ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಬೋಧನೆ ಸುಲಭ

Last Updated 9 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ |
ಜೀವನಪರೀಕ್ಷೆ ಬಂದಿದಿರು ನಿಲುವನಕ ||
ಭಾವಮರ್ಮಂಗಳೇಳುವಾಗ ತಳದಿಂದ |
ದೇವರೇ ಗತಿಯಾಗ – ಮಂಕುತಿಮ್ಮ || 275 ||

ಪದ-ಅರ್ಥ: ಸರ್ವರುಂ=ಎಲ್ಲರೂ, ಬಂದಿದಿರು=ಬಂದು+ಇದಿರು, ಭಾವಮರ್ಮಂಗಳೇಳುವಾಗ=ಭಾವಮರ್ಮಗಳು(ಮೂಲಸ್ವಭಾವದ ಗುಣಗಳು)+ಏಳುವಾಗ.

ವಾಚ್ಯಾರ್ಥ: ಜೀವನದ ಪರೀಕ್ಷೆ ಬಂದು ಮುಂದೆ ನಿಲ್ಲುವ ತನಕ ಎಲ್ಲರೂ ಸಾಧುಗಳೆ, ಎಲ್ಲರೂ ಬೋಧೆ ಮಾಡುವವರೆ. ಆದರೆ ಅವರ ಮೂಲ ಸ್ವಭಾವದ ಕಸ ತಳದಿಂದ ಮೇಲೆದ್ದಾಗ ದೇವರೇ ಗತಿ.

ವಿವರಣೆ: ಗುರುಗಳು ವೇದಿಕೆಯಿಂದ ಅದ್ಭುತವಾದ ಭಾಷಣವನ್ನು ಮಾಡುತ್ತಿದ್ದರು. ಅವರದ್ದು ಯಾವಾಗಲೂ ಅತ್ಯಂತ ಬೋಧಪ್ರದವಾದ ಮತ್ತು ಪ್ರೇರಕಶಕ್ತಿಯುಳ್ಳ ಭಾಷಣ. ‘ಅನ್ಯಾಯವನ್ನು ಎಂದಿಗೂ ಸಹಿಸಬಾರದು. ಅನ್ಯಾಯವನ್ನು ಸಹಿಸುವುದು ಅನ್ಯಾಯದಲ್ಲಿ ಭಾಗಿಯಾದಂತೆಯೇ. ಅನ್ಯಾಯವನ್ನು ಮಾಡಿದವರಿಗೆ ಅತ್ಯಂತ ಗರಿಷ್ಠ ಮಟ್ಟದ ಶಿಕ್ಷೆಯನ್ನು ಕೊಡಬೇಕು. ಆ ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ, ಯಾವುದೇ ಸ್ಥಾನದಲ್ಲಿರಲಿ, ಶಿಕ್ಷೆಯನ್ನು ಕೊಡದೆ ಇರಕೂಡದು. ಆ ಶಿಕ್ಷೆ ಉಳಿದವರಿಗೆ ಎಚ್ಚರಿಕೆಯ ಗಂಟೆಯಾಗುತ್ತದೆ’.

ಅವರ ಮಾತೇ ಹಾಗೆ, ಯಾವಾಗಲೂ ಸ್ಪಷ್ಟ ಮತ್ತು ಖಚಿತ. ಸಭಿಕರೆಲ್ಲ ಅವರ ವಾದಕ್ಕೆ ತಲೆದೂಗಿದರು. ಸಭಾಸದರಲ್ಲಿ ಬಹುಜನರು ಅತ್ಯಂತ ದೊಡ್ಡ ಸ್ಥಾನದಲ್ಲಿರುವವರು. ಕೆಲವರು ಮಂತ್ರಿಗಳು, ಕೆಲವರು ಪೊಲೀಸ್ ಅಧಿಕಾರಿಗಳು, ಅನೇಕರು ಸಮಾಜ ಸೇವಕರು, ತಂತ್ರಜ್ಞರು, ಉದ್ದಿಮೆದಾರರು. ಎಲ್ಲರೂ ಗುರುಗಳ ಮಾತನ್ನು ಮೆಚ್ಚಿದರು.

ಎಂಟು ದಿನಗಳ ನಂತರ ಪೊಲೀಸ್‌ ಅಧಿಕಾರಿಗಳ ಮನೆಗೆ ಗುರುಗಳು ಬಂದರು. ಅವರ ಮುಖದಲ್ಲಿ ತೇಜ ಕಾಣುತ್ತಿಲ್ಲ, ಆತಂಕ ಕಾಣುತ್ತಿತ್ತು. ಅಧಿಕಾರಿಗಳನ್ನು ಕಂಡೊಡನೆ ಅವರ ಕಣ್ಣಲ್ಲಿ ನೀರು ಉಕ್ಕಿತು, ಧ್ವನಿ ಗದ್ಗದವಾಯಿತು, ‘ಸಾಹೇಬರೇ ಹೇಗಾದರೂ ಮಾಡಿ ಈ ತೊಂದರೆಯಿಂದ ನನ್ನ ಮಗನನ್ನು ಪಾರುಮಾಡಿ’ ಎಂದು ಕೈ ಮುಗಿದು ದೈನ್ಯದಿಂದ ಬೇಡಿಕೊಂಡರು. ಅಧಿಕಾರಿ ತಮ್ಮ ಕೈಕೆಳಗಿನ ಅಧಿಕಾರಿಗಳಿಂದ ವಿಷಯ ತರಿಸಿಕೊಂಡು ನೋಡಿದರು.

ಗುರುಗಳ ಮಗ ಕುಡಿದು ಮತ್ತಿನಲ್ಲಿ ಕಾರು ಓಡಿಸಿ, ರಸ್ತೆಯ ಬದಿಗೆ ನಿಂತಿದ್ದ ಯುವಕನೊಬ್ಬನಿಗೆ ಹೊಡೆದಿದ್ದಾನೆ. ಆ ತರುಣ ಮರಣ ಹೊಂದಿದ್ದಾನೆ. ಗುರುಗಳ ಮಗನನ್ನು ಬಂಧಿಸಿದ್ದಾರೆ. ತಕ್ಷಣ ಪೊಲೀಸ್ ಅಧಿಕಾರಿಗೆ ತಾವು ಹಿಂದಿನ ವಾರ ಕೇಳಿದ ಉಪನ್ಯಾಸ ಜ್ಞಾಪಕಕ್ಕೆ ಬಂದಿತು. ‘ಯಾರೇ ಆದರೂ ಶಿಕ್ಷೆ ನೀಡುವುದನ್ನು ಬಿಡದೆ ಇರಬಾರದು’ ಎಂದು ಇವರೇ ತಾನೇ ಘೋಷಿಸಿದ್ದು? ಈಗ ಅವರ ಸ್ಥಿತಿ ಹೇಗಾಗಿದೆ?

ಈ ವೈರುಧ್ಯವನ್ನೇ ಕಗ್ಗ ಎತ್ತಿ ತೋರಿಸುತ್ತದೆ. ಮತ್ತೊಬ್ಬರ ವಿಷಯದಲ್ಲಿ ಎಲ್ಲರೂ ಸಾಧುಗಳೇ. ಎಲ್ಲರೂ ನ್ಯಾಯ, ನೀತಿ, ಧರ್ಮಗಳ ಬಗ್ಗೆ ಮಾತನಾಡುವವರೇ. ಆದರೆ ಅದು ತಮ್ಮ ಬುಡಕ್ಕೇ ಬಂದಾಗ ಸ್ವಭಾವಜನ್ಯವಾದ ಮನಸ್ಸಿನ ಕಸ, ಮೇಲಕ್ಕೆದ್ದು, ಜೀವವನ್ನು ಕುಗ್ಗಿಸಿಬಿಡುತ್ತದೆ. ಆಗ ಅವರಿಗೆ ದೇವರೇ ಗತಿ.

ಮತ್ತೊಬ್ಬರಿಗೆ ಬೋಧಿಸುವುದು, ನ್ಯಾಯ ಹೇಳುವುದು ಬಲು ಸುಲಭ. ಆದರೆ ಆ ಸ್ಥಿತಿ ನಮಗೂ ಬಂದಾಗ ಅದೇ ಮನಸ್ಥಿತಿ ಉಳಿದೀತೇ? ಹಾಗೆ ಉಳಿಯುವುದಾದರೆ ಮಾತ್ರ ನಮಗೆ ಬೋಧನೆಯ ಅಧಿಕಾರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT