ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪ್ರಪಂಚದ ಭೋಗವಿಧಿ

Last Updated 13 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಮಿಡಿಚೇಪೆಕಾಯಿಗಳ ತಡಬಡದೆ ನುಂಗುವುದು |
ಕಡಿಯೆ ಹೊಟ್ಟೆಯಲಿ ಹರಳೆಣ್ಣೆ ಕುಡಿಯುವುದು ||
ಬಿಡುತಿರಲು ನೋವಾಗ ಸುಖವೀಗಳೆನ್ನುವುದು |
ಪೊಡವಿಗಿದೆ ಭೋಗವಿಧಿ

– ಮಂಕುತಿಮ್ಮ || 344 ||

ಪದ-ಅರ್ಥ: ಮಿಡಿಚೇಪೆಕಾಯಿಗಳ=ಮಿಡಿ
(ಹಣ್ಣಾಗದ)+ಚೇಪೆಕಾಯಿಗಳ(ಸೀಬೆ ಹಣ್ಣುಗಳ), ತಡಬಿಡದೆ=ಗಬಗಬನೆ, ಸುಖವೀಗಳೆನ್ನುವುದು=ಸುಖ+ಈಗಳೆ+ಎನ್ನುವುದು, ಪೊಡವಿಗಿದೆ=ಪೊಡವಿಗೆ (ಭೂಮಿಗೆ ಸಂಸಾರಕ್ಕೆ)+ಇದೆ, ಭೋಗವಿಧಿ=ಸುಖದ ದಾರಿ.

ವಾಚ್ಯಾರ್ಥ: ಕಚ್ಚಾ ಸೀಬೆಕಾಯಿಗಳನ್ನು ಗಬಗಬನೆ ತಿನ್ನುವುದು, ತಿಂದ ಮೇಲೆ ಹೊಟ್ಟೆ ಕಡಿದಾಗ ಅದರ ಉಪಶಮನಕ್ಕೆ ಹರಳೆಣ್ಣೆ ಕುಡಿಯುವುದು, ಮುಂದೆ ನೋವು ಕಡಿಮೆಯಾಗುವಾಗ ಆಹಾ! ಎಷ್ಟು ಆರಾಮವಾಯಿತು ಎನ್ನುವುದು, ಇದೇ ಸಂಸಾರದಲ್ಲಿ ಸುಖ ಪಡೆಯುವ ರೀತಿ.

ವಿವರಣೆ: ಇದೊಂದು ಸುಂದರವಾದ ಉದಾಹರಣೆಯನ್ನು ಡಿ.ವಿ.ಜಿ ನೀಡಿದ್ದಾರೆ. ರುಚಿ ಹತ್ತಿತು ಎಂದು ಇನ್ನೂ ಹಣ್ಣಾಗದ ಹತ್ತಾರು ಕಚ್ಚಾ ಸೀಬೇಹಣ್ಣುಗಳನ್ನು ಗಬಗಬನೆ ತಿಂದರೆ ಇನ್ನೇನಾಗುತ್ತದೆ? ಹೊಟ್ಟೆಯಲ್ಲಿ ಕಡಿತ ಉಂಟಾಗುತ್ತದೆ, ಅಪಚನವಾಗಿ ಒದ್ದಾಟ ಪ್ರಾರಂಭವಾಗುತ್ತದೆ. ಅದರ ಪರಿಹಾರಕ್ಕೆ ಹರಳೆಣ್ಣೆ ಸೇವನೆ. ಹೊಟ್ಟೆ ಖಾಲಿಯಾಗಿ ಸುಖವಾಯಿತು ಎನ್ನಿಸುತ್ತದೆ. ಆಗ ಮತ್ತೆ ಸೀಬೆಕಾಯಿಗಳನ್ನು ತಿನ್ನುವ ಆಸೆಯಾಗುತ್ತದೆ, ಕಷ್ಟಪಟ್ಟಿದ್ದು ಮರೆತು ಹೋಗಿರುತ್ತದೆ.

ಇದು ಬರೀ ಸೀಬೆಕಾಯಿಯ ಕಥೆಯಲ್ಲ. ಇದು ಸಂಸಾರದ ಕಥೆ. ಇಂಥವನ್ನು ನಾವು ಎಷ್ಟು ನೋಡಿಲ್ಲ? ಯಾವುದೋ ಒಂದು ಅಧಿಕಾರ ದೊರಕಿತು, ಅಲ್ಲಿ ಹಣ ಮಾಡುವ ಅವಕಾಶ. ಎಷ್ಟು ಗಳಿಸಿದರೆ ಸಾಕು? ಇಷ್ಟು ಗಳಿಸಿದರೆ ಮತ್ತಷ್ಟರಾಸೆ. ಮುಂದೆ ಸಿಕ್ಕೀತೋ ಇಲ್ಲವೊ ಎನ್ನುವಂತೆ ಗಬಗಬನೇ ತುಂಬಿಕೊಂಡದ್ದಾಯಿತು. ಹಣ ಗಳಿಸುವ ಭರಾಟೆಯಲ್ಲಿ ಜಗತ್ತು ತನ್ನನ್ನು ಗಮನಿಸುತ್ತದೆ ಎಂಬುದು ತಿಳಿಯದೆ ಹೋಯಿತು. ಹೊಟ್ಟೆಗೆ ಅಪಚನವಾದದ್ದು ತಿಳಿಯುತ್ತದೆ, ಆದರೆ ಹಣದ ಅಪಚನವಾಗುತ್ತಿದೆ ಎಂಬುದು ಹೊಳೆಯುವುದಿಲ್ಲ. ಆಗ ಸರಿಯಾದ ವ್ಯವಸ್ಥೆಯ ಅಧಿಕಾರಿಗಳು ಇವರ ರಕ್ಷಣಾ ಕ್ಷೇತ್ರವನ್ನು ಭೇದಿಸಿ ದಾಳಿ ಮಾಡುತ್ತಾರೆ. ಹರಳೆಣ್ಣೆ ಕುಡಿದಾಗ ಉಬ್ಬರ ಕಡಿಮೆಯಾಗುವಂತೆ ಅವರು ಗಳಿಸಿಟ್ಟದ್ದನ್ನೆಲ್ಲ ಹೊರಗೆ ಹಾಕಿ ಇವರನ್ನು ಒಳಗೆ ತಳ್ಳುತ್ತಾರೆ. ಮುಖಭಂಗವಾಗುತ್ತದೆ, ಜನರ ಮುಂದೆ ತಲೆ ಎತ್ತದಂತೆ ಆಗುತ್ತದೆ. ಕೆಲಸಮಯದ ನಂತರ ಜನರೂ ಅದನ್ನು ಮರೆಯುತ್ತಾರೆ. ಮತ್ತೆ ಈ ಮನುಷ್ಯನಲ್ಲಿ ಆಸೆ ತಲೆ ಎತ್ತುತ್ತದೆ. ಮತ್ತೆ ಹಣ ಗಳಿಸುವ ಭರಾಟೆ. ಅದರಿಂದ ಸುಖ ಬಂತು ಎಂಬ ಭ್ರಮೆ. ಆದರೆ ಬರುವುದು ದು:ಖವೆಂಬುದು ತಿಳಿಯದು. ಇದೇ ಭೋಗದ ವಿಧಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT