ಶನಿವಾರ, ಜನವರಿ 18, 2020
26 °C

ಸಮಸ್ಯೆಯ ಮಡಿಲಲ್ಲೇ ಪರಿಹಾರ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

gururaja karjagi

ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಹಿಮಾಲಯದಲ್ಲಿ ಋಷಿ ಪ್ರವೃಜ್ಯ ಸ್ವೀಕರಿಸಿ ತಪೋಮಗ್ನನಾಗಿದ್ದ. ಆಗ ದಿನವೂ ಸರೋವರಕ್ಕೆ ಸ್ನಾನಕ್ಕಾಗಿ ಹೋಗುತ್ತಿದ್ದ. ಅಲ್ಲಿ ಅನೇಕ ಕಮಲಗಳು ಅರಳಿದ್ದವು. ಒಂದು ಕಮಲದಲ್ಲಿ ತಾನು ಮಾಡಿದ ಯಾವುದೋ ತಪ್ಪಿಗಾಗಿ ಮೂವತ್ಮೂರನೇ ಸ್ವರ್ಗದ ದೇವತೆಯೊಬ್ಬಳು ಕೆಳಗಿಳಿದು ಬಂದು ಕಮಲದಲ್ಲಿ ಜನಿಸಿದ್ದಳು. ತಪಸ್ವಿ ಆ ಕಮಲದ ದಳಗಳನ್ನು ಬಿಡಿಸಿದಾಗ ಮಗು ಕಾಣಿಸಿತು. ಬೋಧಿಸತ್ವ ಆಕೆಯನ್ನು ಮಗಳೆಂದು ಸ್ವೀಕರಿಸಿ ಪಾಲನೆ– ಪೋಷಣೆ ಮಾಡಿದ. ಕಮಲದಲ್ಲೇನಿದೆ ಎಂಬ ಅಶಂಕೆಯಿಂದ ಅದನ್ನು ತಂದಿದ್ದರಿಂದ ಆಕೆಗೆ ಆಶಂಕಾಕುಮಾರಿ ಎಂದು ಹೆಸರಿಟ್ಟಿದ್ದ.

ಆಕೆಗೆ ಹದಿನಾರು ವರ್ಷವಾದಾಗ ಆಕೆ ಅತ್ಯಂತ ರೂಪವತಿಯಾಗಿ, ಗುಣವತಿಯಾಗಿದ್ದಳು. ಇಂದ್ರ ಬೋಧಿಸತ್ವನ ಸೇವೆಗೆ ಬರುತ್ತಿದ್ದವನು, ಆಕೆಗೆ ಏನಾದರೂ ಬೇಕಾದರೆ ಹೇಳು ಎಂದು ಬೋಧಿಸತ್ವನಿಗೆ ಕೇಳಿದ. ಆಗ ಆತ ಈ ಹೆಣ್ಣುಮಗುವಿನ ರಕ್ಷಣೆಗೆ ಒಂದು ಸ್ಫಟಿಕದ ಭವನವನ್ನು ನಿರ್ಮಿಸು ಎಂದು ಹೇಳಿದ. ಆತ ಅತ್ಯಂತ ಭವ್ಯವಾದ ಸರ್ವಸವಲತ್ತುಗಳನ್ನು ಹೊಂದಿದ ಸ್ಫಟಿಕಭವನವನ್ನು ನಿರ್ಮಿಸಿದ. ಅದು ಆಕಾಶದಲ್ಲೇ ಸುತ್ತುತ್ತಾ ನಿಂತಿತ್ತು.

ಒಂದು ದಿನ ಕಾಡು ಮನುಷ್ಯನೊಬ್ಬ ಆಕೆಯನ್ನು ನೋಡಿ, ರಾಜನ ಬಳಿ ಹೋಗಿ ಈ ವಿಷಯವನ್ನು ವರ್ಣಿಸಿ ಹೇಳಿದ. ಆ ಮಾತನ್ನು ಕೇಳಿದ ರಾಜನಿಗೆ ಆಕೆಯನ್ನು ಪಡೆಯಬೇಕೆಂಬ ಉತ್ಕಟತೆ ಉಂಟಾಯಿತು. ನೇರವಾಗಿ ಬಂದು ಬೋಧಿಸತ್ವನನ್ನು ಕೇಳಿದ. ಅದಕ್ಕೆ ಬೋಧಿಸತ್ವ, ‘ಆ ಹುಡುಗಿಯ ಹೆಸರನ್ನು ಹೇಳಿ ಕರೆದುಕೊಂಡು ಹೋಗು’ ಎಂದ. ರಾಜ ಮಂತ್ರಿಗಳೊಡನೆ ಒಂದು ವರ್ಷ ಸಮಾಲೋಚನೆ ನಡೆಸಿ ನೂರಾರು ಹೆಸರುಗಳನ್ನು ಪಟ್ಟಿ ಮಾಡಿ ಬೋಧಿಸತ್ವನಿಗೆ ಹೇಳಿದ. ‘ಇವು ಯಾವವೂ ಆಕೆಯ ಹೆಸರಲ್ಲ’ ಎಂದುಬಿಟ್ಟ ಬೋಧಿಸತ್ವ. ರಾಜ ದುಃಖದಿಂದ ಹೊರಟು ಬಿಟ್ಟಾಗ ಸ್ಫಟಿಕಭವನದಿಂದ ಆ ಹುಡುಗಿ ಕಾಣಿಸಿಕೊಂಡು, ‘ನಿರಾಸೆಪಡಬೇಡಿ, ಪ್ರಯತ್ನ ಮಾಡಿ. ದೇವತೆಗಳ ಲೋಕದಲ್ಲಿ, ಚಿತ್ರಲತಾವನದಲ್ಲಿ, ಆಶಾವತಿ ಎಂಬ ಬಳ್ಳಿ ಇದೆ. ಅದರಲ್ಲಿ ಸಾವಿರ ವರ್ಷಕ್ಕೊಂದು ಹಣ್ಣು ಬಿಡುತ್ತದೆ. ಅದರ ರಸವನ್ನು ಕುಡಿದ ದೇವತೆಗಳು ನಾಲ್ಕು ತಿಂಗಳು ಮಲಗಿಬಿಡುತ್ತಾರೆ. ಅವರು ಹಣ್ಣಿಗೆ ಸಾವಿರ ವರ್ಷ ಕಾಯುತ್ತಾರೆ. ನೀನು ಒಂದೇ ವರ್ಷಕ್ಕೆ ನಿರಾಶನಾದರೆ ಹೇಗೆ?’ ಎಂದು ಕೇಳಿದಳು.

ಆತ ಮತ್ತೊಂದು ವರ್ಷ ಮಂತ್ರಿಗಳೊಡನೆ ಸಮಾಲೋಚನೆ ಮಾಡಿ ಮತ್ತೆ ನೂರು ಹೆಸರುಗಳನ್ನು ಪಟ್ಟಿ ಮಾಡಿ ಬೋಧಿಸತ್ವನಿಗೆ ಒಪ್ಪಿಸಿದ. ಅವು ಯಾವವೂ ಸರಿಯಲ್ಲ ಎಂದು ಆತ ನಿರಾಕರಿಸಿಬಿಟ್ಟ. ಈ ಬಾರಿ ಮತ್ತಷ್ಟು ನಿರಾಸೆಯಿಂದ ಹೊರಟಬಿಟ್ಟ ರಾಜನಿಗೆ ಮತ್ತೆ ಆ ಹುಡುಗಿ ಕಾಣಿಸಿಕೊಂಡು, ‘ನಿರಾಸೆ ಬೇಡ, ಇನ್ನಷ್ಟು ಪ್ರಯತ್ನಮಾಡು. ಒಂದು ಬಕಪಕ್ಷಿ ಹಿಮಾಲಯದ ಶಿಖರದ ಮೇಲೆ ಕುಳಿತಿತ್ತು. ಅದು ನಾನು ಕೆಳಗಿಳಿಯದೆ ಇಲ್ಲಿಯೇ ಕುಳಿತು ಮೀನು ತಿನ್ನಬೇಕು ಎಂದು ತೀರ್ಮಾನಿಸಿ ಕುಳಿತಿತು. ನೂರು ವರ್ಷ ಕಳೆದವು. ಒಂದು ಬಾರಿ ಇಂದ್ರ ರಾಕ್ಷಸರನ್ನೆಲ್ಲ ಸೋಲಿಸಿ, ಅದರ ವಿಜಯೋತ್ಸವಕ್ಕಾಗಿ ಸಕಲ ಪ್ರಾಣಿಗಳ ಅಪೇಕ್ಷೆಯನ್ನು ಪೂರೈಸುತ್ತೇನೆ ಎಂದುಕೊಂಡು, ಈ ಬಕಪಕ್ಷಿಗಾಗಿ ನದಿಯ ಪ್ರವಾಹವನ್ನು ಶಿಖರದವರೆಗೆ ಏರಿಸಿದ. ಬಕಪಕ್ಷಿ ಅಲ್ಲಿಯೇ ಕುಳಿತು ಮೀನು ಹಿಡಿದು ತಿಂದಿತು. ಅದರ ಅಂತಹ ಅಪೇಕ್ಷೆಯೇ ಪೂರೈಸಿದ್ದಾಗ ನಿನ್ನದೇಕೆ ಪೂರೈಸುವುದಿಲ್ಲ, ಪ್ರಯತ್ನಿಸು’ ಎಂದಳು.

ಆಗ ರಾಜ ಹೇಳಿದ, ‘ನಿನ್ನ ಹೆಸರು ಹುಡುಕುವುದಕ್ಕೆ ರಾಜ್ಯವನ್ನು ಬಿಟ್ಟು ಇಲ್ಲಿ ಎರಡು ವರ್ಷ ಕುಳಿತಿದ್ದೇನೆ. ನೀನು ಬರೀ ಮಾತಿನಿಂದ ನನಗೆ ಸಂತೋಷ ನೀಡುತ್ತಿದ್ದೀ, ಹೆಸರನ್ನು ಹೇಳುತ್ತಿಲ್ಲ, ನಿನ್ನ ತಂದೆಯೂ ಹೇಳುತ್ತಿಲ್ಲ. ನನ್ನ ದೇಹ ಕ್ಷೀಣವಾಗಿ ಪ್ರಾಣವೇ ಹೋಗಿಬಿಡುವ ಆಶಂಕೆಯಾಗಿದೆ. ನಿನಗೆ ಹೆಸರಾದರೂ ಇದೆಯೋ ಇಲ್ಲವೋ ಎಂಬ ಆಶಂಕೆಯೂ ಅಗಿದೆ’. ತಕ್ಷಣ ಆಕೆ, ‘ಈಗ ನನ್ನ ಹೆಸರನ್ನೇ ಎರಡು ಬಾರಿ ಹೇಳಿದೆಯಲ್ಲ. ಅದನ್ನೇ ತಂದೆಗೆ ಹೇಳಿ ನನ್ನನ್ನು ಕರೆದುಕೊಂಡು ಹೋಗು’ ಎಂದಳು. ರಾಜ ಅಂತೆಯೇ ಮಾಡಿ ಅವಳನ್ನು ಕರೆದೊಯ್ದ.

ಅತ್ಯಂತ ನಿರಾಸೆಯ ಮಡುವಿನಲ್ಲಿಯೇ ಪರಿಹಾರದ ರತ್ನ ಅಡಗಿರುತ್ತದೆ. ಸಮಸ್ಯೆಯ ಮಡಿಲಲ್ಲೇ ಅದರಿಂದ ಬಿಡುಗಡೆಯ ಸೂತ್ರವೂ ಅವಿತಿರುತ್ತದೆ. ಸ್ವಲ್ಪ ತಾಳ್ಮೆಯ, ವಿವೇಕದ ಪ್ರಯತ್ನ ಅದರ ದಾರಿಯನ್ನು ತೋರುತ್ತದೆ.

 

ಪ್ರತಿಕ್ರಿಯಿಸಿ (+)