ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸದ್ದಿಲ್ಲದ ಕಡೆಗಾಲ

ಕಾಡಾನೆಗೆ ತನ್ನ ಸಾವು ಹತ್ತಿರ ಬಂದದ್ದು ತಿಳಿಯುತ್ತದಂತೆ. ಹಾಗೆ ಸಾವಿನ ಸಮಯ ಹತ್ತಿರ ಬಂದಾಗ...
Published 16 ಜುಲೈ 2023, 18:39 IST
Last Updated 16 ಜುಲೈ 2023, 18:39 IST
ಅಕ್ಷರ ಗಾತ್ರ

ಕಡೆಗಾಲವನು ತಾನೆ ಮುನ್ನರಿತು ಕಾಡಾನೆ |
ಯಡವಿಯೊಳದೊಂದು ದೂರದ ಗವಿಯನೈದಿ ||
ಬಿಡುವುದಾಯೆಡೆ ಮೌನದಿಂದಸುವವೆನ್ನುವರು |
ಕಡೆಯ ಸಾರಂತು ನೀಂ – ಮಂಕುತಿಮ್ಮ || 928 ||

ಪದ-ಅರ್ಥ: ಮುನ್ನರಿತು=ಮುನ್ನ+ಅರಿತು,  ಕಾಡಾನೆಯಡವಿಯೊಳದೊಂದು= ಕಾಡಾನೆ+ಅಡವಿಯೊಳು+ಅದೊಂದು, ಗವಿಯನೈದಿ=ಗವಿಯನು+ಐದಿ(ಸೇರಿ), ಬಿಡುವುದಾಯೆಡೆ=ಬಿಡುವುದು+ಆ+ಎಡೆ(ಜಾಗ, ಸ್ಥಳ), ಮೌನದಿಂದಸುವವೆನ್ನುವರು=ಮೌನದಿಂದ=ಅಸುವನು(ಪ್ರಾಣವನ್ನು)+ಎನ್ನುವರು, ಸಾರಂತು=ಸಾರು(ಹೋಗು)+ನೀನು+ಅಂತು.
ವಾಚ್ಯಾರ್ಥ: ಕಾಡಾನೆ ತನ್ನ ಮೃತ್ಯುವಿನ ಸಮಯವನ್ನು ತಾನೇ ಮೊದಲು ಅರಿತು, ಅಡವಿಯಲ್ಲಿ ಒಂದು ದೂರದ ಗವಿಯನ್ನು ಸೇರಿ, ಮೌನದಿಂದ ತನ್ನ ಪ್ರಾಣವನ್ನು ಬಿಡುತ್ತದೆ ಎನ್ನುತ್ತಾರೆ. ನೀನೂ ಹಾಗೆಯೇ ನಿನ್ನ ಕಡೆಗಾಲನ್ನು ಸಾರು.
ವಿವರಣೆ: ಇದೊಂದು ನಂಬಿಕೆ ಜನರಲ್ಲಿ ಮೂಡಿದೆ. ಕಾಡಾನೆಗೆ ತನ್ನ ಸಾವು ಹತ್ತಿರ ಬಂದದ್ದು ತಿಳಿಯುತ್ತದಂತೆ. ಹಾಗೆ ಸಾವಿನ ಸಮಯ ಹತ್ತಿರ ಬಂದಾಗ ಅದು ಕಾಡಿನಲ್ಲಿ ಒಳಗಡೆ ತುಂಬ ದೂರಕ್ಕೆ ಹೋಗಿಬಿಡುತ್ತದೆ. ಅಲ್ಲಿ ಒಂದು ಗುಹೆಯನ್ನು ಹುಡುಕಿಕೊಂಡು ಸೇರಿ, ಮೌನದಿಂದ ಪ್ರಾಣಬಿಡುತ್ತದೆ. ಯಾರಿಗೂ ತಿಳಿಯದಂತೆ, ಯಾರಿಗೂ ತೊಂದರೆಯಾಗದಂತೆ ತನ್ನ ಜೀವನಯಾತ್ರೆಯನ್ನು ಮುಗಿಸುತ್ತದೆ. ಇದು ಹಾಗೆಯೇ ತಲೆಮಾರುಗಳಿಂದ ಹರಿದು ಬಂದ, ಆಧಾರವಿಲ್ಲದ ನಂಬಿಕೆ. ತಮ್ಮ ಜೊತೆಗಾರರು ಸತ್ತರೆ ಅದಕ್ಕೆ ದು:ಖವನ್ನು ಪ್ರಕಟಿಸುತ್ತವೆ
ಎಂಬುದು ಸತ್ಯವಾದರೂ, ತನ್ನ ಸಾವನ್ನು ಹೀಗೆ ಏಕಾಂಗಿಯಾಗಿ ಕಳೆಯುವುದು ಒಂದು ಬೋಧಪ್ರದವಾದ ಮಿಥ್ಯೆ.
ಅದು ಬೋಧಪ್ರದ ಯಾಕೆಂದರೆ, ಸಾವು ಸುಲಭವಲ್ಲ. ಜನನವೆಂಬುದು ದೇಹದಲ್ಲಿ ಜೀವನದ ಪ್ರಜ್ಞಾಶಕ್ತಿಯ ,ಪ್ರವೇಶವಾದರೆ, ಸಾವೆಂಬುದು ಆ ಪ್ರಜ್ಞಾಶಕ್ತಿಯನ್ನು ಬಿಡುವುದು. ಅದು ಏಕೆ ಕಷ್ಟವೆಂದರೆ ಈಗ ಪ್ರಜ್ಞಾಶಕ್ತಿಯು
ದೇಹದ ಜೊತೆಗೆ, ಅನುಭವದ ಜೊತೆಗೆ ಬಿಗಿಯಾಗಿ ಬೆಸೆದುಕೊಂಡಿದೆ. ಬಿಡುಗಡೆ ತುಂಬ ನೋವಿನದು. ಅಂಥದ್ದರಲ್ಲಿ, ಸಾವನ್ನು ಮೊದಲೇ ತಿಳಿದುಕೊಂಡು, ಜನರಿಂದ ದೂರವಾಗಿ ಯಾರಿಗೂ ತೊಂದರೆ ಕೊಡದೆ, ಭಾರವಾಗದೆ ಪ್ರಾಣವನ್ನು ಬಿಡುವುದು ಪರಮ ಭಾಗ್ಯ. ಅಂತಹ ಭಾಗ್ಯ ಎಲ್ಲರಿಗೂ ಬರಲಿ ಎನ್ನುತ್ತದೆ ಕಗ್ಗ. ಸಾವಿನ
ಮುನ್ಸೂಚನೆಯನ್ನು ಪಡೆದರೂ, ಅದರ ಬಗ್ಗೆ ಭಯವಿಲ್ಲದೆ, ಆತಂಕಗೊಳ್ಳದೆ, ಎಲ್ಲವನ್ನೂ ಪೂರ್ವಯೋಜನೆಯಂತೆ ನಡೆಸಿ ದೇಹದಿಂದ ಮುಕ್ತಿ ಪಡೆಯುವುದು ಒಂದು ವಿಶೇಷ ಸಾಧನೆ. ಅದೊಂದು ರೀತಿಯಲ್ಲಿ ಸಾವನ್ನು ಗೆದ್ದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT