ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅಂತರದ ತಿಳಿವಳಿಕೆ

Last Updated 29 ಅಕ್ಟೋಬರ್ 2020, 1:50 IST
ಅಕ್ಷರ ಗಾತ್ರ

ಮಿತ ನಿನ್ನ ಗುಣ ಶಕ್ತಿ, ಮಿತ ನಿನ್ನ ಕರ್ತವ್ಯ |

ಮಿತ ಅತಿಗಳಂತರವ ಕಾಣುವುದೆ ಕಡಿದು ||ಹಿತವೆನಿಸಿದನಿತೆಸಗು; ದೈವಕುಳಿದುದನು ಬಿಡು |
ಕೃತಿಯಿರಲಿ ದೈವಕಂ – ಮಂಕುತಿಮ್ಮ || 349 ||

ಪದ-ಅರ್ಥ: ಅತಿಗಳಂತರವ=ಅತಿಗಳ+
ಅಂತರವ, ಕಡಿದು=ಕಷ್ಟ, ಹಿತವೆನಿಸಿದನಿತೆಸಗು=
ಹಿತ+ಎನಿಸಿದ+ಅನಿತು(ಅಷ್ಟು)+ಎಸಗು
(ಮಾಡು), ದೈವಕುಳಿದುದನು=ದೈವಕೆ+
ಉಳಿದುದನು, ಕೃತಿ=ಮಾಡಬೇಕಾದ ಕಾರ್ಯ.

ವಾಚ್ಯಾರ್ಥ: ನಿನ್ನ ಗುಣ, ಶಕ್ತಿಗಳಿಗೆ ಇರುವ ಶಕ್ತಿ ಮಿತ, ನಿನ್ನ ಕರ್ತವ್ಯವೂ ಮಿತವಾದದ್ದು. ಈ ಮಿತ ಹಾಗೂ ಅತಿಗಳ ನಡುವಿನ ಅಂತರವನ್ನು ಗುರುತಿಸುವುದು ಕಷ್ಟ. ನಿನಗೆ ಹಿತವೆನ್ನಿಸಿದಷ್ಟನ್ನು ಮಾಡು, ಉಳಿದದ್ದನ್ನು ದೈವಕ್ಕೆ ಬಿಡು. ದೈವಕ್ಕೂ ಸ್ವಲ್ಪ ಕೆಲಸವಿರಲಿ.

ವಿವರಣೆ: ಇದೊಂದು ತುಂಬ ಅರ್ಥಗರ್ಭಿತವಾದ ಚೌಪದಿ. ಪ್ರಪಂಚದಲ್ಲಿ ನಡೆಯುವ ಅನಾಹುತಗಳ ಮೂಲಕಾರಣವನ್ನು ಇದು ತಿಳಿಸುತ್ತದೆ. ಕೆಲವು ಜನ ನಾಯಕರು ತಾವು ಸರ್ವಶಕ್ತರು, ತಮ್ಮಷ್ಟು ಬುದ್ಧಿವಂತರು ಯಾರೂ ಇಲ್ಲ, ತಮ್ಮ ಶಕ್ತಿ ಸದಾ ಕಾಲ ಇರುವಂತಹದ್ದು ಎಂಬ ಭ್ರಮೆಯಲ್ಲಿ ಜಗತ್ತನ್ನೇ ಆಳಲು ಹೊರಡುತ್ತಾರೆ. ಆದರೆ ತಮ್ಮೆಲ್ಲ ಶಕ್ತಿಗೆ ಒಂದು ಮಿತಿ ಇದೆ ಎನ್ನುವುದು ಹೊಳೆಯುವುದಿಲ್ಲ. ಅವರ ವರ್ತನೆ ಅತಿಯಾಗುತ್ತದೆ. ಓಹೋ! ಅದೇನು ಮಹಾ? ಒಂದು ಕ್ಷಣದಲ್ಲಿ ಮಾಡಿಬಿಡುತ್ತೇನೆ ಎಂದು ಹಾರಾಡಿ, ಮಾಡಲಾಗದೆ ಕುಸಿದು ಕುಳಿತವರ ಸಾವಿರ ಕಥೆಗಳು ನಮ್ಮ ಮುಂದಿವೆ. ಹಿರಣ್ಯಕಶಿಪು, ರಾವಣ, ದುರ್ಯೋಧನ, ಹಿಟ್ಲರ್, ಸದ್ದಾಂ ಹುಸೇನ್ ಇವರೆಲ್ಲ ತಮ್ಮ ಸಾಮರ್ಥ್ಯದ ಮಿತಿಗಳನ್ನರಿಯದೆ, ಅತಿಯಾಗಿ ವರ್ತಿಸಿ ಪ್ರಪಂಚದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದವರು. ಆದರೆ ಎಲ್ಲರೂ ಇತಿಹಾಸದಲ್ಲಿ ಖಳನಾಯಕರಾಗಿ ಕಳೆದುಹೋದವರು. ಹಾಗಾದರೆ ಅವರಲ್ಲಿ ಶಕ್ತಿ ಇರಲಿಲ್ಲವೆ? ಇತ್ತು. ಅದು ದೊಡ್ಡ ಪ್ರಮಾಣದಲ್ಲೇ ಇತ್ತು. ಆದರೆ ಆ ಶಕ್ತಿಗೆ ಒಂದು ಮಿತಿ ಇದೆ, ಅದನ್ನು ದಾಟಿ ಹೋಗುವುದು ಸಾಧ್ಯವಿಲ್ಲ ಎಂಬ ಅರಿವಿರಲಿಲ್ಲ. ಕೆಲವೊಂದು ಸಾಧನೆಗಳು ದೊರೆತೊಡನೆ ತಾವು ಅಜೇಯ, ಅಭೇದ್ಯ ಎಂಬ ಭಾವನೆ ಬಲಿಯಿತು.

ನಹುಷ ಶಕ್ತಿವಂತ ರಾಜ. ಅವನ ಶಕ್ತಿಯನ್ನು ಗುರುತಿಸಿ ದೇವತೆಗಳೂ ಅವನನ್ನು ಇಂದ್ರ ಪದವಿಗೆ ಆಹ್ವಾನಿಸುತ್ತಾರೆ, ತಮ್ಮ ಶಕ್ತಿಗಳನ್ನೆಲ್ಲ ಧಾರೆ ಎರೆಯುತ್ತಾರೆ. ಅವರಿಂದ ಪಡೆದ ಶಕ್ತಿಗಳಿಂದ ರಾಕ್ಷಸರೊಡನೆಯ ಯುದ್ಧಗಳನ್ನು ಗೆದ್ದ ನಹುಷ, ಆ ಯಶಸ್ಸೆಲ್ಲ ಕೇವಲ ತನ್ನ ಶಕ್ತಿಯಿಂದಲೇ ದೊರಕಿದ್ದು ಎಂದು ನಂಬತೊಡಗುತ್ತಾನೆ. ಮದ ನೆತ್ತಿಗೇರಿ ಇಂದ್ರನ ಹೆಂಡತಿ ಶಚಿದೇವಿಯನ್ನು ಪಡೆಯ ಹೊರಡುತ್ತಾನೆ. ದೈವ ಮನುಷ್ಯನ ಹಾರಾಟವನ್ನು ಕೆಲಕಾಲ ಸಹಿಸಿಕೊಳ್ಳುತ್ತದೆ, ಅವನ ಶಕ್ತಿಯ ಪ್ರಕಾಶಕ್ಕೆ ಅನುವು ಮಾಡಿಕೊಡುತ್ತದೆ. ಒಮ್ಮೆ ಆತ ಮಿತಿಯನ್ನು ದಾಟಿದನೋ, ಅವನ ಬಲಿ ಹಾಕಿ ಪಾಠ ಕಲಿಸುತ್ತದೆ. ತನ್ನ ಮಿತಿಯನ್ನು ದಾಟಿ ಶಚಿದೇವಿಯನ್ನು ಅಪೇಕ್ಷಿಸಿದ ನಹುಷ ಹೆಬ್ಬಾವಾಗಿ ಕಾಡಿನಲ್ಲಿ ಸಹಸ್ರಾರು ವರ್ಷ ಬಿದ್ದು ನರಳುತ್ತಾನೆ.

ಇಂಗ್ಲೀಷಿನಲ್ಲಿ ರೀನ್‌ಹೋಲ್ಡ್ ನೀಬುರ್ (1892-1971) ಬರೆದ ‘ಸೆರೆನಿಟಿ ಪ್ರೇಯರ್’ (ಪ್ರಸನ್ನತೆಯ ಪ್ರಾರ್ಥನೆ) ಹೀಗಿದೆ. ‘ಭಗವಂತಾ, ನಾನು ಯಾವುದನ್ನು ಬದಲಿಸಲಾರೆನೋ ಅದನ್ನು ಒಪ್ಪಿಕೊಳ್ಳುವ ಪ್ರಸನ್ನತೆಯನ್ನು ಕೊಡು, ಬದಲಿಸಬಹುದಾದದ್ದನ್ನು ಮಾಡುವ ಧೈರ್ಯ ನೀಡು, ಮತ್ತು ಅವೆರಡರ ನಡುವಿನ ವ್ಯತ್ಯಾಸವನ್ನು ತಿಳಿಯುವ ಬುದ್ಧಿವಂತಿಕೆಯನ್ನು ಕೊಡು’.

ಕಗ್ಗ ಹೇಳುವುದೂ ಅದೇ. ವ್ಯಕ್ತಿಯ ಶಕ್ತಿ, ಕರ್ತವ್ಯಗಳು ಮಿತವಾದವು. ನಮ್ಮ ಮಿತಿಗಳುಅತಿಯಾಗದಂತೆ ನೋಡಿಕೊಳ್ಳುವ ಮನಸ್ಸು, ಸಾಧ್ಯವಾದದ್ದನ್ನು ಮಾಡುವ, ಆಗದ್ದನ್ನು ದೈವಕ್ಕೆ ಬಿಡುವ ಮನಸ್ಥಿತಿ ಬದುಕಿಗೆ ಅವಶ್ಯ ಮತ್ತು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT