ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ದೊರೆತ ವರಗಳು

Last Updated 4 ಜುಲೈ 2021, 19:30 IST
ಅಕ್ಷರ ಗಾತ್ರ

ರಾಮಣೀಯಕದಿ ನಲಿವಕ್ಷಿಯೊಡನಚಲಮನ |
ಪ್ರೇಮಮಯಮನದೊಡನೆ ಮೋಹಬಡದಾತ್ಮ ||
ಭೀಮಬಲದೊಡನೆ ರಾಮನ ಅಭಯ ನಿಯಮವಿರೆ|
ಯಾಮಳ ವರಂಗಳವು – ಮಂಕುತಿಮ್ಮ || 435 ||

ಪದ-ಅರ್ಥ: ರಾಮಣೀಯಕ=ಸುಂದರವಾದದ್ದು, ರಮಣೀಯವಾದದ್ದು, ನಲಿವಕ್ಷಿಯೊಡನಚಲಮನ =ನಲಿವ+ಅಕ್ಷಿಯೊಡನೆ (ಕಣ್ಣುಗಳೊಡನೆ)+ ಅಚಲ+ಮನ, ಪ್ರೇಮಮಯಮನದೊಡನೆ= ಪ್ರೇಮಮಯ+ಮನದೊಡನೆ, ಯಾಮಳ=ಎರಡು

ವಾಚ್ಯಾರ್ಥ: ರಮಣೀಯವಾದದ್ದನ್ನು ಕಂಡು ಕಣ್ಣುಗಳು ಅಲೆದರೂ ಅಚಲವಾದ ಮನಸ್ಸು, ಪ್ರೇಮಮಯವಾದದ್ದರ ಜೊತೆಗಿದ್ದು ಅದನ್ನು ಮೋಹವಾಗಿಸಿಕೊಳ್ಳದ ಆತ್ಮ, ಅಸಾಮಾನ್ಯವಾದ ಭೀಮಬಲವಿದ್ದರೂ ಅದನ್ನು ರಾಮನ ಅಭಯದಂತೆ ಬಳಸುವ ನಿಯಮಗಳೇ ಬದುಕಿಗೆ ಎರಡು ವರಗಳು.

ವಿವರಣೆ: ಈ ಕಗ್ಗದ ಮೊದಲ ಮೂರು ಸಾಲುಗಳಲ್ಲಿ ಎರಡೆರಡು, ತೋರಿಕೆಗೆ ವಿರೋಧಗಳಂತೆ ಕಾಣುವ ಗುಣಗಳನ್ನು ತಿಳಿಸುತ್ತವೆ. ರಮಣೀಯವಾದ ವಸ್ತು, ಪ್ರಸಂಗಳನ್ನು ಕಂಡಾಗ ಕಣ್ಣು ಅರಳುತ್ತವೆ. ಅತ್ತಲೇ ಆಕರ್ಷಿತವಾಗಿ ಚಲಿಸುತ್ತವೆ. ಕಣ್ಣನ್ನೇ ಹಿಂಬಾಲಿಸಿ ಮನಸ್ಸು ಓಡುತ್ತದೆ. ಹೀಗೆ ಮನಸ್ಸು ದಿಕ್ಕುದಿಕ್ಕಿಗೆ ಓಡುತ್ತಿದ್ದರೆ ಚಂಚಲವಾಗಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದರ ತಿಳಿವಳಿಕೆಯನ್ನು ಕಳೆದುಕೊಳ್ಳುತ್ತದೆ. ವಿವೇಕಹೀನವಾಗುತ್ತದೆ. ಹಾಗಾದರೆ ಯಾವುದನ್ನೂ ಕಾಣದೆ, ಮೆಚ್ಚದೆ ಭಾವಶೂನ್ಯರಾಗಿ ಕುಳಿತುಕೊಳ್ಳಬೇಕೇ? ಬೇಕಿಲ್ಲ. ಸುಂದರವಾದದ್ದನ್ನು ಕಂಡು ಸಂತೋಷಪಡೋಣ. ಆದರೆ ಮನಸ್ಸು ಅದರಲ್ಲೇ ಕೊಚ್ಚಿ ಹೋಗಿ ವಿವೇಕವನ್ನು ಕಳೆದುಕೊಳ್ಳದಂತೆ ಅಚಲವಾಗಬೇಕು.

ಇದರಂತೆ, ಕೆಲವು ವಸ್ತು, ವ್ಯಕ್ತಿಗಳಲ್ಲಿ ಪ್ರೇಮವುಂಟಾಗುವುದು ಸ್ವಾಭಾವಿಕ. ಆದರೆ ಪ್ರೇಮವೂ ಒಂದು ಮಿತಿಯಲ್ಲಿದ್ದರೆ ಕ್ಷೇಮ. ಅದು ಅತಿಯಾದರೆ ಮೋಹವಾಗಿ ಕಾಡೀತು. ಮಕ್ಕಳು ಮತ್ತು ಪರಿವಾರದವರ ಬಗ್ಗೆ ಪ್ರೇಮವಿರುವುದು ಸರಿ ಆದರೆ ಅದು ಅತಿಯಾದಾಗ ಧೃತರಾಷ್ಟ್ರ ಮೋಹವಾಗಿ ವಿನಾಶಕ್ಕೆ ಕಾರಣವಾಗುತ್ತದೆ. ಮಕ್ಕಳ ಬಗ್ಗೆ ಪ್ರೀತಿ ಇದ್ದು ಅದನ್ನು ಮಿತಿಯೊಳಗಿಟ್ಟ ಗಾಂಧಿ ಮಹಾತ್ಮರಾದರು. ಮನಸ್ಸಿನಲ್ಲಿ ಎಲ್ಲರ ಬಗ್ಗೆ, ಎಲ್ಲದರ ಬಗ್ಗೆ ಪ್ರೇಮವಿರಲಿ ಆದರೆ ಅದು ಆತ್ಮಕ್ಕೆ ಮೋಹದ ಮುಸುಕು ಹಾಕದಿರಲಿ. ಮೂರನೆಯದು ಇನ್ನೂ ಮುಖ್ಯವಾದದ್ದು. ಅಪಾರವಾದ ಶಕ್ತಿಯನ್ನು ಹೊಂದುವುದು ಒಳ್ಳೆಯದೆ. ಆದರೆ ಅದು ರಾಕ್ಷಸ ಶಕ್ತಿಯಾಗಿ ವಿನಾಶಕಾರಿಯಾಗದಿರಲಿ. ಇದಕ್ಕೆ ಸಂವಾದಿಯಾಗಿ ಇಂಗ್ಲೀಷಿನಲ್ಲಿ ಒಂದು ಮಾತಿದೆ. ‘It is good to have giant’s strength but not good to use it like a giant’.

ಮನುಷ್ಯ ವೈಜ್ಞಾನಿಕವಾಗಿ ಅವಿಷ್ಕಾರಗಳನ್ನು ಮಾಡುತ್ತ ಅಪಾರ ಶಕ್ತಿಯನ್ನು ಸಂಪಾದಿಸಿದ. ಆಕಾಶಕ್ಕೆ ನೆಗೆದ, ಭೂಮಿಯನ್ನು ಕೊರೆದು ಪಾತಾಳಕ್ಕಿಳಿದ. ಅಣುವನ್ನು ವಿಭಾಗಿಸಿ ಅದರಲ್ಲಿ ಅವಿತಿದ್ದ ಕಲ್ಪನಾತೀತವಾದ ಶಕ್ತಿಯನ್ನು ಹೊರತೆಗೆಯುವುದರಲ್ಲಿ ಯಶಸ್ವಿಯಾದ. ಅದೊಂದು ರಾಕ್ಷಸೀ ಶಕ್ತಿ. ಅದನ್ನು ಸಂಯಮದಿಂದ ಬಳಸಿದರೆ ಜಗತ್ತಿಗೆ ಅತ್ಯಂತ ಪ್ರಯೋಜನಕಾರಿಯಾಗುತ್ತದೆ. ಆದರೆ ಅದನ್ನು ಹಿಡಿತದಲ್ಲಿಟ್ಟುಕೊಳ್ಳದೆ ಪ್ರಯೋಗಿಸಿದರೆ ಹಿರೋಶಿಮಾ ಮತ್ತು ನಾಗಾಸಾಕಿಗಳಂತಹ ಮಾರಣಹೋಮಗಳು ನಡೆಯುತ್ತವೆ. ತಂದೆ ದ್ರೋಣರು, ಮೋಹ ಅತಿಯಾದಾಗ ಮಗ ಅಶ್ವತ್ತಾಮನಿಗೆ ನೀಡಿದ ನಾರಾಯಣಾಸ್ತ್ರ ಒಂದು ಅಪರಿಹಾರ್ಯವಾದ ಆಯುಧ. ಆತ ಅದನ್ನು ನಿಗ್ರಹಿಸಲರಿಯದೆ ಪ್ರಯೋಗ ಮಾಡಿ ಅನಾಹುತ ಮಾಡಿದ್ದು ಅಕ್ಷಮ್ಯ.

ಸುಂದರವಾದದ್ದನ್ನು ಕಂಡೂ ಅಚಲವಾಗದ ಮನಸ್ಸು, ಪ್ರೇಮ ಮೋಹವಾಗದಂತೆ ನೋಡಿಕೊಂಡ ಆತ್ಮಪ್ರಜ್ಞೆ, ಅಪಾರಶಕ್ತಿಯನ್ನು ಹೊಂದಿಯೂ ಸಂಯಮವನ್ನು ಕಾಯ್ದುಕೊಳ್ಳುವ ವಿವೇಕವೇ ನಮಗೆ ದೊರೆತ ವರಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT