ಭಾನುವಾರ, ಮೇ 22, 2022
23 °C

ಬೆರಗಿನ ಬೆಳಕು: ಬದುಕಿನ ಅಲಂಕಾರ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ದೇವಮಂದಿರ ಭಜನೆ ಪೂಜೆ ಪ್ರಸಾದಗಳು|
ಜೀವನದಲಂಕಾರ, ಮನಸಿನುದ್ಧಾರ||
ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ಪ-|
ದಾವುದಾದೊಡಮೊಳಿತು – ಮಂಕುತಿಮ್ಮ ||499||

ಪದ-ಅರ್ಥ: ಜೀವನದಲಂಕಾರ= ಜೀವನದ+ ಅಲಂಕಾರ, ಭಾವಮಂ= ಮನಸ್ಸನ್ನು, ಕ್ಷುಲ್ಲ= ಅಲ್ಪವಾದ, ಕ್ಷಣಿಕವಾದ, ಮೇಲೊಯ್ಪದಾವುದಾಡೊಡಮೊಳಿತು= ಮೇಲೆ+ ಒಯ್ಪುದು+ ಆವುದು+ ಆದೊಡಂ (ಆದರೂ)+ ಒಳಿತು.

ವಾಚ್ಯಾರ್ಥ: ದೇವಸ್ಥಾನ, ಭಜನೆ, ಪೂಜೆ, ಪ್ರಸಾದಗಳೆಲ್ಲ ಬದುಕಿಕೊಂದು ಅಲಂಕಾರಗಳು. ಅವು ಮನಸ್ಸಿನ ಉದ್ಧಾರದ ಮಾರ್ಗಗಳು. ಮನಸ್ಸನ್ನು ಅವುಗಳು ಈ ಕ್ಷಣಿಕವಾದ, ಬದುಕಿನಿಂದ ಬಿಡಿಸಿಕೊಂಡು ಎತ್ತರಕ್ಕೆ ಕರೆದೊಯ್ಯುವವು. ಯಾವುದಾದರೂ ಸರಿಯೆ, ಅದು ಒಳ್ಳೆಯದು.

ವಿವರಣೆ: ಮನುಷ್ಯನಿಗೆ ಇಹದ ಬದುಕಿನಲ್ಲಿ ಅವಶ್ಯವಾದ ಅನ್ನ, ವಸ್ತ್ರ ಮತ್ತು ವಸತಿಗಳು ದೊರಕಿ ಜೀವನ ಸ್ವಲ್ಪ ಭದ್ರವೆನ್ನಿಸಿದ ಮೇಲೆ ಅವನಿಗೊಂದು ಕೌತುಕ ಮೂಡತೊಡಗಿತು. ಅದು ಈ ಸೃಷ್ಟಿಯನ್ನು ಯಾರು ಮಾಡಿದರು, ಯಾಕೆ ಮಾಡಿದರು ಎನ್ನುವ ಚಿಂತನೆ. ಆ ಚಿಂತನೆ ದೀರ್ಘವೂ, ಆಳವೂ ಆದಂತೆ ಯಾವುದೋ ಒಂದು ಆಗೋಚರವಾದ ಮತ್ತು ಅಮಾನುಷವಾದ ಶಕ್ತಿಯ ಕೈವಾಡ ಇದ್ದಿರಬೇಕು ಎಂದು ನಂಬತೊಡಗಿದ. ಅಂತಹ ಶಕ್ತಿಯೊಂದಿದ್ದರೆ ಅದನ್ನು ಕಾಣುವ, ತನ್ನದಾಗಿಸಿಕೊಂಡು ಜೀವನವನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ. ಆ ಪ್ರಯತ್ನದ ಒಂದು ಭಾಗವೇ ಆರಾಧನಾ ಪ್ರಕ್ರಿಯೆ. ಎರಡು ತರಹದ ಆರಾಧನೆಗಳು ಹುಟ್ಟಿಕೊಂಡವು.

ಮೊದಲನೆಯದು ದೇವರನ್ನು ಹೊರಗಡೆ ಹುಡುಕದೆ ತನ್ನಲ್ಲಿಯೇ ಕಾಣುವುದು ಆಂತರ್ಯದ ಆರಾಧನೆ. ಅವರಿಗೆ ದೇವಸ್ಥಾನ, ವಿಗ್ರಹ, ಪೂಜೆ, ಅಲಂಕಾರಗಳ ಮತ್ತು ಮೂರ್ತರೂಪದ ಸಂಕೇತಗಳ ಅವಶ್ಯಕತೆ ಇಲ್ಲ. ಅವರು ಕಂಡುಕೊಂಡ ವಿಧಾನಗಳು, ಧ್ಯಾನ, ಜಪ, ತಪಸ್ಸು, ಯೋಗ ಮುಂತಾದವುಗಳು. ಅಂತಹವರು ಪ್ರಪಂಚದಲ್ಲಿ ಸಾಕಷ್ಟು ಜನರಿದ್ದಾರೆ. ಅವರು ದೇಹವನ್ನು ಮನಸ್ಸಿನೊಂದಿಗೆ ಹುರಿಗೊಳಿಸಿ ಮೊದಲು ದೇಹದ ಮೇಲೆ ನಂತರ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸಿ ಮೂಲಾಧಾರದಲ್ಲಿದ್ದ ಶಕ್ತಿಯನ್ನು ಜಾಗ್ರತಗೊಳಿಸಿ, ಹಂತಹಂತವಾಗಿ ಸಹಸ್ರಾರದವರೆಗೆ ಕೊಂಡೊಯ್ದು ನಿರಾಕಾರವಾದ ಬ್ರಹ್ಮಜ್ಞಾನಕ್ಕೆ ಪ್ರಯತ್ನಿಸುತ್ತಾರೆ. ಆದರೆ ಬಹಳಷ್ಟು ಜನರಿಗೆ ಇದು ಕಷ್ಟಸಾಧ್ಯವಾದದ್ದು. ಅವರು ಭಗವಂತನನ್ನು ದೇಹದ ಹೊರಗೆ, ಮೂರ್ತಿಗಳಲ್ಲಿ, ದೇವಾಲಯಗಳಲ್ಲಿ, ಪೂಜೆಗಳಲ್ಲಿ, ಅರ್ಚನೆ, ಹೋಮಗಳಲ್ಲಿ ಕಾಣಲು ಹೆಣಗುತ್ತಾರೆ. ಮೂರ್ತಿಗಳು, ಚಿತ್ರಗಳು, ದೇವಸ್ಥಾನಗಳನ್ನು ಆಕರ್ಷಕವಾಗಿ, ಮನಸ್ಸು ಒಪ್ಪುವಂತೆ ಮಾಡಲು ಅನೇಕ ಅಲಂಕಾರಗಳು, ಪೂಜಾಸಾಧನಗಳು ಬಂದವು. ಹೀಗೆ ತನ್ನೊಳಗೆ ಅಥವಾ ಹೊರಗೆ ಇರಬಹುದಾದ ಉದಾತ್ತವಾದ, ಶಾಶ್ವತ ಸತ್ಯವನ್ನು ಕಂಡರಿಸಿಕೊಳ್ಳಲು ಮನುಷ್ಯ ಅನೇಕಾನೇಕ ವಿಧಿಗಳನ್ನು ಸೃಷ್ಟಿಸಿಕೊಂಡ. ಇವೆಲ್ಲ ಯಾಕೆ ಬೇಕು ಎನ್ನುವ ಪ್ರಶ್ನೆಗೆ ಈ ಕಗ್ಗ ಬಲು ಸುಂದರವಾದ ಕಾರಣವನ್ನು ಕೊಡುತ್ತದೆ. ದೇವಸ್ಥಾನ, ಭಜನೆ, ಪೂಜೆ, ಪ್ರಸಾದ, ಯೋಗಸಾಧನೆಗಳು ಇವೆಲ್ಲ ಬದುಕಿಗೊಂದು ಅಲಂಕಾರವನ್ನು, ಉತ್ಸಾಹವನ್ನು ನೀಡುತ್ತವೆ, ಮನಸ್ಸನ್ನು ಪರಿಷ್ಕಾರಗೊಳಿಸುತ್ತವೆ. ಇವು ಮಾಡುವ ಬಹುದೊಡ್ಡ ಉಪಕಾರವೆಂದರೆ ಜೀವನದ ಜಟಾಪಟಿಯಲ್ಲಿ ಒದ್ದಾಡಿ, ಬಳಲಿದ ಮನಸ್ಸನ್ನು ಕ್ಷಣಕಾಲವಾದರೂ ಉನ್ನತನೆಲೆಗೆ ಕರೆದೊಯ್ದು ಹಗುರಗೊಳಿಸುತ್ತವೆ. ಅವುಗಳಲ್ಲಿ ಯಾವ ವಿಧಾನ ಸರಿ? ನಮ್ಮ ಮನಸ್ಸಿಗೆ ಒಪ್ಪಿತವಾದ ವಿಧಾನ ಯಾವುದಾದರೂ ಸರಿಯೆ, ನೆಮ್ಮದಿಯನ್ನು ಕೊಟ್ಟರಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.