ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಏಕಾಂತದ ಅವಶ್ಯಕತೆ

Published 13 ಜುಲೈ 2023, 18:56 IST
Last Updated 13 ಜುಲೈ 2023, 18:56 IST
ಅಕ್ಷರ ಗಾತ್ರ

ತೊಲಗು ನಿರ್ಜನದೆಡೆಗೆ; ತೊಲಗು ಮಸಣದ ಕಡೆಗೆ |
ಒಲವ ಬೇಡಿಸದೆಡೆಗೆ; ಅಳುವು ಬರದೆಡೆಗೆ ||
ವಿಲಯವಾಗಿಸಿ ಮನವನ್, ಅಲುಗಾಡಿಸದೆ ತುಟಿಯ |
ತೊಲಗಿ ಮಲಗಲ್ಲಿ ನೀಂ – ಮಂಕುತಿಮ್ಮ || 927 ||

ಪದ-ಅರ್ಥ: ನಿರ್ಜನದೆಡೆಗೆ=ನಿರ್ಜನದ(ಯಾರಿಲ್ಲದ)+ಕಡೆಗೆ, ಬೇಡಿಸದೆಡೆಗೆ=ಬೇಡಿಸದ+ಎಡೆಗೆ, ವಿಲಯವಾಗಿಸಿ=ಇಲ್ಲವಾಗಿಸಿ.

ವಾಚ್ಯಾರ್ಥ: ನೀನು ಯಾರಿಲ್ಲದ ನಿರ್ಜನ ಪ್ರದೇಶಕ್ಕೆ ಹೋಗು, ಮಸಣದ ಕಡೆಗೆ ನಡೆ, ನಿನ್ನಿಂದ ಒಲವನ್ನು ಬೇಡಿಸದ ಕಡೆಗೆ, ನೋವು ಕಾಣದ ಕಡೆಗೆ, ಮನಸ್ಸನ್ನು ಇಲ್ಲವಾಗಿಸಿಕೊಂಡು, ಮೌನದಿಂದ ತೊಲಗಿ ಮಲಗು.

ವಿವರಣೆ: ಬಾಲ್ಯದಲ್ಲಿ ಶಿಕ್ಷಣ, ಯೌವನದಲ್ಲಿ ಸಂಸಾರ, ವೃದ್ಧಾಪ್ಯದಲ್ಲಿ ಮುನಿವೃತ್ತಿ, ಮತ್ತು ಕೊನೆಗೆ ಯೋಗಿಗಳ ಹಾಗೆ ಜೀವನ ಸಮಾಪ್ತಿಯಾಗಬೇಕೆಂದು ಸುಭಾಷಿತ ಹೇಳುತ್ತದೆ. ಜೀವನದಲ್ಲಿ ಸಂತೃಪ್ತಿಯನ್ನು ಹೊಂದಿಯೋ, ನೋವಿನಲ್ಲಿ ಬೆಂದೋ, ಕೊನೆಗೊಂದು ಹಂತ ಬರುತ್ತದೆ. ಆಗ ಮನಸ್ಸು ಅಂತ:ರ್ಮುಖವಾಗುತ್ತದೆ, ಬಾಹ್ಯ ಪ್ರಪಂಚದ ಗೊಡವೆ ಸಾಕು, ಏಕಾಂತ ಬೇಕು ಎನ್ನಿಸುತ್ತದೆ. ಒಂಟಿತನಕ್ಕೂ, ಏಕಾಂತಕ್ಕೂ ವ್ಯತ್ಯಾಸವಿದೆ. ಒಂಟಿತನ ಒಂದು ಕೊರತೆ. ಆ ಸ್ಥಿತಿ, ಮತ್ತೊಬ್ಬರಿಗಾಗಿ, ಪ್ರಪಂಚದ ನಂಟಿಗಾಗಿ ಹಾತೊರೆಯುತ್ತದೆ. ಅದು ದೊರೆಯದಾದಾಗ ಮನಸ್ಸು ಖಿನ್ನವಾಗುತ್ತದೆ.

ಸಂಪರ್ಕದ ಅಲಭ್ಯತೆಯೇ ಒಂಟಿತನ. ಆದರೆ ಏಕಾಂತ, ಲೋಕಸಂಪರ್ಕವನ್ನು ಬೇಡವೆನ್ನುತ್ತದೆ. ಇದು ಸ್ವಯಂ ಅಪೇಕ್ಷೆ. ಇದು ಸಂಪರ್ಕದ ಅಲಭ್ಯತೆಯಿಂದ ಆದದ್ದಲ್ಲ. ಸಂಪರ್ಕ ಬೇಡವೆಂದು ಆತ್ಮಸಾಂಗತ್ಯಕ್ಕೆ ಎಳಸುತ್ತದೆ. ಅದು ಬಾಹ್ಯ ಪ್ರಪಂಚದ ಹಂಗನ್ನು ನಗಣ್ಯಗೊಳಿಸುತ್ತದೆ. ಅದು ನನ್ನನ್ನು ನಾನೇ ನೋಡಿಕೊಳ್ಳುವ, ವಿಮರ್ಶಿಸಿಕೊಳ್ಳುವ, ಅರ್ಥಮಾಡಿಕೊಳ್ಳುವ ಪ್ರಕ್ರಿಯೆ. ಅಂಥ ಕ್ರಿಯೆಯ ಕಡೆಗೆ ಮನಸ್ಸು ತಿರುಗಲಿ ಎಂದು ಈ ಕಗ್ಗ ಆಶಿಸುತ್ತದೆ. ಸಾಕು, ಇದುವರೆಗೂ ಪ್ರಪಂಚದ ಕೋಲಾಹಲದಲ್ಲಿ ಬದುಕಿ ಹೋರಾಡಿದ್ದು ಸಾಕು. ಇನ್ನು ಜನರಿಂದ ದೂರ ಸಾಗು. ಮಸಣದ ಕಡೆಗೆ ಸಾಗು ಎಂದರೆ ನಿನ್ನ ಅಪೇಕ್ಷೆಗಳನ್ನೆಲ್ಲ ಸುಟ್ಟು ಹಾಕು, ಮುಚ್ಚಿ ಬಿಡು. ಇಷ್ಟಾದರೆ ಸಾಲದು. ಒಲವ ಬೇಡಿಸದೆಡೆಗೆ ನಡೆ ಎನ್ನುತ್ತದೆ. ನಮ್ಮ ಸಂಬಂಧಗಳು ನಿಜವಾಗಿ ಬಂಧಗಳು. ಮೋಹದಿಂದ ನಮ್ಮನ್ನು ಕಟ್ಟಿ ಎಳೆಯುತ್ತವೆ. ಮತ್ತೆ ಪ್ರಪಂಚದ ಮೆರುಗಿಗೆ ಸೆಳೆಯುತ್ತವೆ. ಅವುಗಳನ್ನು ಮೀರಲು ಒಲವು ಮೂಡುವ ಸ್ಥಾನಗಳನ್ನು ಬಿಟ್ಟು ನಡೆ. ಮೋಹ ಬಿಗಿಯಾದಾಗ, ಅದನ್ನು ತ್ಯಜಿಸಬೇಕಾದಾಗ ನೋವಾಗುತ್ತದೆ. ಎಲ್ಲ ಒಲವಿನ ಸ್ಥಾನಗಳೂ ನೋವಿನ ಸ್ಥಾನಗಳೇ. ಅವೆರಡನ್ನೂ ಬಿಡು ಎನ್ನುತ್ತದೆ ಕಗ್ಗ.

ಇವೆಲ್ಲವಾದ ನಂತರ ಬರುವುದು ಮುಖ್ಯವಾದ ಮತ್ತು ಕಷ್ಟಸಾಧ್ಯವಾದ ಕಾರ್ಯ. ಅದು ಮನಸ್ಸನ್ನು ಇಲ್ಲವಾಗಿಸುವುದು. ಉಸಿರಾಟದ ನಂತರ ಎಡೆಬಿಡದೆ ಕೊನೆಯ ಕ್ಷಣದವರೆಗೆ ನಮ್ಮೊಂದಿಗಿರುವುದು ಮನಸ್ಸು. ಎಲ್ಲ ವಿಜಯಗಳಿಗೆ, ವೈಫಲ್ಯಗಳಿಗೆ, ನೋವುಗಳಿಗೆ ಮನಸ್ಸೇ ಕಾರಣ. ಅದರ ಹೊಯ್ದಾಟವನ್ನು ನಿಲ್ಲಿಸಲು ಪ್ರಯತ್ನಿಸಬೇಕು. ನಂತರ ಅದೊಂದು ಸಾಧನೆ ಎಂದು ಘೋಷಿಸುತ್ತ ಬಾಯಿಬಡುಕತನ ಪ್ರದರ್ಶಿಸಬೇಡ. ದೂರ ಹೋಗಿ ಶಾಂತತೆಯನ್ನು ಪಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT