ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಿಗ್ರಹ

Last Updated 27 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಹಿಂದೆ ಗಾಂಧಾರ ರಾಜ್ಯದಲ್ಲಿ ಬೋಧಿಸತ್ವ ಗಾಂಧಾರ ರಾಜನಾಗಿ ಹುಟ್ಟಿದ್ದ. ತಂದೆಯ ಕಾಲಾನಂತರ ತಾನೇ ರಾಜನಾಗಿ ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದ. ಅವನ ಶೌರ್ಯ, ಉದಾರತೆ, ಧರ್ಮನಿಷ್ಠೆ, ಪ್ರಜಾಪ್ರೀತಿ ಲೋಕದಲ್ಲೆಲ್ಲ ಪ್ರಸಿದ್ಧವಾಗಿತ್ತು. ದೂರದ ವಿದೇಹ ರಾಜ್ಯದಲ್ಲಿದ್ದ ವಿದೇಹ ರಾಜ ಕೂಡ ಗಾಂಧಾರ ರಾಜನ ಅಭಿಮಾನಿಯಾಗಿದ್ದ. ಆತ ಗಾಂಧಾರರಾಜನನ್ನು ನೋಡದಿದ್ದರೂ ಅವನ ವಿಚಾರಗಳನ್ನು ಕೇಳಿ ಬಲ್ಲವನಾಗಿದ್ದ.

ಒಂದು ಹುಣ್ಣಿಮೆಯ ದಿನ ಗಾಂಧಾರ ರಾಜ ತನ್ನೆಲ್ಲ ಪೂಜೆ, ದಾನಗಳನ್ನು ಮುಗಿಸಿ ಎತ್ತರದ ಸಿಂಹಾಸನದ ಮೇಲೆ ಕುಳಿತು ರಾತ್ರಿಯ ಚಂದ್ರನನ್ನೇ ನೋಡುತ್ತಿದ್ದ. ಆ ಸಮಯದಲ್ಲಿ ಹಾರುತ್ತ ಬಂದ ರಾಹು ಪೂರ್ಣಚಂದ್ರನನ್ನು ನುಂಗಿಬಿಟ್ಟ. ಚಂದ್ರನ ಬೆಳಕು ಮಾಯವಾಯಿತು. ಅದನ್ನು ಕಾಣುತ್ತಿದ್ದ ಗಾಂಧಾರರಾಜನಿಗೆ ತಕ್ಷಣವೇ ಒಂದು ವಿಚಾರ ಹೊಳೆಯಿತು. ಹೇಗೆ ರಾಹು ಚಂದ್ರನ ಕಳೆಯನ್ನು ನುಂಗಿಬಿಟ್ಟಿತೋ ಹಾಗೆಯೇ ಈ ರಾಜ್ಯದ ಆಸೆ, ವ್ಯವಹಾರ, ಆಡಳಿತ ನನ್ನ ಆಂತರ್ಯದ ಶಕ್ತಿಯನ್ನು ನುಂಗಿ ಹಾಕಿದೆ. ಇದರಿಂದ ಬಿಡುಗಡೆಯಾಗಲೇಬೇಕು ಎಂದು ತೀರ್ಮಾನಿಸಿದ. ಮರುದಿನವೇ ತನ್ನ ಸಮಸ್ತ ರಾಜ್ಯವನ್ನು ಮಂತ್ರಿಗಳಿಗೆ ಒಪ್ಪಿಸಿ ಪ್ರವ್ರಜಿತನಾಗಿ ಹಿಮಾಲಯಕ್ಕೆ ಹೋಗಿ ಧ್ಯಾನಸುಖದಲ್ಲಿ ಮಗ್ನನಾದ.

ಈ ವಿಷಯವನ್ನು ಕೇಳಿದ ವಿದೇಹ ರಾಜ, ಗಾಂಧಾರರಾಜನಿಗೇ ಈ ರೀತಿಯ ವೈರಾಗ್ಯ ಬಂದಿರುವಾಗ ನಾನೇಕೆ ರಾಜನಾಗಿರಲಿ ಎಂದುಕೊಂಡು ತನ್ನ ಸಕಲ ಸಾಮ್ರಾಜ್ಯ, ಐಶ್ವರ್ಯಗಳನ್ನು ತ್ಯಜಿಸಿಬಿಟ್ಟು ಇನ್ನು ಮುಂದೆ ಅಪರಿಗ್ರಹವನ್ನು ಆಚರಿಸುತ್ತೇನೆ ಎಂದು ತೀರ್ಮಾನಿಸಿ ಅದರಂತೆಯೇ ಮಾಡಿ ಹಿಮಾಲಯಕ್ಕೆ ಹೋಗಿಬಿಟ್ಟ.

ಮುಂದೆ ಕೆಲ ಕಾಲದ ಮೇಲೆ ಇಬ್ಬರೂ ಸನ್ಯಾಸಿಗಳು ಒಬ್ಬರನ್ನೊಬ್ಬರು ಭೇಟಿಯಾದರು. ಆದರೆ ಪರಸ್ಪರರನ್ನು ಗುರುತಿಸಲಿಲ್ಲ. ವಿದೇಹ ತಪಸ್ವಿ, ಗಾಂಧಾರ ತಪಸ್ವಿಯನ್ನು ತನ್ನ ಗುರುವಾಗಿ ಸ್ವೀಕರಿಸಿ ಸೇವೆ ಮಾಡುತ್ತಿದ್ದ. ಹೀಗಿರುವಾಗ ಒಂದು ದಿನ ಇಬ್ಬರೂ ಹುಣ್ಣಿಮೆಯ ರಾತ್ರಿ ಚಂದ್ರನನ್ನು ನೋಡುತ್ತ ಕುಳಿತಾಗ ರಾಹು ಚಂದ್ರನನ್ನು ಮತ್ತೆ ನುಂಗಿದ. ಆಗ ವಿದೇಹ ರಾಜನಾಗಿದ್ದ ತಪಸ್ವಿ ಹೇಳಿದ, ‘ಇಂಥ ದೃಶ್ಯವೇ ನನಗೆ ಮಾನ್ಯರಾಗಿದ್ದ ಗಾಂಧಾರ ರಾಜರಿಗೆ ವೈರಾಗ್ಯವನ್ನು ತಂದಿತು’. ಆಗ ಇನ್ನೊಬ್ಬ ತಪಸ್ವಿ ನಕ್ಕು ‘ಅವನೇ ನಾನು’ ಎಂದ. ‘ಹೌದೇ, ನಾನು ವಿದೇಹ ರಾಜನಾಗಿದ್ದವನು, ನಿಮ್ಮ ವಿಷಯ ಕೇಳಿ ನಾನೂ ಪ್ರವ್ರಜಿತನಾದೆ. ಏನನ್ನೂ ಸಂಗ್ರಹ ಮಾಡದೇ ವೈರಾಗ್ಯದಿಂದ ಇರುವುದಕ್ಕೆ ಇಲ್ಲಿಗೆ ಬಂದೆ’ ಎಂದ ಇನ್ನೊಬ್ಬ ಸನ್ಯಾಸಿ. ಇದಕ್ಕೆ ಮರು ಮಾತನಾಡದೆ ಗಾಂಧಾರರಾಜನಾಗಿದ್ದ ಸನ್ಯಾಸಿ ನಕ್ಕುಬಿಟ್ಟ.

ಮುಂದೆ ಇಬ್ಬರೂ ಹಿಮಾಲಯದ ಕೆಳಗೆ ತಪ್ಪಲಿಗೆ ಬಂದು ಒಂದು ಗ್ರಾಮದ ಹೊರಗೆ ಪರ್ಣಕುಟಿಯನ್ನು ನಿರ್ಮಿಸಿ ವಾಸ ಮಾಡುತ್ತಿದ್ದರು. ನಿತ್ಯವೂ ಭಿಕ್ಷೆ ಬೇಡಿಕೊಂಡು ಬಂದು ಹಸಿವು ತೀರಿಸಿಕೊಳ್ಳುತ್ತಿದ್ದರು. ಕೆಲವು ಮನೆಯವರು ಅಡುಗೆಯಲ್ಲಿ ಉಪ್ಪು ಹಾಕದೆ ಅದನ್ನು ಎಲೆಯಲ್ಲೋ, ದೊನ್ನೆಯಲ್ಲೋ ಕಟ್ಟಿ ಕೊಡುತ್ತಿದ್ದರು. ಒಂದು ದಿನ ಹೀಗೆ ಹೆಚ್ಚಾಗಿ ಬಂದ ಉಪ್ಪನ್ನು ಹಿಂದೆ ವಿದೇಹ ರಾಜನಾಗಿದ್ದ ಸನ್ಯಾಸಿ, ಒಂದು ದೊನ್ನೆಯಲ್ಲಿ ಕಟ್ಟಿ, ಮುಂದೆ ಯಾವಾಗಲಾದರೂ ಉಪ್ಪು ಕಡಿಮೆಯಾದಾಗ ಬಳಸಿಕೊಳ್ಳಬಹುದೆಂದು, ಛಾವಣೆಯ ಹುಲ್ಲಿನ ಮಧ್ಯೆ ಸಿಕ್ಕಿಸಿ ಇಟ್ಟ. ಎರಡು ದಿನಗಳ ನಂತರ ಉಪ್ಪಿಲ್ಲದ ಊಟ ದೊರೆತಾಗ, ಈಗ ದೊನ್ನೆಯಲ್ಲಿಯ ಉಪ್ಪನ್ನು ಹೊರ ತೆಗೆದ. ಅದನ್ನು ಕಂಡು ಹಿರಿಯ ಸನ್ಯಾಸಿ, ‘ಇಂದು ಊಟದಲ್ಲಿ ಉಪ್ಪಿಲ್ಲ, ನಿನಗೆ ಇದೆಲ್ಲಿ ದೊರಕಿತು?’ ಎಂದು ಕೇಳಿದ. ಅದಕ್ಕೆ ಕಿರಿಯ ಸನ್ಯಾಸಿ, ‘ಹಿಂದೊಂದು ದಿನ ಹೆಚ್ಚು ಉಪ್ಪು ಬಂದಿತ್ತು. ಮುಂದೆ ಯಾವಾಗಲಾದರೂ ಬೇಕಾಗಬಹುದು ಎಂದು ತೆಗೆದಿಟ್ಟಿದ್ದೆ’ ಎಂದ. ಹಿಂದೆ ಗಾಂಧಾರ ರಾಜನಾಗಿದ್ದ ಬೋಧಿಸತ್ವ ಹೇಳಿದ, ‘ಕಂಡೆಯಾ, ಯಾವುದೂ ಬೇಡವೆಂದು ರಾಜ್ಯವನ್ನು, ಸಮಸ್ತ ಐಶ್ವರ್ಯವನ್ನು ತ್ಯಜಿಸಿದ ನೀನು ಕೆಲವು ಉಪ್ಪಿನ ಹರಳುಗಳಿಗಾಗಿ ತೃಷ್ಣೆಯನ್ನು ಮಾಡಿಕೊಂಡೆಯಾ? ಅಪರಿಗ್ರಹವೆಂಬುದು ಹೇಳಿದಷ್ಟು ಸುಲಭವಲ್ಲ. ಅದಕ್ಕೆ ಇನ್ನು ಹೆಚ್ಚಿನ ಮನೋನಿಗ್ರಹಬೇಕು’ ಎಂದು ಉಪದೇಶ ಮಾಡಿದ.

ಅಪರಿಗ್ರಹ ವಸ್ತುಗಳಿಂದ ಬರುವುದಿಲ್ಲ, ಮನಸ್ಸಿನಲ್ಲಿ ಹುಟ್ಟುವ ಆಸೆಗಳಿಂದ ಬರುತ್ತದೆ. ಆಸೆಗಳನ್ನು ಸಂಪೂರ್ಣವಾಗಿ ಜಯಿಸದ ಹೊರತು ಅಪರಿಗ್ರಹ ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT