ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ನಿವೃತ್ತಿ ಮಾರ್ಗದೆಡೆಗೆ

Published 12 ಜುಲೈ 2023, 18:40 IST
Last Updated 12 ಜುಲೈ 2023, 18:40 IST
ಅಕ್ಷರ ಗಾತ್ರ

ತೊಲಗೆಲವೊ ಮನೆಯಿಂದ ಮನವು ಬರಡಾದಂದೆ |
ಹೊಲಸ ತೊಳೆಯಲು ತೋಳ್ಗೆ ಬಲ ಕುಗ್ಗಿದಂದೆ ||
ತೊಲಗು ಜಗದಿಂ ದೂರ, ಇಳೆಗಾಗದಿರು ಭಾರ |
ತೊಲಗಿ ನೀಂ ಮರೆಯಾಗು – ಮಂಕುತಿಮ್ಮ || 926 ||

ಪದ-ಅರ್ಥ: ತೊಲಗೆಲವೊ=ತೊಲಗು+ಎಲವೊ, ಬರಡಾದಂದೆ=ಬರಡು+ಆದಂದೆ, ಕುಗ್ಗಿದಂದೆ=ಕುಗ್ಗಿದ+ಅಂದೆ, ಇಳೆಗಾಗದಿರು=ಇಳೆಗೆ+ಆಗದಿರು.

ವಾಚ್ಯಾರ್ಥ: ಮನಸ್ಸು ಬರಡಾದ ದಿನ, ಹೊಲಸನ್ನು ತೊಳೆಯಲು ತೋಳಿಗೆ ಶಕ್ತಿ ಕುಗ್ಗಿದ ದಿನ, ನೀನು ಮನೆಯಿಂದ ತೊಲಗು. ಜಗತ್ತಿನಿಂದ ದೂರ ಹೋಗು. ಭೂಮಿಗೆ ಭಾರವಾಗದೆ ತೊಲಗಿ ಮರೆಯಾಗು.

ವಿವರಣೆ: ಹಿಂದೂ ಧರ್ಮದಲ್ಲಿ ಎರಡು ಮಾರ್ಗಗಳು. ಒಂದು ಪ್ರವೃತ್ತಿ ಮಾರ್ಗ, ಇನ್ನೊಂದು ನಿವೃತ್ತಿ ಮಾರ್ಗ. ಸುಖವನ್ನು, ಯಶಸ್ಸನ್ನು ಕಂಡುಕೊಳ್ಳುವುದು ಪ್ರವೃತ್ತಿ ಮಾರ್ಗದಲ್ಲಿ. ಬದುಕು ಮಾಗಿದಂತೆಲ್ಲ ಮಕ್ಕಳ ಆಟಿಕೆಗಳಿಂತಿದ್ದ ನಾವು ಆಸೆಪಡುವ ವಸ್ತುಗಳು, ಆಕರ್ಷಣೆಯನ್ನು ಕಳೆದುಕೊಳ್ಳುತ್ತವೆ. ಆಸೆ-ಉತ್ಸಾಹಗಳನ್ನು ಹೊಂದಿ ಸುಖ- ಯಶಸ್ಸುಗಳನ್ನು ಬೆಂಬತ್ತಿ ಹೋಗುವ ಮನುಷ್ಯ ಒಂದು ದಿನ ಅವುಗಳನ್ನು ಮೀರಿ ಬೆಳೆಯುತ್ತಾನೆ. ಆಗ ಬರುವುದು ನಿವೃತ್ತಿ ಮಾರ್ಗ. ನಿವೃತ್ತಿ ಮಾರ್ಗ ಪ್ರವೃತ್ತಿ ಮಾರ್ಗದ ನಂತರ ಬರುತ್ತದೆಂಬುದನ್ನು ಮರೆಯಬಾರದು. ಈ ಪ್ರಪಂಚದಲ್ಲಿ ಒಳ್ಳೆಯದಾಗಿ ಕಾಣುವ ಪ್ರತಿಯೊಂದೂ ಪರಿಮಿತವಾದದ್ದು, ಕ್ಷೀಣಿಸುವಂಥದ್ದು. ಅದು ಒಮ್ಮೆ ಕರಗಿದ ನಂತರ ಮತ್ತೊಂದರ ಅಗತ್ಯತೆಯನ್ನು ನಮ್ಮೆದುರು ಬಿಟ್ಟು ಹೋಗುವಂಥದ್ದು. ಎಲ್ಲವೂ ಮರೆಯಾಗಿ ಹೋಗುತ್ತದೆ ಎಂಬ ಅರಿವಿನ ಹಂತವನ್ನು ತಲುಪಿದಾಗ ಅತ್ಯಂತ ಶ್ರೇಷ್ಠ ಕೊಡುಗೆಯೂ ಕೂಡ ಬೇಡವಾಗುತ್ತದೆ. ಹಾಗಾದಾಗ ಪ್ರಪಂಚದ ಬಂಧನಗಳು ಬೇಡವೆನ್ನಿಸುತ್ತವೆ. ಜನಜಂಗುಳಿಯಿಂದ ದೂರವಿರಬೇಕು, ಏಕಾಂತತೆ ಬೇಕು, ಅಂತರಂಗದ ನಿಗೂಢತೆಯಲ್ಲಿ ನಿರಂತತೆಯನ್ನು ಕಾಣಲು ಮನ ಅಪೇಕ್ಷಿಸುತ್ತದೆ.

ಈ ಕಗ್ಗ, ಆ ಮನಸ್ಥಿತಿಯನ್ನು ತೋರುತ್ತದೆ. ಮನಸ್ಸು ಬರಡಾದಂದು ಮನೆಯಿಂದ ತೊಲಗು ಎನ್ನುತ್ತದೆ. ಹೊರಡುಎನ್ನುವುದು ಮೃದುವಾದ ಆದೇಶ. ತೊಲಗು ಎನ್ನುವುದು ಒರಟಾದದ್ದು. ಪ್ರಪಂಚದ ಆಕರ್ಷಣೆ ಬಲವಾದದ್ದು. ಮನಸ್ಸು ಬರಡಾಗಿ ಆಸಕ್ತಿ ಕಳೆದುಕೊಂಡಿದ್ದರೂ ಪ್ರಪಂಚಕ್ಕೇ ಅಂಟಿಕೊಂಡು ಕುಳಿತುಕೊಳ್ಳುತ್ತದೆ. ಅದಕ್ಕೇ ತೊಲಗು ಎಂದು ಒರಟಾಗಿ ಹೇಳಬೇಕಾಗುತ್ತದೆ.ಅದರಂತೆ ಸಮಾಜಸೇವೆ ಮಾಡುವ ಶಕ್ತಿ ಕುಂದಿದಾಗಲೂ ಅಲ್ಲಿಂದ ತೊಲಗಬೇಕು. ಸಮಾಜದ ಕೊಳಕನ್ನು ತೊಳೆಯುವ ಶಕ್ತಿ ಇರುವವರೆಗೂ ನಾನು ಪ್ರಯೋಜನಕಾರಿ. ಅದು ಕಳೆದು ಹೋದ ನಂತರ ನಾನು ಸಮಾಜಕ್ಕೆ ಭಾರವಾಗುವ ಆತಂಕ. ಕಗ್ಗ ತೊಲಗು ಜಗದಿಂದ ಎನ್ನುತ್ತದೆ. ಹಾಗಾದರೆ ಕಗ್ಗ ನಿರಾಶಾವಾದವನ್ನು, ಋಣಾತ್ಮಕತೆಯನ್ನು ಪ್ರೇರೇಪಿಸುತ್ತದೆಯೇ? ಇಲ್ಲ. ಅದು ಸೂಚ್ಯವಾಗಿ ತಿಳಿಸುವುದು, ಪ್ರವೃತ್ತಿ ಮಾರ್ಗದಿಂದ ನಿವೃತ್ತಿ ಮಾರ್ಗಕ್ಕೆ ತೆರಳುವ ಸಮಯವನ್ನು. ಚಟುವಟಿಕೆಯ ಪ್ರವೃತ್ತಿಯಿಂದ ಅಂತರ್‌ಶೋಧದ ನಿವೃತ್ತಿಯೆಡೆಗೆ ಸಾಗುವುದನ್ನು ನೆನಪಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT