ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮತಿಯ ಪರಿಪಕ್ವತೆ

Last Updated 29 ಜನವರಿ 2023, 19:30 IST
ಅಕ್ಷರ ಗಾತ್ರ

ಬರಿಭಕ್ತಿ ಬರಿಕರ್ಮ ಬರಿತರ್ಕ ದೊರಕಿಸದು |

ಪರಮಾತ್ಮದರ್ಶನವ; ಬೇಕದಕೆ ತಪಸು ||
ಪರಿಪೂರ್ಣ ಜೀವನಾನುಭವತಾಪದಿ ಮತಿಯು |
ಪರಿಪಕ್ವವಾಗಲದು – ಮಂಕುತಿಮ್ಮ || 810 ||

ಪದ-ಅರ್ಥ: ಜೀವನಾನುಭವತಾಪದಿ=ಜೀವನ+ಅನುಭವ+ತಾಪದಿ, ಮತಿಯು=ಬುದ್ಧಿಯು, ಪರಿಪಕ್ವವಾಗಲದು=ಪರಿಪಕ್ವವು+ಆಗಲು+ಅದು.

ವಾಚ್ಯಾರ್ಥ: ಬರಿಭಕ್ತಿ, ಬರಿ ಕರ್ಮ ಅಥವಾ ಬರಿಯ ತರ್ಕದಿಂದ ಪರಮಾತ್ಮದರ್ಶನ ದೊರಕಲಾರದು. ಅದಕ್ಕೆ ತಪಸ್ಸು ಬೇಕು. ಪರಿಪೂರ್ಣ ಜೀವನದ ಅನುಭವದ ಬೆಂಕಿಯಲ್ಲಿ ಬೆಂದಾಗ ಬುದ್ಧಿ ಪರಿಪಕ್ವವಾಗುತ್ತದೆ.

ವಿವರಣೆ: ಹಿಂದೂ ಚಿಂತನೆಯಲ್ಲಿ, ಪರಸತ್ವದ ಸಾಕ್ಷಾತ್ಕಾರಕ್ಕೆ, ಮೋಕ್ಷಕ್ಕೆ, ಮೂರು ಮಾರ್ಗಗಳು. ಭಕ್ತಿಯೋಗ, ಕರ್ಮಯೋಗ ಮತ್ತು ಜ್ಞಾನಯೋಗ ಇವೇ ಮೂರು ದಾರಿಗಳು. ಭಗವದ್ಗೀತೆಯ ಮೂರನೆಯ ಅಧ್ಯಾಯದಲ್ಲಿ
ಒಂದು ಮಾತಿದೆ –

ಯೋ ಬುದ್ಧೇ ಪರತಸ್ತು ಸ: ||

ಹೀಗೆಂದರೆ, ಪರವಸ್ತುವು ಬುದ್ಧಿಗಿಂತ ಮೇಲ್ಮಟ್ಟಕ್ಕಿರುವುದು, ಅದು ಬುದ್ಧಿಯಿಂದ ಅತೀತವಾದದ್ದು. ಹಾಗಾದರೆ ಪರವಸ್ತು ನಮ್ಮ ಬುದ್ಧಿಗೆ ನಿಲುಕದೆ ಹೋದರೆ ಅದು ನಮ್ಮ ಅನುಭವಕ್ಕೆ ಹೇಗೆ ದಕ್ಕೀತು? ಪರತತ್ವ ಚಿಂತನೆ ಅನುಭವ ಪ್ರಧಾನವಾದದ್ದು. ಅದಕ್ಕೆ ಬುದ್ಧಿ ಬೇಕೇ ಬೇಕು. ಆದರೆ ಅದರ ಜೊತೆಗೆ ಭಕ್ತಿಯೂ ಬೇಕು ಮತ್ತು ಕರ್ಮಸಾಧನೆಯೂ ಬೇಕು.

ಯಾವುದೇ ಒಂದರಿಂದ ಸಂಪೂರ್ಣ ದರ್ಶನ ಸಾಧ್ಯವಿಲ್ಲ. ಬೆಟ್ಟದ ಮೇಲಿರುವ ದೇವಸ್ಥಾನದ ವಿಗ್ರಹ ದರ್ಶನದ ಉದಾಹರಣೆ ತೆಗೆದುಕೊಳ್ಳೋಣ. ಮೊದಲು, ದೇವಸ್ಥಾನ ಎಷ್ಟು ದೂರ, ಅದನ್ನು ಹತ್ತಲು ನನ್ನಿಂದಾದೀತೇ? ಅದಕ್ಕೆ ಸಮಯ
ಎಷ್ಟು ಬೇಕಾದೀತು? ದಾರಿಯಲ್ಲಿ ಊಟ, ತಿಂಡಿ, ವಿಶ್ರಾಂತಿಗಳಿಗೆ ಅವಕಾಶವಿದೆಯೆ? ಹೀಗೆ ಮೊದಲು ಬುದ್ಧಿ ತರ್ಕಮಾಡಿ ವಿಷಯ ಸಂಗ್ರಹಿಸುತ್ತದೆ. ಕೇವಲ ಅದರಿಂದ ದೇವತಾದರ್ಶನ ಸಾಧ್ಯವಿಲ್ಲ. ಮುಂದಿನ ಹೆಜ್ಜೆ, ಬೆಟ್ಟ ಹತ್ತಬೇಕು. ಅದು ದೈಹಿಕವಾದ ಕರ್ಮ. ಆ ಕರ್ಮವಿಲ್ಲದೆ ದೇವಸ್ಥಾನ ತಲುಪುವುದು ಅಸಾಧ್ಯ. ಆದರೆ ಈ ಬೆಟ್ಟ ಹತ್ತುವ ಚಿಂತನೆಯ ಹಿಂದಿರುವುದು, ದೇವದರ್ಶನದ ಬಯಕೆ- ಭಕ್ತಿ. ಈ ಭಾವುಕತೆಯೇ ಬಹಳ ಮಟ್ಟಿಗೆ ನಮ್ಮ ಬದುಕನ್ನು

ಮುನ್ನಡೆಸುವ ಇಂಧನ, ವಿವೇಚನೆಯಲ್ಲಿ. ಹೀಗೆ ಭಕ್ತಿ, ಕರ್ಮ, ಜ್ಞಾನಗಳೆಂಬ ಸಾಧನೆಗಳಿಂದ ತಪಸ್ಸು ಮಾಡಿದಾಗ ಪರಸತ್ವದರ್ಶನವಾದೀತು. ಜೀವನದ ಅನುಭವಗಳ ಬೆಂಕಿಯಲ್ಲಿ ಬೆಂದಾಗ ಬುದ್ಧಿ ಪಕ್ವವಾಗುತ್ತದೆ. ಇದನ್ನು ಮುದ್ದುರಾಮ ಸುಂದರವಾಗಿ ಹೇಳುತ್ತಾನೆ. ಬಿತ್ತಿ ಭಕ್ತಿಯ ಬೀಜ, ಶ್ರದ್ಧೆ ನೇಗಿಲ ಬಳಸಿ ಉಳುಮೆ ನೀ ಮಾಡುತಿರು ದುಡಿಮೆ ಎತ್ತಿಂದ ತೋರು ಸರಿ ಆಸಕ್ತಿ ಮುಕ್ತಿಫಲ ಬೆಳೆಸಿನಲಿ ಯೋಗಿ ಪುಂಗವನಾಗು – ಮುದ್ದುರಾಮ ಭಕ್ತಿಯ ಬೀಜ, ಶ್ರದ್ಧೆಯ ಕರ್ಮ, ಸರಿಯಾದ ಆಸಕ್ತಿಯಿಂದ ಮುಕ್ತಿಫಲ. ಅದನ್ನು ಪಡೆಯುವುದೊಂದು ತಪಸ್ಸು. ಆ ತಪಸ್ಸೇ ಬದುಕನ್ನು ಮತ್ತು ಬುದ್ಧಿಯನ್ನು ಪಕ್ವಮಾಡುವುದು. ಅದೇ ಪರಮಾತ್ಮದರ್ಶನಕ್ಕೆ ರಹದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT