ಸೋಮವಾರ, ಮಾರ್ಚ್ 1, 2021
24 °C

ಗುರುರಾಜ ಕರಜಗಿ ಅಂಕಣ-ಬೆರಗಿನ ಬೆಳಕು| ತಿಳಿವಳಿಕೆಯ ಮನಸ್ಸು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಒಂದು ಬಾರಿ ನಾಗರಾಜ ಕೌರವ್ಯರಾಜನ ಮಂತ್ರಿಯಾದ ವಿಧುರಪಂಡಿತನ ಧರ್ಮಬೋಧನೆಯನ್ನು ಕೇಳಿ ತುಂಬ ಪ್ರಭಾವಿತನಾಗಿ ತನ್ನ ಕೊರಳಲ್ಲಿ ಸದಾ ಇರುತ್ತಿದ್ದ ಪ್ರಕಾಶಮಾನವಾದ ಮಣಿಯನ್ನು ಕೊಟ್ಟುಬಿಟ್ಟ. ಮನೆಗೆ ಬಂದಾಗ ಅವನ ಹೆಂಡತಿ ವಿಮಲಾದೇವಿ ಮಣಿಯನ್ನು ಕುರಿತು ಕೇಳಿದಳು. ಆಗ ಆತ ವಿಧುರಪಂಡಿತನ ಗುಣಗಾನ ಮಾಡಿ ಅವನಿಗೆ ತಾನು ಮಣಿ ಕೊಟ್ಟನೆಂದು ಹೇಳಿದ. ಆಕೆಗೆ ವಿಧುರಪಂಡಿತನನ್ನು ನೋಡುವ ಆಸೆ ಮಾತ್ರ ಆಗಲಿಲ್ಲ, ಅವನ ಹೃದಯವನ್ನು ತಿನ್ನುವ ಆಸೆಯಾಯಿತು. ನಾಗರಾಜನಿಗೆ ಚಿಂತೆಯಾಯಿತು. ವಿಧುರಪಂಡಿತನನ್ನು ಕರೆ ತರುವುದು ಹೇಗೆ? ಅವನಿಗೆ ಇರಂದತಿ ಎಂಬ ನಾಗಕನ್ಯೆ ಇದ್ದಳು. ಆಕೆ ವಿಧುರಪಂಡಿತನನ್ನು ಕರೆತರುವುದಾಗಿ ಮಾತು ಕೊಟ್ಟಳು. ಆಕೆ ಮಹಾಸುಂದರಿ. ಇರಂದತಿ ಘೋಷಣೆ ಮಾಡಿದಳು, ‘ದೇವತೆಗಳು, ಯಕ್ಷರು, ಕಿನ್ನರರು ಇವರುಗಳಲ್ಲಿ ಯಾರಾದರೂ ವಿಧುರಪಂಡಿತನನ್ನು ತಂದುಕೊಟ್ಟರೆ ನಾನು ಅವರನ್ನು ಮದುವೆಯಾಗುತ್ತೇನೆ’. ಇದನ್ನು ಕುಬೇರನ ಸೋದರಿಯ ಮಗ ಪುಣ್ಣಕ ಕೇಳಿದ. ಅವನು ಸೇನಾಪತಿ. ಆತ ಆಕೆಯ ಬಳಿಗೆ ಬಂದು ವಿಧುರಪಂಡಿತನನ್ನು ತಂದುಕೊಡುವುದಾಗಿ ಹೇಳಿದ.

ಪುಣ್ಣಕ ತನ್ನ ಪ್ರೀತಿಯ, ಮಿಂಚಿನ ವೇಗದಲ್ಲಿ ಸಾಗುವ ಕುದುರೆಯನ್ನು ಏರಿ ಕೌರವ್ಯರಾಜನ ಅರಮನೆಯ ಬಳಿಗೆ ಬಂದ. ರಾಜನಿಗೆ ಜೂಜಿನ ಹುಚ್ಚಿದೆಯೆಂದು ತಿಳಿಯಿತು. ತಾನು ಮಂತ್ರಿಸಿದ ದಾಳಗಳನ್ನು ತೆಗೆದುಕೊಂಡು ಹೋಗಿ, ರಾಜನನ್ನು ಜೂಜಿಗೆ ಅಹ್ವಾನಿಸಿದ. ನಿರೀಕ್ಷಿಸಿದಂತೆ ಪುಣ್ಣಕ ಜೂಜನ್ನು ಗೆದ್ದ. ಜೂಜಿನ ಪಣವಾಗಿ ವಿಧುರಪಂಡಿತನನ್ನು ಬೇಡಿದ. ಅದನ್ನು ಪಾಲಿಸುವುದು ರಾಜನಿಗೆ ಕಷ್ಟವೆನ್ನಿಸಿತು. ಆದರೆ ವಿಧುರಪಂಡಿತನಾಗಿದ್ದ ಬೋಧಿಸತ್ವ ರಾಜನಿಗೆ ಸಮಾಧಾನ ಹೇಳಿ, ಜೂಜಿನ ಪಣವನ್ನು ಕೊಡದಿರುವುದು ತಪ್ಪು ಮತ್ತು ತಾನು ಸಂದರ್ಭವನ್ನು ನಿಭಾಯಿಸುವುದಾಗಿ ಮಾತು ಕೊಟ್ಟು ಪುಣ್ಣಕನನ್ನು ಕರೆದುಕೊಂಡು ತನ್ನ ಮನೆಗೆ ಹೋದ. ತಾನು ಮರಳಿ ಬರದಿರಬಹುದು ಎಂದು ತನ್ನ ಹೆಂಡತಿಗೆ, ಮಕ್ಕಳಿಗೆ ಹೇಳಿ, ಬದುಕನ್ನು ಸಾರ್ಥಕವಾಗಿ ಕಳೆಯುವಂತೆ ಬೋಧನೆ ಮಾಡಿದ. ಅದನ್ನು ಗಮನಿಸಿದ ಪುಣ್ಣಕ ವಿಧುರಪಂಡಿತನ ವ್ಯಕ್ತಿತ್ವದಿಂದ ಪ್ರಭಾವಿತನಾದ. ಇಂಥ ವ್ಯಕ್ತಿಯನ್ನು ಕೊಲ್ಲುವುದು ಸರಿಯೆ? ಇರಂದತಿಗಾಗಿ ವಿಧುರಪಂಡಿತನನ್ನು ಕೊಲ್ಲುವುದು ಪ್ರಮಾದವೆಂದು ತಿಳಿದು, ತಾನು ಬಂದ ಉದ್ದೇಶವನ್ನು, ಮತ್ತೆ ತನಗೆ ಈಗ ಬಂದ ಭಾವನೆಯನ್ನು ತಿಳಿಸಿದ. ಆದರೆ ವಿಧುರಪಂಡಿತ ಹೇಳಿದ, ‘ಪುಣ್ಣಕ, ನೀನು ನನ್ನನ್ನು ಜೂಜಿನಲ್ಲಿ ಗೆದ್ದಿದ್ದೀಯಾ. ಆದ್ದರಿಂದ ನಾನು ನಿನ್ನ ದಾಸ. ನಿನಗೆ ಅನುಕೂಲವಾಗುವ ಹಾಗೆ ನಡೆದುಕೊಳ್ಳುವುದು ನನ್ನ ಕರ್ತವ್ಯ. ನಿನಗೆ ಆ ಹುಡುಗಿಯ ಮೇಲೆ ಮನಸ್ಸಾಗಿದೆ ಮತ್ತು ನಾಗರಾಜನ ಹೆಂಡತಿಗೆ ನನ್ನ ಹೃದಯ ಬೇಕಾಗಿದೆ. ನನ್ನನ್ನು ದಯವಿಟ್ಟು ನಾಗರಾಜನ ಬಳಿಗೆ ಕರೆದುಕೊಂಡು ಹೋಗು, ಬಹುಶಃ ನಾನು ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ’. ಪುಣ್ಣಕ ಅವನನ್ನು ತನ್ನ ಮಿಂಚಿನವೇಗದ ಕುದುರೆಯ ಮೇಲೆ ಕೂರಿಸಿಕೊಂಡು ನಾಗರಾಜನ ಬಳಿಗೆ ಬಂದ. ವಿಧುರ ಪಂಡಿತ ನಾಗರಾಜನ ಹೆಂಡತಿ ವಿಮಲಾದೇವಿಗೆ ಸ್ತ್ರೀ ಧರ್ಮವನ್ನು, ಬದುಕಿನಲ್ಲಿ ಅಹಿಂಸೆಯ ಮಹತ್ವವನ್ನು ಬೋಧಿಸಿದ. ಆಕೆಗೆ ತಿಳಿವುಂಟಾಗಿ, ಅವನನ್ನು ಕೊಂದು, ಹೃದಯವನ್ನು ತಿನ್ನಬೇಕೆಂಬ ತನ್ನ ಬಯಕೆಗೆ ನಾಚಿ, ಅವನ ಕ್ಷಮೆ ಕೇಳಿದಳು. ವಿಧುರಪಂಡಿತ, ತನ್ನ ಬಳಿ ಇದ್ದ ನಾಗರಾಜನ ಮಣಿಯನ್ನು ಮರಳಿಕೊಟ್ಟು, ಆ ದಂಪತಿಗಳನ್ನು ಹರಸಿದ. ನಂತರ ಪುಣ್ಣಕ ಮತ್ತು ಇರಂದತಿಯರನ್ನು ಒಂದು ಮಾಡಿ ತನ್ನ ಕೌರವ್ಯರಾಜ್ಯಕ್ಕೆ ಮರಳಿದ.

ಮನದಲ್ಲಿ ತಿಳಿವಳಿಕೆ ಇದ್ದರೆ, ಅದು ಪ್ರಶಾಂತವಾಗಿದ್ದರೆ ಎಂಥ ಸಮಸ್ಯೆಯನ್ನೂ  ಪರಿಹರಿಸಬಹುದು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.