ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪೌರುಷಕ್ಕೆ ದೈವಬಲ

Last Updated 24 ಜನವರಿ 2022, 19:30 IST
ಅಕ್ಷರ ಗಾತ್ರ

ಪುರುಷಬುದ್ಧಿಯೆ ಸಾಕು ವರಸಿದ್ಧಿಗೆಂದಲ್ಲ |
ಪರಮೇಶಕರುಣಿಯನವಶ್ಯವೆಂದಲ್ಲ ||
ಚರಣ ನಡೆವನಿತು ಕಣ್ಣರಿವನಿತು ದೂರ ನೀಂ |
ಚರಿಸದಿರೆ ಲೋಪವಲ? – ಮಂಕುತಿಮ್ಮ || 548 ||

ಪದ-ಅರ್ಥ: ವರಸಿದ್ಧಿಗೆಂದಲ್ಲ=

ವರ(ಶ್ರೇಷ್ಠ)+ಸಿದ್ಧಿಗೆ(ಸಾಧನೆಗೆ)+ ಎಂದಲ್ಲ, ಪರಮೇಶಕರುಣೆಯನವಶ್ಯವೆಂದಲ್ಲ=ಪರಮೇಶಕರುಣೆ+ಅನವಶ್ಯ(ಅವಶ್ಯವಲ್ಲದ್ದು)+ಎಂದಲ್ಲ, ನಡೆವನಿತು=ನಡೆವ+ಅನಿತು(ಸ್ವಲ್ಪ), ಕಣ್ಣರಿ
ವನಿತು=ಕಣ್ಣು+ಅರಿವ+ಅನಿತು, ಚರಿಸದಿರೆ=ನಡೆಸದಿರೆ.

ವಾಚ್ಯಾರ್ಥ: ಶ್ರೇಷ್ಠವಾದ ಸಾಧನೆಗೆ ಕೇವಲ ಪುರುಷ ಬುದ್ಧಿಯೆ ಸಾಕು ಎಂದಲ್ಲ, ಭಗವಂತನ ಕರುಣೆ ಅವಶ್ಯವಿಲ್ಲವೆಂದಲ್ಲ, ಆದರೂ ದೇಹದಲ್ಲಿ ಶಕ್ತಿ ಇರುವಷ್ಟು, ದೃಷ್ಟಿ ತೋರಿದಷ್ಟು ದೂರವನ್ನು ನಾವು ನಡೆಯದಿದ್ದರೆ ಅದು ಲೋಪವಲ್ಲವೆ?

ವಿವರಣೆ: ನಮ್ಮಲ್ಲಿ ಎರಡೂ ತರಹದ ಜನರಿದ್ದಾರೆ. ಒಬ್ಬರು ಪೂರ್ತಿ ಪುರುಷ ಪ್ರಯತ್ನವನ್ನೇ ನಂಬಿದವರು. ದೈವವೆನ್ನುವುದೆಲ್ಲಿದೆ? ಏನಿದ್ದರೂ ಅದು ನಮ್ಮ ಪ್ರಯತ್ನ ಮಾತ್ರ. ಹೇಡಿಗಳು ದೈವವೆಂಬ ಇಲ್ಲದ್ದನ್ನು ನಂಬಿಕೊಂಡು ಸೋಮಾರಿಗಳಾಗುತ್ತಾರೆ ಎನ್ನುತ್ತಾರೆ. ಮತ್ತೆ ಕೆಲವರು, ನಾವೇನೇ ಮಾಡಿದರೂ, ಎಷ್ಟೇ ಕಷ್ಟಪಟ್ಟರೂ ದೈವ ತೀರ್ಮಾನಿಸಿದಂತೆಯೇ ಆಗುವುದು. ಸುಮ್ಮನೆ ಕಷ್ಟಪಟ್ಟರೇನು ಫಲ ಎನ್ನುತ್ತಾರೆ. ಎರಡೂ ಚಿಂತನೆಗಳಲ್ಲಿ ಸ್ವಲ್ಪ ಸತ್ಯವಿದೆ. ಆದರೆ ಎರಡೂ ಸೇರಿದಾಗ ಪರಿಪೂರ್ಣಸತ್ಯವಾಗುತ್ತದೆ. ಸುಭಾಷಿತ ಹೇಳುತ್ತದೆ –

ಯಥಾ ಹೈಕೇನ ಚಕ್ರೇಣ ನ ರಥಸ್ಯ ಗತಿರ್ಭವೇತ್ |
ಏವಂ ಪುರುಷಾಕಾರೇಣ ವಿನಾ ದೈವಂ ನ ಸಿದ್ಧ್ಯತಿ ||

ಒಂದೇ ಒಂದು ಚಕ್ರದಿಂದ ರಥವು ಮುಂದೆ ಸಾಗಲಾರದು- ಹಾಗೆಯೇ, ಪುರುಷ ಪ್ರಯತ್ನವಿಲ್ಲದೆ ದೈವವೂ ಒಲಿಯುವುದಿಲ್ಲ
ಇದನ್ನು ಮತ್ತೊಂದು ಸುಭಾಷಿತ ಮುಂದುವರೆಸುತ್ತದೆ.
ಉದ್ಯಮಂ ಸಾಹಸಂ ಧೈರ್ಯಂ ಬುದ್ಧಿ ಶಕ್ತಿ ಪರಾಕ್ರಮ: |
ಷಡೇತೇ ಯತ್ರವರ್ತಂತೆ ತತ್ರದೇವಾ: ಸಹಾಯಕೃತ್ ||

“ಯಾರಲ್ಲಿ ಉದ್ಯಮ (ಸೋಲರಿಯದ ಪ್ರಯತ್ನ), ಸಾಹಸ, ಧೈರ್ಯ, ಬುದ್ಧಿ, ಶಕ್ತಿ, ಪರಾಕ್ರಮವೆಂಬ ಆರು ಗುಣಗಳಿವೆಯೋ, ಅಂಥವರಿಗೆ ಮಾತ್ರ ಭಗವಂತನು ಸಹಾಯ ಮಾಡುತ್ತಾನೆ. ಶಕ್ತಿ ಇಲ್ಲದವನಿಗೆ ದೈವಬಲವೂ ಇಲ್ಲ”.

ಹೀಗೆಂದರೆ ಬರೀ ಪುರುಷಬಲದಿಂದಲೇ ಎಲ್ಲವೂ ಸಿದ್ಧಿಸಲಾರದು ಮತ್ತು ಬರೀ ದೈವವೆಂದು ಕೈಕಟ್ಟಿ ಕುಳಿತುಕೊಂಡು ಕರ್ತವ್ಯಹೀನನಾದರೆ ದೈವವೂ ಒಲಿಯದು. ದೈವ ತನ್ನ ಕೃಪೆಯನ್ನು ಯಾವಾಗಲಾದರೂ ತೋರಲಿ. ನಮ್ಮಲ್ಲಿರುವ ಬುದ್ಧಿಯಿಂದ ಶಕ್ತಿಯಿಂದ ಸಾಧ್ಯವಾದಷ್ಟು ಪ್ರಯತ್ನವನ್ನು ಮಾಡದಿದ್ದರೆ ಅದೊಂದು ಲೋಪವೇ ಆಗುತ್ತದೆ. ಇದನ್ನು ವಿವರಿಸಲು ಡಿ.ವಿ.ಜಿ ಒಂದು ಸೊಗಸಾದ ಉದಾಹರಣೆಯನ್ನು ಕೊಡುತ್ತಾರೆ. ಹಲವು ಮಂದಿ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಬಿರುಗಾಳಿ ಎದ್ದು, ಸಮುದ್ರ ಕೆರಳಿ ಹಡಗು ಹೊಯ್ದಾಡತೊಡಗಿತು, ನೀರು ಒಳಗಡೆಗೆ ನುಗ್ಗಿ ಬಂದಿತು. ಜನರೆಲ್ಲ ಗುರಿಯಾಗಿ ಹಡಗಿನಲ್ಲಿದ್ದ ಪಾದ್ರಿಯ ಕಡೆಗೆ ಓಡಿದರು. ಒಂದೇ ಧ್ವನಿಯಲ್ಲಿ ಬೇಡಿದರು, “ಪ್ರಾರ್ಥನೆ ಮಾಡೋಣ. ನಮ್ಮನ್ನು ದೇವರೇ ಕಾಪಾಡಬೇಕು”, ಆಗ ಪಾದ್ರಿ ಹೇಳಿದ, “ಹಾಗೇನು? ನಾವೆಲ್ಲ ಪ್ರಾರ್ಥನೆಯನ್ನು ಮಾಡೋಣ. ಆದರೆ ಪ್ರಾರ್ಥನೆ ಮಾಡುತ್ತಲೇ ಹಡಗಿನಲ್ಲಿ ಬಂದ ನೀರನ್ನು ಪಂಪು ಹೊಡೆದು ಹೊರಗೆ ಹಾಕೋಣ. ಅದನ್ನು ಮಾತ್ರ ಬಿಡಬೇಡಿ”. ಎಂಥ ಚೆಂದದ ಮಾತು! ಯಾರು ತಮಗೆ ಸಹಾಯ ಮಾಡಿಕೊಳ್ಳುತ್ತಾರೋ ಅವರಿಗೆ ದೇವರು ಸಹಾಯ ಮಾಡುತ್ತೇನೆ. ದೈವದ ಸಹಾಯವಿಲ್ಲದೆ ಜಯ ಸಾಧ್ಯವಿಲ್ಲ. ಆದರೆ ಸ್ವಪ್ರಯತ್ನವಿಲ್ಲದೆ ದೈವದ ಸಹಾಯವೂ ದೊರೆಯುವುದಿಲ್ಲ. ತನ್ನ ಭಾರವನ್ನು ತಾನು ಹೊತ್ತು, ಉಳಿದದ್ದನ್ನು ದೈವಕ್ಕೆ ಬಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT