ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವೈವಿಧ್ಯತೆಯ ಲಾಭ

Last Updated 16 ಮೇ 2022, 19:30 IST
ಅಕ್ಷರ ಗಾತ್ರ

ವೈವಿಧ್ಯವೊಂದು ಕೃಪೆ ನಮಗಿರುವ ಕಷ್ಟದಲಿ |
ಆವರಿಸದಳಲ್ ಎಲ್ಲರನುಮೊಂದೆ ಸಮಯ ||
ನೋವಿಲ್ಲದರು ನೊಂದವರನು ಸಂತಯಿಸುತಿರೆ |
ಜೀವನವು ಕಡಿದಹುದೆ? – ಮಂಕುತಿಮ್ಮ || 629 ||

ಪದ-ಅರ್ಥ: ವೈವಿಧ್ಯವೊಂದು=ವೈವಿಧ್ಯವು+ ಒಂದು, ಆವರಿಸದಳಲ್=ಆವರಿಸದು+ಅಳಲ್ (ದುಃಖ, ಅಳು), ಎಲ್ಲರನುಮೊಂದೆ =ಎಲ್ಲರನುಮ್ (ಎಲ್ಲರನ್ನೂ)+ಒಂದೆ, ಸಂತಯಿಸುತಿರೆ=ಸಂತಯಿಸುತ+ಇರೆ, ಕಡಿದಹುದೆ=ಕಡಿದು (ಕಷ್ಟವಾದದ್ದು)+ಅಹುದೆ.

ವಾಚ್ಯಾರ್ಥ: ನಮಗೆ ಈಗ ಇರುವ ಕಷ್ಟಗಳಲ್ಲಿ ಕೃಪೆ ಎಂದರೆ ವೈವಿಧ್ಯತೆ. ಅದರಿಂದಾಗಿ ಕಷ್ಟಗಳು, ನೋವುಗಳು ಒಂದೇ ಬಾರಿ ಎಲ್ಲರನ್ನೂ ಆವರಿಸಿಕೊಳ್ಳುವುದಿಲ್ಲ. ಆಗ ನೋವಿಲ್ಲದವರು, ನೊಂದವರನ್ನು ಸಮಾಧಾನಪಡಿಸುತ್ತಿದ್ದರೆ ಬದುಕು ಕಷ್ಟವಾದೀತೇ?

ವಿವರಣೆ: ಪ್ರಕೃತಿಯ ವಿಶಿಷ್ಟತೆ ಅದರ ವೈವಿಧ್ಯತೆ. ಅದು ಯಾರನ್ನಾದರೂ ಬೆರಗುಗೊಳಿಸುತ್ತದೆ. ಒಂದು ಮರ ಮತ್ತೊಂದರಂತಿಲ್ಲ. ಒಂದೇ ನೆಲದಲ್ಲಿ, ಪಕ್ಕಪಕ್ಕದಲ್ಲಿ ಹುಟ್ಟಿ ಬೆಳೆದ ಗಿಡಗಳ ಹಣ್ಣಿನ ರುಚಿ ಬೇರೆ. ಮಲ್ಲಿಗೆ ಹೂವು ಎಂದು ಹೇಳಿಬಿಟ್ಟರೂ ಮಂಗಳೂರಿನ ಮಲ್ಲಿಗೆಯ, ಮೈಸೂರು ಮಲ್ಲಿಗೆಯ, ಮದ್ರಾಸ ಮಲ್ಲಿಗೆಯ ಗಾತ್ರ, ರೂಪ, ಪರಿಮಳ ಬೇರೆ ಬೇರೆಯೇ. ತಾವು ಕಂಡಿದ್ದೀರಿ, ಅದೆಷ್ಟು ಬಗೆಯ ಮಾವಿನ ಹಣ್ಣುಗಳು!

ಇದು ಸಸ್ಯಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ನಮ್ಮ ಜೀವರಾಶಿ ಅನನ್ಯವಾದದ್ದು ಮತ್ತು ವೈವಿಧ್ಯಪೂರ್ಣವಾದದ್ದು. ಕನಕದಾಸರೇ ಹಾಡಿದರು.
‘ಏಸು ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ |
ತಾನಲ್ಲ, ತನದಲ್ಲ, ಆಸೆ ತರವಲ್ಲ, ಮುಂದೆ ಬಾಹೋದಲ್ಲ ......’

ಅಂದರೆ ಎಂಭತ್ನಾಲ್ಕು ಲಕ್ಷ ಜೀವರಾಶಿಗಳನ್ನು ದಾಟಿದ ಮೇಲೆ ಬಂದದ್ದು ಮನುಷ್ಯ ಶರೀರ. ಅದರಲ್ಲೂ ಎಷ್ಟು ಭಿನ್ನತೆ! ಪರಿಸರದಿಂದ, ವಂಶವಾಹಿನಿಯಿಂದಾಗಿ, ಪರಿಸ್ಥಿತಿಯಿಂದಾಗಿ ಅವುಗಳ ಚಿಂತನಾ ಕ್ರಮದಲ್ಲಿ, ಜೀವನಕ್ರಮದಲ್ಲಿ ತುಂಬ ವ್ಯತ್ಯಾಸವಿದೆ. ಕಗ್ಗ ಹೇಳುತ್ತದೆ, ಹೀಗಿರುವುದು ಭಗವಂತನ ಕೃಪೆ. ಯಾಕೆಂದರೆ ಯಾವುದಾದರೂ ಕಷ್ಟ ಬಂದರೆ ಅದು ಎಲ್ಲರನ್ನೂ ಏಕರೂಪವಾಗಿ ತಟ್ಟುವುದಿಲ್ಲ. ತಟ್ಟಿದರೂ ಅದರ ತೀಕ್ಷ್ಣತೆ ಒಂದೇ ರೀತಿ ಇರಲಾರದು. ರಷ್ಯಾ-ಉಕ್ರೇನ್‌ಗಳ ನಡುವಿನ ಕದನ ಎರಡೂ ದೇಶದ ಜನರನ್ನು ಹೈರಾಣ ಮಾಡಿದೆ. ಅವರು ತುಂಬ ನೊಂದಿದ್ದಾರೆ. ಈಗ ಪ್ರಪಂಚದ ಉಳಿದ ಭಾಗದ ಜನ, ಈ ತರಹದ ನೋವನ್ನು ಪಡದವರು, ಅವರಿಗೆ ಸಾಂತ್ವನ, ಸಹಾಯ ಮಾಡಬಹುದಲ್ಲ? ಮಾಡುತ್ತಿದ್ದಾರೆ. ಮನೆಯ ಯಜಮಾನನ ಮಗ ರಾಕ್ಷಸನಿಗೆ ಬಲಿಯಾಗುತ್ತಾನೆ ಎಂದು ತಿಳಿದಾಗ ಅಜೇಯನಾದ ಪುತ್ರ ಭೀಮನನ್ನು ಅವನ ಬದಲು ಕುಂತಿ ಕಳುಹಿಸಿದ್ದು ಈ ತರದ ಸಹಕಾರ, ಪಾರಿವಾಳದ ಪ್ರಾಣವನ್ನು ಉಳಿಸಲು ತನ್ನ ಶರೀರದ ಮಾಂಸವನ್ನೇ ಕತ್ತರಿಸಿ ನೀಡಿದ ಶಿಬಿ ಚಕ್ರವರ್ತಿ, ನರಕದಲ್ಲಿರುವವರ ಸಂತೋಷಕ್ಕಾಗಿ ಸ್ವರ್ಗವನ್ನು ನಿರಾಕರಿಸಿದ ಧರ್ಮರಾಜ, ಇವೆಲ್ಲ ನೊಂದವರನ್ನು ಸಂತೈಸಿದ ಉದಾಹರಣೆಗಳು.

ಕಗ್ಗದ ಆಶಯವೇ ಇದು. ಜಗತ್ತಿನಲ್ಲಿ ಕಷ್ಟ ಇದೆ. ಆದರೆ ಎಲ್ಲರಿಗೂ, ಏಕಪ್ರಕಾರದ ಕಷ್ಟಗಳು ಬರದಿದ್ದದ್ದು ವೈವಿಧ್ಯತೆಯ ಕಾರಣದಿಂದ. ಅದೇ ನಮಗಿರುವ ಕೃಪೆ. ನೊಂದವರನ್ನು ಉಳಿದವರು ಸಂತೈಸುತ್ತಿದ್ದರೆ, ಸಹಾಯ ಮಾಡುತ್ತಿದ್ದರೆ ಜೀವನ ಕಷ್ಟವಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT