ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮಿಸುಕುವ ರಹಸ್ಯ

Last Updated 8 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಮುಸುಕಿಹುದು ಹುಟ್ಟಳಿವುಗಳ ಕಾರಣವ ಮಬ್ಬು |
ಮಸಕಿನಲಿ ಹುದುಗಿಹವು ಮೋಹಮೂಲಗಳು ||
ನಿಶಿ ಮಿಚ್ಚಿಹುದು ದಿನಪ ಚಂದಿರನ ಹುಟ್ಟೆಡೆಯ |
ಮಿಸುಕುವ ರಹಸ್ಯ ನೀಂ – ಮಂಕುತಿಮ್ಮ || 838||

ಪದ-ಅರ್ಥ: ಮುಸುಕಿಹುದು=ಮುಸುಕಿ+ಇಹುದು, ಹುಟ್ಟಳಿವುಗಳ=ಹುಟ್ಟು+ಅಳಿವುಗಳ, ಹುದುಗಿಹವು=ಹುದುಗಿ+ಇಹವು, ನಿಶಿ=ಕತ್ತಲೆ, ದಿನಪಚಂದಿರರ=ದಿನಪ(ಸೂರ್ಯ)+ಚಂದಿರರ, ಹುಟ್ಟೆಡೆಯ=ಹುಟ್ಟು+ ಎಡೆಯ(ಸ್ಥಳವ), ಮಿಸುಕುವ=ಸ್ಪಂದಿಸವ.

ವಾಚ್ಯಾರ್ಥ: ಹುಟ್ಟುಸಾವುಗಳ ಕಾರಣವನ್ನು ಮಬ್ಬು ಮುಸುಕಿದೆ. ಮೋಹಮೂಲಗಳೂ ಮಸಕಿನಲ್ಲಿ ಕಳೆದುಹೋಗಿವೆ, ಸೂರ್ಯಚಂದ್ರರ ಹುಟ್ಟಿನ ಮೂಲಗಳನ್ನು ಕತ್ತಲೆ ಮುಚ್ಚಿದೆ. ನೀನು ಕೂಡ ಒಂದು ಸ್ಪಂದಿಸುವ ರಹಸ್ಯವೇ.

ವಿವರಣೆ: ಹುಟ್ಟುಸಾವುಗಳು, ಮನುಷ್ಯ ಪ್ರಾಣಿ ಭೂಮಿಯ ಮೇಲೆ ಹುಟ್ಟಿ ಬಂದಾಗಿನಿಂದ ಅತ್ಯಂತ ಕಾಡಿದ ವಿಷಯಗಳಾಗಿವೆ. ಮನುಷ್ಯನ ಬದುಕಿನ ಬಾಗಿಲನ್ನು ತೆರೆಯುವ ಹುಟ್ಟು, ಅವನ ಬದುಕಿಗೆ ಅಂತ್ಯ ಹಾಡಿ ಮುಚ್ಚಿಕೊಳ್ಳುವ ಸಾವಿನ ಬಾಗಿಲ ಹಿಂದೆ ಏನಿದೆ ಎಂಬ ರಹಸ್ಯ ಈವರೆಗೂ ಮನುಷ್ಯನ ಪ್ರಜ್ಞೆಗೆ ಎಟುಕಿಲ್ಲ. ಹುಟ್ಟು ಸಾವುಗಳ ಬಗ್ಗೆ ಜಗತ್ತಿನ ಧರ್ಮಗಳು ಹೊಂದಿರುವಷ್ಟು
ಸಿದ್ಧಾಂತಗಳು ಮತ್ತು ನಿರ್ಣಯಗಳನ್ನು ವಿಜ್ಞಾನ ನೀಡಿಲ್ಲ. ಆದರೆಹುಟ್ಟು-ಸಾವುಗಳೆರಡೂ ಪರಮಸತ್ಯಗಳೇ. ಆದರೆ ಈ ಪರಮಸತ್ಯಗಳ ಕಾರಣ ನಮಗೆ ತಿಳಿದಿಲ್ಲ !ಇತ್ತೀಚಿಗೆ ಸಿರಿಯಾ ದೇಶದಲ್ಲಿ ಆದ ಭೂಕಂಪ ಇಡೀ ಪ್ರಪಂಚವನ್ನು ತಲ್ಲಣಗೊಳಿಸಿದೆ. ಅಲ್ಲಿಯ ಒಂದುಘಟನೆಯನ್ನು ಓದಿ ನಾನು ತುಂಬ ವಿಚಲಿತನಾದೆ. ಒಂದು ಮೂರು ಅಂತಸ್ತಿನ ಮನೆ ಕುಸಿದು ಹೋಗಿದೆ. ಪಾರುಗಾಣಿಕಾ ತಂಡದಅನೇಕರು ಅವಶೇಷಗಳಿಂದ ದೇಹಗಳನ್ನುತೆಗೆಯುತ್ತಿದ್ದರು. ಮೂರು ದಿನಗಳ ನಂತರ ಯಾರೂಬದುಕಿ ಉಳಿದಿರುವುದು ಸಾಧ್ಯವಿಲ್ಲವೆಂಬ ತೀರ್ಮಾನಕ್ಕೆ ಬಂದು ಅಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಿದರು. ಮತ್ತೆ ಎರಡು ದಿನಗಳನಂತರ ಈ ತಂಡದಲ್ಲಿದ್ದ ನಾಯಿಯೊಂದು ಅಲ್ಲಿಗೆ ಹೋಗಿ ಮೂಸಿ,ಬೊಗಳಿದಾಗ, ಯಾರೋ ಬದುಕಿರಬೇಕೆಂದು ಕಟ್ಟಡದ ಅವಶೇಷಗಳನ್ನು ಸರಿಸತೊಡಗಿದರು. ನೆಲಮಾಳಿಗೆಯಲ್ಲಿ ಅವರು ಕಂಡದ್ದು ಆಶ್ಚರ್ಯವಾದದ್ದು. ಅಲ್ಲಿ ಆರು ಹೆಣಗಳು ಒಟ್ಟೊಟ್ಟಾಗಿ ಬಿದ್ದಿವೆ. ಇಡೀ ಪರಿವಾರ ನಿರ್ನಾಮವಾಗಿದೆ. ಆದರೆ ಮೂಲೆಯಿಂದ ಹೆಣ್ಣಿನ ಧ್ವನಿಯೊಂದು ಕೇಳಿ ಆ ಕಡೆಗೆ ಹೋದರೆ ಒಬ್ಬ ತಾಯಿ ಎರಡು ದಿನದ ಹಿಂದೆ ಅವಶೇಷಗಳ ಮಧ್ಯೆಯೇ ಗಂಡುಮಗುವಿಗೆ ಜನ್ಮವಿತ್ತಿದ್ದಾಳೆ. ತನ್ನ ಹೊಟ್ಟೆಗೆ ಏನಿಲ್ಲದಿದ್ದರೂ ಮಗುವನ್ನು ಎದೆಗಪ್ಪಿಕೊಂಡಿದ್ದಾಳೆ. ಪಾರು ಮಾಡಿದಾಗ ಮಗುವನ್ನು ಎತ್ತಿಕೊಂಡು ನಕ್ಕಳಂತೆ!

ತನ್ನ ಸುತ್ತಲೂ ತನ್ನವರೆಂಬ ಎಲ್ಲರೂ ಹೆಣವಾಗಿ ಮಲಗಿದಾಗ ತನ್ನ ಕುಡಿಯನ್ನು ಕಂಡು ಮೋಹ ಉಕ್ಕುತ್ತದಲ್ಲ! ಸಾವಿನ ಮೆರವಣಿಗೆಯ ನಡುವೆಯೂ, ಮೋಹದ ತಂತಿ ಮಿಡಿಯುತ್ತದಲ್ಲ! ಇದನ್ನೇ ಕಗ್ಗ ಕೇಳುತ್ತದೆ. ಈ ಮೋಹದ ಮೂಲ ಯಾವುದು ಎಂಬುದು ಮಸಕಿನಲ್ಲಿ ಮುಚ್ಚಿ ಹೋಗಿದೆ. ಸೂರ್ಯ ಚಂದ್ರರ ಹುಟ್ಟು ಆದದ್ದೆಲ್ಲಿ ಎಂಬುದು ನಮಗೆ ಸರಿಯಾಗಿ ತಿಳಿಯದು. ಕಗ್ಗ ಒಂದು ಬೆರಗನ್ನು ಸೂಸುತ್ತದೆ. ನೀನು ಕೂಡ ಈ ವಿಸ್ಮಯ ಪ್ರಪಂಚದ ಸೃಷ್ಟಿಯೇ. ಆದ್ದರಿಂದ ನೀನು ಕೂಡ ಚಲಿಸುವ, ಸ್ಪಂದಿಸುವ ರಹಸ್ಯವೇ ಹೌದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT