ಶುಕ್ರವಾರ, ಫೆಬ್ರವರಿ 3, 2023
18 °C

ಬೆರಗಿನ ಬೆಳಕು; ಮೂರು ಮತಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ನೀರದಿ ಬ್ರಹ್ಮ, ನೀರ್ಗಲ್ ಜೀವವೆನುತೊಂದು |
ಕ್ಷೀರವದು, ಘೃತವಿದದರೊಳಗೆನ್ನುತೊಂದು ||
ಕೀರು ಪರಮಾನ್ನವದು, ದ್ರಾಕ್ಷಿಯಿದೆನುತ್ತೊಂದು |
ಮೂರಿಂತು ಮತವಿವರ – ಮಂಕುತಿಮ್ಮ || 771 ||

ಪದ-ಅರ್ಥ: ನೀರಧಿ=ಸಮುದ್ರ, ನೀರ್ಗಲ್=ಮಂಜುಗಡ್ಡೆ, ಜೀವವೆನುತೊಂದು=ಜೀವ+ಎನುತ+ಒಂದು, ಘೃತವಿದದರೊಳಗೆನ್ನುತೊಂದು=ಘೃತವಿದು(ತುಪ್ಪ)+ಅದರೊಳಗೆ+ಎನ್ನುತ+ಒಂದು,
ದ್ರಾಕ್ಷಿಯಿದೆನುತ್ತೊಂದು=ದ್ರಾಕ್ಷಿ+ಇದು+ಎನುತ್ತ್ತ+ಒಂದು,
ಮೂರಿಂತು=ಮೂರು+ಇಂತು.

ವಾಚ್ಯಾರ್ಥ: ಬ್ರಹ್ಮ ಸಮುದ್ರ, ಮಂಜುಗಡ್ಡೆ ಜೀವ ಎನ್ನುವುದೊಂದು. ಬ್ರಹ್ಮ ಹಾಲು, ಅದರೊಳಗಿನ ತುಪ್ಪ ಜೀವವೆನ್ನುವುದು ಮತ್ತೊಂದು. ಬ್ರಹ್ಮ ಪಾಯಸದ ಪರಮಾನ್ನ, ಅದರಲ್ಲಿರುವ ದ್ರಾಕ್ಷಿ ಜೀವ ಎನ್ನುವುದು
ಇನ್ನೊಂದು. ಹೀಗೆ ಮೂರು ಮತವಿವರಗಳಿವೆ.
ವಿವರಣೆ: ಬೆಂಗಳೂರಿನಿಂದ ತುಮಕೂರಿಗೆ ರಸ್ತೆ ಮಾರ್ಗವಾಗಿ ಹೊರಟರೆ, ಎಡಗಡೆಗೆ ಶಿವಗಂಗೆ ಬೆಟ್ಟ ಕಾಣುತ್ತದೆ. ಅದು ಒಂದು ನಂದಿ ಮೊಣಕಾಲೂರಿ ಕುಳಿತಂತೆ ತೋರುತ್ತದೆ. ಅದೇ ಬೆಟ್ಟ ತುಮಕೂರಿನ ಕಡೆಯಿಂದ ನೋಡಿದರೆ ಈಶ್ವರ ಲಿಂಗದಂತೆ ಭಾಸವಾಗುತ್ತದೆ. ಈ ಆಕಾರ ಭೇದಗಳಿಗೆ ಬೆಟ್ಟ ಕಾರಣವಲ್ಲ, ಅದು ನೋಡುವವನ ಸ್ಥಾನಭೇದ, ದೂರತೆ, ಸಮೀಪತೆಗಳಿಂದ ಆದದ್ದು. ಸ್ಥಾನಭೇದದಿಂದ ದರ್ಶನ ಭೇದ. ಬೆಟ್ಟದ ದರ್ಶನವೇ ಹೀಗೆ ಬೇರೆ ಬೇರೆಯಾಗಿರಬೇಕಾದರೆ ಪರವಸ್ತುವಿನ ದರ್ಶನದ ಭೇದ ಎಷ್ಟಿರಬೇಕು? ಈ ದರ್ಶನ ಭೇದವಿರುವುದು ನೋಡುವವನ ತಿಳಿವಳಿಕೆ, ನಂಬಿಕೆ, ದೃಷ್ಟಿಯ ಆಳಗಳ ಆಧಾರದ ಮೇಲೆ. ವೇದಾಂತದ ಮತಪ್ರಭೇದಗಳಲ್ಲಿ ಮೂರು ಮುಖ್ಯವಾದವು – ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ. ಈ ಮೂರು ಸಿದ್ಧಾಂತಗಳು ವೇದಾಂತಪರ್ವತ ಶ್ರೇಣಿಯ ಮೂರು ಪ್ರಮುಖ ಶಿಖರಗಳು.
ಈ ಕಗ್ಗ ತುಂಬ ಸರಳವಾದ ಆದರೆ ಸುಂದರವಾದ ಉದಾಹರಣೆಗಳೊಂದಿಗೆ ಮೂರೂ ಮತಗಳನ್ನು ಪರಿಚಯಿಸುತ್ತದೆ. ಮೊದಲನೆಯದು ನೀರು ಮತ್ತು ಮಂಜುಗಡ್ಡೆಯ ಉದಾಹರಣೆ. ಮಂಜುಗಡ್ಡೆ ನೀರಲ್ಲದೆ ಬೇರಲ್ಲ, ಆದರೆ ತೋರಿಕೆಗೆ ಮಾತ್ರ ಘನರೂಪದಲ್ಲಿದೆ. ಅದು ಕರಗಿದಾಗ ಮತ್ತೆ ನೀರಾಗಿ, ನೀರಿನೊಡನೆ ಬೆರೆತುಹೋಗುವುದು. ನೀರು ಬ್ರಹ್ಮ, ಮಂಜುಗಡ್ಡೆ ಜೀವ. ಕೊನೆಗೆ ಜೀವ ಬೆರೆಯುವುದು, ಐಕ್ಯವನ್ನು ಹೊಂದುವುದು ಬ್ರಹ್ಮದಲ್ಲೇ – ಇದೇ ಅದ್ವೈತ.

ಎರಡನೆಯ ಉದಾಹರಣೆ ಹಾಲು ಮತ್ತು ತುಪ್ಪ. ತುಪ್ಪ ಆದದ್ದು ಹಾಲಿನಿಂದಲೇ ಆದರೂ ಅದು ಮತ್ತೆ ಮರಳಿ ಹಾಲಾಗದು. ಇದು ಭೇದಗರ್ಭಿತವಾದ ಅಭೇದ. ತುಪ್ಪಕ್ಕೊಂದು ವಿಶೇಷತೆ ಇದೆ, ಇರವು ಇದೆ. ಅದು ಹಾಲನ್ನು ಮೂಲವೆಂದು ಒಪ್ಪಿದರೂ ಅದಕ್ಕೆ ಅದರದೇ ಸ್ವತಂತ್ರ ಆಸ್ತಿತ್ವ. ಇದು ಅನ್ಯೋನ್ಯ ಸ್ವಾತಂತ್ರ್ಯ.ಇದೇ ವಿಶಿಷ್ಟಾದ್ವೈತ. ಮೂರನೆಯದು ಕೀರುಪರಮಾನ್ನ ಮತ್ತು ದ್ರಾಕ್ಷಿ. ದ್ರಾಕ್ಷಿ ಪರಮಾನ್ನದಲ್ಲಿ ಬೆಂದಾಗ ಅದರದೇ ಒಂದು ಭಾಗವಾಗುತ್ತದೆ. ಪರಮಾನ್ನದ ರುಚಿಗೆ ಕಾರಣವಾಗುತ್ತದೆ. ಆದರೆ ಅದೇ ಪರಮಾನ್ನವಾಗಿ ಬಿಡುವುದಿಲ್ಲ. ಅಂತೆಯೇ ಜೀವನೆಂಬ ದ್ರಾಕ್ಷಿ, ಪರಮಾನ್ನವೆಂಬ ಬ್ರಹ್ಮನ ಹತ್ತಿರ
ಹೋಗಬಹುದೇ ವಿನ: ಅವನಲ್ಲಿ ಸೇರಿ ಐಕ್ಯ ಹೊಂದಲಾರದು. ಭಕ್ತ ಭಗವಂತನ ಹತ್ತಿರ ಹೋಗಬಹುದು, ಅಪ್ಪಿಕೊಳ್ಳಬಹುದು
ಆದರೆ ಅವನೇ ಭಗವಂತ ಆಗಲಾರ. ಭಗವದ್ದಾಸ್ಯವೇ ದ್ವೈತ  ಚಿಂತನೆ. ಇವು ಮೂರು ಮತಗಳ ವಿವರಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು