ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆರಗಿನ ಬೆಳಕು | ವಿನಯವಂತಿಕೆ

Published 30 ಜುಲೈ 2023, 23:46 IST
Last Updated 30 ಜುಲೈ 2023, 23:46 IST
ಅಕ್ಷರ ಗಾತ್ರ

ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ |
ಅವನರಿವಿಗೆಟುಕುವವೊಲೊಂದಾತ್ಮನಯವ ||
ಹವಣಿಸಿದನಿದನು ಪಾಮರ ಜನದ ಮಾತಿನಲಿ |
ಕವನ ನೆನಪಿಗೆ ಸುಲಭ – ಮಂಕುತಿಮ್ಮ || 938 ||

ಪದ-ಅರ್ಥ: ತಾರಾಡಿ=ನಿರುಪಯುಕ್ತ ವ್ಯಕ್ತಿ, ಅವನರಿವಿಗೆಟುಕುವವೊಲೊಂದಾತ್ಮನಯವ=ಅವನ+
ಅರಿವಿಗೆ+ಎಟುಕುವವೊಲ್(ಎಟುಕುವಂತಿದ್ದ)+ಒಂದು+ಆತ್ಮನಯವ, ಹವಣಿಸಿದನಿದನು=ಹವಣಿಸಿದನು(ಹೊಂದಿಸಿದನು)+ಇದನು,
ಪಾಮರ=ಸಾಮಾನ್ಯ.


ವಾಚ್ಯಾರ್ಥ: ಅವನು ಕವಿಯಲ್ಲ, ವಿಜ್ಞಾನಿಯಲ್ಲ, ಬರೀ ತಿರುಗಾಡಿಕೊಂಡಿರುವ ನಿರುಪಯುಕ್ತ ವ್ಯಕ್ತ್ತಿ. ಅವನ ತಿಳಿವಳಿಕೆಗೆ ನಿಲುಕುವಂಥ ಒಂದು ಜೀವನಾದರ್ಶವನ್ನು, ಸಾಮಾನ್ಯ ಜನರ ಮಾತಿನಲ್ಲಿ ಹೊಂದಿಸಿ ಹೇಳಿದನು. ಕವನ ನೆನಪಿಗೆ ಸುಲಭವಾದ್ದರಿಂದ ಆ ವಿಧಾನವನ್ನು ಬಳಸಿದನು.


ವಿವರಣೆ: ಇದು ಮತ್ತೊಬ್ಬರನ್ನು ಉದ್ದೇಶಿಸಿ ಬರೆದಂತಿದ್ದರೂ, ಕಗ್ಗವನ್ನು ಬರೆದ ತಮ್ಮ ಬಗ್ಗೆಯೇ ಡಿ.ವಿ.ಜಿ ಹೇಳಿಕೊಳ್ಳುತ್ತಿದ್ದಾರೆ. ನನ್ನ ಮಟ್ಟಿಗೆ ಜ್ಞಾನದ ಹಿಮಾಲಯವೇ ಆಗಿದ್ದ ಡಿ.ವಿ.ಜಿ ತಮ್ಮ ಬಗ್ಗೆ ಹೀಗೆ ಹೇಳಿಕೊಳ್ಳುವುದು ಅವರ ವಿನಯವಂತಿಕೆ. ತಾನು ಕವಿಯಲ್ಲ, ವಿಜ್ಞಾನಿಯಲ್ಲ, ಬರೀ ಉಪಯೋಗವಿಲ್ಲದೆ ತಿರುಗಾಡಿಕೊಂಡಿದ್ದವನು, ಎನ್ನುತ್ತಾರೆ. ಅವರ ‘ಕಗ್ಗ’ ಒಂದೇ ಸಾಲದೆ ಅವರ ಕವಿತ್ವಕ್ಕೆ ಸಾಕ್ಷಿಯಾಗಿ? ಒಮ್ಮೆ ಶಿವರಾಮ ಕಾರಂತರನ್ನು ಒಬ್ಬರು ಕೇಳಿದರು, “ನೀವು ಮೆಚ್ಚುವ ಕವಿ ಯಾರು? “ಕಾರಂತರು ಒಂದು ಕ್ಷಣವೂ ರೆಪ್ಪೆ ಬಡಿಯದೆ ಹೇಳಿದರಂತೆ, “ಡಿ.ವಿ.ಜಿ”. ಅಂಥ ಕವಿ, ತಾನು ಕವಿಯಲ್ಲ ಎಂದು ಹೇಳಿಕೊಳ್ಳುವುದು ವಿನಯದ ಮಾತು. ವಿಜ್ಞಾನಿಯೆಂದರೆ ಪ್ರಯೋಗಶಾಲೆಯಲ್ಲಿ ಹೊಸ ಹೊಸ ಅನ್ವೇಷಣೆ ಮಾಡುವವನು ಎಂದಲ್ಲ. ವಿಜ್ಞಾನಿ ಎಂದರೆ- ವಿಶೇಷ ಜ್ಞಾನಿ.

ಯಾವುದೋ ವಿಷಯದಲ್ಲಿ ವಿಶೇಷ ಜ್ಞಾನ ಪಡೆದವರೆಲ್ಲ ವಿಜ್ಞಾನಿಗಳೇ. ಶಾಸ್ತಾçಧ್ಯಯನ ಮಾಡಿ, ಅನುಭವವನ್ನು ಮಥಿಸಿ, ದೊಡ್ಡವರ ನಡವಳಿಕೆಗಳನ್ನು ಪರಿಶೀಲಿಸಿ, ತಮ್ಮದೇ ಆದ ನಿಶಿತ ಸಿದ್ಧಾಂತಕ್ಕೆ ಬಂದವರು ಡಿ.ವಿ.ಜಿ. ಹಾಗಿರದಿದ್ದರೆ ಆರು ದಶಕಗಳ ಕಾಲದ ಸಾಮಾಜಿಕ ಜೀವನದಲ್ಲಿ, ಸಮಾಜಕ್ಕೆ ಪ್ರಯೋಜನಕಾರಿಯಾಗಿ, ಬದುಕು ಸವೆಸಲು ಸಾಧ್ಯವಾಗುತ್ತಿರಲಿಲ್ಲ. ತಮ್ಮ ಅರಿವಿಗೆ ಬಂದ ಆತ್ಮನಯವನ್ನು ಸಾಮಾನ್ಯ ಜನರ ಮಾತಿನಲ್ಲಿ ಹೇಳಿದ್ದೇನೆ ಎನ್ನುತ್ತಾರೆ. ಇನ್ನೊಂದೆಡೆಗೆ ಅವರೇ ಹೇಳುತ್ತಾರೆ, “ಯಾವ ತಿಳುವಳಿಕೆ ನಮ್ಮ ಜನರಿಗಿದ್ದರೆ ಒಳ್ಳೆಯದಾದೀತೆಂದು ನನಗೆನಿಸಿತೋ, ಅಂಥ ತಿಳಿವಳಿಕೆಯನ್ನು ನಾನು ಸಂಪಾದಿಸಿಕೊಂಡು ಇತರರಿಗೆ ತಿಳಿಯಪಡಿಸಬೇಕೆಂದೂ, ಯಾವ ಸೊಗಸನ್ನು ನಾನು ಅನುಭವಿಸಿದಾಗ ಅದನ್ನು ಇತರರೂ ಅನುಭವಿಸಿಯಾರು ಎಂದು ನನಗನ್ನಿಸಿತೋ, ಅಂಥ ಸೊಗಸನ್ನು ತೋರಿಸುವುದೂ ನನ್ನ ಎಲ್ಲ ಬರವಣಿಗೆಯಲ್ಲೂ, ಮಾತಿನಲ್ಲೂ ಇರುವ ತಾತ್ಪರ್ಯ”. ಇದು ಕಗ್ಗದ ರಚನೆಗೆ ಪ್ರೇರಕವಾದದ್ದು. ಅವರ ಗದ್ಯ ಬರಹ ಸಾಕಷ್ಟು ವಿಸ್ತಾರವಾದದ್ದು. ಆದರೆ ಚುಟುಕಾಗಿ ಕವನ ರೂಪದಲ್ಲಿ ಬರೆದರೆ ನೆನಪಿಸಿಕೊಳ್ಳುವುದು ಸುಲಭ ಎಂದು ಈ ಪ್ರಕಾರದಲ್ಲಿ ಬರೆದೆ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT