ಭಾನುವಾರ, ಸೆಪ್ಟೆಂಬರ್ 19, 2021
24 °C

ಬೆರಗಿನ ಬೆಳಕು: ಮುದಿಬ್ರಾಹ್ಮಣನ ಚತುರತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ತನ್ನ ಧೀಮಂತಿಕೆಗೆ ತಕ್ಕ ಹಾಗೆ ವೆಸ್ಸಂತರ ಬೋಧಿಸತ್ವ ಬ್ರಾಹ್ಮಣನಿಗೆ ಮಕ್ಕಳ ದಾನವನ್ನು ಖಚಿತಮಾಡುವುದರೊಂದಿಗೆ, ರಾತ್ರಿ ವಿಶ್ರಾಂತಿ ತೆಗೆದುಕೊಳ್ಳಿ, ಮರುದಿನ ಮಕ್ಕಳ ತಾಯಿ ಮಾದ್ರಿದೇವಿ ಮಕ್ಕಳನ್ನು ಅಲಂಕರಿಸಿ ಕಳುಹಿಸುತ್ತಾಳೆಂದು ಹೇಳಿದ. ಆದರೆ ಈ ಕ್ಷುದ್ರ ಬ್ರಾಹ್ಮಣ ಅದನ್ನೊಪ್ಪಲಿಲ್ಲ. ‘ನಾನು ರಾತ್ರಿ ಇಲ್ಲಿ ವಾಸಿಸುವುದಿಲ್ಲ. ಇಲ್ಲಿಂದ ನಾನು ಈಗಲೇ ಹೊರಟುಬಿಡುವುದೇ ಸರಿ. ಯಾಕೆಂದರೆ ಹೆಂಗಸರು ದಾನಶೀಲರಲ್ಲ. ಅದರಲ್ಲೂ ತನ್ನ ಮಕ್ಕಳನ್ನೇ ದಾನವಾಗಿ ಕೊಡುವುದನ್ನು ತಾಯಿ ಒಪ್ಪಲಾರಳು. ಆಕೆ ಅದಕ್ಕೆ ಅಡ್ಡಿ ಮಾಡುತ್ತಾಳೆ. ಹೇಗಾದರೂ ತಪ್ಪಿಸಲು ಪ್ರಯತ್ನಿಸುತ್ತಾಳೆ. ಆದ್ದರಿಂದ ನೀನು ಶ್ರದ್ಧಾಪೂರ್ವಕವಾಗಿ ಕೊಡುವ ಈ ದಾನವನ್ನು ಇವರ ತಾಯಿ ನೋಡದಿರಲಿ. ಈ ಶ್ರದ್ಧೆಯ ದಾನದಿಂದ ನಿನಗೆ ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ಬಡಬಡಿಸಿದ. ವೆಸ್ಸಂತರ ಬೋಧಿಸತ್ವ, ‘ಆಯಿತು ನನ್ನ ಪತಿವೃತೆಯಾದ ಹೆಂಡತಿಯನ್ನು ನಿನಗೆ ನೋಡಲು ಇಷ್ಟವಿಲ್ಲದಿದ್ದರೆ, ನಾನು ಒತ್ತಾಯ ಮಾಡಲಾರೆ. ಆದರೆ ನನ್ನದೊಂದು ವಿನಂತಿ. ನೀನು ನನ್ನ ಮಗ ಜಾಲಿ ಹಾಗೂ ಮಗಳು ಕೃಷ್ಣಾಜಿನರನ್ನು ಕರೆದುಕೊಂಡು ಹೋಗಿ ನನ್ನ ತಂದೆಯಾದ ಸಿವಿರಾಜ ಚಕ್ರವರ್ತಿಗೆ ತೋರಿಸು. ಈ ಸುಂದರವಾದ ಮಕ್ಕಳನ್ನು ಕಂಡು ಪ್ರಸನ್ನಚಿತ್ತನಾದ ನನ್ನ ತಂದೆ ನಿನಗೆ, ಮೂರು ತಲೆಮಾರುಗಳಿಗೆ ಸಾಕಾಗುವಷ್ಟು ಹಣ ಕೊಡುತ್ತಾನೆ. ನಿನ್ನ ದಾರಿದ್ರ್ಯ ಕರಗಿ ಹೋಗುತ್ತದೆ’ ಎಂದ.

ಮುದುಕ ಬ್ರಾಹ್ಮಣ ಬಹಳ ಚಾಲಾಕಿ. ‘ರಾಜಪುತ್ರ, ನಾನು ಅದನ್ನು ಮಾಡಲಾರೆ. ಯಾಕೆಂದರೆ, ತನ್ನ ಪ್ರೀತಿಯ ಮೊಮ್ಮಕ್ಕಳನ್ನು ಕಂಡೊಡನೆ ಆತ ಅವರನ್ನು ನನ್ನಿಂದ ಕಿತ್ತುಕೊಳ್ಳಬಹುದು. ರಾಜ ನನ್ನನ್ನು ಬಂಧಿಸಿ ಕಾರಾಗೃಹದಲ್ಲಿ ಹಾಕಬಹುದು. ನನ್ನನ್ನು ಕೊಲ್ಲಿಸಿಯೂ ಬಿಡಬಹುದು. ಆಗ ನನ್ನ ಹೆಂಡತಿ ಬ್ರಾಹ್ಮಣಿ, ನನ್ನ ಗಂಡ, ಹಣ ಮತ್ತು ದಾಸರಿಬ್ಬರನ್ನು ಕಳೆದುಕೊಂಡ ಮೂರ್ಖ ಎಂದು ನಿಂದಿಸಬಹುದು. ಆದ್ದರಿಂದ ಮಕ್ಕಳನ್ನು ಸಿವಿರಾಜ್ಯಕ್ಕೆ ಕರೆದೊಯ್ಯದೆ ನೇರವಾಗಿ ನನ್ನ ಮನೆಗೆ ಹೋಗಿ ಬ್ರಾಹ್ಮಣಿಯ ಸೇವೆಗೆ ಮಕ್ಕಳನ್ನು ಒಪ್ಪಿಸಿ, ಅವಳ ಪ್ರೇಮವನ್ನು ಗಳಿಸುತ್ತೇನೆ’ ಎಂದ. ಈ ಕಠೋರವಾದ ಮಾತುಗಳನ್ನು ಕೇಳುತ್ತಿದ್ದ ಮಕ್ಕಳು ತಮಗೇನೋ ದೊಡ್ಡ ಆಪತ್ತು ಬರಲಿದೆಯೆಂದು ತಿಳಿದು ಪರ್ಣಕುಟಿಯ ಹಿಂಭಾಗಕ್ಕೆ ಓಡಿದರು. ಅಲ್ಲಿದ್ದರೆ ಸಿಕ್ಕಿಹಾಕಿಕೊಳ್ಳಬಹುದೆಂದು, ಅಲ್ಲಿಂದ ಓಡಿ ಹೋಗಿ ದಟ್ಟವಾದ ಮರಗಳ ಹಿಂದೆ ಅಡಗಿಕೊಂಡರು. ಈ ಬ್ರಾಹ್ಮಣ ಅಲ್ಲಿಯೂ ಬಂದು ಹಿಡಿದುಕೊಂಡು ಹೋಗಬಹುದೆಂಬ ಭಯದಿಂದ ಕೊನೆಗೆ ಪುಷ್ಕರಿಣಿಯ ದಡಕ್ಕೆ ಬಂದರು. ತಮ್ಮ ನಾರುಮಡೆಯನ್ನು ಚೆನ್ನಾಗಿ ಬಿಗಿದು ಕಟ್ಟಿ, ನೀರಿಗಿಳಿದರು. ಹರಡಿದ್ದ ವಿಶಾಲವಾದ ಕಮಲಪತ್ರಗಳನ್ನು ತಲೆಯ ಮೇಲೆ ಹರಡಿಕೊಂಡು ನೀರಿನಲ್ಲಿ ಅಡಗಿ ಕುಳಿತರು. ಮಕ್ಕಳು ಕಾಣದಂತಾದಾಗ, ಬ್ರಾಹ್ಮಣ ವೆಸ್ಸಂತರನನ್ನು ನಿಂದಿಸತೊಡಗಿದ. ‘ಬೋಧಿಸತ್ವ, ನೀನು ಮೋಸಗಾರ. ಈಗ ತಾನೆ ಮಕ್ಕಳನ್ನು ಕೊಡುತ್ತೇನೆ ಎಂದು ವಾಗ್ದಾನ ಮಾಡಿದ್ದೀಯಾ. ನಾನು ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆಂಬ ಭಯದಿಂದ, ಸಂಕೇತ ಮಾಡಿ ಅವರನ್ನು ಎಲ್ಲಿಯೋ ಓಡಿಸಿಬಿಟ್ಟೆ. ದೊಡ್ಡ ದಾನಿಯಂತೆ ನಟಿಸುವ ನೀನೊಬ್ಬ ಸುಳ್ಳುಗಾರ, ಮೋಸಗಾರ’. ಆ ಮಾತುಗಳನ್ನು ಸ್ಥಿರಚಿತ್ತದಿಂದ ಕೇಳಿದ ವೆಸ್ಸಂತರ ಮುಗುಳುನಕ್ಕು ಬ್ರಾಹ್ಮಣನನ್ನು ಸಮಾಧಾನಪಡಿಸಿದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು