ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಒಂದೇ ಬೇಡಿಕೆ

Published 6 ಆಗಸ್ಟ್ 2023, 23:34 IST
Last Updated 6 ಆಗಸ್ಟ್ 2023, 23:34 IST
ಅಕ್ಷರ ಗಾತ್ರ

ಬೇಡಿದುದನೀವನೀಶ್ವರನೆಂಬ ನಚ್ಚಿಲ್ಲ |
ಬೇಡಲೊಳಿತಾವುದೆಂಬುದರರಿವುಮಿಲ್ಲ ||
ಕೂಡಿ ಬಂದುದನೆ ನೀನ್ ಅವನಿಚ್ಛೆಯೆಂದುಕೊಳೆ |
ನೀಡುಗೆದೆಗಟ್ಟಿಯನು – ಮಂಕುತಿಮ್ಮ || 943 ||

ಪದ-ಅರ್ಥ: ಬೇಡಿದುದನೀವನೀಶ್ವರನೆಂಬ=ಬೇಡಿದುದನು+ಈವನು(ಕೊಡುವನು)+ಈಶ್ವರನು+ಎಂಬ, ನಚ್ಚಿಲ್ಲ=ನಂಬಿಕೆಯಿಲ್ಲ, ಬೇಡಲೊಳಿತಾವುದೆಂಬುದರಿವುಮಿಲ್ಲ=ಬೇಡಲು+ಒಳಿತಾವುದು+ಎಂಬುದರ+
ಅರಿವು+ಇಲ್ಲ, ಅವನಿಚ್ಛೆಯೆಂದುಕೊಳೆ=ಅವನ+ಇಚ್ಛೆ+ಎಂದು+ಕೊಳೆ, ನೀಡುಗೆದೆಗಟ್ಟಿಯನು=
ನೀಡುಗೆ(ನೀಡಲಿ)+ಎದೆ+ಗಟ್ಟಿಯನು.

ವಾಚ್ಯಾರ್ಥ: ನಾವು ಬೇಡಿದ್ದನ್ನು ಈಶ್ವರ ನೀಡುತ್ತಾನೆಂಬ ನಂಬಿಕೆಯಿಲ್ಲ. ಬೇಡಲು ಯಾವುದು ಒಳಿತು ಎನ್ನುವುದರ ಅರಿವೂ ಇಲ್ಲ. ಯಾವುದು ಕೂಡಿ ಬರುತ್ತದೋ ಅದನ್ನೇ ಈಶ್ವರನ ಇಚ್ಛೆಯೆಂದು ಅನುಭವಿಸು. ಅದಕ್ಕೆ ಎದೆಯನ್ನು ಗಟ್ಟಿ ಮಾಡು ಎಂದು ಬೇಡು.

ವಿವರಣೆ: ಭಗವಂತನನ್ನು ನಾವು ನಿತ್ಯವೂ ಬೇಡುತ್ತಲೇ ಇರುತ್ತೇವೆ. ನಮ್ಮ ಬೇಡಿಕೆಯ ಪಟ್ಟಿಗೆ ಅಂತ್ಯವೇ ಇಲ್ಲ. ಆದರೆ ಭಗವಂತ ನಾವು ಕೇಳಿದ್ದನ್ನೆಲ್ಲ ಕೊಡುತ್ತಾನೆಯೆ? ಬಹುಶ: ನಾವು ಮಾಡಿದ ಕರ್ಮಗಳಿಗೆ ಸರಿಯಾದ ಫಲವನ್ನು ಮಾತ್ರ ಕೊಡುತ್ತಾನೆ.

ಅದು ಮಾತ್ರವಲ್ಲ, ನಮಗಾಗಿ ಏನು ಬೇಡಿಕೊಳ್ಳಬೇಕೆಂಬುದರ ಅರಿವೂ ನಮಗಿಲ್ಲ. ಯಾವುದನ್ನು ಬೇಡಿದರೆ ಒಳ್ಳೆಯದು ಎಂದುಕೊಳ್ಳುತ್ತೇವೋ ಅದು ನಮಗೆ ಆಪತ್ತನ್ನೇ ತರಬಹುದು. ಪುರಾಣ, ಇತಿಹಾಸಗಳಲ್ಲಿ ಇಂಥ ಅನೇಕ ಬೇಡಿಕೆಗಳು ಶಾಪಗಳಾದುವನ್ನು ಓದಿದ್ದೇವೆ. ಭಸ್ಮಾಸುರ ಬೇಡಿದ ವರ ಅವನನ್ನೇ ಸುಟ್ಟಿತು. ಹಿರಣ್ಯಕಶಿಪು ಅತಿಯಾದ ಬುದ್ಧಿವಂತಿಕೆಯಿಂದ ಬೇಡಿದ ವರಕ್ಕೆ ಸರಿಯಾಗಿ ಅಷ್ಟೇ ಬುದ್ಧಿವಂತಿಕೆಯಿಂದ ಭಗವಂತ ಮರಣ ತಂದ. ನನ್ನ ಗೆಳೆಯರೊಬ್ಬರಿಗೆ ಬೆಟ್ಟದ ಮೇಲಿರುವುದು ಬಹಳ ಇಷ್ಟ. ಅದಕ್ಕಾಗಿ ಮೇಲಧಿಕಾರಿಗಳನ್ನು ಕಾಡಿ, ಬೇಡಿ ಮಡಿಕೇರಿಗೆ ವರ್ಗಮಾಡಿಸಿಕೊಂಡರು. ಬೆಟ್ಟದ ತುದಿಯ ಮೇಲೊಂದು ಮನೆ ತೆಗೆದುಕೊಂಡು ತಮ್ಮ ಕನಸು ಈಡೇರಿತೆಂದು ಸಂತೋಷಪಟ್ಟರು. ಮುಂದೆ ಮೂರು ತಿಂಗಳಿಗೆ ವಿಪರೀತ ಮಳೆಯಾಗಿ, ಬೆಟ್ಟ ಕುಸಿದು, ಮನೆ ಮುರಿದು ಹೋಗಿ, ತೀರಿ ಹೋದರು. ಅವರು ಬೇಡಿದ್ದು ವರವೋ ಶಾಪವೋ?

ಅದಕ್ಕೆ ಕಗ್ಗ ಹೇಳುತ್ತದೆ, ನಾವು ಕೇಳಿದ್ದನ್ನು ಭಗವಂತ ಕೊಡುತ್ತಾನೆ ಎಂಬ ಖಾತ್ರಿ ಇಲ್ಲ. ನಾವು ಬೇಡುವುದು ನಮಗೆ ಒಳ್ಳೆಯದೊ, ಕೆಟ್ಟದ್ದೋ ಎಂಬುದೂ ತಿಳಿದಿಲ್ಲ. ಹಾಗಾದರೆ ಏನು ಮಾಡಬೇಕು? ಭಗವಂತನಲ್ಲಿ ಏನನ್ನೂ ಬೇಡುವುದು ಬೇಡ. ಅವನು ನಮ್ಮ ಕರ್ಮಕ್ಕೆ ತಕ್ಕ ಫಲವನ್ನು ಕೊಡುತ್ತಾನೆ ಎಂದುಕೊಂಡು ಪ್ರಾಮಾಣಿಕ ಕಾರ್ಯಗಳನ್ನು ಮಾಡುತ್ತ, ಬಂದದ್ದನ್ನೇ ಅವನ ಇಚ್ಛೆ ಎಂದು ಅನುಭವಿಸಬೇಕು. ಏನು ಬಂದರೂ ಅದು ಅವನ ಕೃಪೆ ಎಂದು ಭಾವಿಸು. ಬೇಡುವುದಿದ್ದರೆ ಒಂದನ್ನು ಮಾತ್ರ ಬೇಡು. ‘ಭಗವಂತಾ, ನೀನು ನೀಡಿದ್ದು ನನಗೆ ಒಪ್ಪಿತ. ಆದರೆ ಬಂದದ್ದನ್ನು ಎದುರಿಸಲು ಧೈರ್ಯಕೊಡು, ನನ್ನ ಎದೆಯನ್ನು ಗಟ್ಟಿ ಮಾಡು’. ಅದೊಂದೇ ಬೇಡಿಕೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT