ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಉದ್ಧಾರದ ಮಾರ್ಗಗಳು

Last Updated 6 ಸೆಪ್ಟೆಂಬರ್ 2021, 4:12 IST
ಅಕ್ಷರ ಗಾತ್ರ

ಚಾರುದೃಶ್ಯಂಗಳಿಂ ಪ್ರೀತಿ ಹೃದಯವಿಕಾಸ|
ಕ್ರೂರದೌಷ್ಟ್ಯಯಂಗಳಿಂ ವೀರಾನುಕಂಪ ||
ಭೈರವಾದ್ಧುತಗಳಿಂ ಮೌನದಂತರ್ಮನನ |
ದಾರಿಯುದ್ಧಾರಕಿವು- ಮಂಕುತಿಮ್ಮ || 457 ||

**

ಪದ-ಅರ್ಥ: ಚಾರುದೃಶ್ಯಂಗಳಿಂ=ಚಾರು(ಸುಂದರವಾದ)+ದೃಶ್ಯಂಗಳಿಂ (ದೃಶ್ಯಗಳಿಂದ), ಕ್ರೂರದೌಷ್ಟ್ಯಂಗಳಿಂ=ಕ್ರೂರ+ದೌಷ್ಟ್ಯಂಗಳಿಂ(ದುಷ್ಟತನಗಳಿಂದ), ವೀರಾನುಕಂಪ=ವೀರ+ಅನುಕಂಪ, ಭೈರವಾದ್ಭುತಗಳಿಂ=ಭೈರವ(ಭಯಂಕರವಾದ)+ಅದ್ಭುತಗಳಿಂ, ಮೌನದಂತ ರ್ಮನನ=ಮೌನದ+ಅಂತರ್ಮನನ(ಅಂತರೀಕ್ಷಣೆ, ಆಂತರ್ಯದ ಚಿಂತನೆ), ದಾರಿಯುದ್ಧಾರಕಿವು=ದಾರಿ+ಉದ್ಧಾರಕ್ಕೆ+ಇವು.

ವಾಚ್ಯಾರ್ಥ: ಸುಂದರವಾದ ದೃಶ್ಯಗಳಿಂದ ಪ್ರೀತಿ ಮತ್ತು ಹೃದಯದ ವಿಕಾಸ. ಕ್ರೂರತೆಯನ್ನು, ದುಷ್ಟತನವನ್ನು ಕಂಡಾಗ ಹುಟ್ಟುವುದು ವೀರರಸ, ಅದಕ್ಕೆ ಪಾತ್ರರಾದವರನ್ನು ಕಂಡಾಗ ಅನುಕಂಪ, ಭಯಂಕರವಾದ, ಅದ್ಭುತಗಳನ್ನು ಕಂಡಾಗ ಮನ ಮೌನಕ್ಕೆ ಜಾರಿ ಅಂತರೀಕ್ಷಣೆ ಮಾಡುತ್ತದೆ. ಇವೆಲ್ಲ ಉದ್ಧಾರದ ದಾರಿಗಳು.

ವಿವರಣೆ: ಪ್ರಕೃತಿಗೂ, ಮನುಷ್ಯ ಸ್ವಭಾವಕ್ಕೂ ತುಂಬ ಹತ್ತಿರದ ಸಂಬಂಧ. ಸಂಬಂಧ ಮಾತ್ರವಲ್ಲ, ಒಂದು ಮತ್ತೊಂದನ್ನು ಪ್ರಚೋದಿಸುತ್ತದೆ. ನೀವೊಂದು ಸಮುದ್ರತೀರಕ್ಕೆ ಹೋಗಿದ್ದೀರಿ. ಅಲ್ಲಿ ಬೆಳಿಗ್ಗೆ ಸೂರ್ಯೋದಯವಾಗುತ್ತಿದೆ. ಕ್ಷಣಕ್ಷಣಕ್ಕೆ ಬದಲಾಗುವ ಆಕಾಶವರ್ಣಗಳು, ಅವುಗಳ ಪ್ರತಿಫಲನ ತೆರೆಗಳ ಮೇಲೆ ಮೂಡುವುದನ್ನು ಕಂಡಾಗ, ತಾಯಿಯ ತೊಡೆಯ ಮೇಲೆ ಮಲಗಿದ್ದ ಪುಟ್ಟ ಕಂದ ಫಳ್ಳನೇ ನಗುವುದನ್ನು ಕಂಡಾಗ, ಇಪ್ಪತ್ತು ವರ್ಷಗಳ ಕಾಲ ಕಣ್ಣಿನ ಗೊಂಬೆಯಂತೆ ಇದ್ದ ಮಗಳು ಮದುವೆಯಾಗಿ ಗಂಡನ ಮನೆಗೆ ಹೊರಟಾಗ, ಅವಳನ್ನು ತಬ್ಬಿಕೊಂಡು ಮಗುವಿನ ಹಾಗೆ ಬಿಕ್ಕುತ್ತಿದ್ದ ತಂದೆಯನ್ನು ಕಂಡಾಗ, ಇಂತಹ ಹಲವಾರು ಸುಂದರ ದೃಶ್ಯಗಳನ್ನು ನೋಡಿದಾಗ ನಿಮ್ಮ ಮನಸ್ಸಿನಲ್ಲಿ ಯಾವ ತರಹದ ಭಾವನೆಗಳು ಮೂಡುತ್ತವೆ? ಆ ಸಮಯದಲ್ಲಿ ಕೋಪ, ಹತಾಶೆ, ದ್ವೇಷಗಳು ಉಕ್ಕುವುದು ಸಾಧ್ಯವೆ? ಆಗ ಮನಸ್ಸಿನಲ್ಲಿ ಮೂಡುವುದು ಪ್ರೀತಿಯ, ಆನಂದದ, ಸಂತೃಪ್ತಿಯ, ಕೃತಜ್ಞತೆಯ ಭಾವನೆಗಳೇ. ಇವು ಹೃದಯವನ್ನು ವಿಕಸಿಸುವ ಭಾವನೆಗಳು.

ನೀವು ಯುದ್ಧದ ದೃಶ್ಯಗಳನ್ನು ವೀಕ್ಷಿಸುವಾಗ, ಕ್ರೌರ್ಯದ ಸಂದರ್ಭಗಳನ್ನು ನೋಡುತ್ತಿರುವಾಗ, ಭಯಂಕರವಾದ ಭೂಕಂಪದ, ಸುನಾಮಿಯ ಘಟನೆಗಳನ್ನು ಕಾಣುವಾಗ ನಮಗರಿಯದಂತೆ ಮನದಲ್ಲಿ ಕ್ರೌರ್ಯ ತಲೆ ಎತ್ತುತ್ತದೆ, ವೀರಾವೇಶ ಮೂಡುತ್ತದೆ. ಆದರೆ ಕ್ರೌರ್ಯದ, ದೌರ್ಜನ್ಯದ ದವಡೆಯಲ್ಲಿ ಸಿಕ್ಕಿ ನಲುಗಿದವರನ್ನು ಕಂಡಾಗ ಮನ ಕರಗುತ್ತದೆ. ಅವರ ಬಗ್ಗೆ ಅನುಕಂಪ ಮೂಡಿ ಬರುತ್ತದೆ.

ಹಿಮಾಲಯದ ಕೇದಾರನಾಥಕ್ಕೆ ಹೋಗುವಾಗ ಚಿಕ್ಕದಾರಿಯ ಎಡಭಾಗದ ಮಹೋನ್ನತ ಪರ್ವತಗಳನ್ನು ಮತ್ತು ಎಡಗಡೆಗೆ ತಳಕಾಣದ ಪ್ರಪಾತಗಳ ಅದ್ಭುತವನ್ನು ಕಂಡಾಗ, ಪರ್ವತದ ಶಿಖರಗಳೊಳಗೆ ಕುದಿಯುತ್ತಿದ್ದ ಲಾವಾ ಉಕ್ಕಿ ಗಗನಕ್ಕೆ ಚಿಮ್ಮಿದಾಗ, ಬೆಂಕಿಯ ಹೊಳೆ ಹರಿದಂತೆ ಹರಿದು ಇಡೀ ಪರ್ವತವನ್ನೇ ಭಸ್ಮ ಮಾಡಿದ್ದನ್ನು ನೋಡಿದಾಗ, ಯಾಕೆ ಹೀಗಾಗುತ್ತದೆ. ಏನಿದರ ಮರ್ಮ ಎಂದು ಮನಸ್ಸು ಮೌನವಾಗುತ್ತದೆ. ಈ ಅಸಾಮಾನ್ಯವಾದ, ಸೃಷ್ಟಿಯ ಭಯಂಕರವಾದ, ಅದ್ಭುತವಾದ ಮುಖದ ಹಿಂದಿರುವ ಶಕ್ತಿಯ ಬಗ್ಗೆ ಚಿಂತನೆ ಮೂಡುತ್ತದೆ. ಹೀಗೆ ಪ್ರೀತಿ, ಅಂತಃಕರಣಗಳು, ವೀರ, ಕ್ರೌರ್ಯ ಭಾವಗಳು, ಕೊನೆಗೆ ಮೌನದ ಅಂತರೀಕ್ಷಣೆ ಇವುಗಳೇ ನಮ್ಮ ಬದುಕಿನ ಉದ್ಧಾರಕ್ಕೆ ಕಾರಣವಾಗುವ ಪ್ರೇರಣೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT