ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತ್ರತ್ವ

Last Updated 7 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಣಾಸಿಯಲ್ಲಿ ರಾಜ್ಯಭಾರ ಮಾಡುವಾಗ ಬೋಧಿಸತ್ವ ಸಿಂಹವಾಗಿ ಹುಟ್ಟಿ ಪರ್ವತದ ಗುಹೆಯಲ್ಲಿ ವಾಸವಾಗಿದ್ದ. ಒಂದು ದಿನ ಬೇಟೆಯಾಡಲು ಹೊರಟಾಗ ಬಯಲು ಪ್ರದೇಶದಲ್ಲಿ ಮೊಲಗಳು, ಜಿಂಕೆಗಳು ಆರಾಮವಾಗಿ ಹಸಿರುಹುಲ್ಲು ತಿನ್ನುತ್ತ ಓಡಾಡುತ್ತಿರುವುದನ್ನು ಕಂಡಿತು. ಮೊದಲು ಆ ಪ್ರದೇಶ ಕೆರೆಯಾಗಿತ್ತು. ನೀರು ಒಣಗಿದ್ದರಿಂದ ಕೆಸರಿನ ಹೊಂಡವಾಗಿದ್ದರೂ ಮೇಲೆ ಹುಲ್ಲು ಬೆಳೆದು ಮೈದಾನದಂತೆ ಕಾಣುತ್ತಿತ್ತು. ಹಗುರಾದ ಪ್ರಾಣಿಗಳು ಅದರ ಮೇಲೆ ಓಡಾಡಿಕೊಂಡಿದ್ದವು. ಅದನ್ನರಿಯದ ಸಿಂಹ ಜಿಂಕೆಯನ್ನು ಹೊಡೆಯಲು ಹಾರಿತು. ಜಿಂಕೆ ಭಯದಿಂದ ಓಡಿ ಹೋಯಿತು. ಆದರೆ, ಸಿಂಹ ಕೆಸರಿನ ಹೊಂಡದಲ್ಲಿ ಸಿಕ್ಕಿ ಬಿದ್ದಿತು. ಅದರ ನಾಲ್ಕು ಕಾಲುಗಳೂ ಆಳಕ್ಕಿಳಿದು ಕಂಭದಂತಾದವು. ನಾಲ್ಕೈದು ದಿನ ಸಿಂಹ ಪಾರಾಗಲು ಅವಕಾಶವಿಲ್ಲದೆ ಉಪವಾಸ ನಿಂತುಬಿಟ್ಟಿತು.

ಆಗ ಅಲ್ಲಿಗೆ ನರಿ ಬಂದಿತು. ಸಿಂಹವನ್ನು ಕಂಡು ಭಯದಿಂದ ಓಡಿಹೋಗುತ್ತಿದ್ದಾಗ ಸಿಂಹ ಅದನ್ನು ಕರೆದು ಸಹಾಯ ಯಾಚಿಸಿತು. ನರಿ ಬುದ್ಧಿಜೀವಿ. ಸಮಸ್ಯೆಯಿಂದ ಹೊರಬಂದರೆ ತನ್ನ ಪ್ರಾಣಕ್ಕೆ ತೊಂದರೆ ಮಾಡುವುದಿಲ್ಲ ಎಂದು ಮಾತು ಪಡೆದು ಸಹಾಯಕ್ಕೆ ಮುಂದಾಯಿತು. ತನ್ನ ಕಾಲುಗಳಿಂದ ಕೆದರಿ, ಕೆದರಿ ಸಿಂಹದ ಕಾಲುಗಳ ಕಡೆಗೆ ನೀರು ಬರುವಂತೆ ಕಾಲುವೆ ಮಾಡಿತು. ಆಗ ಕೆಸರು ಸಡಿಲವಾಗಿ, ಸಿಂಹದ ಕಾಲುಗಳು ಸ್ವಲ್ಪ ಬಿಡುಗಡೆಯಾದವು.

ನರಿ ಹೇಳಿತು, ‘‘ರಾಜಾ ಇದೇ ಸಮಯ, ಶಕ್ತಿ ಹಾಕಿ ಹೊರಗೆ ಬಂದುಬಿಡು’’. ಅದರಂತೆಯೇ ಹೂಂಕಾರ ಮಾಡಿ, ಶಕ್ತಿಯಿಂದ ತಳ್ಳಿ ಕೆಸರಿನಿಂದ ಪಾರಾಗಿ ಬಂದಿತು. ಬೇರೆ ಕೊಳದಲ್ಲಿ ಸ್ನಾನ ಮಾಡಿ ಬಂದಿತು. ನಂತರ ನರಿಗೆ ಕೃತಜ್ಞತೆ ಹೇಳಿ ಅದನ್ನು ಮತ್ತು ಅದರ ಪರಿವಾರವನ್ನು ತನ್ನ ಜತೆಗೆ ಕರೆದೊಯ್ದು ತನ್ನ ಗುಹೆಯ ಪಕ್ಕದಲ್ಲಿದ್ದ ಗುಹೆಯಲ್ಲಿ ಇರಲು ವ್ಯವಸ್ಥೆ ಮಾಡಿತು.
ಮರುದಿನದಿಂದ ನರಿಯನ್ನು ತನ್ನ ಜತೆಗೆ ಬೇಟೆಗೆ ಕರೆದೊಯ್ದಿತು. ದೊಡ್ಡ ಮೃಗಗಳನ್ನು ಬೇಟೆಯಾಡಿ ತಾವಿಬ್ಬರೂ ಹೊಟ್ಟೆ ತುಂಬ ತಿಂದು ತಮ್ಮ ತಮ್ಮ ಪರಿವಾರಕ್ಕೆ ಹೊತ್ತು ತರುತ್ತಿದ್ದವು. ಕೆಲದಿನ ಈ ವ್ಯವಸ್ಥೆ ಚೆನ್ನಾಗಿ ನಡೆದು ಸಿಂಹ ಮತ್ತು ನರಿಗಳ ಪರಿವಾರಗಳೆರಡೂ ಸುಖಿಯಾಗಿದ್ದವು. ಸಿಂಹಿಣಿಗೆ ಸಂಶಯ ಪ್ರಾರಂಭವಾಯಿತು. ಸಿಂಹಕ್ಕೆ ನರಿಯ ಜೊತೆಗೆ ಸ್ನೇಹವೆಂದರೇನು? ಏನೋ ಒಳಗುಟ್ಟಿರಬೇಕು. ಬಹುಶ: ನನ್ನ ಗಂಡ ಸಿಂಹಕ್ಕೆ ಹೆಣ್ಣು ನರಿಯೊಡನೆ ಸಂಬಂಧವಿರಬೇಕು. ಆದ್ದರಿಂದ, ಏನಾದರೂ ಮಾಡಿ ಈ ನರಿ ಸಂಸಾರವನ್ನು ಇಲ್ಲಿಂದ ಓಡಿಸಬೇಕು ಎಂದು ಯೋಜನೆ ಮಾಡತೊಡಗಿತು. ಮರುದಿನದಿಂದ ಸಿಂಹ ಮತ್ತು ನರಿ ಬೇಟೆಗೆ ಹೋದಾಗ ಸಿಂಹಿಣಿ ಹೆಣ್ಣುನರಿಯ ಬಳಿಗೆ ಹೋಗಿ, “ನೀವೇಕೆ ಇಲ್ಲಿದ್ದೀರಿ? ಸಿಂಹದ ಜತೆಗೆ ಸ್ನೇಹವೆಂದರೆ ಹುಡುಗಾಟವೇ? ಅದು ಹಾವಿನ ಹೆಡೆಯ ಕೆಳಗಿನ ಬದುಕು. ಬೇಗ ಓಡಿಹೋಗಿ ಬದುಕಿಕೊಳ್ಳಿ” ಎನ್ನುತ್ತಿತ್ತು. ಇದು ನರಿಯ ಪರಿವಾರಕ್ಕೆ ಹೆದರಿಕೆ ಹುಟ್ಟಿಸಿತು. ಬಳಿಕ, ಹೆಣ್ಣು ನರಿ ಗಂಡನಿಗೆ ಹೇಳಿತು, “ನಾವು ಇಲ್ಲಿರುವುದು ಸಿಂಹಿಣಿಗೆ ಇಷ್ಟವಿಲ್ಲ. ನಮ್ಮನ್ನು ಹೆದರಿಸುತ್ತಿದೆ. ಇಲ್ಲಿಂದ ಹೊರಟು ಹೋಗೋಣ”.
ನರಿ ಸಿಂಹದ ಬಳಿಗೆ ಬಂದು, “ಮಹಾರಾಜಾ, ನಾವು ಇಲ್ಲಿಗೆ ಬಹಳ ಕಾಲವಾಯಿತು. ತಮ್ಮ ಔದಾರ್ಯವನ್ನು ದುರುಪಯೋಗ ಮಾಡಿಕೊಳ್ಳಬಾರದು. ಸಿಂಹಿಣಿಗೆ ನಾವಿರುವುದು ಇಷ್ಟವಿಲ್ಲದೆ ಹೆದರಿಸುತ್ತಿದ್ದಾರೆ. ನಾವು ಇಲ್ಲಿಂದ ಹೋಗುತ್ತೇವೆ” ಎಂದಿತು. ಆಗ ಸಿಂಹ, ಪ್ರಾಣದಾನ ಮಾಡಿದ ಮಿತ್ರ ದುರ್ಬಲನಲ್ಲ. ನಾನು ಮಿತ್ರಧರ್ಮವನ್ನು ಪಾಲಿಸಬೇಕು. ನೀನು ಅವನ ಪರಿವಾರಕ್ಕೆ ಅಪಮಾನ ಮಾಡಕೂಡದು ಎಂದು ಹೇಳಿತು. ಅಂದಿನಿಂದ ಎರಡೂ ಪರಿವಾರಗಳು ಜೊತೆಗೇ ಸಂತೋಷದಿಂದ ಬದುಕಿದವು.
ಮಿತ್ರತ್ವ ಗಟ್ಟಿಯಾಗಿದ್ದಾಗ ಮಿತ್ರ ದುರ್ಬಲನಾಗಿದ್ದರೂ ಅವನೇ ಬಂಧು, ಮಿತ್ರನಾಗುತ್ತಾನೆ. ಅಲ್ಲಿ ಅಂತಸ್ತಿನ ಅಂತರಗಳು ಬರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT