ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮನ-ಬುದ್ಧಿ ಸಂಯೋಗ

Last Updated 23 ಜನವರಿ 2022, 19:31 IST
ಅಕ್ಷರ ಗಾತ್ರ

ಮತಿ ನಯನದಂತೆ ಮುಂದಿರ್ಪುದನು ನೋಡುವುದು |

ಮಿತವದರ ಕೆಲಸ, ಹೆಳವನ ಚಲನೆಯಂತೆ ||

ಗತಿಶಕ್ತಿಯದಕೆ ಮನವೆಂಬ ಚರಣದ ಬಲದೆ |

ಮತಿಬಿಟ್ಟ ಮನ ಕುರುಡು – ಮಂಕುತಿಮ್ಮ
⇒|| 547 ||

ಪದ-ಅರ್ಥ: ಮತಿ=ಬುದ್ಧಿ, ನಯನ=ಕಣ್ಣು, ಮುಂದಿರ್ಪುದನು=ಮುಂದಿರುವುದನ್ನು,ಹೆಳವ=ಅಂಗವಿಕಲ, ಗತಿಶಕ್ತಿಯದಕೆ=ಗತಿ+
ಶಕ್ತಿ+ಅದಕೆ,

ವಾಚ್ಯಾರ್ಥ: ಬುದ್ಧಿ ಕಣ್ಣುಗಳಂತೆ ಮುಂದಿದ್ದನ್ನು ಮಾತ್ರ ಕಾಣುತ್ತದೆ. ಅದರ ಕೆಲಸ ಮಿತವಾದದ್ದು. ಒಂದು ರೀತಿಯಲ್ಲಿ ಹೆಳವನ ನಡಿಗೆಯಂತೆ. ಅದಕ್ಕೆ ವೇಗ ಮತ್ತು ಶಕ್ತಿ ಬರುವುದು ಮನಸ್ಸಿನ ಕಾಲುಗಳಿಂದ. ಆದರೆ ಬುದ್ಧಿಯನ್ನು ತ್ಯಜಿಸಿದ ಮನ ಕುರುಡಾಗಿದ್ದಂತೆ.

ವಿವರಣೆ: ಬುದ್ಧಿ ಎನ್ನುವುದು ಖಾಲೀ ಕ್ಯಾನವಾಸ್ ಇದ್ದ ಹಾಗೆ. ಅದು ತನ್ನಷ್ಟಕ್ಕೆ ತಾನೇ ಚಿತ್ರಗಳನ್ನು ಮೂಡಿಸಿಕೊಳ್ಳುವುದಿಲ್ಲ. ಆಗ ತಾನೇ ಹುಟ್ಟಿದ ಮಗುವಿಗೂ ಬುದ್ಧಿ ಎನ್ನುವುದಿದೆ. ಆದರೆ ಅದು ಏನನ್ನು ಯೋಚಿಸಲಾರದು. ಯಾಕೆಂದರೆ ಅದರಲ್ಲಿ ಏನೂ ಇಲ್ಲ. ವರ್ಷಗಳು ಕಳೆದಂತೆ ಇಂದ್ರಿಯಗಳು ಬಲಿತು ಪ್ರಪಂಚದ ನೂರಾರು ಅನುಭವಗಳನ್ನು ತಂದು ಮನಸ್ಸಿಗೆ ಒಪ್ಪಿಸುತ್ತವೆ. ಅದು ಅವುಗಳನ್ನು ಬುದ್ಧಿಗೆ ಒಪ್ಪಿಸಿ ಸರಿ, ತಪ್ಪುಗಳ ತೀರ್ಮಾನವನ್ನು ಅದಕ್ಕೆ ಬಿಡುತ್ತದೆ. ಖಾಲಿಯಾದ ಕ್ಯಾನವಾಸ್ ಮೇಲೆ ಚಿತ್ರ ಬಿಡಿಸುವುದು ಈ ಮನಸ್ಸು. ಅವೆಲ್ಲ ಅನುಭವಗಳು ಬುದ್ಧಿಯಲ್ಲಿ ಉಳಿದುಬಿಡುತ್ತವೆ. ಬುದ್ಧಿ ತನ್ನ ಗೋದಾಮಿನಲ್ಲಿದ್ದ ಅನುಭವಗಳ ಆಧಾರದ ಮೇಲೆಯೇ ತೀರ್ಮಾನ ತೆಗೆದುಕೊಳ್ಳುವುದು. ತನ್ನ ಸಂಗ್ರಹದಲ್ಲಿಲ್ಲದ ಚಿಂತನೆಯ ಬಗ್ಗೆ ಅದು ಆಲೋಚನೆಯನ್ನು ಮಾಡಲಾರದು. ಕೋಳಿ ಎಂದ ತಕ್ಷಣ, ಬುದ್ಧಿ, ತನ್ನ ಸಂಗ್ರಹದಲ್ಲಿ ಈಗಾಗಲೇ ಇರುವ ಕೋಳಿಯ ಚಿತ್ರವನ್ನು ಗಮನಕ್ಕೆ ತರುತ್ತದೆ. ಆದರೆ ‘ಗೆಲ್ಟಾ’ ಎನ್ನುವ ಪ್ರಾಣಿ ಹೇಗಿದೆ ಎಂದು ಕೇಳಿದರೆ ಅದು ಏನನ್ನೂ ಹೇಳಲಾರದು. ಯಾಕೆಂದರೆ ಅದರ ಸಂಗ್ರಹದಲ್ಲಿ ಅದರ ಚಿತ್ರ ಇಲ್ಲ. ಅದಕ್ಕೇ ಇಂಗ್ಲೀಷಿನಲ್ಲಿ “You are a product of your experiences” ಎನ್ನುತ್ತಾರೆ. ಅನುಭವದಂತೆ ಚಿಂತನೆ. ಅದಕ್ಕೆ ಕಗ್ಗ ಬುದ್ಧಿಯ ಕೆಲಸ ಮಿತವಾದದ್ದು ಎನ್ನುತ್ತದೆ. ಕಣ್ಣು ಹೇಗೆ ಮುಂದಿದ್ದನ್ನು ಮಾತ್ರ ನೋಡುತ್ತದೋ ಹಾಗೆ ಬುದ್ಧಿ ತನ್ನ ಅನುಭವದ ಸಂಗ್ರಹದಲ್ಲಿರುವುದನ್ನು ಮಾತ್ರ ಯೋಚಿಸುತ್ತದೆ. ಅದೊಂದು ಹೆಳವನ ನಡಿಗೆ.

ನಾನು ಮೊದಲ ಬಾರಿಗೆ ಅಮೆರಿಕಕ್ಕೆ ಹೋಗಿದ್ದಾಗ ಒಂದು ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಇರಬೇಕಿತ್ತು. ಅಲ್ಲಿಗೆ ಹೋದಾಗ ಸಂಜೆ ಎಂಟು ಗಂಟೆ. ಒಳಗಡೆಗೆ ಬೆಳಕಿರಲಿಲ್ಲ. ಭಾರತದಿಂದ ಹೋದ ನನಗೆ ಕರೆಂಟ್ ಹೋಗುವುದು ವಿಶೇಷವೇನಲ್ಲ. ಹಾಗೆಯೇ ಇಲ್ಲಿಯೂ ಆಗಿರಬೇಕೆಂದು ಅಲ್ಲಿಯ ಅಧಿಕಾರಿಗೆ ಕೇಳಿದೆ. ಆತ ಅಲ್ಲಿಂದಲೇ ಕೂಗಿದ, ‘ಸ್ವಿಚ್ ಆನ್ ಮಾಡಿಕೊಳ್ಳಿ’. ನಾನು ನೋಡಿದೆ ಎಲ್ಲ ಸ್ವಿಚ್‌ಗಳು ಆನ್ ಆಗಿಯೇ ಇದ್ದವು. ಅವನಿಗೆ ಹಾಗೆಯೇ ಹೇಳಿದೆ. ಆತ ಧಡಧಡನೆ ಬಂದು ನೋಡಿ ನಕ್ಕ. ‘ಎಲ್ಲ ಸ್ವಿಚ್ ಆಫ್ ಆಗಿದ್ದಾವಲ್ಲ’ ಎಂದು ಅವುಗಳನ್ನು ಆನ್ ಮಾಡಿದ. ಬೆಳಕು ಬಂತು. ಯಾಕೆ ಹೀಗಾಯ್ತು ಗೊತ್ತೇ? ಅಮೆರಿಕದಲ್ಲಿ ಮೇಲೆ ಒತ್ತಿದರೆ ‘ಆನ್. ಭಾರತದಲ್ಲಿ ಸ್ವಿಚ್‌ನ್ನು ಕೆಳಗೆ ಒತ್ತಿದರೆ ‘ಆನ್’. ಇಪ್ಪತ್ತು ವರ್ಷ ಭಾರತದಲ್ಲಿ ಸ್ವಿಚ್ ಕೆಳಗೆ ಒತ್ತಿ ‘ಆನ್’ ಮಾಡಿದ್ದ ನನಗೆ ಅಮೆರಿಕದಲ್ಲಿ ವಿರುದ್ಧವಾಗಿರುತ್ತೆಂದು ತಿಳಿದಿರಲಿಲ್ಲ. ಅದು ಬುದ್ಧಿಯ ಸಂಗ್ರಹದಲ್ಲಿರಲಿಲ್ಲವಾದ್ದರಿಂದ ಅದು ಕಾರ್ಯಮಾಡಲಿಲ್ಲ. ಅದನ್ನೇ ಕಗ್ಗ ಬುದ್ಧಿಯ ಕೆಲಸ ಮಿತ ಎನ್ನುತ್ತದೆ.

ಬುದ್ಧಿಗೆ ವೇಗ ಮತ್ತು ಶಕ್ತಿ ದೊರಕುವುದು ಮನಸ್ಸಿನಿಂದಲೇ. ಯಾಕೆಂದರೆ ಮನಸ್ಸು ಎಷ್ಟು ವೇಗವಾಗಿ ಇಂದ್ರಿಯಗಳ ಮೂಲಕ ಅನುಭವಗಳನ್ನು ತಂದು ಹಾಕುತ್ತದೋ ಅಷ್ಟು ಬುದ್ಧಿ ಹೆಚ್ಚು ಸಮರ್ಥವಾಗುತ್ತದೆ. ಹೀಗೆ ಮನಸ್ಸು ಬುದ್ಧಿಗಳು ಹೊಂದಾಣಿಕೆಯಿಂದ ಕಾರ್ಯ ಮಾಡಬೇಕು. ಮನಸ್ಸಿನ ವೇಗವಿಲ್ಲದೆ ಬುದ್ಧಿ ಮಿತವಾಗುವಂತೆ, ಬುದ್ಧಿಯನ್ನು ತೊರೆದ ಮನಸ್ಸು ಕುರುಡಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT