ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸೌಂದರ್ಯ ಬಾಂಧವ್ಯಗಳ ಬಂಧ

Last Updated 1 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಸೌಂದರ್ಯ ಬಾಂಧವ್ಯಗಳನು ಬರಿದೆನಲಹುದೆ? |
ಹೊಂದಿಸವೆ ಕುಂದಿಸವೆ ಜೀವಿಗಳನುವುಗಳ್ ? ||
ಸಿಂಧುಪೂರದಿ ಬಿದ್ದವರೊಳೊಬ್ಬರೊಬ್ಬರನು |
ಅಂದಿಕೊಳಲದು ಬರಿದೆ ? – ಮಂಕುತಿಮ್ಮ
⇒|| 392 ||

ಪದ-ಅರ್ಥ: ಬರಿದೆನಲಹುದೆ=ಬರಿದು
(ಅರ್ಥಹೀನ)+ಎನಲು+ಅಹುದೆ, ಜೀವಿಗಳನವುಗಳ್=ಜೀವಿಗಳನು+ಅವುಗಳ್(ಅವುಗಳನ್ನು), ಸಿಂಧುಪೂರದಿ=ಸಿಂಧು(ಸಮುದ್ರ)+ಪೂರದಿ
(ಪ್ರವಾಹ, ಆಳ), ಅಂದಿಕೊಳಲದು=
ಅಂದಿಕೊಳಲು(ಹಿಡಿದುಕೊಳ್ಳಲು)+ಅದು.

ವಾಚ್ಯಾರ್ಥ:ಬದುಕಿನ ಸೌಂದರ್ಯ, ಬಾಂಧವ್ಯಗಳನ್ನು ಅರ್ಥಹೀನವೆನ್ನಬಹುದೆ? ಅವು ಜೀವಿಗಳನ್ನು ಹೊಂದಿಸುತ್ತವೆ, ಬೇರ್ಪಡಿಸುತ್ತವೆ. ಸಮುದ್ರದಾಳದಲ್ಲಿ ಬಿದ್ದು ಪ್ರಾಣಭಯದಿಂದ ಒದ್ದಾಡುತಿರುವ ಜೀವಿಗಳು ಒಬ್ಬರನ್ನೊಬ್ಬರು ಹಿಡಿದುಕೊಳ್ಳುವುದು ನಿರರ್ಥಕವೆ?

ವಿವರಣೆ:ನಾಲ್ಕು ಜನ ಪರ್ವತಾರೋಹಿಗಳು ಹಿಮಾಲಯದ ಕೆಲವು ಶಿಖರಗಳನ್ನೇರಲು ಹೊರಟರು. ಶಿಖರಗಳ ಹತ್ತಿರ ವಿಪರೀತ ಹಿಮಪಾತವಾಗಿತ್ತು. ಬಿರುಗಾಳಿ, ಚಳಿಯಾದ ಗಾಳಿ ಬೀಸತೊಡಗಿತ್ತು. ಮತ್ತೆ ಹಿಮಪಾತ ಯಾವ ಮಟ್ಟದ್ದಾಯಿತೆಂದರೆ, ಅವರಿಗೆ ಮುಂದಿನ ದಾರಿ ಕಾಣದಂತೆ ಕ್ಷಣಕ್ಷಣಕ್ಕೂ ರಾಶಿರಾಶಿ ಹಿಮ ಬೀಳುತ್ತಿತ್ತು. ಕಾಲುಗಳು ಮೊಳಕಾಲು ಮಟ್ಟದವರೆಗೆ ಹೂತು ಹೋಗುತ್ತಿದ್ದವು. ಗಾಳಿಯ ವೇಗಕ್ಕೆ ಯಾವ ಡೇರೆಯೂ ನಿಲ್ಲಲಿಲ್ಲ. ಅವರಿಗೆ ಈಗ ಬದುಕಿ ಉಳಿಯುವ ಆಸೆ ನೀಗಿಹೋಯಿತು. ಒಬ್ಬಾತ ತಿರುಗಿ ನೋಡಿದ. ಅವರ ಜೊತೆಗಾರರು ಯಾರೂ ಕಾಣುತ್ತಿಲ್ಲ. ಕೂಗಿದ, ಮರುದನಿಯಿಲ್ಲ. ಅವರೆಲ್ಲ ಹಿಮದಲ್ಲಿ ಹೂತುಹೋದರೋ ಎಂಬ ಭ್ರಮೆ ಬಂದಿತು. ಮುಂದಕ್ಕೆ ನಡೆದು ಏನನ್ನೋ ಎಡವಿ ಧೊಪ್ಪನೆ ಬಿದ್ದ. ತಾನು ಎಡವಿದ್ದು ಏನನ್ನು ಎಂದು ನೋಡಲು ಹಿಮವನ್ನು ಸರಿಸಿದಾಗ ಅದರ ಕೆಳಗೆ ಅವನ ಸ್ನೇಹಿತ ! ಅಂಗಾತ್ತಾಗಿ ಬಿದ್ದಿದ್ದಾನೆ, ಮೈಮೇಲೆ ಆರು ಇಂಚು ಹಿಮವಿದೆ. ಈಗ ಅವನ ಮುಂದೆ ಎರಡು ಆಯ್ಕೆಗಳು. ಒಂದು ಅಲ್ಲಿಂದ ನಡೆದು ಹೋಗಿ ಕ್ಯಾಂಪ್ ಸೇರಿಕೊಳ್ಳುವುದು. ಇನ್ನೊಂದು ಗೆಳೆಯನಿಗೆ ಸಹಾಯ ಮಾಡುವುದು. ಆದರೆ ಹಾಗೆ ಮಾಡುವಲ್ಲಿ ತಾನೇ ಸತ್ತು ಹೋಗಬಹುದು. ಆತ ಎರಡನೆಯದನ್ನು ಆಯ್ಕೆ ಮಾಡಿಕೊಂಡ. ಗೆಳೆಯನ ಮೇಲೆ ಬಿದ್ದಿದ್ದ ಹಿಮವನ್ನು ಸರಿಸಿದ. ತನ್ನ ಕೈಗಳಿಂದ ಗೆಳೆಯನ ಕೈಗಳನ್ನು ರಭಸದಿಂದ ಉಜ್ಜತೊಡಗಿದ. ಮೊಳಕಾಲೂರಿ ಅವನ ಪಾದಗಳನ್ನು ಉಜ್ಜಿದ. ಅವನ ಹಣೆಯ ಮೇಲೆ ಬೆವರು ಕಿತ್ತಿಕೊಂಡು ಬಂದಿತು. ಹದಿನೈದು ನಿಮಿಷಗಳ ನಂತರ ಗೆಳೆಯ ಕಣ್ಣು ತೆರೆದ, ಎದ್ದು ನಿಂತ. ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಕ್ಯಾಂಪ್‌ಗೆ ಬಂದರು. ಗೆಳೆಯ ಹೇಳಿದ, ‘ಸ್ನೇಹಿತ, ನೀನು ನನಗೆ ಸಹಾಯ ಮಾಡದಿದ್ದರೆ ಸತ್ತೇ ಹೋಗುತ್ತಿದ್ದೆ’. ಇನ್ನೊಬ್ಬ ಹೇಳಿದ, ‘ಆದರೆ ಗೆಳೆಯಾ, ನಿನಗೆ ನಾನು ಹಾಗೆ ಮಾಡದಿದ್ದರೆ ನಾನೂ ಸತ್ತು ಹೋಗುತ್ತಿದ್ದೆ. ನಿನ್ನನ್ನು ಉಳಿಸಲು ನಾನು ಮಾಡಿದ ಶ್ರಮದಿಂದ ನನ್ನ ಮೈ ಬಿಸಿಯಾಗಿ ಬದುಕಿದೆ’. ಒಬ್ಬರು ಮತ್ತೊಬ್ಬರಿಗೆ ನೆರವಾದದ್ದೇ ಇಬ್ಬರ ಉಳಿವಿಗೆ ಕಾರಣವಾಗಿತ್ತು.

ಕಗ್ಗ ಹೇಳುತ್ತದೆ ಬದುಕಿನಲ್ಲಿ ದೊರೆಯುವ ಸೌಂದರ್ಯ, ಬರುವ ಬಾಂಧವ್ಯಗಳು ವ್ಯರ್ಥವಲ್ಲ. ಇವೇ ಜೀವಿಗಳನ್ನು ಒಂದಾಗಿಸುತ್ತವೆ. ಕೆಲವು ಬಾಂಧವ್ಯಗಳು ಸಂಬಂಧಗಳನ್ನು ಬೇರ್ಪಡಿಸಲೂಬಹುದು. ನಾವೆಲ್ಲ ಸಂಸಾರವೆಂಬ ಸಾಗರದಲ್ಲಿ ಒಟ್ಟಾಗಿ ಬಿದ್ದವರು. ಎಲ್ಲರೂ ಉಳಿವಿಕೆಗೇ ಪ್ರಯತ್ನಿಸುತ್ತಿರುವವರು. ಒಬ್ಬರು ಮತ್ತೊಬ್ಬರನ್ನು ಹಿಡಿದುಕೊಂಡು, ಸಹಾಯ, ಸಹಕಾರ ಮಾಡಿದರೆ ಎಲ್ಲರೂ ಸಂತೋಷವಾಗಿ ಉಳಿಯುವ ಅವಕಾಶಗಳು ಹೆಚ್ಚು. ಆದ್ದರಿಂದ ಈ ಸೌಂದರ್ಯ, ಸಂಬಂಧಗಳು ವ್ಯರ್ಥ, ಅರ್ಥಹೀನವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT