ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮಾರ್ಗದರ್ಶಕನ ಗುಣ

Last Updated 18 ಆಗಸ್ಟ್ 2020, 20:15 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಅವನ ಪುರೋಹಿತನಾಗಿದ್ದ. ಅವನ ಪಾಂಡಿತ್ಯ ಅಗಾಧವಾದದ್ದು ಮತ್ತು ಅವನ ದೂರದರ್ಶಿತ್ವವನ್ನು ರಾಜ ಕೂಡ ಕೊಂಡಾಡುತ್ತಿದ್ದ. ಒಂದೆರಡು ಬಾರಿ ಉದ್ಯಾನವನಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ಗಣಿಕೆಯನ್ನು ಕಂಡು ಆಸಕ್ತನಾಗಿ ಸಹವಾಸ ಮಾಡಿದ. ಆಕೆ ಗರ್ಭವತಿಯಾದಳು. ಆಕೆ, ‘ಸ್ವಾಮಿ, ನಾನು ಈಗ ನನ್ನ ಊರಿಗೆ ಹೋಗುತ್ತೇನೆ. ಮಗು ಹುಟ್ಟಿದ ಮೇಲೆ ಏನು ಹೆಸರಿಡಲಿ?’ ಎಂದು ಕೇಳಿದಳು.

ಆಗ ಪುರೋಹಿತ, ‘ಹುಟ್ಟಿದ್ದು ಹೆಣ್ಣಾದರೆ ಅದನ್ನು ನೀನೇ ಪಾಲನೆ ಮಾಡು, ಹುಡುಗ ಹುಟ್ಟಿದರೆ ಅವನಿಗೆ ಉದ್ದಾಲಕ ಎಂದು ಹೆಸರಿಡು ಮತ್ತು ನನ್ನ ಕಡೆಗೆ ಕರೆದುಕೊಂಡು ಬಾ. ನಾನು ಆತನಿಗೆ ಶಿಕ್ಷಣ ಕೊಡುತ್ತೇನೆ’ ಎಂದ. ಆಕೆಗೆ ಗುರುತಿಗಾಗಿ ತನ್ನ ಉಂಗುರವನ್ನು ಕೊಟ್ಟು ಅದನ್ನು ಮಗ ದೊಡ್ಡವನಾದ ಮೇಲೆ ಅವನೊಂದಿಗೆ ಅದನ್ನು ಕೊಟ್ಟು ಕಳುಹಿಸು ಎಂದು ತಿಳಿಸಿದ.

ಆಕೆಗೆ ಒಬ್ಬ ಮಗ ಹುಟ್ಟಿದ. ಅವನಿಗೆ ಉದ್ದಾಲಕ ಎಂದು ಹೆಸರಿಟ್ಟರು. ಆತ ದೊಡ್ಡವನಾದಂತೆ ತಕ್ಕಶಿಲೆಗೆ ಹೋಗಿ ಸಕಲವಿದ್ಯೆಗಳನ್ನು ಕಲಿತು ಬಂದ. ಆತ ಬುದ್ಧಿವಂತನಾದರೂ, ಲೋಭಿಯಾದ. ಐದು ನೂರು ಜನ ಶಿಷ್ಯರ ಗುರುವಾದ. ಆದರೆ ಹಣದಾಸೆ ಹೆಚ್ಚುತ್ತಲೇ ಹೋಯಿತು. ಆತ ತನ್ನ ಶಿಷ್ಯರನ್ನೆಲ್ಲ ಕರೆದುಕೊಂಡು ವಾರಾಣಸಿಗೆ ಬಂದ. ತಾನು ರಾಜೋದ್ಯಾನದಲ್ಲಿ ಉಳಿದುಕೊಂಡು ಶಿಷ್ಯರನ್ನೆಲ್ಲ ಭಿಕ್ಷೆಗೆ ಕಳುಹಿಸಿದ. ಅವರೆಲ್ಲ ಊರ ತುಂಬ ಅವನ ಗುಣಗಾನ ಮಾಡುತ್ತ, ನಮ್ಮ ಗುರುಗಳು ಪ್ರಕಾಂಡ ಪಂಡಿತರು, ಅವರಂತಹವರು ಪ್ರಪಂಚದಲ್ಲೇ ಯಾರೂ ಇಲ್ಲ, ಅವರು ನಾಳೆ ರಾಜ್ಯೋದ್ಯಾನದಲ್ಲಿ ಪ್ರವಚನ ನೀಡಲಿದ್ದಾರೆ ಅವರ ಮಾತುಗಳನ್ನು ಕೇಳಲು ದೇವತೆಗಳು ಕೂಡ ಆಕಾಶದಲ್ಲಿ ನೆರೆದಿರುತ್ತಾರೆ ಎಂದೆಲ್ಲ ಪ್ರಚಾರ ಮಾಡಿದರು. ವಿಷಯ ರಾಜನಿಗೂ ಮುಟ್ಟಿತು.

ಮರುದಿನ ಸಹಸ್ರಾರು ಜನ ಪ್ರವಚನಕ್ಕೆ ಬಂದರು. ರಾಜನೂ ತನ್ನ ಪುರೋಹಿತನನ್ನು ಕರೆದುಕೊಂಡ ಬಂದ. ಕಾರ್ಯಕ್ರಮದ ಹೊತ್ತಿಗೆ ಉದ್ದಾಲಕ ಜನರನ್ನು ಮೆಚ್ಚಿಸುವುದಕ್ಕೆ ಭಾರಿ ಯೋಜನೆ ಮಾಡಿದ್ದ. ಕೆಲವು ಶಿಷ್ಯರು ವೇದಿಕೆಯ ಮೇಲೆ ಬಾವಲಿ ವೃತ ಮಾಡಿದರು, ಕೆಲವರು ತುದಿಗಾಲಿನ ಮೇಲೆ ಕುಳಿತರು, ಕೆಲವರು ಮುಳ್ಳಿನ ಹಾಸಿಗೆಯ ಮೇಲೆ ಮಲಗಿದರು, ಕೆಲವರು ಪಂಚಾಗ್ನಿ ತಪಸ್ಸು ಮಾಡುತ್ತಿದ್ದರು. ಉದ್ಯಾಲಕ ತಾನು ಮಧ್ಯದಲ್ಲಿ ಎತ್ತರದ ಸ್ಥಾನದಲ್ಲಿ ಕುಳಿತು, ಎಂಟು ಜನ ಶಿಷ್ಯರನ್ನು ಸುತ್ತಲೂ ಕುಳ್ಳಿರಿಸಿ, ಅವರ ಹಿಂದೆ ಸುಂದರವಾದ ಕಪಾಟುಗಳಲ್ಲಿ ದೊಡ್ಡ ದೊಡ್ಡ ಗ್ರಂಥಗಳನ್ನಿಡಿಸಿದ. ನೋಡುವವರಿಗೆ ಅದೊಂದು ಅಧ್ಯಾತ್ಮ ಪ್ರಪಂಚವೇ ತೆರೆದಿಟ್ಟಂತಿತ್ತು. ಜಾಣನಾದ ಪುರೋಹಿತನಿಗೆ ಮಾತ್ರ ಇದು ತೋರಿಕೆಯ ನಾಟಕ ಎಂದು ತಕ್ಷಣವೇ ತಿಳಿಯಿತು.

ಒಂದೆರಡು ಆಳದ ಪ್ರಶ್ನೆ ಕೇಳಿದಾಗ, ಅವನಿಗೆ ವಿಷಯ ಸ್ವಲ್ಪ ತಿಳಿದಿದೆ ಆದರೆ ಆಸೆ ತುಂಬಿಕೊಂಡಿದೆ ಎಂಬುದು ಪುರೋಹಿತನಿಗೆ ತಿಳಿಯಿತು. ಆಗ ಉದ್ದಾಲಕ ತನ್ನ ಬಳಿ ಇದ್ದ ಉಂಗುರವನ್ನು ತೊರಿಸಿ, ತಾನೇ ಪುರೋಹಿತನ ಮಗ ಎಂದು ಹೇಳಿದ. ಪುರೋಹಿತ ದ್ವಂದ್ವದಲ್ಲಿ ಸಿಕ್ಕ. ಯಾಕೆಂದರೆ ರಾಜ ಉದ್ದಾಲಕನನ್ನು ತನ್ನ ಬಳಿ ಸೇರಿಸುವುದಕ್ಕೆ ಉತ್ಸುಕನಾಗಿದ್ದ. ಆದರೆ ಆತನಿಗೆ ಆ ಶಕ್ತಿ ಇಲ್ಲ. ಆದರೆ ಆತ ತನ್ನ ಮಗ, ಒಳ್ಳೆಯ ಅವಕಾಶ ಸಿಕ್ಕರೆ ಯಾಕಾಗಬಾರದು?. ಒಂದು ಕ್ಷಣ ಕಣ್ಣುಮುಚ್ಚಿ ಧ್ಯಾನಿಸಿ ಪುರೋಹಿತ ಹೇಳಿದ, ‘ಮಹಾಸ್ವಾಮಿ, ಈ ಜೀವ ಇನ್ನೂ ಪಕ್ವವಾಗಿಲ್ಲ, ಸ್ವಾರ್ಥವಿದೆ, ಆಸೆಬುರುಕತನವಿದೆ. ಈತ ಕೇವಲ ನಾಟಕ ಮಾಡುತ್ತಿದ್ದಾನೆ. ಅವನನ್ನು ಹೊರಗೆ ಹಾಕಿ. ಇನ್ನು ಹತ್ತು ವರ್ಷ ಸಾಧನೆ ಮಾಡಿ ಸ್ವಾರ್ಥ ಕಳೆದು ಬಂದರೆ ಸ್ವೀಕರಿಸಿ’. ಅವನು ಹೇಳಿದಂತೆಯೇ ಆಯಿತು.

ಹೀಗೆ ನಿಷ್ಪಕ್ಷಪಾತವಾದ, ಸ್ವಾರ್ಥವನ್ನು ತ್ಯಜಿಸಿದ, ಮಮಕಾರವನ್ನು ದೂರವಿಟ್ಟ ಜನರು ಮಾತ್ರ ಅಧಿಕಾರದಲ್ಲಿರುವವರಿಗೆ ಮಾರ್ಗದರ್ಶನ ಮಾಡಲು ಅರ್ಹರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT