ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ನೆನಪಿಲ್ಲದ ಆದಿಬಂಧುಗಳು

Last Updated 21 ಜೂನ್ 2022, 19:30 IST
ಅಕ್ಷರ ಗಾತ್ರ

ನೆನಪಿಲ್ಲದ ಆದಿಬಂಧುಗಳು

ಅಕ್ಕಿಯೊಳಗನ್ನವನು ಮೊದಲಾರು ಕಂಡವರು? |
ಅಕ್ಕರದ ಬರಹಕ್ಕೆ ಮೊದಲಿಗನದಾರು? ||
ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ |
ದಕ್ಕುವುದೆ ನಿನಗೆ ಜಸ? – ಮಂಕುತಿಮ್ಮ || 655 ||

ಪದ-ಅರ್ಥ: ಅಕ್ಕಿಯೊಳಗನ್ನವನು=ಅಕ್ಕಿಯೊಳಗೆ+ಅನ್ನವನು, ಅಕ್ಕರದ=ಒಲವಿನ, ಮೊದಲಿಗನದಾರು=ಮೊದಲಿಗನು+ಅದಾರು, ತನ್ನಾದಿ=ತನ್ನ+ಆದಿ, ದಕ್ಕುವುದೆ=ದೊರೆಯುವದೆ, ಜಸ=ಯಶ
ವಾಚ್ಯಾರ್ಥ: ಅಕ್ಕಿಯೊಳಗೆ ಅನ್ನವನ್ನು, ಬರಹಕ್ಕೆ ಅಕ್ಷರವನ್ನು ಮೊದಲು ಕಂಡುಹಿಡಿದವರಾರು? ಇವರು ನಮ್ಮ ಆದಿ ಬಂಧುಗಳು. ಅವರ ಕಾಣಿಕೆಯನ್ನೇ ಪ್ರಪಂಚ ಲೆಕ್ಕಕ್ಕಿಟ್ಟಿಲ್ಲ. ಅಂಥದ್ದರಲ್ಲಿ ನಿನಗೆ ಯಶ ದೊರಕುವುದೇ?
ವಿವರಣೆ: ಒಬ್ಬ ವ್ಯಕ್ತಿಯ ಉಳಿವು ಮತ್ತು ಬೆಳವಿಗೆಗೆ ಎರಡು ಅತ್ಯವಶ್ಯ. ಒಂದು ಹಸಿವು ಮತ್ತೊಂದು ಅರಿವು. ಹಸಿವಿನ ಬೆಲೆ ತಿಳಿದವನಿಗೇ ಅನ್ನದ ಬೆಲೆ ಅರ್ಥವಾಗುವುದು. ಭಗವದ್ಗೀತೆ ‘ಅನ್ನಾತ್ ಭವಂತಿ ಭೂತಾನಿ’z ಎನ್ನುತ್ತದೆ. ಹಾಗೆಂದರೆ ಎಲ್ಲ ಜೀವಿಗಳು ವಿಕಾಸವಾಗುವುದು ಅನ್ನದಿಂದಲೇ. ತೈತ್ತಿರೀಯ ಉಪನಿಷತ್ತು,
ಅನ್ನಂ ನ ನಿಂದ್ಯಾತ್ | ತದ್ ವೃತಮ್ |
ಪ್ರಾಣೋವಾ ಅನ್ನಂ | ಶರೀರ ಮನ್ನಾದಮ್ |
ಪ್ರಾಣೇ ಶರೀರಂ ಪ್ರತಿಷ್ಠ್ಠಿತಂ | ಶರೀರೇ ಪ್ರಾಣಃ |
ಪ್ರತಿಷ್ಠಿತಃ | ತದೇದನ್ನ ಮನ್ನೇ ಪ್ರತಿಷ್ಠಿತಂ |

‘ಅನ್ನವನ್ನು ದೂಷಿಸಬಾರದು, ಅದು ವೃತ. ಶರೀರ, ಪ್ರಾಣಗಳು ಅನ್ನದಿಂದ ಮಾಡಲ್ಪಟ್ಟಿವೆ. ಶರೀರ ಪ್ರಾಣಗಳು ಒಟ್ಟಾಗಿವೆ. ಎಲ್ಲವೂ ಅನ್ನದಲ್ಲಿ ಅಡಗಿದೆ’.
ಅನ್ನವಿಲ್ಲದೆ ಜೀವಿ ಬದುಕಲಾರದು. ಜೀವಿ ಬೆಳೆದಂತೆ ಕೇವಲ ಅನ್ನ ಸಾಕಾಗಲಾರದು. ಅದಕ್ಕೆ ಅರಿವು ಬೇಕು. ಅಕ್ಷರ ಅರಿವಿಗೆ ಬಾಗಿಲು. ಅಕ್ಷರ ನಮಗೆ ಭಾಷೆಯ, ಸಾಹಿತ್ಯದ, ಸಂಗೀತದ, ಒಟ್ಟು ಸಂವಹನದ ಪ್ರಪಂಚವನ್ನು ತೆರೆದಿಡುತ್ತದೆ. ಅದು ಜ್ಞಾನಕ್ಕೆ ರಹದಾರಿ.

ಹೀಗೆ ಅನ್ನ, ಅಕ್ಷರ ಎರಡೂ ಬದುಕಿಗೆ ಅತ್ಯವಶ್ಯ ಸಾಮಗ್ರಿಗಳು. ಆದರೆ ಅಕ್ಕಿಯನ್ನು ನೀರಲ್ಲಿ ಬೇಯಿಸಿದರೆ ಅನ್ನವಾಗುತ್ತದೆ, ಅದು ಜೀವಪೋಷಕವಾಗುತ್ತದೆ ಎಂದು ಕಂಡು ಹಿಡಿದವರು ಯಾರು? ನಮಗೆ ಗೊತ್ತಿಲ್ಲ. ಸಣ್ಣ, ದೊಡ್ಡ ಅವಿಷ್ಕಾರಗಳನ್ನು ಮಾಡಿದ ವಿಜ್ಞಾನಿಗಳ ಹೆಸರು ಪ್ರಪಂಚಕ್ಕೆ ಪರಿಚಿತ. ಆದರೆ ಬದುಕಿಗೆ ಆಧಾರವಾದ ಅನ್ನವನ್ನು ಕಂಡುಹಿಡಿದವರ ಹೆಸರು ತಿಳಿದಿಲ್ಲ. ಅದರಂತೆ ಅಕ್ಷರಗಳನ್ನು ಕಂಡು ಹಿಡಿದವರು ಯಾರು? ಅದೂ ನಮಗೆ ತಿಳಿದಿಲ್ಲ.

ಅನ್ನ, ಅಕ್ಷರಗಳನ್ನು ನಮಗೆ ನೀಡಿದವರು ಆದಿ ಬಂಧುಗಳು ಎನ್ನುತ್ತದೆ ಕಗ್ಗ. ಆದರೆ ಆದಿಬಂಧುಗಳು ಯಾರು ಎನ್ನುವುದೇ ಗೊತ್ತಿಲ್ಲ. ನಮಗೆ ಅವರ ವಿಷಯ ತಿಳಿದಿಲ್ಲ ಎನ್ನುವುದು ಒಂದು ಭಾಗವಾದರೆ, ಇನ್ನೊಂದು ಅಂಥ ಮಹನೀಯರ ಹೆಸರುಗಳನ್ನೇ ಪ್ರಪಂಚ ನೆನಪಿನಲ್ಲಿ ಇಟ್ಟಿಲ್ಲ ಎನ್ನುವುದು. ನಾವು ಚಿಕ್ಕ ಚಿಕ್ಕ ಸಾಧನೆಗಳನ್ನು ಮಾಡಿ, ನನ್ನ ಹೆಸರು ಎಲ್ಲರಿಗೂ ಗೊತ್ತಿರಬೇಕು, ಶಾಶ್ವತವಾಗಬೇಕು ಎಂದು ಬಯಸುತ್ತೇವೆ. ಅದಕ್ಕೆ ಕಗ್ಗ ನಮಗೆ ಎಚ್ಚರಿಕೆ ಕೊಡುತ್ತದೆ. ಪ್ರಪಂಚ ಯಾರನ್ನೂ, ಯಾವ ಬಹುದೊಡ್ಡ ಸಾಧನೆಯನ್ನೂ ಶಾಶ್ವತವಾಗಿಸುವುದಿಲ್ಲ. ಮರೆವು ಅದರ ಸ್ವಭಾವ. ಪ್ರಪಂಚದ ಆದಿಬಂಧುಗಳನ್ನೇ ಲೆಕ್ಕಕ್ಕೆ ಇಡದ ಜಗತ್ತು ನಿನಗೆ ಆ ಯಶಸ್ಸನ್ನು ಕೊಟ್ಟೀತೇ? ಶಾಶ್ವತಯ, ಮನ್ನಣೆಯ ಅತಿಯಾಸೆಯನ್ನು ಬಿಡುವುದು ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT