ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಕೈವಲ್ಯ ದೃಷ್ಟಿ

Last Updated 11 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಆ ವಿಶ್ವರೂಪ ಸಂದರ್ಶನದಿ ಹೊಂದಿಹುವು |‌
ಜೀವ ನಿರ್ಜೀವಗಳು, ಕ್ರಮ ಯದೃಚ್ಛೆಗಳು ||
ಆವಶ್ಯ ವಶ್ಯ; ಸ್ವಾಚ್ಛಂಧ್ಯ ನಿರ್ಬಂಧಗಳು |
ಕೈವಲ್ಯ ದೃಷ್ಟಿಯದು – ಮಂಕುತಿಮ್ಮ || 322 ||

ಪದ-ಅರ್ಥ: ಸಂದರ್ಶನ=ವಿಶೇಷ ದರ್ಶನ, ಯದೃಚ್ಛೆ=ಆಕಸ್ಮಿಕ, ಆವಶ್ಯ=ನಮ್ಮ ವಶದಲ್ಲಿ ಇಲ್ಲದ್ದು, ವಶ್ಯ=ನಮ್ಮ ವಶದಲ್ಲಿ ಇದ್ದದ್ದು,
ಸ್ವಾಚ್ಛಂದ್ಯ=ಸ್ವಚ್ಛಂದವಾಗಿರುವುದು, ನಿರ್ಬಂಧ=
ಸ್ವಾತಂತ್ರ್ಯವಿಲ್ಲದಿರುವುದು, ಕೈವಲ್ಯದೃಷ್ಟಿ=
ಮುಕ್ತಿಯ ದೃಷ್ಟಿ, ಶುದ್ಧಜ್ಞಾನದ ದೃಷ್ಟಿ.

ವಾಚ್ಯಾರ್ಥ: ಆ ಮಹಾನ್ ವಿಶ್ವರೂಪವನ್ನು ಕಂಡಾಗ ಸಜೀವ ಮತ್ತು ನಿರ್ಜೀವ ವಸ್ತುಗಳು, ವ್ಯವಸ್ಥಿತಗಳು ಮತ್ತು ಆಕಸ್ಮಿಕಗಳು, ನಮ್ಮ ವಶದಲ್ಲಿ ಇರುವಂಥವುಗಳು ಮತ್ತು ವಶದಲ್ಲಿ ಇರದಿದ್ದವುಗಳು, ಸ್ವತಂತ್ರವಾಗಿರುವವು ಮತ್ತು ನಿರ್ಬಂಧದಲ್ಲಿರುವವು ಎಲ್ಲವೂ ಒಂದೇ ಆಗಿವೆ. ಅದೇ ಶುದ್ಧಜ್ಞಾನದ, ಮುಕ್ತಿಯ ದೃಷ್ಟಿ.

ವಿವರಣೆ: ಇದೊಂದು ಅದ್ಭುತ ದರ್ಶನದ ವರ್ಣನೆ. ಕಗ್ಗದ ನಾಲ್ಕನೇ ಸಾಲಿನಲ್ಲಿ ಬರುವ ಕೈವಲ್ಯದೃಷ್ಟಿ ಈ ಕಗ್ಗದ ಮೂಲಸತ್ವ. ಸಾಂಖ್ಯದರ್ಶನದ ಪ್ರಕಾರ ಪುರುಷನು ಪ್ರಕೃತಿಯ ಸಂಪರ್ಕವನ್ನು ಪೂರ್ತಿಯಾಗಿ ಕಳೆದುಕೊಳ್ಳುವುದು ಮೋಕ್ಷ. ಪ್ರಕೃತಿಯ ಸಂಬಂಧದಿಂದಾಗಿ, ನಾನು, ನನ್ನದು ಎಂಬ ಭಾವಗಳು ಬಲಿತು ದುಃಖ ಬರುತ್ತದೆ. ಪ್ರಕೃತಿಯ ಬಂಧದಿಂದ ಪಾರಾಗಿ ಹೊರ ಬರುವುದು ಕೈವಲ್ಯಕ್ಕೆ ದಾರಿ. ಈ ಕೈವಲ್ಯ ಮನುಷ್ಯ ಜೀವಿಯ ನಿಜಸ್ವರೂಪ ಸ್ಥಿತಿ. ಆ ಸ್ಥಿತಿಯಲ್ಲಿ ದುಃಖದ ಲವಲೇಶವೂ ಇಲ್ಲ. ಅಲ್ಲಿ ಆನಂದವೂ ಇಲ್ಲ. ಅದರಿಂದ ಯೋಗದರ್ಶನವೂ ಸಾಂಖ್ಯದ ಮಾತನ್ನು ಒಪ್ಪುತ್ತದೆ. ಯಾವ ವಸ್ತುವನ್ನು ಕುರಿತು ಧ್ಯಾನ ಮಾಡುತ್ತೇವೊ ಅದರಲ್ಲೇ ಮನಸ್ಸು ಸಂಪೂರ್ಣ ಲೀನವಾದರೆ ಅದನ್ನು ಸಂಪ್ರಜ್ಞಾತ ಸಮಾಧಿ ಎನ್ನುತ್ತಾರೆ. ಅದೇ ಕೈವಲ್ಯ ಸ್ಥಿತಿ. ವಿಶುದ್ಧ ಚೈತನ್ಯವೂ ತಾನೇ ತಾನಾಗಿರುವ ಸ್ಥಿತಿ. ಇದು ಯೋಗದ ಗುರಿ. ಇದಕ್ಕೆ ಯಮ, ನಿಮಯಾದಿಗಳು ಸಾಧನಗಳು.

ಆ ಕೈವಲ್ಯದೃಷ್ಟಿಯಿಂದ ಕಂಡಾಗ ನಮಗೆ ದೃಶ್ಯಪ್ರಪಂಚವೇ ಕಾಣಲಾರದು. ಅದೊಂದು ವಿಶ್ವರೂಪದರ್ಶನ. ಆ ದರ್ಶನದಲ್ಲಿ ಜೀವ, ನಿರ್ಜೀವಗಳ ನಡುವೆ ವ್ಯತ್ಯಾಸವೇ ಇಲ್ಲ. ಯಾಕೆಂದರೆ ಇಂದು ಜೀವಿತವಾದದ್ದು ಮತ್ತೊಂದು ಕ್ಷಣಕ್ಕೆ ಮೃತವಾಗುತ್ತದೆ. ಅದು ಮೃತವಾಯಿತು ಎಂದು ನೋಡುವುದರಲ್ಲಿ ಅದಕ್ಕೆ ಮತ್ತೊಂದು ಜನ್ಮದಲ್ಲಿ ಜೀವ ಬಂದೀತು. ಹಾಗಾದರೆ ಸಾವು, ಬದುಕುಗಳು ಒಂದೇ ನಾಣ್ಯದ ಎರಡು ಮುಖಗಳು. ಅವೆರಡೂ ಒಂದೇ. ಇದೇ ರೀತಿ ವ್ಯವಸ್ಥೆಗಳು, ಆಕಸ್ಮಿಕಗಳು ಕೂಡ ಭಿನ್ನ ಎನ್ನಿಸಲಾರವು.

ಬದುಕು ಒಂದು ವ್ಯವಸ್ಥೆ ಎಂದು ನಂಬಿದ್ದೇವೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಹುಟ್ಟೇ ಆಕಸ್ಮಿಕವಲ್ಲವೆ? ಅಲ್ಲಿ ಯಾವ ವ್ಯವಸ್ಥೆ ಶಾಶ್ವತವಾಗಿದೆ? ಎಷ್ಟೋ ವಿಷಯಗಳು ನಮ್ಮ ಕೈಯಲ್ಲಿವೆ ಎಂಬ ಭ್ರಮೆಯಲ್ಲಿರುತ್ತೇವೆ, ಅದು ತಪ್ಪಿ ಹೋಗಿ ನಮ್ಮ ಹಿಡಿತದಲ್ಲಿ ಇಲ್ಲ ಎಂಬ ತಿಳಿವಳಿಕೆ ಬರುವವರೆಗೆ ಮಾತ್ರ. ಭೌತಿಕ ಬದುಕಿನಲ್ಲಿ ಸ್ವತಂತ್ರ ಮತ್ತು ಬಂಧನ ಎಂಬ ಸ್ಥಿತಿಗಳಿವೆ. ನಿಜವಾಗಿಯೂ ನೋಡಿದರೆ ಯಾರು ಸ್ವತಂತ್ರರು? ಎಲ್ಲರೂ ವಿಧಿಯಾಟದ ಬೊಂಬೆಗಳೇ. ಯಾರು ಬಂಧಿತರು? ತಮ್ಮ ನಿಜಸ್ವರೂಪವನ್ನು ಅರಿತವರು ಯಾವಾಗಲೂ ಸ್ವತಂತ್ರರೇ. ಹಾಗೆಂದರೆ ಸ್ವಾತಂತ್ರ್ಯ ಹಾಗೂ ಬಂಧನ ಎನ್ನುವುದು ನಾವು ಯಾವ ಮನಸ್ಥಿತಿಯಿಂದ ನೋಡುತ್ತಿದ್ದೇವೆ ಎನ್ನುವುದರ ಮೇಲಿದೆ. ಒಬ್ಬ ವ್ಯಕ್ತಿ ಕೈವಲ್ಯ ದೃಷ್ಟಿಯನ್ನು ಹೊಂದಿದ್ದರೆ ಅವನಿಗೆ ಯಾವ ದ್ವಂದ್ವವೂ ಇಲ್ಲ. ಎಲ್ಲ ತೋರಿಕೆಯ ವೈರುಧ್ಯಗಳು, ವಿರೋಧಿಗಳೇ ಅಲ್ಲ, ಅವೆಲ್ಲ ಪರಸ್ಪರ ಪೂರಕವಾದವು ಎಂಬ ನಿಲುವಿಗೆ ಬರುತ್ತಾನೆ. ಅದೇ ಕೈವಲ್ಯ ದೃಷ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT