ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವ್ಯರ್ಥ ಬದುಕು ಮತ್ತು ಸೌದೆ

ಗುರುರಾಜ ಕರಜಗಿ ಅವರ ಅಂಕಣ.
Published 11 ಜುಲೈ 2023, 0:48 IST
Last Updated 11 ಜುಲೈ 2023, 0:48 IST
ಅಕ್ಷರ ಗಾತ್ರ

ಮನೆಯ ಮಾಳಿಗೆಗಲ್ಲ, ಮುಡಿಯ ಕೊಪ್ಪಿಗೆಗಲ್ಲ |
ಇನಿವಣ್ಣು ತನಿಯ ಕಾಳೆಂಬುದೇನಿಲ್ಲ ||
ಬಣಗು ಕುರಿಚಲು ಗಿಡದ ಬಾಳೇನು? ನೀನಂತು |
ಒಣಗಿದೊಡೆ ಸವುದೆ ಸರಿ – ಮಂಕುತಿಮ್ಮ || 924 ||

ಪದ-ಅರ್ಥ: ಮಾಳಿಗೆಗಲ್ಲ=ಮಾಳಿಗೆಗೆ+ಅಲ್ಲ, ಕೊಪ್ಪಿಗೆಯಲ್ಲ=ಕೊಪ್ಪಿಗೆಗೆ (ತುರುಬಿಗೆ)+ಅಲ್ಲ,
ಇನಿವಣ್ಣು=ಸಿಹಿಯಾದ ಹಣ್ಣು, ತನಿಯ=ರಸತುಂಬಿದ, ಕಾಳೆಂಬುದೇನಲ್ಲ=ಕಾಳೆಂಬುದು+ಏನಿಲ್ಲ, ಬಣಗು=ಅಲ್ಪ, ಹೀನ, ನೀನಂತು=ನೀನು+ಅಂತು, ಸವುದೆ=ಸೌದೆ.
ವಾಚ್ಯಾರ್ಥ: ಮನುಷ್ಯನ ಬದುಕು ಯಾವುದಕ್ಕೆ ಪ್ರಯೋಜನ? ಮನೆಯ ಮಾಳಿಗೆಗೆ ಹಲಗೆಯಲ್ಲ, ತಲೆಯ ತುರುಬಿಗೆ ಹೂವಲ್ಲ, ರಸಪೂರಿತ ಹಣ್ಣಲ್ಲ, ರಸತುಂಬಿದ ಕಾಳಲ್ಲ. ಅಲ್ಪವಾದ ಕುರುಚಲು ಗಿಡದ ಬಾಳಿಗೇನು ಅರ್ಥ? ನೀನೂ ಹಾಗೆಯೇ. ಚೈತನ್ಯದ ಸತ್ವ ಅಡಗಿದೊಡೆ ಸೌದೆಯೆ.
ವಿವರಣೆ: ಕವಿ ಎಸ್ ಜಿ. ನರಸಿಂಹಾಚಾರ್ಯರು ಬರೆದ “ನೀನಾರಿಗಾದೆಯೋ ಎಲೆ ಮಾನವಾ” ಎಂಬ ಕವನ ಮನುಷ್ಯನ ಬದುಕನ್ನು ಗೋವಿನ ಜೀವನಕ್ಕೆ ಹೋಲಿಸಿ, ಈ ಮಾನವ ಜನ್ಮದಿಂದ ಏನು ಪ್ರಯೋಜನ? ಗೋವು ಮನುಷ್ಯನಿಗಿಂತ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ತಿಳಿಸುವ ಪ್ರಯತ್ನ ಮಾಡುತ್ತದೆ. ಇದು ಎಲ್ಲ ಮನುಷ್ಯರ ಬಗ್ಗೆ ಬರೆದದ್ದಲ್ಲ. ಯಾರು ತಮ್ಮ ಬದುಕಿನ ಸಾರ್ಥಕತೆಯನ್ನು ಗುರುತಿಸಿಕೊಳ್ಳದೆ ಜಂಜಡಗಳಲ್ಲಿ ಕಳೆದು ಹೋಗಿ ಹೋಗಿಬಿಡುತ್ತಾರೋ ಅವರನ್ನು ಉದ್ದೇಶಿಸಿದ್ದು. ನಮ್ಮ ಸುತ್ತಮುತ್ತ ಕಣ್ಣಾಡಿಸಿದರೆ ಬಹಳಷ್ಟು ಜನರಿಗೆ ಜೀವನದ ಸಾರ್ಥಕತೆಯ ಚಿಂತೆ ಇದ್ದಂತೆ ತೋರುವುದಿಲ್ಲ. ಎರಡು ಹೊತ್ತಿನ ಊಟ, ರಾತ್ರಿಯ ನಿದ್ದೆ, ಅಂದಂದಿನ ದುಡಿತದ ಚಾಕರಿ, ಮನೆಮಂದಿಯ ಆರೈಕೆ, ಇವುಗಳಲ್ಲಿಯೇ ಜೀವನ ಕರಗಿ ಹೋಗುತ್ತದೆ. ಹೀಗೆ ಗಾಣದ ಎತ್ತಿನಂತೆ ಕಣ್ಣುಮುಚ್ಚಿಕೊಂಡು ತಿರುತಿರುಗಿ, ತುಳಿದ ದಾರಿಯನ್ನೇ ಮರಮರಳಿ ತುಳಿಯುವಂತೆ ಕಳೆದ ಜೀವನ
ಒಂದು ಜೀವನವೆ? ಅಂಥ ಬದುಕಿನಿಂದ ಏನು ಪ್ರಯೋಜನ? ದೊಡ್ಡ ಮರದ ಹಲಗೆ ಮನೆಯ ಮಾಳಿಗೆಗೆ
ಪ್ರಯೋಜನವಾಗುತ್ತದೆ. ಒಂದೇ ದಿನ ಬಾಳುವ ಹೂವು ಮುಡಿಗೆ ಅಲಂಕಾರವಾಗಿ ಸಂತೋಷ ನೀಡುತ್ತದೆ. ಸವಿಯಾದ ಹಣ್ಣು, ರಸತುಂಬಿದ ಕಾಳು ಜೀವಕ್ಕೆ ಸುಖ ನೀಡುತ್ತವೆ. ಆದರೆ ಅಲ್ಪವಾದ ಕುರುಚಲು ಗಿಡದಿಂದ ಏನು ಪ್ರಯೋಜನ? ಅದು ಎಲ್ಲಿಯೂ ಸಲ್ಲದು. ಜೀವನದ ಅರ್ಥವನ್ನು ತಿಳಿಯದ ಮನುಷ್ಯನ ಬದುಕೂ ಹಾಗೆಯೇ. ದೇಹಗಳಲ್ಲಿ ಜೀವನೆನಿಸುವ ಚೇತನಾಂಶ ದೇವನದೇ! ದೀಪ ಬಂಗಾರದ್ದಾಗಿರಲಿ, ಮಣ್ಣಿನದಾಗಿರಲಿ ಒಳಗಿನ ದೀಪ ಅವನದೇ. ಅದಕ್ಕೇ ಭಗವದ್ಗೀತೆ “ಮವೈವಾಂಶೋ ಜೀವಲೋಕೇ ಜೀವಭೂತ ಸನಾತನ:” ಎನ್ನುತ್ತದೆ. ಎಲ್ಲ ಜೀವಿಗಳಲ್ಲಿಯ ಚೇತನಾಂಶ ಭಗವಂತನದೇ. ಆ ಚೇತನ ದೇಹದಿಂದ ಹೊರಟು ಹೋದರೆ ಉಳಿಯುವುದು ಸೌದೆಯೇ. ಅದಕ್ಕೆ ಸೌದೆಗಿರುವ ಪ್ರಯೋಜನವೂ ಇಲ್ಲ. ಕಗ್ಗ ಹೇಳುತ್ತದೆ, ಒಳಗಿನ ಸತ್ವ ಒಣಗಿದೊಡೆ ಅದೊಂದು ಸೌದೆಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT