ಮಹಾನುಭಾವನಾದ ಭತ್ರ್ಯಹರಿ ತನಗೆ ಮರಣ ಕಾಲ ಸಮೀಪಿಸಿತು ಎಂದು ತೋರಿದಾಗ ಅತ್ಯಂತ ಕೃತಜ್ಞತೆಯಿಂದ ಈ ಕೆಳಗಿನ ಮಾತನ್ನು ಹೇಳುತ್ತಾನೆ.

ಮಾತರ್ಮೇದಿನಿ ತಾತ ಮರುತ ಸಖೇ ತೇಜ: ಸುಬಂಧೋ ಜಲ |

ಭ್ರಾತವ್ರ್ಯೊಮ ನಿಬದ್ಧ ಏವ ಭವತಾಮ್ ಅಂತ್ಯ: ಪ್ರಣಾಮಾಂಜಲಿ: ||

“ಅಮ್ಮಾ ತಾಯಿ ಭೂದೇವಿ, ತಂದೆಯಾದ ವಾಯು, ಸ್ನೇಹಿತನಾದ ಸೂರ್ಯ, ಆಪ್ತ ಬಂಧುವಾದ ಜಲವೆ, ಅಣ್ಣನಾದ ಆಕಾಶವೆ, ಇದೋ ನಿಮಗೆ ನನ್ನ ಕಟ್ಟಕಡೆಯ ಪ್ರಣಾಮ. ನಿಮ್ಮ ಸಂಪರ್ಕದಿಂದ ಉಂಟಾದ ಸಂಸ್ಕಾರದಿಂದ ನನ್ನ ಮೂಲ ಸ್ವಭಾವವಾದ ಸ್ವಾರ್ಥವು ಕರಗಿ ಹೋಗಿ ಶುದ್ಧವೂ, ಅನಂತವೂ ಆದ ತತ್ವದ ಬೆಳಕು ನನಗೆ ದೊರೆತಿದೆ. ಆದ್ದರಿಂದ ನಾನು ಈಗ ಪರಮಾತ್ಮ ವಸ್ತುವಿನಲ್ಲಿ ಲೀನವಾಗುವುದು ಸಾಧ್ಯ”.

ಎಂಥ ಸುಂದರವಾದ ಮಾತು! ಭೂಮಿಗೆ ಬಂದ ಜೀವ ಸಂಸ್ಕಾರವಿಲ್ಲದ ಒರಟಾದ, ಸ್ವಾರ್ಥಮೂಲವಾದ ಬೀಜವಿದ್ದಂತೆ. ಲೋಕಸಂಸ್ಕಾರ ಈ ಜೀವವನ್ನು ಸಂಸ್ಕಾರಪಡಿಸುತ್ತದೆ. ಕರ್ಮ, ವಿವೇಕ, ಅವಿವೇಕ, ಲಾಭ, ನಷ್ಟ, ಮೋಹ, ದ್ವೇಷ, ಮಿಲನ, ವಿಯೋಗ, ರೋಗ, ದುಃಖ, ಸಂತೋಷಗಳು ಜೀವಕ್ಕೆ ವಿವಿಧ ಅನುಭವಗಳನ್ನು ನೀಡಿ, ಕಲಕಿ, ಕುಲಕಾಡಿಸಿ, ಕಾಡಿಸಿ ಜೀವವನ್ನು ಪಕ್ವಗೊಳಿಸುತ್ತವೆ. ಹೀಗೆ ಸ್ವಾರ್ಥ ಕರ್ಮಫಲದ ಭೋಜನದಿಂದಲೇ ಸ್ವಾರ್ಥದ ಮಿತಿ ತೋರುತ್ತದೆ. ಸಂಪೂರ್ಣ ಪಕ್ವತೆಯನ್ನು ಪಡೆದ ಬದುಕು ಮತ್ತೆ ಪರಮಾತ್ಮ ಸತ್ವದಲ್ಲಿ ಲೀನವಾಗುತ್ತದೆ.

ಈ ಅಧ್ಯಾತ್ಮಿಕ ಸತ್ಯವನ್ನು ಈ ಕಗ್ಗ ಬಹಳ ಸುಂದರವಾದ ಉಪಮೆಯೊಂದಿಗೆ ನೀಡುತ್ತದೆ. ಭೂಮಿ ತಾನು ಸೃಷ್ಟಿಸಿದ ಫಲಗಳಿಂದ ಜೀವವನ್ನು ಪುಷ್ಟಿಮಾಡುತ್ತದೆ. ಮತ್ತೆ ಜೀವಗಳು ಮರಳುವುದು ಅದೇ ಭೂಮಿಗೇ. ಬದುಕಿನ ಮೊದಲರ್ಧ ಕೇವಲ ಪಡೆಯುವುದು ನಂತರ ಉಳಿದರ್ಧ ಮರಳಿ ಕೊಡುವುದು. “ಮರಳಿ ತಾಂ ಪಡೆಯಳೇನ್ ಅವನಿನರ್ಧವನು?” ಇದರ ಸ್ಥೂಲ ಅರ್ಥ, ತಾನು ಜೀವಿಗೆ ಕೊಟ್ಟದ್ದರ ಅರ್ಧವನ್ನು ಅಂದರೆ ಅದು ವಿಸರ್ಜಿಸಿದ್ದನ್ನು ಪಡೆಯುತ್ತದೆ ಎಂದಾದರೆ ಮೊದಮೊದಲು ತಾನು ಪಡೆದದ್ದನ್ನು ಆತ ಮರಳಿ ನೀಡದಿರುವನೆ ಎಂಬುದು ಅದರ ಸೂಕ್ಷ್ಮ ಅರ್ಥ. ಭರ್ತೃಹರಿ ಹೇಳಿದ ಹಾಗೆ ಭೂ ಸಂಸ್ಕಾರದಿಂದ ಪರಿಪಕ್ವವಾದ ಜೀವ ಮರಳಿ ಪರಸತ್ವಕ್ಕೆ ಹೋಗಿ ಸೇರುತ್ತದೆ. ಹಾಗಾದರೆ ಈ ಧರಣಿ ನಮ್ಮನ್ನು ಬೇಯಿಸಿ ಪಕ್ವಗೊಳಿಸುವ “ಹುಯ್ಗಡುಬು ತಪ್ಪಲೆ” ಇದ್ದ ಹಾಗೆ. ತಿನ್ನಲು ಸಾಧ್ಯವಾಗದ, ಅಪಕ್ವವಾದ ಹಿಟ್ಟನ್ನು ಬೇಯಿಸಿ ತಿನ್ನಲು ಯೋಗ್ಯವಾದ ಪದಾರ್ಥವನ್ನಾಗಿ ಮಾಡುತ್ತದೆ ತಪ್ಪಲೆ. ಅಂತಲೇ ಭೂ ವಿಷಯಗಳು ಮನುಷ್ಯ ಸ್ವಭಾವವನ್ನು ತಿದ್ದಿ, ಹದಗೊಳಿಸಿ ಮತ್ತೆ ಅದೇ ಲೋಕದ ಪ್ರಯೋಜನಕ್ಕೆ ಬರುವಂತೆ ಮಾಡುತ್ತವೆ. 

ಪ್ರತಿಕ್ರಿಯಿಸಿ (+)