ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ ’ಬೆರಗಿನ ಬೆಳಕು’| ಮಾಯೆ – ಮಾಯ

Published 28 ಜೂನ್ 2023, 23:34 IST
Last Updated 28 ಜೂನ್ 2023, 23:34 IST
ಅಕ್ಷರ ಗಾತ್ರ

ಜನ್ಮ ಸಾವಿರ ಬರಲಿ, ನಷ್ಟವದರಿಂದೇನು ? |
ಕರ್ಮ ಸಾವಿರವಿರಲಿ, ಕಷ್ಟ ನಿನಗೇನು? ||
ಬ್ರಹ್ಮ ಹೃದಯದಿ ನಿಲ್ಲೆ ಮಾಯೆಯೇಂಗೈದೊಡೇಂ ? |
ಇಮ್ಮಿದಳ ಸರಸವದು – ಮಂಕುತಿಮ್ಮ || 916 ||

ಪದ-ಅರ್ಥ: ನಷ್ಟವದರಿಂದೇನು=ನಷ್ಟ+ಅದರಿಂದೇನು, ಮಾಯೆಯೇಂಗೈದೊಡೇಂ=ಮಾಯೆ+
ಯೇಂ(ಏನು)+ಗೈದೊಡೇಂ(ಮಾಡಿದರೇನು),ಇಮ್ಮಿದಳ=ಪ್ರಿಯೆಯ, ಇನಿಯಳ, ಸರಸವದು=ಸರಸವು+ಅದು.

ವಾಚ್ಯಾರ್ಥ: ಸಾವಿರ ಜನ್ಮಗಳು ಬರಲಿ, ಅದರಿಂದ ನಷ್ಟವೇನು? ಸಾವಿರಾರು ಕರ್ಮಗಳು ಬರಲಿ, ಯಾವ ಕಷ್ಟವೂ ಇಲ್ಲ.

ಬ್ರಹ್ಮತತ್ವ ಹೃದಯಲ್ಲಿ ನೆಲೆಯಾಗಿ ನಿಂತರೆ ಮಾಯೆ ಯಾವ ಆಟಗಳನ್ನು ಆಡಿದರೂ ಅದರಿಂದ ತೊಂದರೆ ಎನ್ನಿಸದೆ, ಅದು ಪ್ರೇಯಸಿಯೊಂದಿಗಿನ ಸರಸದಂತೆ ತೋರುತ್ತದೆ.

ವಿವರಣೆ: ಊರಿನ ಹೊರಭಾಗದಲ್ಲಿ ಕಾಡಿಗೆ ಹೊಂದಿದಂತೆಯೇ ಇತ್ತು, ಆ ಚೆಂದದ ಮನೆ. ಮನೆ ಕಟ್ಟಿಸಿದ ಮೇಲೆ ಮಾಲೀಕರು ಬಹುಶ: ಒಂದೆರಡು ವರ್ಷ ಇದ್ದಿರಬೇಕು. ಅವರು ಪಟ್ಟಣಕ್ಕೆ ಹೋದ ಮೇಲೆ ಅಲ್ಲಿ ಬಾಡಿಗೆಗೆ ಒಂದಿಬ್ಬರು ಬಂದರು. ಯಾರೂ ಆ ಮನೆಯಲ್ಲಿ ಒಂದು ವಾರಕ್ಕಿಂತ ಹೆಚ್ಚು ಕಾಲ ಉಳಿಯಲಿಲ್ಲ. ಮುಂದೆ ಯಾರೂ ಮನೆಯ ಹತ್ತಿರವೂ ಸುಳಿಯಲಿಲ್ಲ. ಕಾರಣ, ಮನೆಯಲ್ಲೊಂದು ದೆವ್ವವಿದೆ, ರಾತ್ರಿ ಅದು ಕೂಗು ಹಾಕುತ್ತ ಮನೆಯನ್ನು ಸುತ್ತುತ್ತದೆ ಎಂಬ ಸುದ್ದಿ. ಅದೊಂದು ದೆವ್ವದ ಮನೆಯೆಂದೇ ಹೆಸರಾಗಿ ಭಯಕ್ಕೆ ಕಾರಣವಾಯಿತು. ಅಲ್ಲೊಬ್ಬ ತರುಣ ದಂಪತಿಗಳು ಆ ಊರಿಗೆ ಬಂದು ಮನೆ ಹುಡುಕುತ್ತಿದ್ದರು. ಈ ದೆವ್ವದ ಮನೆ ತುಂಬ ಇಷ್ಟವಾಯಿತು. ಊರ ಜನ ಹೆದರಿಸಿದರೂ ಕೇಳದೆ ಆ ಮನೆಯನ್ನು ಸೇರಿಕೊಂಡರು. ರಾತ್ರಿಯಾಯಿತು. ಅವರೂ ಎಚ್ಚರವಾಗಿದ್ದರು. ಹಾಂ! ಆಗ ಕೇಳಿಸಿತು ಸಣ್ಣ ಶಿಳ್ಳೆಯಂಥ ಧ್ವನಿ. ಗಂಡ-ಹೆಂಡತಿ ಇಬ್ಬರೂ ಮನೆಯಿಂದ ಹೊರಗೆ ಬಂದು ಸುತ್ತಲೂ ಅಡ್ಡಾಡಿ ನೋಡಿದರು. ಸದ್ದು ನಿಂತಿತ್ತು. ಮನೆಯೊಳಗೆ ಹೋದರು. ಮತ್ತೆ ಧ್ವನಿ ಬಂತು. ಈ ಬಾರಿ ಅದು ಜೋರಾಗಿತ್ತು, ಅದು ಹೆಂಗಸು ಕೂಗಿದಂತೆಯೇ ಇತ್ತು. ರಾತ್ರಿಯೆಲ್ಲ ಮಲಗದೆ ಎಚ್ಚರವಾಗಿದ್ದರು. ಮರುದಿನ ಬೆಳಗಾದ ಮೇಲೆ ಸದ್ದು ಎಲ್ಲಿಂದ ಬಂದದ್ದು ಎಂದು ಹುಡುಕಲು ತೊಡಗಿದರು. ಒಂದು ತಾಸಿನ ನಂತರ ಹೆಂಡತಿಗೆ ಮನೆಯ ಹಿಂದಿದ್ದ ಮರದ ಮೇಲೆ ಏನೋ ಕಂಡಿತು. ಗಂಡನಿಗೆ ತೋರಿಸಿದಳು. ಗಂಡ ಮರಹತ್ತಿ ನೋಡಿ ಜೋರಾಗಿ ನಕ್ಕ. ಅದೊಂದು ತಗಡಿನ ಡಬ್ಬಿ. ಗಾಳಿಗೆ ಹಾರಿ ಮರದ ಕೊಂಬೆಗೆ ಸಿಲುಕಿಕೊಂಡಿದೆ. ಅದಕ್ಕೆ ತಳದಲ್ಲೊಂದು ತೂತಿದೆ. ಗಾಳಿ ಬೀಸಿದಾಗ ಡಬ್ಬದಲ್ಲಿ ಗಾಳಿ ತುಂಬಿ, ತೂತಿನಿಂದ ಹೊರಗೆ ಬರುವಾಗ ಶಿಳ್ಳೆ ಹೊಡೆದಂತೆ ಸದ್ದು ಮಾಡುತ್ತದೆ. ತರುಣ ಅದನ್ನು ಕೆಳಗಿಳಿಸಿದ. ದೆವ್ವದ ಕಾಟ ಮರೆಯಾಯಿತು. ಇದನ್ನು ಕೇಳಿದ ಜನರೆಲ್ಲ ನಕ್ಕರು. ದೆವ್ವದ ಭಯ ಇಲ್ಲವಾಯಿತು. ಭಯದ ಮೂಲ ತಿಳಿದಾಗ ಭಯ ಮಾಯ. ಕಗ್ಗ ಅದನ್ನು ಹೇಳುತ್ತದೆ. ಬ್ರಹ್ಮಸತ್ವ ಹೃದಯದಲ್ಲಿ ಸ್ಥಿರವಾದಾಗ, ಮಾಯೆಯ ಪ್ರಭಾವ ಮಾಯವಾಗುತ್ತದೆ. ಆಗ ಸಾವಿರ ಜನ್ಮ ಎತ್ತಿದರೂ ಭಯವಿಲ್ಲ, ಸಾವಿರ ಕರ್ಮಗಳು ಗಂಟುಬಿದ್ದರೂ ಚಿಂತೆಯಿಲ್ಲ. ಯಾಕೆಂದರೆ ಪ್ರಪಂಚ ಮೂಲದ ಜ್ಞಾನ ದೊರಕಿದೆಯಲ್ಲ. ಆಗ ಮಾಯೆಯ ಆಟ ಎಂತಿದ್ದರೂ ಅದು ನಮ್ಮನ್ನು ಕಂಗಾಲು ಮಾಡದೆ, ಅದೊಂದು ಪ್ರೇಯಸಿಯೊಂದಿಗಿನ ಸರಸದಂತೆ ತೋರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT