ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸಾಲಗಾರ ಬಾಂಧವರು

Last Updated 17 ಮೇ 2022, 19:45 IST
ಅಕ್ಷರ ಗಾತ್ರ

ಸ್ಥೂಲಸೂಕ್ಷ್ಮವಿವೇಕರಹಿತೇಷ್ಟ ಬಂಧುಜನ |
ಕಾಲದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು ||
ಸಾಲವನು ನಿನ್ನಿಂದ ಸಲಿಸಿಕೊಳಬಂದವರು |
ತಾಳುಮೆಯಿನವರೊಳಿರು – ಮಂಕುತಿಮ್ಮ || 630 ||

ಪದ-ಅರ್ಥ: ಸ್ಥೂಲಸೂಕ್ಷ್ಮವಿವೇಕರಹಿತೇಷ್ಟ=ಸ್ಥೂಲ+ಸೂಕ್ಷ್ಮ+ವಿವೇಕರಹಿತ+ಇಷ್ಟ, ಕಾಲದಂಷ್ಟ್ರಕೆ=ಕಾಲನ ದವಡೆಗೆ, ತಾಳುಮೆಯಿನವರೊಳಿರು=ತಾಳುಮೆಯಿನ್+ಅವರೊಳು+ಇರು.

ವಾಚ್ಯಾರ್ಥ: ಸ್ಥೂಲವಾದ ಒಟ್ಟಾರೆಯ, ಸೂಕ್ಷ್ಮವಾದ, ವಿವೇಕದ, ತಿಳಿವಳಿಕೆ ಇಲ್ಲದ ಇಷ್ಟ ಬಂಧು ಜನರು ನಿಮ್ಮನ್ನು ಯಮನ ದವಡೆಗೆ ಮೃದುಗೊಳಿಸುವ ಸೈನಿಕರಿದ್ದಂತೆ. ನಿನ್ನಿಂದ ಸಾಲವನ್ನು ವಸೂಲಿ ಮಾಡಿಕೊಳ್ಳಲು ಬಂದವರಿವರು. ಅವರಲ್ಲಿ ನೀನು ತಾಳ್ಮೆಯಿಂದಿರು.

ವಿವರಣೆ: ಪ್ರೇಮಾ ಬಹಳ ಬುದ್ಧಿವಂತೆ, ಪರಿಶ್ರಮಿ. ಈ ಬಾರಿ ನೀಟ್ ಪರೀಕ್ಷೆಯಲ್ಲಿ ಖಂಡಿತವಾಗಿಯೂ ಉನ್ನತ ರ‍್ಯಾಂಕ್ ಪಡೆಯುವ ಆತ್ಮವಿಶ್ವಾಸವಿತ್ತು. ಆದರೆ ಪರೀಕ್ಷೆಗೆ ಹೋಗುವಾಗ ಆಟೊರಿಕ್ಷಾ ಉರುಳಿಬಿದ್ದು ಪೆಟ್ಟಾಗಿ, ಗಾಯದಲ್ಲೇ, ಆತಂಕದಲ್ಲೇ ಪರೀಕ್ಷೆಗೆ ಹೋದಳು. ಆಕೆಯ ಅಪೇಕ್ಷೆಯಂತೆ ಉತ್ತರಿಸುವುದಾಗಲಿಲ್ಲ, ತನ್ನ ಕನಸಿನ ಗೋಪುರ ಕಳಚಿಬಿತ್ತು ಎಂದು ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದಳು. ಮನೆಯವರು ಆಕೆಯನ್ನು ಉಳಿಸಿಕೊಂಡರೂ, ಈ ವಿಷಯವನ್ನು ಗುಟ್ಟಾಗಿಟ್ಟರು. ಹುಡುಗಿಯ ಮುಂದಿನ ಜೀವನಕ್ಕೆ ಇದು ತೊಂದರೆಯಾದೀತು ಎಂಬ ಭಯ ತಂದೆ-ತಾಯಿಯರಿಗೆ. ಆಕೆಗೆ ಅನಾರೋಗ್ಯ ಎಂದು ಮಾತ್ರ ಸ್ಥೂಲವಾಗಿ ಹೇಳಿದ್ದರು. ತಂದೆಯ ಸೋದರಮಾವ ಬಂದರು. ಇಂಥ ಸೂಕ್ಷ್ಮ ವಿಷಯ ಅವರಿಗೆ ಹೊಳೆಯುವುದಿಲ್ಲ. ಎಲ್ಲರ ಮುಂದೆಯೇ, ‘ನಿನ್ನ ಪರೀಕ್ಷೆ ಚೆನ್ನಾಗಿ ಆಗಲಿಲ್ಲವೇ? ಹಾಗಾದರೆ ನೀನು ಡಾಕ್ಟರ್ ಆಗುವುದು ಮುಗಿಯಿತು. ನೀನೇನಾದರೂ ಚಿಂತೆ ಮಾಡಿ ಆತ್ಮಹತ್ಯೆ ಮಾಡಿಕೊಂಡೀಯಾ?’ ಎಂದು ಬೊಬ್ಬರಿಸಿದರು. ಮನೆಯವರಿಗೆ ಪ್ರಾಣಸಂಕಟ. ರಾಮಯ್ಯನವರಿಗೆ ಪ್ರೊಸ್ಟ್ರೇಟ್ ಕ್ಯಾನ್ಸರ್ ಎಂದು ತಿಳಿಯಿತು. ಅದು ಪ್ರಾರಂಭದ ಹಂತವಾದ್ದರಿಂದ ಯಾವ ತೊಂದರೆಯೂ ಇಲ್ಲವೆಂದು ಚಿಕಿತ್ಸೆ ಪ್ರಾರಂಭಿಸಿದರು. ರಾಮಯ್ಯನ ಅಣ್ಣ ಮನೆಗೆ ಬಂದು, ‘ಏನೋ ನಿನಗೆ ಕ್ಯಾನ್ಸರ್ ಅಂತಲೋ? ಆಯ್ತಪ್ಪ ನಿನ್ನ ಆಯುಸ್ಸು ಇಷ್ಟು ಬೇಗ ಮುಗಿದೀತು ಅಂದುಕೊಂಡಿರಲಿಲ್ಲ. ಏನು ಔಷಧಿ, ಚಿಕಿತ್ಸೆ ಮಾಡಿದರೂ ಕ್ಯಾನ್ಸರ್ ಪ್ರಾಣ ತೆಗೆದುಕೊಂಡೇ ಬಿಡುತ್ತದೆ’ ಎಂದರು. ಕ್ಯಾನ್ಸರ್ ಪ್ರಾಣ ತೆಗೆದುಕೊಳ್ಳುತ್ತದೋ ಇಲ್ಲವೋ ಅದು ಬೇರೆ ವಿಷಯ, ಆದರೆ ಇವರ ಮಾತು ಮಾತ್ರ ಖಂಡಿತ ಪ್ರಾಣ ತೆಗೆಯುತ್ತದೆ.

ಇಂಥವರನ್ನೇ ಕಗ್ಗ ಸ್ಥೂಲ, ಸೂಕ್ಷ್ಮ, ವಿವೇಕರಹಿತ ಇಷ್ಟ ಬಂಧುಜನ ಎನ್ನುತ್ತಾರೆ. ಇವರಿಗೆ ಸ್ಥೂಲವೂ ಅರ್ಥವಾಗುವುದಿಲ್ಲ, ಸೂಕ್ಷ್ಮ ತಿಳಿಯುವುದಿಲ್ಲ ಯಾಕೆಂದರೆ ವಿವೇಕವೇ ಇಲ್ಲ. ಇವರು ನಮ್ಮನ್ನು ಯಮನ ದವಡೆಗೆ ಸೇರಿಸಲು ಸುಲಭವಾಗುವಂತೆ ಹಣ್ಣು ಮಾಡುತ್ತಾರೆ. ಅವರೆಲ್ಲ ಜನ್ಮಜನ್ಮಾಂತರಗಳಲ್ಲಿ ನೀಡಿದ ಸಾಲವನ್ನು ವಸೂಲಿ ಮಾಡಲು ಬಂದ ಸಾಲಗಾರರು. ಗೋಪಾಲದಾಸರು ತಮ್ಮ ಒಂದು ಕೀರ್ತನೆಯಲ್ಲಿ ಕೇಳುತ್ತಾರೆ. ‘ಯಾರನ್ನು ಬೇಡಲಿ ನಾನು? ತಾಯಿ ಸುರುಚಿ ಧ್ರುವನಿಗೆ ಏನು ಕೊಟ್ಟಳು? ತಂದೆ, ಪ್ರಲ್ಹಾದನಿಗೆ ಏನು ಮಾಡಿದ? ತಮ್ಮ ಸುಗ್ರೀವ ಅಣ್ಣ ವಾಲಿಗೆ ಏನು ಕೊಟ್ಟ? ನೂರು ಜನ ಮಕ್ಕಳು ತಂದೆ ಧೃತರಾಷ್ಟ್ರನಿಗೆ ಏನು ಮಾಡಿದರು? ಅದಕ್ಕೆ ಇಂಥ ಯಾವ ಬಂಧುಗಳೂ ಬೇಡ’. ಅಂಥವರು ಬಂದಾಗ ನಮ್ಮ ಬಳಿ ಇರುವ ಒಂದೇ ಅಸ್ತ್ರ–ತಾಳ್ಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT