ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಕರ್ತವ್ಯದಲ್ಲಿ ನಿರ್ಮಮತೆ

Last Updated 9 ನವೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಏನಾದೊಡೇನು? ನೀನೆಲ್ಲಿ ಪೊದೊಡಮೇನು ? |
ಪ್ರಾಣವೇಂ ಮಾನವೇನಭ್ಯುದಯವೇನು ? ||
ಮಾನವಾತೀತವೊಂದೆಲ್ಲವನು ನುಂಗುವುದು |
ಜಾನಿಸದನಾವಗಂ – ಮಂಕುತಿಮ್ಮ | 353 ||

ಪದ-ಅರ್ಥ: ಏನಾದೊಡೇನು=ಏನು+ಆದೊಡೆ+ಏನು, ಪೋದೊಡಮೇನು=ಪೋದೊಡೆ (ಹೋದರೆ)+ಏನು, ಮಾನವೇನಭ್ಯುದಯವೇನು=ಮಾನವೇನು+ಅಭ್ಯದಯವೇನು(ಅಭಿವೃದ್ಧಿ, ಗೌರವ), ಮಾನವಾತೀತವೊಂದೆಲ್ಲವನು=ಮಾನವ+ಅತೀತ(ಮೀರಿದ)+ಒಂದು+ಎಲ್ಲವನು, ಜಾನಿಸದನಾವಗಂ=ಜಾನಿಸು(ಧ್ಯಾನಿಸು)+ಅದನು+ಆವಗಂ (ಯಾವಾಗಲೂ)

ವಾಚ್ಯಾರ್ಥ: ಏನಾದರೇನು? ನೀನು ಎಲ್ಲಿ ಹೋದರೇನು? ನಿನ್ನ ಪ್ರಾಣವೇನು, ಮಾನವೇನು, ಅಭ್ಯುದಯವೇನು? ಮಾನವಶಕ್ತಿಯನ್ನು ಮೀರಿದ ಒಂದು ಶಕ್ತಿ ಇದೆಲ್ಲವನ್ನು ನುಂಗಿಬಿಡುವುದು. ಇದನ್ನು ಯಾವಾಗಲೂ ಧ್ಯಾನಿಸು.

ವಿವರಣೆ: ಈ ಕಗ್ಗದ ಸರಳ ಅರ್ಥವನ್ನು ಗಮನಿಸಿದರೆ ಮನುಷ್ಯನ ಶಕ್ತಿಗಳ ಮಿತಿ ಮತ್ತು ವಿಧಿಯ ಮುಂದೆ ಅವನ ಅಸಹಾಯಕತೆ ಎದ್ದು ಕಾಣುತ್ತದೆ. ಆದರೆ ಮತ್ತೊಂದು ದೃಷ್ಟಿಯಿಂದ ಗಮನಿಸಿದರೆ ಅದೊಂದು ಅತ್ಯಂತ ಪ್ರಯೋಜನಕಾರಿಯಾದ ಎಚ್ಚರಿಕೆ ಎಂದು ತೋರುತ್ತದೆ.

ಪ್ರತಿಯೊಬ್ಬ ಮನುಷ್ಯ ತನ್ನ ಬದುಕಿನ ಯಶಸ್ಸಿಗೆ ಕೆಲವು ಕಲ್ಪನೆಗಳನ್ನು, ಯೋಜನೆಗಳನ್ನು ಹಾಕಿಕೊಳ್ಳುತ್ತಾನೆ. ಕೆಲವರು ಹಣದ ರೂಪದಲ್ಲಿ, ಅಧಿಕಾರದ ರೂಪದಲ್ಲಿ, ಪ್ರಬಲ ಶಕ್ತಿಯ ರೂಪದಲ್ಲಿ ಮತ್ತೆ ಕೆಲವರು ಜನಮೆಚ್ಚುಗೆಯ ಭ್ರಾಂತಿಯಲ್ಲಿ ಯಶಸ್ಸನ್ನು ಕಾಣಲು ಪ್ರಯತ್ನಿಸುತ್ತಾರೆ. ಆ ಗುರಿಯನ್ನು ತಲುಪುವುದಕ್ಕಾಗಿ ಅಹರ್ನಿಶಿ ದುಡಿಯುತ್ತಾರೆ, ಎಲ್ಲೆಲ್ಲಿಯೋ ಸುತ್ತುತ್ತಾರೆ, ಯಾರದೋ ಕಾಲು ಹಿಡಿಯುತ್ತಾರೆ, ಮತ್ತಾರದೋ ತಲೆ ಒಡೆಯುತ್ತಾರೆ. ಬದುಕೆಲ್ಲ ಓಡಾಡಿ, ಹೋರಾಡಿ ತನ್ನ ಆಶಯದ ಗುರಿಯನ್ನು ತಲುಪಿದೆ ಎಂದು ಸಂಪೂರ್ಣ ತೃಪ್ತಿಯನ್ನು ಪಡೆಯುವವರು ಎಲ್ಲೋ ಕೆಲವರು ಮಾತ್ರ. ಬಹಳಷ್ಟು ಜನ ಗುರಿ ಸಾಧನೆಯ ಏರಿಕೆಯ ದಾರಿಯಲ್ಲಿ ಏದುಸಿರು ಬಿಡುತ್ತ ನಿಂತಿರುವವರೆ. ಸಾಧಕರು ಎಂದು ಜನ ಭಾವಿಸುವವರನ್ನು ಕಂಡು ನಿಮ್ಮ ಸಾಧನೆ ನಿಮಗೆ ತೃಪ್ತಿ ತಂದಿದೆಯೇ ಎಂದು ಕೇಳಿದರೆ ಅವರಲ್ಲಿ ಬಹಳಷ್ಟು ಜನ ಹೇಳುವುದು, ‘ಸಿದ್ಧಿಯಡೆಗೆ ಪ್ರಯತ್ನ ನಡೆದಿದೆ. ಗುರಿ ತಲುಪಿದ್ದೇನೆ ಎಂದು ಹೇಳಲಾರೆ’ ಎಂದು. ಸಾಧನೆಯ ಶಿಖರವನ್ನು ಹತ್ತಿ ನಿಂತವನಿಗೆ ತಾನು ಇನ್ನೂ ಮಾಡಬೇಕಾದುದು ಬಹಳಷ್ಟಿದೆ. ಇಷ್ಟಕ್ಕಾಗಿ ಇಡೀ ಬದುಕನ್ನು ಸವೆಸಿಬಿಟ್ಟೆನೇ ಎಂಬ ಪ್ರಶ್ನೆ ಮೂಡಿರಬಹುದು. ನಾವು ಏನೆಲ್ಲ ಮಾಡಿದರೂ ಕೊನೆಗೆ ನಮ್ಮೆಲ್ಲರ ಗುಣ, ಪ್ರಯತ್ನಗಳನ್ನು ಮೀರಿದ ಒಂದು ಶಕ್ತಿ ಇದೆ. ಅದು ಎಲ್ಲವನ್ನೂ ಆವರಿಸಿಕೊಂಡು ಬಿಡುತ್ತದೆ. ಎಲ್ಲ ಸಾಧನೆಗಳೂ ಒಂದಲ್ಲ ಒಂದು ದಿನ ಮರೆಯಾಗುತ್ತವೆ.

ಗುರುರಾಜ ಕರಜಗಿ

ಹಾಗಾದರೆ ನಾವು ಪ್ರಯತ್ನ ಮಾಡುವುದೇಕೆ? ರೆಕ್ಕೆ ಇರುವವರೆಗೆ ಹಾರುವುದೇ ನಮ್ಮ ಕರ್ತವ್ಯ. ಅಂತೆಯೇ ನಮ್ಮ ರೆಕ್ಕೆಯ ಶಕ್ತಿಗೂ ಮಿತಿ ಇದೆ ಎಂಬ ಅರಿವು ಧ್ಯಾನ. ಈ ಕಗ್ಗ ಸೂಚಿಸುವುದು ಅದನ್ನು. ಇಲ್ಲಿ ಅಸಹಾಯಕತೆಯಾಗಲಿ, ನಿರಾಸೆಯಾಗಲಿ ಇಲ್ಲ. ನನ್ನ ಪ್ರಯತ್ನವನ್ನು ಒಂದಿಷ್ಟು ಕೊರತೆಯಿಲ್ಲದಂತೆ ಮಾಡುತ್ತಲೇ ಇರಬೇಕು. ನನ್ನ ಪ್ರಯತ್ನಕ್ಕೆ ಒಂದು ಮಿತಿ ಇದೆ, ಅಲ್ಲಿ ಆತ್ಮವಿಶ್ವಾಸಕ್ಕೆ ಎಡೆ ಇದೆ ಆದರೆ ಅಹಂಕಾರಕ್ಕೆ ಇಲ್ಲ. ಈ ಧ್ಯಾನ ನನ್ನ ಮನದಲ್ಲಿ ಸದಾ ಕಾಲ ಇದ್ದರೆ ಕರ್ತವ್ಯದಲ್ಲಿ ನಿರ್ಮಮತೆಗೆ ಅವಕಾಶವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT