ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಹಟವಿಲ್ಲದ ಸಮಸ್ಥಿತಿ

Last Updated 16 ಫೆಬ್ರುವರಿ 2023, 3:28 IST
ಅಕ್ಷರ ಗಾತ್ರ

ಎಣಿಕೆಯೊಳಿತಾದೊಡೆಂಯುಮೊಳಿತನಾಗಿಸದು ಹಟ |
ಮಣಿಕನಕ ಸಂಕೋಲೆ ತನುವ ಬಂಧಿಸದೇ ? ||
ತನಯನಿರಿದಸಿ ನಿನ್ನ ಮೈಯ ಹುಣ್ಣಾಗಿಸದೆ ? |
ಮನ ಸರ್ವಸಮವಿರಲಿ - ಮಂಕುತಿಮ್ಮ || 825 ||

ಪದ-ಅರ್ಥ: ಎಣಿಕೆಯೊಳಿತಾದೊಡೆಯುಮೊಳಿತನಾಗಿಸದು = ಎಣಿಕೆಯೊಳು(ಯೋಜನೆಯಲ್ಲಿ, ಚಿಂತನೆಯಲ್ಲಿ)+ಒಳಿತು+ಆದೊಡೆಯುಂ(ಆದರೂ), ಒಳಿತನು+ಆಗಿಸದು, ಸಂಕೋಲೆ=ಬೇಡಿ, ಬಂಧಿಸದೇ=ಬಂಧಿಸಲಾರದೆ, ತನಯನಿರಿದಸಿ=ತನಯನು (ಮಗನು)+ಇರಿದ+ಅಸಿ(ಖಡ್ಗ).

ವಾಚ್ಯಾರ್ಥ: ನಿಮ್ಮ ಆಲೋಚನೆ, ಉದ್ದೇಶ ಒಳ್ಳೆಯದಾಗಿದ್ದರೂ ಹಟದಿಂದಾಗಿ ಕೊನೆಯಲ್ಲಿ ಅದು ಒಳ್ಳೆಯದನ್ನು ಮಾಡದು. ಬೇಡಿ ಚಿನ್ನ ಮಾಣಿಕ್ಯಗಳಿಂದಾಗಿದ್ದರೂ ಅದು ದೇಹವನ್ನು ಬಂಧಿಸದೆ? ಸ್ವತಃ ಮಗನೇ ಕತ್ತಿಯಿಂದ ಇರಿದ್ದಾದರೂ ಅದು ದೇಹಕ್ಕೆ ಗಾಯ ಮಾಡದಿರುತ್ತದೆಯೆ? ಅದಕ್ಕೆ ಹಟವಿಲ್ಲದೆ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಬೇಕು.

ವಿವರಣೆ: ಕಗ್ಗ ಇಲ್ಲಿ ಎರಡು ಸುಂದರ ಉದಾಹರಣೆಗಳನ್ನು ನೀಡಿ ಹಟ ಎಂದಿಗೂ ಒಳ್ಳೆಯದನ್ನು ಮಾಡುವುದಿಲ್ಲ ಎಂದು ಉಪದೇಶಿಸುತ್ತದೆ. ಮೊದಲನೆಯದು ಬೇಡಿ. ಅದರ ಕರ್ತವ್ಯವೇ ಅಪರಾಧಿಗಳನ್ನು ಬಂಧಿಸುವುದು. ಅಪರಾಧಿ ಬಹಳ ಪ್ರಖ್ಯಾತನಾದವನು, ಪ್ರಭಾವಶಾಲಿಯಾದವನು, ಅಂಥವನನ್ನು ಕಬ್ಬಿಣದ ಬೇಡಿಯಲ್ಲಿ ಏಕೆ ಕಟ್ಟುವುದು ಎಂದು ಬಂಗಾರದ, ಮಣಿ ಖಚಿತವಾದ ಬೇಡಿಯನ್ನು ನಿರ್ಮಿಸಿದರೂ ಅದು ಮಾಡುವ ಕೆಲಸವೂ ಬಂಧನದ್ದೇ. ಬೇಡಿ ಬೇಡಿಯೇ, ಯಾವ ಲೋಹದ್ದಾದರೇನು? ಚಿನ್ನದ್ದೆಂದು ದೇಹಕ್ಕೆ ಹಿತ ನೀಡುತ್ತದೆಯೆ?

ನಿಮ್ಮ ಪ್ರೀತಿಯ ಮಗ ಅರಿತೋ, ಅರಿಯದೆಯೋ ಒಂದು ಹರಿತವಾದ ಕತ್ತಿಯಿಂದ ನಿಮಗೆ ಇರಿದರೆ, ಪಾಪ! ನಮ್ಮ ಮಗ ಮಾಡಿದ ಕೆಲಸ, ಎಂದು ದೇಹಕ್ಕೆ ಗಾಯವಾಗದೆ ಬಿಡುತ್ತದೆಯೆ? ಕತ್ತಿ ತನ್ನ ಕೆಲಸವನ್ನು ಮಾಡಿಯೇ ತೀರುತ್ತದೆ, ಅದನ್ನು ಹಿಡಿದ ಕೈ ಯಾವುದಾಗಿದ್ದರೂ ಸಹಿತ. ಈ ಉದಾಹರಣೆಗಳನ್ನು ಕಗ್ಗ ಯಾಕೆ ಕೊಡುತ್ತದೆ? ಅದಕ್ಕೊಂದು ಉದ್ದೇಶವಿದೆ. ನೀವು ಯಾವುದೋ ಕಾರ್ಯವನ್ನು ಮಾಡಲು ತೀರ್ಮಾನಿಸಿದ್ದೀರಿ ಎಂದು ಇಟ್ಟುಕೊಳ್ಳಿ. ಅದನ್ನು ಮಾಡುವ ಮುನ್ನ ಪೂರ್ವಾಪರ ವಿಚಾರ ಮಾಡಿದ್ದೀರಾ? ಸಾಧಕ- ಬಾಧಕಗಳನ್ನು ತಿಳಿದಿದ್ದೀರಾ? ಅಥವಾ ಯಾರೇನು ಹೇಳಿದರೂ ನಾನು ಹೀಗೆಯೇ ಮಾಡುತ್ತೇನೆ ಎಂಬ ಹಟದಿಂದ ಮಾಡುತ್ತೀರಾ? ಆಳವಾದ, ಸಮನ್ವಯದ ಮನದಿಂದ ತೀರ್ಮಾನ ಕೈಗೊಂಡರೆ ಕೆಲಸ ಸುಲಭ ಸಾಧ್ಯವಾಗುತ್ತದೆ. ಉದ್ದೇಶ ಒಳ್ಳೆಯದೇ ಆಗಿದ್ದರೂ ಹಟದಿಂದ ಮಾಡಿದ ಕೆಲಸ ಕೊನೆಗೆ ಒಳಿತನ್ನು ಮಾಡುವುದಿಲ್ಲ ಹಟದಿಂದ ತಪಸ್ಸು ಮಾಡಿದ ಹಿರಣ್ಯಕಶಿಪು ಏನಾದ? ಶಿಶುಪಾಲ, ಕಂಸ, ದುರ್ಯೋಧನರೆಲ್ಲ ಏನು ಪಾಡುಪಟ್ಟರು ತಿಳಿಯದೆ? ಆದ್ದರಿಂದ ಯಾವುದೇ ಕೆಲಸವನ್ನು ಮಾಡುವಾಗ ಹಟಕ್ಕೆ ಬೀಳದೆ ಮನಸ್ಸನ್ನು ಸಮತ್ವದಲ್ಲಿಟ್ಟುಕೊಂಡು ಮಾಡುವುದು ಸ್ವಂತಕ್ಕೆ ಮತ್ತು ಸಮಾಜಕ್ಕೆ ಹಿತಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT