ಉಜ್ಜಯಿನಿಯ ಹೊರಭಾಗದಲ್ಲಿದ್ದ ಚಾಂಡಾಲ ಗ್ರಾಮದಲ್ಲಿ ಒಂದು ಮನೆಯಲ್ಲಿ ಬೋಧಿಸತ್ವ ಹುಟ್ಟಿದ. ಅವನ ಹೆಸರು ಚಿತ್ತ. ಅವನ ಚಿಕ್ಕಮ್ಮನಿಗೊಬ್ಬ ಮಗ ಹುಟ್ಟಿದ. ಅವನು ಸಂಭೂತ. ಇಬ್ಬರೂ ಜೊತೆಗೇ ಬೆಳೆದು, ಜ್ಞಾನಸಂಪಾದನೆಗಾಗಿ ಬ್ರಾಹ್ಮಣ ವಿದ್ಯಾರ್ಥಿಗಳ ಸೋಗಿನಲ್ಲಿ ತಕ್ಕಶಿಲೆಗೆ ಹೋಗಿ ಎಲ್ಲ ವಿದ್ಯೆ ಕಲಿತರು. ಚಾಂಡಾಲರಿಬ್ಬರು ವೇಷ ಬದಲಿಸಿಕೊಂಡು ಪ್ರಸಿದ್ಧ ಆಚಾರ್ಯರ ಬಳಿ ವಿದ್ಯೆ ಕಲಿಯುತ್ತಿದ್ದಾರೆ ಎಂಬ ವಿಷಯ ಎಲ್ಲಡೆಗೆ ಹರಡತೊಡಗಿತು.
ಒಂದು ದಿನ ಗ್ರಾಮವಾಸಿಯೊಬ್ಬ ಆಚಾರ್ಯರನ್ನು ಪ್ರವಚನಕ್ಕೆಂದು ಆಮಂತ್ರಣ ಕೊಟ್ಟ. ಆಚಾರ್ಯರಿಗೆ ಹೋಗಲಾಗದೆ ಇವರಿಬ್ಬರನ್ನು ಕರೆದು, “ನೀವು ಉಳಿದ ಶಿಷ್ಯರನ್ನು ಕರೆದುಕೊಂಡು ಹೋಗಿ ಪ್ರವಚನ ಮಾಡಿ, ಊಟ ಮುಗಿಸಿ, ನಮ್ಮ ಪ್ರಸಾದವನ್ನು ತೆಗೆದುಕೊಂಡು ಬನ್ನಿ” ಎಂದು ಕಳುಹಿಸಿದರು. ಅಲ್ಲಿ ಹೋದಾಗ ಒಂದು ಪ್ರಸಂಗದಲ್ಲಿ ಸಂಭೂತ ಉಳಿದವರು ಇದ್ದುದನ್ನು ಮರೆತು ಚಾಂಡಾಲ ಭಾಷೆಯಲ್ಲಿ ಮಾತನಾಡಿದ. ಅಣ್ಣ ಚಿತ್ತ ಪಂಡಿತನೂ ಅದೇ ಭಾಷೆಯಲ್ಲಿ ಉತ್ತರಿಸಿದ. ಉಳಿದ ಶಿಷ್ಯರು ಅದು ಚಾಂಡಾಲ ಭಾಷೆ ಎಂದು ಪತ್ತೆ ಹಚ್ಚಿದರು. ಆಗ ಇಬ್ಬರೂ ಆಶ್ರಮವನ್ನು ತೊರೆದು ಕಾಡಿಗೆ ಬಂದು ಪ್ರವ್ರಜಿತರಾದರು. ಕಾಲ ನೆರೆತು ಬಂದಾಗ ಮೃತರಾಗಿ ನೇರಂಜನ ನದಿಯ ದಂಡೆಯಲ್ಲಿದ್ದ ಪ್ರದೇಶದಲ್ಲಿ ಜಿಂಕೆಯ ಹೊಟ್ಟೆಯಲ್ಲಿ ಹುಟ್ಟಿದರು. ಇಬ್ಬರೂ ಒಂದು ಕ್ಷಣವೂ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಜೊತೆಗೇ ಇದ್ದಾಗ ಒಂದೇ ಬಾಣದಿಂದ ಬೇಡನೊಬ್ಬ ಇಬ್ಬರನ್ನು ಕೊಂದುಬಿಟ್ಟ. ನಂತರ ಇಬ್ಬರೂ ನರ್ಮದಾ ನದಿಯ ದಂಡೆಯಲ್ಲಿ ಹದ್ದುಗಳಾಗಿ ಹುಟ್ಟಿದರು. ಅಲ್ಲಿಯೂ ಜೊತೆ ತಪ್ಪಲಿಲ್ಲ. ಹೀಗೆಯೇ ಕೊಕ್ಕಿಗೆ ಕೊಕ್ಕು ಸೇರಿಸಿಕೊಂಡು ನಿಂತಿದ್ದಾಗ ಹಕ್ಕಿಗಳನ್ನು ಕೊಲ್ಲುವವನು ಒಂದೇ ಸಲಕ್ಕೆ ಅವುಗಳನ್ನು ಕೊಂದುಬಿಟ್ಟ.
ಮುಂದೆ ಚಿತ್ತ ಪಂಡಿತ ಕೌಸಾಂಬಿಯ ಪುರೋಹಿತನ ಮಗನಾಗಿ ಹುಟ್ಟಿದ. ಸಂಭೂತಪAಡಿತ ಉತ್ತರ ಪಾಂಚಾಲದ ರಾಜಕುಮಾರನಾಗಿ ಹುಟ್ಟಿದ. ದಿನಕಳೆದಂತೆ ಚಿತ್ತ ಪಂಡಿತನಿಗೆ ಹಿಂದಿನ ನಾಲ್ಕು ಜನ್ಮಗಳ ಸ್ಮರಣೆಯೂ ಬಂದಿತು. ಆದರೆ ಸಂಭೂತನಿಗೆ ಚಾಂಡಾಲ ಜನ್ಮ ಮಾತ್ರ ನೆನಪಿನಲ್ಲಿ ಉಳಿದಿತ್ತು. ಹದಿನಾರು ವರ್ಷವಾದಾಗ ಚಿತ್ತ ಪಂಡಿತ ಮನೆಯನ್ನು ತೊರೆದು ಋಷಿ ಪ್ರವ್ರಜ್ಜೆಯನ್ನು ಸ್ವೀಕರಿಸಿ ಧ್ಯಾನದಲ್ಲಿ ಮಗ್ನನಾದ. ಸಂಭೂತ ಪಂಡಿತ ತಂದೆಯ ಕಾಲವಾದ ನಂತರ ರಾಜನಾದ. ಚಿತ್ತ ಪಂಡಿತ ಹಿಮಾಲಯದಲ್ಲಿದ್ದಾಗ ಸಂಭೂತ ಪಂಡಿತನ ಬಗ್ಗೆ ಯೋಚನೆ ಬಂದಿತು. ಅವನು ಅಧಿಕಾರ ಗ್ರಹಣ ಮಾಡಿದ್ದಾನೆಂಬುದು ತಿಳಿಯಿತು. ಸ್ವಲ್ಪ ಕಾಲ ಕಳೆಯಲಿ, ನಂತರ ಅವನಿಗೆ ಧರ್ಮಬೋಧೆ ಮಾಡಬೇಕೆಂದು ತೀರ್ಮಾನಿಸಿದ. ಐವತ್ತು ವರ್ಷಗಳು ಕಳೆದವು. ಚಿತ್ತಪಂಡಿತ ಧ್ಯಾನಬಲದಿಂದ ಸಂಭೂತ ಪಂಡಿತನ ರಾಜ್ಯಕ್ಕೆ ಬಂದು ಉದ್ಯಾನದಲ್ಲಿ ಇಳಿದು ಮಂಗಲಶಿಲೆಯ ಮೇಲೆ ಕುಳಿತುಕೊಂಡ. ರಾಜನನ್ನು ಕರೆಸಿಕೊಂಡು ಹಿಂದಿನ ಜನ್ಮಗಳ ಸ್ಮರಣೆ ನೀಡಿದ. ಇದು ಪ್ರವ್ರಜಿತನಾಗಲು ಸರಿಯಾದ ಸಮಯ ಎಂದು ತಿಳಿಸಿದ. ಅದಕ್ಕೆ ಸಂಭೂತ ಪಂಡಿತ, “ನೀನು ಎಲ್ಲವನ್ನು ಬಿಟ್ಟಿದ್ದೀ. ಆದರೆ ಕೆಸರಿನಲ್ಲಿ ಸಿಕ್ಕ ಆನೆ ನೆಲವನ್ನು ಕಂಡರೂ ಅಲ್ಲಿಗೆ ಹೇಗೆ ಹೋಗಲಾರದೊ, ಹಾಗೆಯೇ ಕಾಮ-ಭೋಗದ ಕೆಸರಿನಲ್ಲಿ ಸಿಕ್ಕ ನಾನೂ ನಿನ್ನ ಮಾರ್ಗವನ್ನು ಅನುಸರಿಸಲಾರೆ” ಎಂದ. “ಆಯ್ತು, ಕೇವಲ ಧರ್ಮಕಾರ್ಯಗಳನ್ನು ಮಾಡು, ಮನಸ್ಸು ಶುದ್ಧಿಯಾದೀತು. ನೀನು ಪ್ರವ್ರಜಿತನಾಗುವುದು, ಬಿಡುವುದು ನಿನಗೆ ಬಿಟ್ಟದ್ದು. ನಾನು ಬರುತ್ತೇನೆ” ಎಂದು ಹಾರಿಹೋದ. ಧರ್ಮದಲ್ಲಿ ನಡೆದ ಸಂಭೂತ ಪಂಡಿತನಿಗೆ ಕೆಲಕಾಲದಲ್ಲಿ ವೈರಾಗ್ಯ ಬಂದು ಅವನೂ ಪ್ರವ್ರಜಿತನಾಗಿ ಹಿಮಾಲಯಕ್ಕೆ ಹೋಗಿ ಅಣ್ಣನನ್ನು ಸೇರಿಕೊಂಡ.
ಕಾಮ-ಭೋಗಗಳಿಂದ ನಿವೃತ್ತಿಗೆ ಧರ್ಮಮಾರ್ಗವೊಂದೇ ದಾರಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.