ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಒಳ-ಹೊರಗಿನ ಐಕ್ಯತೆ

Last Updated 7 ನವೆಂಬರ್ 2021, 18:58 IST
ಅಕ್ಷರ ಗಾತ್ರ

ಬಹಿರಂತರೈಕ್ಯವನು ನೆನಪಿಗಾಗಿಸಲೆಂದು |
ವಿಹಿತಮ್ ಆಚಮನಾಘ್ರ್ಯ ಪೂಜೆ ನೈವೇದ್ಯ ||
ಗುಹೆಯೊಳಗಣದ ಹೊರಗಣದ ಕೂಡಿಸುವುಪಾಯ|
ಸಹಭಾವವದಕೆ ಸರಿ – ಮಂಕುತಿಮ್ಮ || 492 ||

ಪದ=ಅರ್ಥ: ಬಹಿರಂತರೈಕ್ಯವನು=ಬಹಿರ್ (ಹೊರಗಿನ)+ಅಂತರ್ (ಒಳಗಿನ)+ ಐಕ್ಯವನು (ಒಂದಾಗುವಿಕೆಯನ್ನು), ವಿಹಿತಮ್=ವಿಹಿತವಾದದ್ದು, ವಿಧಿಸಲ್ಪಟ್ಟದ್ದು, ಆಚಮನಾಘ್ರ್ಯ=ಆಚಮನ+ಅಘ್ರ್ಯ, ಗುಹೆಯೊಳಗಣದ=ಗುಹೆಯ+ಒಳಗಣದ, ಕೂಡಿಸುವುಪಾಯ=ಕೂಡಿಸುವ+ಉಪಾಯ

ವಾಚ್ಯಾರ್ಥ: ನಮ್ಮ ಹೊರಗೆ ಮತ್ತು ಒಳಗಿರುವುದು ಒಂದೇ ಎಂಬುದನ್ನು ನೆನಪಿಸಲು, ಆಚಮನ, ಅಘ್ರ್ಯ, ಪೂಜೆ, ನೈವೇದ್ಯಗಳು ವಿಧಿಸಲ್ಪಟ್ಟಿವೆ. ಇದು ಹೃದಯ ಗುಹೆಯಲ್ಲಿರುವ ಮತ್ತು ಹೊರಗಿರುವ ಚೈತನ್ಯವನ್ನು ಒಂದುಗೂಡಿಸುವ ಉಪಾಯ. ಅದಕ್ಕೆ ಸಮಾನವಾದ ಭಾವ ಬೇಕು.

ವಿವರಣೆ: ಸರ್ಪಭೂಷಣ ಶಿವಯೋಗಿಗಳು ಭಾವಲಿಂಗದ ಪೂಜೆಯನ್ನು ವರ್ಣಿಸಿರುವುದೊಂದು ಅದ್ಭುತ.

ಭಾವಲಿಂಗದ ನಿಜವನ್ನು ಪೂರ್ಣಮಯವಾಗಿ ಭಾವಿಸಿ ಪೂಜೆಗೈಯುವವನೆ ದಿವ್ಯಯೋಗಿ ||ಪ||
ಧರೆಯೆ ಪೀಠಿಕೆ ಅಷ್ಟದಿಶೆಯೆ ಗೋಮುಖಮೂರ್ಧ |
ಪರಿಪೂರ್ಣವಾಗಿಪ್ಪ ಬಯಲೆ ಗೋಳಕವು ||
ಸರುವ ಲೋಕಗಳನಿಂತೊಳಗೊಂಡ ಲಿಂಗವ|

ಅರಿವೆಂಬ ಕರುವಾಗಿರುಹದೊಳಗಿರಿಸಿ || 1 ||
ಶರಧಿ ಸಪ್ತಕದಿಂದಲಭಿಷೇಕವೆರೆದಿಂದ |
ತರಣಿ ತಾರಕೆಗಳ ಕುಸುಮವ ಧರಿಸಿ ||
ಸ್ಫುರಿಸುವೌಷಧಿಗಳೆಲ್ಲವ ನೈವೇದ್ಯವ ಮಾಡಿ |
ಮರೆವಾಜಾಂಡದ ವಸ್ತ್ರವಿದನು ಬಾಸಣಿಸಿ || 2 ||

ಅದರ ಗರ್ಭದೊಳೆ ತಾನಿರುತಿರ್ದು ತನ್ನಯ |
ಹೃದಯ ಮಧ್ಯದೊಳದನು ಹುದುಗಿಸಿ ಬಳಿಕ ||
ಅದು ತಾನರ್ಚನೆಯೆಂಬ ತ್ರಿಪುಟಯಳಿದು ಮಿಕ್ಕ |
ಸದಮಳ ಗುರುಸಿದ್ಧನಿರವೆ ತಾನಾಗಿ || 3 ||

ದೃಷ್ಟಿಯು ದೈವೀಮಯವಾದಾಗ ಭಾವಲಿಂಗ ಪೂಜೆ ಮಾಡುವ ಶಿವಯೋಗಿಯ ಜ್ಞಾನಚಕ್ಷುವಿಗೆ ಸೃಷ್ಟಿಯ ಪ್ರತಿಯೊಂದು ಕಾರ್ಯ ದೈವೀಪೂಜೆಯಾಗುತ್ತದೆ. ಆಗ ತನ್ನ ಹೃದಯದ ಗುಹೆಯಲ್ಲಿಯೇ, ಹೊರಗಿರುವ ಚೇತನ ತನ್ನೊಳಗೇ ಇದೆ ಎಂಬುದನ್ನು ಅನುಭವಿಸಿ, ತಾನು ಬೇರೆ, ಅರ್ಚನೆ ಬೇರೆ ಎಂಬ ತ್ರಿಪುಟಿಯ ಭಾವವನ್ನೇ ಕಳೆದುಕೊಳ್ಳುತ್ತಾನೆ. ಹೊರಗಿನ ಮತ್ತು ಅಂತರಂಗದ ಉಭಯ ತತ್ವಗಳು ಒಂದೇ ಎಂಬುದನ್ನು ಅನುಭಾವಿಸುತ್ತಾನೆ. ಇದನ್ನೇ ಮಹಾನಾರಾಯಣೋಪನಿಷತ್, ‘ಅಂತರ್ಬಹಿಶ್ಚತತ್‍ಸರ್ವಂ ವ್ಯಾಪ್ಯನಾರಾಯಣ: ಸ್ಥಿತ:’ ಎನ್ನುತ್ತದೆ. ಹೊರಗೆ ಮತ್ತು ಒಳಗೆ ಇರುವುದೊಂದೇ ಸತ್ವ.
ಕಗ್ಗದ ಮಾತು ಸುಂದರ. ಹೊರಗೆ ಪ್ರಪಂಚದಲ್ಲಿ ಕಾಣುವ ಚೈತನ್ಯ ಮತ್ತು ನಮ್ಮ ಹೃದಯದ ಗುಹೆಯೊಳಗಿರುವ ಸತ್ವ ಎರಡೂ ಒಂದೇ ಎಂದು ನೆನಪಿಸಲೆಂದೇ ಆಚಮನ, ಅಘ್ರ್ಯ, ಪೂಜೆ, ನೈವೇದ್ಯಗಳ ಕ್ರಿಯೆಯನ್ನು ವಿಧಿಸಲಾಗಿದೆ. ಇದು ಅಂತರಂಗ ಮತ್ತು ಬಹಿರಂಗಗಳ ಏಕತೆಯನ್ನು ಸಹಭಾವದಿಂದ ಕೂಡಿಸುವ ಉಪಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT