ಶನಿವಾರ, ಅಕ್ಟೋಬರ್ 23, 2021
20 °C

ಬೆರಗಿನ ಬೆಳಕು: ಆತ್ಮೋನ್ನತಿಯ ದಾರಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಗೌರವಿಸು ಜೀವನವ, ಗೌರವಿಸು ಚೇತನವ|
ಆರದೋ ಜಗವೆಂದು ಭೇದವೆಣಿಸದಿರು||
ಹೋರುವುದೆ ಜೀವನ ಸಮೃದ್ಧಿಗೋಸುಗ ನಿನಗೆ|
ದಾರಿಯಾತ್ಮೋನ್ನತಿಗೆ – ಮಂಕುತಿಮ್ಮ ||475||

ಪದ-ಅರ್ಥ: ಹೋರುವುದೆ= ಹೋರಾಡುವುದೆ, ದಾರಿಯಾತ್ಮೋನ್ನತಿಗೆ= ದಾರಿ+ ಆತ್ಮೋನ್ನತಿಗೆ.

ವಾಚ್ಯಾರ್ಥ: ಜೀವನವನ್ನು ಗೌರವಿಸು, ಅದರ ಹಿಂದಿನ ಚೈತನ್ಯವನ್ನು ಗೌರವಿಸು. ಇದು ಮತ್ತಾರದೋ ಜಗತ್ತೆಂದು ಭೇದ ಮಾಡದಿರು. ಜೀವನದ ಸಮೃದ್ಧಿಗಾಗಿ ಹೋರಾಡುವುದೇ ಆತ್ಮೋನ್ನತಿಯ ದಾರಿ.

ವಿವರಣೆ: ನಮ್ಮ ಜೀವನವೆನ್ನುವುದು ಸಣ್ಣದಲ್ಲ. ಅದು ಅತ್ಯಂತ ಪವಿತ್ರವಾದದ್ದು. ಗೌರವಕ್ಕೆ ಅರ್ಹವಾದದ್ದು. ಭಗವಂತ ಎಂಭತ್ನಾಲ್ಕು ಲಕ್ಷ ಜೀವರಾಶಿಗಳನ್ನು ನಿರ್ಮಿಸಿದ್ದಾನೆ ಎಂದು ನಂಬುತ್ತೇವೆ. ಅದೆಷ್ಟು ತರಹದ ಕ್ರಿಮಿಕೀಟಗಳು, ಪಕ್ಷಿಗಳು, ಪ್ರಾಣಿಗಳು, ಈ ಪ್ರಪಂಚದಲ್ಲಿ! ಆದರೆ ಮನುಷ್ಯ ಜೀವನ ಭಗವಂತನ ಸೃಷ್ಟಿಯ ಕಿರೀಟ. ಅದರ ಸೃಷ್ಟಿಯಲ್ಲಿ ಅದೆಷ್ಟು ರಸಧಾತುಗಳು ಸೇರಿ ಅದನ್ನು ನಡೆಸುತ್ತಿವೆ! ಇದುವರೆಗೂ ವೈದ್ಯರಿಗೆ, ಸಂಶೋಧಕರಿಗೆ ಅರ್ಥವಾಗದಷ್ಟು ಕ್ಲಿಷ್ಟವಾಗಿದ್ದರೂ ಬಳಸುವುದಕ್ಕೆ ಅತ್ಯಂತ ಸುಲಭವಾದ ಈ ದೇಹದಲ್ಲಿ, ಕಲ್ಪನಾತೀತವಾದ ಚೈತನ್ಯ ಸೇರಿ ಅದನ್ನು ನಡೆಸುತ್ತಿದೆ. ಅದು ಮಾಡಬಹುದಾದ ಕಾರ್ಯ ಅನೂಹ್ಯವಾದದ್ದು. ಅದಕ್ಕೇ ಈ ಜೀವನದ ಬಗ್ಗೆ ನಿರುತ್ಸಾಹವಾಗಲಿ, ಜಿಗುಪ್ಸೆಯಾಗಲಿ ಸಲ್ಲದು. ಅದರ ಬಗ್ಗೆ ಶ್ರದ್ಧೆ ಗೌರವಗಳಿರಬೇಕು. ಬದುಕುವುದು ಪಾಪವಲ್ಲ, ಚೆನ್ನಾಗಿ ಬದುಕಲು ಪ್ರಯತ್ನಿಸುವುದು ನಾಚಿಕೆಯೂ ಅಲ್ಲ. ಇರುವ ಬದುಕನ್ನು ಇನ್ನೂ ಚೆನ್ನಾಗಿಸಿಕೊಂಡು ಅದನ್ನು ಸಾರ್ಥಕವಾಗುವಂತೆ ಬಳಸಿಕೊಳ್ಳುವುದು ನಮಗಿರುವ ಕರ್ತವ್ಯ. ನಾನು ಎನ್ನುವ ಜೀವನಕ್ಕೆ ಇರುವುದು ಇದೊಂದೇ ಜಗತ್ತು. ನಾನು ಏನು ಸಾಧಿಸಿದರೂ ಇಲ್ಲಿಯೇ ಸಾಧಿಸಬೇಕು. ಇದು ನನ್ನದೇ ಜಗತ್ತು. ಆದ್ದರಿಂದ ಈ ಪ್ರಪಂಚದ ಬಗ್ಗೆಯೂ ಗೌರವವಿರಬೇಕು. ಹಿಂದೆ ನಮ್ಮ ಪೂರ್ವಿಕರು ಕಷ್ಟಗಳನ್ನು ಎದುರಿಸಿದರು, ದುಃಖಗಳನ್ನು ಸಹಿಸಿದರು. ಆದರೆ ಅವರಲ್ಲಿ ಸೋಲಿನ ಧ್ವನಿ ಕೇಳಲಿಲ್ಲ.

ಅವರು ಗೆಲು ಮನಸ್ಸಿನಿಂದಲೇ ದೇವತೆಗಳನ್ನು ಪ್ರಾರ್ಥಿಸಿದರು.

ಭದ್ರಂ ಕರ್ಣೇಭಿ: ಶೃಣುಯಾಮ ದೇವಾ:|
ಭದ್ರಂ ಪಶ್ಚೇಮಾಕ್ಷಭಿರ್ಯಜತ್ರಾ||
ಸ್ಥಿರೈರಂಗೈಸ್ತುಷ್ಟುವಾಗಂ ಸಸ್ತನೂಭಿ:|
ವ್ಯಶೇಮ ದೇವ ಹಿತಂ ಯದಾಯು:|

‘ದೇವತೆಗಳೇ, ನಾವು ಯಾವಾಗಲೂ ಉತ್ತಮವಾದ ವಿಚಾರಗಳನ್ನು ಕೇಳುವಂತಾಗಲಿ. ಪವಿತ್ರವಾದವುಗಳನ್ನು ಕಾಣುವಂತಾಗಲಿ. ಆರೋಗ್ಯವಂತವಾದ ಶರೀರದಿಂದ ನಿಮ್ಮನ್ನು ಆರಾಧಿಸುತ್ತ, ಪೂರ್ಣಾಯುಷ್ಯವುಳ್ಳವರಾಗಿ ಜೀವಿಸುವಂತಾಗಲಿ’. ಬದುಕಿನಲ್ಲಿ ಉನ್ನತಿಗಾಗಿ ಹೋರಾಡಬೇಕು. ಧರ್ಮಕ್ಕಾಗಿ, ಲೋಕಸ್ನೇಹಕ್ಕಾಗಿ, ಸಮಸ್ತಲೋಕದ ಹಿತವ್ಯವಸ್ಥೆಗಾಗಿ ಹೋರಾಡಬೇಕು. ಈ ಹೋರಾಟದಲ್ಲೇ ಮನುಷ್ಯನ ಆತ್ಮೋನ್ನತಿ ಇದೆ. ರೇಷ್ಮೆಯ ಹುಳು ಹೋರಾಡುತ್ತಲೇ ಚಿಟ್ಟೆಯಾಗುತ್ತದೆ. ಅನಾಮದೇಯನಾದ ವ್ಯಕ್ತಿ ಲೋಕಕಲ್ಯಾಣಕ್ಕೆ ಹೋರಾಡುತ್ತ, ಉನ್ನತಿಗೇರಿ, ಮಹಾತ್ಮನಾಗುತ್ತಾನೆ, ಲೋಕಮಾನ್ಯನಾಗುತ್ತಾನೆ, ವಿವೇಕಾನಂದನಾಗುತ್ತಾನೆ, ರಾಮನಾಗುತ್ತಾನೆ, ಬುದ್ಧನಾಗುತ್ತಾನೆ, ಸರ್ವಜನಮಾನ್ಯನಾಗುತ್ತಾನೆ. ಜೀವನದ ಸಮೃದ್ದಿಗೆ ಹೋರಾಡದ ಯಾವ ವ್ಯಕ್ತಿಯೂ ದೊಡ್ಡವನಾಗಲಾರ. ಆದ್ದರಿಂದ ಗೌರವದ ಜೀವನವನ್ನು ಲೋಕಕಲ್ಯಾಣಕ್ಕೆ ತೊಡಗಿಸುವುದೇ ಆತ್ಮೋನ್ನತಿಯ ದಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು