ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಏಕಾಂಗಿ ಸಹವಾಸಿ

Last Updated 28 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಬೇಕು ಜೀವನಯೋಗಕೊಂದು ಬಹುಸೂಕ್ಷ್ಮ ನಯ|
ಬೇಕೊಂದು ಜಾಗರೂಕತೆ, ಬುದ್ಧಿ ಸಮತೆ ||
ತಾಕನೊಂದನು ಯೋಗಿ, ನೂಕನೊಂದನು ಜಗದಿ |
ಏಕಾಕಿ ಸಹವಾಸಿ - ಮಂಕುತಿಮ್ಮ || 703 ||

ಪದ-ಅರ್ಥ: ಜೀವನಯೋಗಕೊಂದು=ಜೀವನಯೋಗಕೆ+ಒಂದು, ತಾಕನೊಂದನು=ತಾಕನು+ಒಂದನು, ನೂಕನೊಂದನು=ನೂಕನು+ಒಂದನು

ವಾಚ್ಯಾರ್ಥ: ಜೀವನವೆನ್ನುವ ಯೋಗಕ್ಕೆ ಒಂದು ಸೂಕ್ಷ್ಮ ಒಂದು ನಯ, ಜಾಗರೂಕತೆ, ಬುದ್ಧಿ, ಸಮತೆ ಇವೆಲ್ಲ ಬೇಕು. ಯೋಗಿಯಾದವನು ಯಾವುದನ್ನೂ ಸ್ವಿಕರಿಸುವುದಿಲ್ಲ ಆದರೆ ಯಾವ ಕರ್ತವ್ಯವನ್ನೂ ತೊರೆಯುವುದಿಲ್ಲ. ಅವನು ತನಗೆ ಮಾತ್ರ ಸಂಗಾತಿ.

ವಿವರಣೆ: ಸಂಸ್ಕೃತದ ‘ಯುಜ್’ ಧಾತುವಿನಿಂದಾದ ‘ಯೋಗ’ದ ಪದಶಃ ಅರ್ಥ ‘ಒಂದುಗೂಡಿಸುವುದು’. ಪತಂಜಲಿ ಮಹರ್ಷಿಗಳು
ಯೋಗವನ್ನು ‘ಚಿತ್ತವೃತ್ತಿ ನಿರೋಧ’ ಎಂದರು. ಮನಸ್ಸಿನ ಹಾರಾಟವನ್ನು ಬಿಗಿಹಿಡಿದು ಅದನ್ನು ಆತ್ಮಸಾಕ್ಷಾತ್ಕಾರದೆಡೆಗೆ ತಿರುಗಿಸುವುದೇ ಯೋಗ. ಮಾಡುವ ಸಕಲ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಬಲ್ಲ ಕುಶಲತೆಯೇ ಯೋಗ ಎನ್ನುತ್ತದೆ ಭಗವದ್ಗೀತೆ. ಹಾಗಾದರೆ ಜೀವನ ಯೋಗ ಎಂದರೇನು? ಅದು ಯಾವುದನ್ನು, ಯಾವುದರೊಂದಿಗೆ ಜೋಡಿಸುತ್ತದೆ? ವ್ಯಕ್ತಿಯನ್ನು ದೈವದೊಡನೆ, ಜೀವಾತ್ಮನನ್ನು ಪರಮಾತ್ಮನೊಂದಿಗೆ ಜೋಡಿಸುವುದು ಜೀವನಯೋಗ. ಒಂದು ಜೀವ ತಾನು ಏಕಾಂಗಿಯಲ್ಲ, ತಾನು ಮಹಾನ್ ಪರತತ್ವದ ಒಂದಂಶ ಎಂದು ತಿಳಿದು ಅದರೊಡನೆ ಅನುಸಂಧಾನ ಮಾಡುವುದು ಜೀವನಕಲೆ, ಜೀವನ ಯೋಗ. ಈ ಜೀವನಯೋಗ ಸಾಧನೆಗೆ ಅನೇಕ ಮುಖಗಳು. ಎಲ್ಲಕ್ಕೂ ಮುಖ್ಯವಾದದ್ದು ಮನಸ್ಸು. ದೇಹ ಹುಟ್ಟಿದಂದೇ ಮನಸ್ಸೂ ಹುಟ್ಟಿತು. ದೇಹಕ್ಕೆ ವಯಸ್ಸಾಗುತ್ತದೆ, ಮನಸ್ಸಿಗೆ ಮುಪ್ಪಾಗುವುದಿಲ್ಲ. ಅದರ ಆಸೆಗಳು ಮುಗಿಯುವುದಿಲ್ಲ. ಮನಸ್ಸಿನಂತೆ ಇಂದ್ರಿಯಗಳು ಕುಣಿಯುತ್ತವೆ. ಮನಸ್ಸಿಲ್ಲದಿದ್ದರೆ ಕಣ್ಣು ಕಾಣದು, ಕಿವಿ ಕೇಳದು, ನಾಲಿಗೆಗೆ ರುಚಿ ತಿಳಿಯದು.

ಇಂದ್ರಿಯಗಳು ಜಡವಾಗುತ್ತವೆ. ಮನಸ್ಸನ್ನು ಸದಾಕಾಲ ಸದಾಚಾರದ ಮಾರ್ಗದಲ್ಲಿ ನಡೆಯುವಂತೆ ಮಾಡುವುದು ಒಂದು ಸೂಕ್ಷ್ಮವಾದ, ನಯವಾದ ಕಾರ್ಯ. ಒಂದು ಚೂರು ಜಾಗರೂಕತೆಯನ್ನು ತಪ್ಪಿದರೂ ಬದುಕಿನ ಸ್ಥಿತಿ ಡೋಲಾಯಮಾನವಾಗುತ್ತದೆ. ಸೀತೆಯ ಒಂದು ಕ್ಷಣದ ಆಕರ್ಷಣೆಯ ಆಸೆ, ಬದುಕಿನ ದಿಕ್ಕನ್ನೇ ಬದಲಿಸಿತು. ತಂದೆ ಶಂತನುವಿನ ಅಪೇಕ್ಷೆ ಮಗ ಭೀಷ್ಮನ ಜೀವನವನ್ನು ಬೇರೆಡೆಗೆ ತಿರುಗಿಸಿಬಿಟ್ಟಿತು. ಅದಕ್ಕೇ ಜೀವನಯೋಗದಲ್ಲಿ ಬುದ್ಧಿಯ ಸ್ಥಿರತೆ, ಸಮತ್ವತೆ ಬಹು ಮುಖ್ಯ.

ಹಾಗಾದರೆ ಯೋಗಿ ಹೇಗಿರುತ್ತಾನೆ? ಜಗತ್ತನ್ನು ತೊರೆದು ಏಕಾಂಗಿಯಾಗಿರುತ್ತಾನೆಯೇ? ಕಗ್ಗ ಹೇಳುತ್ತದೆ, ಯೋಗಿ ಪ್ರಪಂಚದ ಯಾವುದನ್ನೂ ತೊರೆಯುವುದಿಲ್ಲ, ಎಲ್ಲದರಲ್ಲೂ ಭಾಗಿಯಾಗುತ್ತಾನೆ, ಜನರ ಸುಖದಲ್ಲಿ ಸಂತೋಷಪಡುತ್ತಾನೆ, ಅವರ ಕಷ್ಟಗಳಿಗೆ ದುಃಖಿಸುತ್ತಾನೆ. ಆದರೆ ಯಾವುದೂ ತನಗಾಗಿಯಲ್ಲ. ಯಾವುದನ್ನೂ ತನ್ನ ಬದುಕಿಗೆ ಅಂಟಿಸಿಕೊಳ್ಳುವುದಿಲ್ಲ. ಅವನು ಯಾರ ಸಹವಾಸವನ್ನು ಬೇಡುವುದಿಲ್ಲ. ಅವನಿಗೆ ಅವನೇ ಜೊತೆಗಾರ ಅದಕ್ಕೇ ಅವನನ್ನು ‘ಏಕಾಕಿ ಸಹವಾಸಿ’ ಎಂದು ಕಗ್ಗ ಕರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT