ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಚೇತರಾಷ್ಟ್ರಕ್ಕೆ ಆಗಮನ

Last Updated 27 ಜೂನ್ 2021, 19:30 IST
ಅಕ್ಷರ ಗಾತ್ರ

ವಂಕಪರ್ವತದೆಡೆಗೆ ನಡೆಯುತ್ತ ಹೊರಟಾಗ ತುಂಬ ಸುಸ್ತಾಗುತ್ತಿತ್ತು. ಮಕ್ಕಳಿಗೆ ಹಸಿವು ತಡೆಯುವುದಾಗುತ್ತಿರಲಿಲ್ಲ. ಅವು ಅಳುತ್ತಿದ್ದವು. ಆಗ ಬೇಸಿಗೆಯ ಕಾಲ, ದಾರಿಯ ಎರಡು ಬದಿಗಳಲ್ಲಿಯೂ ಮಾವಿನಮರಗಳಿದ್ದವು. ಅವುಗಳಲ್ಲಿ ಹಣ್ಣುಗಳು ನೇತಾಡುತ್ತಿದ್ದವು. ಆಗೊಂದು ವಿಚಿತ್ರ ನಡೆಯಿತು. ಮಕ್ಕಳು ಅಳುವುದನ್ನು ಕಂಡ ಮಾವಿನಮರಗಳು ತಮ್ಮ ಹಣ್ಣು ತುಂಬಿದ ಕೊಂಬೆಗಳನ್ನು ತಾನಾಗಿಯೇ ಬಾಗಿಸಿ ಮಕ್ಕಳ ಕೈಗೆ ನಿಲುಕುವಂತೆ ಮಾಡುತ್ತಿದ್ದವು.

ಮಾದ್ರಿ ಮತ್ತು ವೆಸ್ಸಂತರರು ಪಕ್ವವಾದ ಮತ್ತು ರುಚಿಯಾದ ಹಣ್ಣುಗಳನ್ನು ಕಿತ್ತು ಮಕ್ಕಳಿಗೆ ಕೊಟ್ಟ ಮೇಲೆ ಮತ್ತೆ ತಮ್ಮ ಮೊದಲಿನ ಸ್ಥಾನಗಳಿಗೆ ಕೊಂಬೆಗಳು ಮರಳಿ ಹೋಗುತ್ತಿದ್ದವು. ವೆಸ್ಸಂತರ ಅವೆಲ್ಲ ಮರಗಳಿಗೆ ಬಾಗಿ ಕೃತಜ್ಞತೆಯನ್ನು ತೋರಿದ. ಜೆತುತ್ತರ ನಗರದಿಂದ ಸ್ವರ್ಣಗಿರಿತಾಲ ಎಂಬ ಪರ್ವತದ ದೂರ ಐದು ಯೋಜನಗಳು. ಅಲ್ಲಿಂದ ಮುಂದೆ ಐದು ಯೋಜನ ನಡೆದರೆ ಕೊಂತಿಮಾರ ನದಿ ಬರುತ್ತದೆ. ನದಿ ದಾಟಿದ ಮೇಲೆ ಐದು ಯೋಜನ ದೂರದಲ್ಲಿರುವುದು ಆರಜ್ಜರ ಗಿರಿಪರ್ವತ. ಮತ್ತೆ ಐದು ಯೋಜನ ದೂರದಲ್ಲಿದ್ದದ್ದು ದುರ್ನಿವಿಷ್ಟ ಬ್ರಾಹ್ಮಣ ಗ್ರಾಮ. ಅಲ್ಲಿಂದ ಹತ್ತು ಯೋಜನ ದಾರಿ ಸವೆಸಿದರೆ ದೊರೆಯುವುದು ಚೆತರಾಷ್ಟ್ರದ ಮಾತುಲ ನಗರ. ಹೀಗೆ ಜೆತುತ್ತರದಿಂದ ಚೆತರಾಷ್ಟ್ರಕ್ಕೆ ಬರಲು ಮೂವತ್ತು ಯೋಜನಗಳನ್ನು ನಡೆಯಬೇಕಿತ್ತು.

ಮಕ್ಕಳನ್ನು ಹೊತ್ತುಕೊಂಡು ನಡೆದ ಈ ದಂಪತಿಗಳಿಗೆ ಕನಿಷ್ಠ ನಾಲ್ಕು ದಿನಗಳಾದರೂ ಬೇಕಾಗುತ್ತಿತ್ತು. ಆದರೆ ದೇವತೆಗಳು ಇವರ ಕಷ್ಟವನ್ನು ಕಂಡು, ದಾರಿಯನ್ನು ಕಿರಿದು ಮಾಡಿ, ಹೊರಟದಿನವೇ ಸಂಜೆಯ ವೇಳೆಗೆ ಮಾತುಲನಗರವನ್ನು ತಲುಪುವಂತೆ ಮಾಡಿದರು. ಚೆತರಾಷ್ಟ್ರ ಆ ದಿನಗಳಲ್ಲಿ ಸಮೃದ್ಧವಾದ ದೇಶವಾಗಿತ್ತು. ಅಲ್ಲಿ ಸುಮಾರು ಅರವತ್ತು ಸಾವಿರ ಜನ ಕ್ಷತ್ರಿಯರು ವಾಸವಾಗಿದ್ದರು. ವೆಸ್ಸಂತರ ನಗರ ಪ್ರವೇಶ ಮಾಡದೆ ನಗರದ್ವಾರದಲ್ಲಿದ್ದ ಧರ್ಮಶಾಲೆಯಲ್ಲಿ ಕುಳಿತ. ಮಾದ್ರಿ, ತನಗಾದ ಶ್ರಮವನ್ನು ಗಮನಿಸದೆ, ವೆಸ್ಸಂತರನ ಧೂಳಾದ, ಒಡೆದ ಪಾದಗಳನ್ನು ನೋಡಿ, ದುಃಖಿಸಿ, ನೀರು ತಂದು ಅವುಗಳನ್ನು ತೊಳೆದು ಮೃದುವಾಗಿ ಒತ್ತತೊಡಗಿದಳು.

ಬೋಧಿಸತ್ವ ವೆಸ್ಸಂತರನ ಆಗಮನವನ್ನು ಜನರಿಗೆ ತಿಳಿಸಲೆಂದು ಧರ್ಮಶಾಲೆಯ ಮುಂದಿದ್ದ ರಸ್ತೆಯ ಬದಿಗೆ ನಿಂತಳು. ರಸ್ತೆಯ ಮೇಲೆ ಹೋಗಿ ಬರುತ್ತಿದ್ದ ಹೆಣ್ಣುಮಕ್ಕಳು ಆಕೆಯನ್ನು ನೋಡಿ, ಆಕೆಯ ಸೌಂದರ್ಯಕ್ಕೆ, ರಾಜಗಾಂಭೀರ್ಯಕ್ಕೆ ಬೆರಗಾದರು. ನಂತರ ಆಕೆ ಸಿವಿರಾಜ್ಯದ ರಾಜನ ಸೊಸೆ, ವೆಸ್ಸಂತರನ ಹೆಂಡತಿ ಎಂದು ತಿಳಿದ ಮೇಲಂತೂ ಅವರ ಆಶ್ಚರ್ಯ ಮಿತಿಮೀರಿತು. ವಿಷಯ ಊರೆಲ್ಲ ಹರಡಿತು. ಇದನ್ನು ತಿಳಿದ ಚೆತದೇಶದ ಪ್ರಮುಖರು, ಅರವತ್ತು ಸಾವಿರ ಕ್ಷತ್ರಿಯರು ಬಂದು ಧರ್ಮಶಾಲೆಯ ಮುಂದೆ ನೆರೆದರು. ಹಿರಿಯರು ಬಂದು, ‘ಇದೇನು ರಾಜಕುಮಾರ, ತಮ್ಮ ತಂದೆ ಆರೋಗ್ಯವೇ? ಸಿವಿಯ ಜನ ಕುಶಲರೇ? ತಮ್ಮ ಸೈನ್ಯ, ರಥಗಳು, ಸೇವಕರು ಎಲ್ಲಿ? ತಾವು ಎಲ್ಲವನ್ನು ತೊರೆದು ಶತ್ರುಗಳಿಂದ ಪಾರಾಗಿ ನಡೆದುಬಂದಿದ್ದೀರಾ? ನೀವು ಬಂದದ್ದು ನಮಗೆ ತುಂಬ ಶುಭಕರವಾದದ್ದು. ನಿಮಗೇನು ಬೇಕು ಹೇಳಿ’ ಎಂದು ಪ್ರೀತಿಯಿಂದ ಕೇಳಿದರು. ಇದಕ್ಕೆ ವೆಸ್ಸಂತರ ಮುಗುಳುನಗೆ ನಕ್ಕು ನಡೆದದ್ದನ್ನು ವಿವರಿಸಿದ; ಅವರನ್ನು ಸಂತೈಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT