ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬದುಕಿನ ಕುಶಲಸಾಧನಗಳು

Last Updated 14 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ವಿಷಯಭೋಗವಿರಕ್ತಿ, ವಿಶ್ವಲೀಲಾಸಕ್ತಿ |

ಕೃಷಿಗೆ ಸಂತತ ದೀಕ್ಷೆ, ವಿಫಲತೆಗೆ ತಿತಿಕ್ಷೆ ||

ವಿಷಮದಲಿ ಸಮದೃಷ್ಟಿ, ವಿವಿಧಾತ್ಮ ಸಂಸೃಷ್ಟಿ |

ಕುಶಲಸಾಧನಗಳಿವು – ಮಂಕುತಿಮ್ಮ || 778|

ಪದ-ಅರ್ಥ: ವಿಷಯಭೋಗವಿರಕ್ತಿ=ವಿಷಯ+ಭೋಗ+ವಿರಕ್ತಿ, ವಿಶ್ವಲೀಲಾಸಕ್ತಿ=ವಿಶ್ವ+ಲೀಲೆ+ಆಸಕ್ತಿ; ಸಂತತ=ಸತತವಾದ, ತಿತಿಕ್ಷೆ=ಸಹನೆ, ವಿವಿಧಾತ್ಮ=ವಿವಿಧ+ಆತ್ಮ, ಸಂಸೃಷ್ಟಿ=ಸಮದೃಷ್ಟಿ.
ವಾಚ್ಯಾರ್ಥ: ವಿಷಯ ಭೋಗಗಳಲ್ಲಿ ನಿರಾಸಕ್ತಿ, ವಿಶ್ವಲೀಲೆಯಲ್ಲಿ ಆಸಕ್ತಿ, ಕರ್ತವ್ಯಕ್ಕೆ ಸತತ ದೀಕ್ಷೆ, ಸೋಲಿನಲ್ಲಿ ಸಹನೆ, ವಿಷಮತೆಗಳಲ್ಲಿ ಸಮದೃಷ್ಟಿ, ಸರ್ವ ಆತ್ಮಗಳಲ್ಲಿ ಸಮಾನತೆಯ ದೃಷ್ಟಿ, ಇವು ಬದುಕಿನ ಕುಶಲ ಸಾಧನಗಳು.
ವಿವರಣೆ: ವಿರಕ್ತಿ ಎನ್ನುವುದು ತ್ಯಾಗ. ಮನಸ್ಸು ಎಲ್ಲವನ್ನು ಕಳಚಿಬಿಟ್ಟು ನಿರಾಭಾರಿಯಾಗುವುದು ವಿರಕ್ತಿ. ಆ ವಿರಕ್ತಿ ಇರಬೇಕಾದದ್ದು ವಿಷಯ ಭೋಗಗಳಲ್ಲಿ. ಇದು ಕಷ್ಟ. ಪ್ರಪಂಚದ ಹಲವು ಆಕರ್ಷಣೆಗಳಿಗೆ ಮನ ಸೋಲುತ್ತದೆ. ಜೀವನದ ಕೈ ಹಿಡಿತ ತಪ್ಪುತ್ತದೆ, ಅತೃಪ್ತಿಯೇ ಬಾಳಿನ ನಡೆಯಾಗುತ್ತದೆ. ವಿಷಯದ ಆಕರ್ಷಣೆಗೆ ಸೋಲದ ಮನಸ್ಸನ್ನು ಬೆಳೆಸಿಕೊಳ್ಳುವುದು ವೈರಾಗ್ಯ. ಅದು ಸಂಪತ್ತು. ಅದಕ್ಕೆ ಸಮನಾದ ಐಶ್ವರ್ಯವೇ ಇಲ್ಲ. ವಿರಕ್ತಿ ಎಂದರೆ ಎಲ್ಲವನ್ನೂ ತ್ಯಾಗಮಾಡುವುದಲ್ಲ. ನಾನು ವಿಶ್ವದಲ್ಲಿ ಇದ್ದೇನೆ. ಅದರ ಭಾಗವಾಗಿದ್ದೇನೆ. ಅದರಲ್ಲಿ ನನಗೊಂದು ಸ್ಥಾನವಿದೆ. ಇದು ಭಗವಂತನ ಲೀಲೆ. ಅದರಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು ಎಂಬ ಭಾವ. ಭಗವಂತನ ಲೀಲೆಯಲ್ಲಿ ನಿರಾಸಕ್ತಿಯೆಂದರೆ ಭಗವಂತನ ಬಗ್ಗೆಯೇ ನಿರಾಸಕ್ತಿಯಿದ್ದಂತೆ. ಇದರೊಂದಿಗೆ ನನಗೆ ಒಪ್ಪಿ ಬಂದ ಕಾರ್ಯವನ್ನು ಸಕಲ ಶ್ರಮದಿಂದ, ಶ್ರದ್ಧೆಯಿಂದ ಮಾಡಲೇಬೇಕು. ಆದರೆ ಬಸವಣ್ಣನವರು ಹೇಳಿದಂತೆ, ಮಾಡಿದೆನು ಎಂಬುದನ್ನು ಅಹಂಕಾರದಿಂದ ನೋಡದೆ ಮಾಡಬೇಕು. ಮಾಡಿದೆನೆಂಬುದು ಮನದಲ್ಲಿ ಹೊಳೆದರೆಏಡಿಸಿ ಕಾಡಿತ್ತು, ಶಿವ ಡಂಗುರ !

ಅಹಂಕಾರ ಮೊಳೆತರೆ ಶಿವನೊಲಿಯಲಾರ. ಹೀಗೆ ಕಾರ್ಯಮಾಡುವಾಗ ಆಗಾಗ ವಿಫಲತೆ ಬಂದೀತು. ಅದೂ ಲೀಲೆಯ ಒಂದು ಭಾಗವೇ ಎಂದು ತಿಳಿದು ತಾಳ್ಮೆಯಿಂದಿರಬೇಕು. ಕೆಲವೊಮ್ಮೆ ವಿಷಮ ಪರಿಸ್ಥಿತಿಗಳು ಏರ್ಪಡಬಹುದು. ಸಂದರ್ಭ ಯಾವಾಗಲೂ ಹೀಗೆಯೇ ಇರುವುದಿಲ್ಲ, ಮುಂದೊಮ್ಮೆ ಅತ್ಯಂತ ಸೂಕ್ತ ಪರಿಸ್ಥಿತಿ ಬಂದೀತು ಎಂಬ ಸಮದೃಷ್ಟಿ ಅತ್ಯಂತ ಅವಶ್ಯ. ಇವೆಲ್ಲವುಗಳಿಗಿಂತ ಎತ್ತರದ ಅಧ್ಯಾತ್ಮಿಕ ನೆಲೆಯೊಂದಿದೆ. ಅದು ಪ್ರತಿಯೊಂದು ಆತ್ಮವೂ ಬ್ರಹ್ಮವಸ್ತುವಿನ ರೂಪವೇ ಎಂಬುದನ್ನು ಅರಿಯುವುದು, ಹಾಗೆಯೇ ಭಾವಿಸಿ ನಡೆಯುವುದು. ಹೀಗಾದಾಗ ಎಲ್ಲ ಕಡೆಗೂ ವ್ಯಕ್ತಿ ಬ್ರಹ್ಮವನ್ನೇ ಕಾಣುತ್ತಾನೆ. ವಿಷಯಗಳಲ್ಲಿ ವಿರಕ್ತಿ, ವಿಶ್ವ ಕರ್ತವ್ಯಗಳಲ್ಲಿ ಆಸಕ್ತಿ, ಕರ್ತವ್ಯ ತತ್ಪರತೆ, ಸೋಲಿನಲ್ಲಿ ತಾಳ್ಮೆ, ವಿಷಮ ಸ್ಥಿತಿಯಲ್ಲಿ ಸಮತ್ವ, ಎಲ್ಲರ ಆತ್ಮಗಳಲ್ಲಿ ಬ್ರಹ್ಮವನ್ನೇ ಕಾಣುವ ಆ ಆರು ಗುಣಗಳನ್ನು ಕಗ್ಗ ಕುಶಲಸಾಧನಗಳು ಎಂದು ಗುರುತಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT