ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸಂಶಯದ ರೋಗ

Last Updated 30 ಅಕ್ಟೋಬರ್ 2020, 1:46 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯ ರಾಜನಾಗಿದ್ದ ಬ್ರಹ್ಮದತ್ತನಿಗೆ ಸೊತ್ಥಿಸೇನ ಎಂಬ ಮಗನಿದ್ದ. ಅವನು ದೊಡ್ಡವನಾದ ಮೇಲೆ ಉಪರಾಜನಾದ. ಅವನ ಹೆಂಡತಿ ಸಂಖುಲಾ, ಆಕೆ ಅತ್ಯಂತ ರೂಪವತಿ ಮತ್ತು ಗುಣವತಿ.

ಹೀಗಿರುವಾಗ ಸೊತ್ಥಿಸೇನನಿಗೆ ಕುಷ್ಠರೋಗ ಬಂದಿತು. ಔಷಧಿಗಳಿಂದ ಗುಣವಾಗದೆ ಉಲ್ಬಣವಾಯಿತು. ‘ಇನ್ನು ನನಗೆ ರಾಜ್ಯ ಬೇಡ. ಕಾಡಿಗೆ ಹೋಗಿ ಅನಾಥನಂತೆ ಸತ್ತು ಹೋಗುತ್ತೇನೆ’ ಎಂದು ತೀರ್ಮಾನಿಸಿ ಹೊರಟ. ಎಲ್ಲರೂ ಬೇಡವೆಂದರೂ ಕೇಳದೆ ಸಂಖುಲಾ ಅವನೊಡನೆ ಹೊರಟಳು. ಆತ ಕಾಡಿಗೆ ಬಂದು ನದಿಯ ಸಮೀಪ ಪರ್ಣಕುಟಿಯನ್ನು ಕಟ್ಟಿ ಬದುಕತೊಡಗಿದ. ಸಂಖುಲಾ ಮಾತ್ರ ಅವನಿಗೆ ಹಗಲು–ರಾತ್ರಿ ಸೇವೆ ಮಾಡುತ್ತಿದ್ದಳು. ಬೆಳಿಗ್ಗೆ ಪರ್ಣಕುಟಿಯನ್ನು ಶುದ್ಧಗೊಳಿಸಿ, ಹಲ್ಲುಜ್ಜುವುದಕ್ಕೆ ಸಹಾಯ ಮಾಡಿ, ಬಿಸಿನೀರು ಕಾಯಿಸಿ ಅವನಿಗೆ ಸ್ನಾನಕ್ಕೆ ಹಾಕುತ್ತಿದ್ದಳು. ಸ್ವಲ್ಪವೂ ಅಸಹ್ಯಪಡದೆ ಅವನ ಗಾಯಗಳಿಗೆಲ್ಲ ತಾನೇ ಸಿದ್ಧಪಡಿಸಿದ ಔಷಧಿಗಳನ್ನು ಹಚ್ಚುವಳು. ಅವನಿಗೆ ತಿನ್ನಲು ಹಣ್ಣು–ಹಂಪಲುಗಳನ್ನು ಕೊಟ್ಟು ಊಟಕ್ಕೆ ಅಣಿ ಮಾಡಿ ತಾನು ಒಂದು ಗುದ್ದಲಿ ಹಾಗೂ ಬಿದಿರಿನ ಬುಟ್ಟಿ ತೆಗೆದುಕೊಂಡು ಕಾಡಿಗೆ ಹೋಗಿ ಫಲಮೂಲಗಳನ್ನು ತರುವಳು. ಮತ್ತೆ ಗಂಡನಿಗೆ ಊಟಕ್ಕೆ ಹಾಕಿ, ಸಂಜೆಗೆ ಮತ್ತೆ ಸ್ನಾನ ಮಾಡಿಸಿ ಔಷಧಿಗಳನ್ನು ಲೇಪಿಸುವಳು. ರಾತ್ರಿ ಫಲಮೂಲಗಳನ್ನು ಕೊಟ್ಟು, ಹಾಸಿಗೆ ಹಾಸಿ ಅವನಿಗೆ ನಿದ್ರೆ ಬರುವವರೆಗೆ ತಲೆ, ಬೆನ್ನು, ಕಾಲುಗಳನ್ನು ಒತ್ತಿ, ಅವನು ಮಲಗಿದ ಮೇಲೆ ತಾನು ಕೆಳಗೆ ಚಾಪೆ ಹಾಸಿ ಮಲಗುವಳು.

ಒಂದು ದಿನ ಹೀಗೆ ಕಾಡಿಗೆ ಫಲಮೂಲಗಳನ್ನು ತರಹೋದಾಗ, ನದೀತೀರದಲ್ಲಿ ಸ್ನಾನ ಮಾಡಲೆಂದು, ಮೈಗೆ ಅರಿಸಿನ ಹಚ್ಚಿಕೊಂಡು ಸ್ನಾನಮಾಡಿ ಮೇಲಕ್ಕೆ ಬಂದು ನಾರುಮಡಿಯನ್ನುಟ್ಟುಕೊಂಡಳು. ಅವಳ ಕಾಂತಿಗೆ ಇಡೀ ಕಾಡೇ ಝಗಮಗಿಸತೊಡಗಿತು. ಆಗ ಅಲ್ಲಿಗೊಬ್ಬ ರಾಕ್ಷಸ ಬಂದು ಅವಳನ್ನು ಕಂಡು ಮರುಳಾದ. ತನ್ನನ್ನು ಮದುವೆಯಾಗುವಂತೆ ಕೇಳಿದ. ಆಕೆ ವಿನಯದಿಂದ ತನ್ನ ಪರಿಚಯವನ್ನು ಹೇಳಿಕೊಂಡು ಗಂಡನ ಸೇವೆಗೆ ತನ್ನ ಬಾಳು ಮುಡಿಪಾಗಿರುವುದೆ ತಿಳಿಸಿದಳು. ಆತ, ‘ಆ ರೋಗಿಯನ್ನು ಕಟ್ಟಿಕೊಂಡೇನು ಮಾಡುತ್ತೀ? ನನಗೆ ನಾಲ್ಕುನೂರು ಜನ ಹೆಂಡತಿಯರಿದ್ದಾರೆ. ನಿನ್ನನ್ನು ಅವರಲ್ಲಿ ಶ್ರೇಷ್ಠಳನ್ನಾಗಿ ಮಾಡುತ್ತೇನೆ ಬಾ’ ಎಂದು ಒತ್ತಾಯಿಸಿದ. ಆಕೆ ಒಪ್ಪದಿದ್ದಾಗ ಕೋಪದಿಂದ ಅವಳನ್ನು ತನ್ನ ಕೈಗಳಿಂದ ಹಿಡಿದು ಮೇಲೆತ್ತಿ ಹೇಳಿದ, ‘ನೀನು ಒಪ್ಪದಿದ್ದರೆ ನಿನ್ನನ್ನು ನಾಳೆ ಬೆಳಗ್ಗಿನ ಉಪಹಾರವೆಂದು ತಿಂದು ಬಿಡುತ್ತೇನೆ’ ಎಂದು ಅಬ್ಬರಿಸಿದ. ಸಂಬುಲಾ ಪ್ರಾರ್ಥಸಿದಳು. ಅವಳಿಗೆ ಗಂಡನದೇ ಚಿಂತೆ. ಅವಳ ಶೀಲದ ಕಾಂತಿಯಿಂದ ಶಕ್ರನ ಸಿಂಹಾಸನ ಬಿಸಿಯಾಯಿತು. ಈ ಅನ್ಯಾಯವನ್ನು ತಡೆಯಲು ವಜ್ರಾಯುಧವನ್ನು ಹಿಡಿದುಕೊಂಡು ಬಂದು ರಾಕ್ಷಸನನ್ನು ಹೊಡೆದು ಓಡಿಸಿದ. ಸಂಬುಲಾ ಪರ್ಣಕುಟಿಗೆ ಬರುವಾಗ ತಡವಾಗಿತ್ತು. ಆಕೆ ನಡೆದದ್ದನ್ನೆಲ್ಲ ಹೇಳಿದಾಗ ಸೊತ್ಥಿಸೇನನಿಗೆ ಸಂಶಯ ಕಾಡಿತು. ನಿನ್ನಂತಹ ರೂಪಸಿಯನ್ನು ಶಕ್ರ ಹಾಗೆಯೇ ಬಿಡುತ್ತಾನೆಯೇ ಎಂದು ಕೊಂಕು ನುಡಿದ. ಆಗ ಆಕೆ ಗಡಿಗೆಯಲ್ಲಿ ನೀರು ತುಂಬಿ ಸತ್ಯಕ್ರಿಯೆಯನ್ನು ಮಾಡಿ ಆ ನೀರನ್ನು ಅವನ ಮೇಲೆ ಚಿಮುಕಿಸಿದಳು. ನನ್ನ ಸತ್ಯವೇ ಸಾಕ್ಷಿ ಎಂದಳು. ತಕ್ಷಣ ಸೊತ್ಥಿಸೇನನ ಕುಷ್ಠರೋಗ ತೊಲಗಿ, ಹುಣಸೆಹಣ್ಣಿನಿಂದ ತೊಳೆದ ತಾಮ್ರದ ಪಾತ್ರೆಯಂತೆ ದೇಹ ಹೊಳೆಯತೊಡಗಿತು. ಅವನ ಮನದ ಕಲ್ಮಷವೂ ತೊಲಗಿ ಹೋಯಿತು. ಅವರು ಮರಳಿ ವಾರಾಣಸಿಗೆ ಬಂದು ಸಂತೋಷವಾಗಿ ಬದುಕಿದರು. ಕುಷ್ಠರೋಗಕ್ಕಿಂತ ಸಂಶಯದ ರೋಗ ಕೆಟ್ಟದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT