ಮಂಗಳವಾರ, ನವೆಂಬರ್ 30, 2021
20 °C

ಮಾವು, ಬೇವಾದ ಋಣಫಲ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಆವ ಜನ್ಮದ ಋಣವೊ, ಆವ ಕರ್ಮದ ಕಣವೊ |

ಮಾವಾಗಿ ಬೇವಾಗಿ ಸಂಸಾರ ವನದಿ ||
ಜೀವಕೀಂಟಿಪುವು ಮಾದಕದ ರಸಪಾನಗಳ |
ಭಾವಜ್ವರಂಗಳಿವು – ಮಂಕುತಿಮ್ಮ ||335||

ಪದ-ಅರ್ಥ: ಜೀವಕೀಂಟಿಪುವು=ಜೀವಕೆ+
ಈಂಟಿಪುವು(ಕುಡಿಸುವುವು), ಮಾದಕದ=
ಭಾವೋದ್ವೇಗಗಳ, ಭಾವಜ್ವರಂಗಳವು=ಭಾವ+
ಜ್ವರಂಗಳು+ಅವು.

ವಾಚ್ಯಾರ್ಥ: ಯಾವ ಜನ್ಮದ ಋಣವೊ, ಯಾವ ಕರ್ಮದ ಶೇಷವೊ ಸಂಸಾರವೆಂಬ ತೋಟದಲ್ಲಿ ಮಾವಾಗಿ, ಬೇವಾಗಿ ಬಂದು ಮನುಷ್ಯನಿಗೆ ಭಾವೋನ್ಮಾದದ ರಸಗಳನ್ನು ಕುಡಿಸುತ್ತವೆ. ಅವು ಭಾವಗಳ ಜ್ವರಗಳು.

ವಿವರಣೆ: ಋಣ ಎಂಬುದು ಅಪ್ಪಟ ಭಾರತೀಯವಾದ ಚಿಂತನೆ. ನಾವು ಎಂದೋ ಕೊಟ್ಟಿದ್ದೊ, ಪಡೆದುಕೊಂಡದ್ದೊ ಕಳೆದು ಹೋಗುವುದಿಲ್ಲ. ಅದಕ್ಕೆ ಪ್ರತಿಫಲವನ್ನು ನಾವು ಇಂದಿಲ್ಲ ನಾಳೆ ಹೊಂದಲೇಬೇಕು. ಏನನ್ನಾದರೂ ನೀಡಿದರೆ ಅದು ಯಾವ ರೂಪದಲ್ಲೋ ನಮಗೆ ಮರಳಿ ಬಂದೇ ತೀರುತ್ತದೆ. ನಾವು ಯಾರಿಂದಲಾದರು ಪಡೆದಿದ್ದರೆ, ಅದನ್ನು ನೀಡುವವರೆಗೆ ಮುಕ್ತಿ ಇಲ್ಲ. ಕೆಲವೊಂದು ಬಾರಿ ಇದು ಒಂದೇ ಜನ್ಮದಲ್ಲಿ ಮುಗಿಯಲಿಕ್ಕಿಲ್ಲ. ಅದು ಮುಂದಿನ ಜನ್ಮದಲ್ಲಿ ಬೆನ್ನಟ್ಟಿ ಬರುತ್ತದೆ. ಅದಕ್ಕೇ ಅದನ್ನು ಜನ್ಮಾಂತರದ ಋಣ ಎನ್ನುವುದು. ಇದನ್ನು ನಂಬುವುದು, ಬಿಡುವುದು ವೈಯಕ್ತಿಕವಾದದ್ದು.

ಹರ್ಬಟ್ ಹೂವರ್ ಎಂಬ ತರುಣ ಅಮೆರಿಕದ ಸ್ಟ್ಯಾನ್‌‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಕಲಿಯಲು ಹಣಕಾಸಿನ ತೊಂದರೆಯಾಯಿತು. ಮೂರು-ನಾಲ್ಕು ಜನ ತರುಣರು ಸೇರಿ ಹಣ ಸಂಗ್ರಹ ಮಾಡಲು ಒಂದು ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿದರು. ಅದಕ್ಕಾಗಿ ಪೋಲಂಡ್‌ನ ಪಿಯಾನೋ ವಾದಕ ಪೆಡೆರೆಸ್ಕಿಯವರನ್ನು ಒಪ್ಪಿಸಿದರು. ಅವರಿಗೆ ಒಂದು ನಿಶ್ಚಿತವಾದ ಮೊತ್ತವನ್ನು ಸಂಭಾವನೆಯಾಗಿ ಮತ್ತು ಅವರ ಉಳಿದ ಖರ್ಚನ್ನು ನೀಡುವುದಾಗಿ ಒಪ್ಪಂದವಾಯಿತು. ಆದರೆ ಈ ತರುಣರು ಯೋಜಿಸಿದಂತೆ ಟಿಕೆಟ್‌ಗಳು ಮಾರಾಟವಾಗಲಿಲ್ಲ. ಕಲಾವಿದನಿಗೆ ನೀಡುವ ಸಂಭಾವನೆಯಷ್ಟೂ ಬರಲಿಲ್ಲ. ಕಾರ್ಯಕ್ರಮ ಮುಗಿದ ಮೇಲೆ ತರುಣರು ಒಪ್ಪಿದ್ದಕ್ಕಿಂತ ಕಡಿಮೆ ಮೊತ್ತದ ಚೆಕ್ಕನ್ನು ಕೊಟ್ಟು ವಿಷಯವನ್ನು ಆದಂತೆ ತಿಳಿಸಿದರು. ಆಗ ಪೆಡೆರೆಸ್ಕಿ ಚೆಕ್ಕನ್ನು ಹರಿದು ಹಾಕಿ, ಈ ಹಣವನ್ನು ನಿಮ್ಮ ಶಿಕ್ಷಣಕ್ಕೆ ಬಳಸಿಕೊಳ್ಳಿ ಎಂದು ಹೇಳಿ ಹೋದ. ಕಾಲಚಕ್ರ ತಿರುಗಿತು. ಪೆಡೆರೆಸ್ಕಿ ಪೋಲಂಡ್‌ನ ಪ್ರಧಾನಮಂತ್ರಿಯಾದರು. ಆಗ ದೇಶ ಹಿಂದೆಂದೂ ಕಾಣದ ಬರಗಾಲಕ್ಕೆ ತುತ್ತಾಯಿತು. ಪ್ರಧಾನಮಂತ್ರಿ ಪೆಡೆರೆಸ್ಕಿ ವಿಶ್ವಬ್ಯಾಂಕಿನ ಸಹಾಯವನ್ನು ಕೇಳಿ ಪತ್ರ ಬರೆದರು. ಅಲ್ಲಿಂದ ದೊಡ್ಡ ಮೊತ್ತದ ಸಹಾಯ ಹರಿದುಬಂದು ದೇಶವನ್ನು ಕಾಪಾಡಿತು. ವಿಶ್ವಬ್ಯಾಂಕಿನ ಆ ಅಧಿಕಾರಿಯನ್ನು ಕಂಡು ಕೃತಜ್ಞತೆ ಹೇಳಲು ಹೋದಾಗ ಆತ ಹೇಳಿದ, ‘ಸರ್, ತಾವು ನನಗೆ ವಿದ್ಯಾರ್ಥಿಯಾಗಿದ್ದಾಗ ಸಹಾಯ ಮಾಡಿದ್ದನ್ನು ಹೇಗೆ ಮರೆಯಲಿ?’ ಅವನೇ ಹರ್ಬಟ್ ಹೂವರ್. ಹಿಂದೆಂದೊ ಮಾಡಿದ ಉಪಕಾರ ಮರಳಿ ಮಾವಿನ ಸಿಹಿಯಾಗಿ ಬಂದಿತ್ತು.

ತನ್ನ ಸಹೋದದರರಿಗೆ ಸದಾ ಅನ್ಯಾಯ ಮಾಡ ಹೊರಟ ದುರ್ಯೋಧನ ಚಕ್ರವರ್ತಿಯಾಗಿದ್ದರೂ ತೊಡೆ ಮುರಿದುಕೊಂಡು, ತನ್ನನ್ನು ಕಚ್ಚಲು ಬರುವ ನಾಯಿನರಿಗಳಿಂದ ರಕ್ಷಿಸಿಕೊಳ್ಳಲೂ ಆಗದಷ್ಟು ಅಸಹಾಯಕನಾಗಿ ಬೀಳಬೇಕಾಯಿತು, ಸೊಕ್ಕಿನಿಂದ ಮೆರೆದ ಸದ್ದಾಂ ಹುಸೇನ್ ತನ್ನ ದೇಶದಲ್ಲೇ ಗಲ್ಲಿಗೇರಬೇಕಾಯಿತು. ಅನ್ಯಾಯದ ಪ್ರತಿಫಲ ಋಣವಾಗಿ, ಬೇವಿನ ಕಹಿಯಾಗಿ ಕಾಡುತ್ತದೆ. ಅದನ್ನು ಕಗ್ಗ ಹೇಳುತ್ತದೆ ಮಾಡಿದ ಕರ್ಮಫಲ ಮಾವಾಗಿ, ಬೇವಾಗಿ ನಮ್ಮನ್ನು ತಟ್ಟುತ್ತದೆ, ರಸಪಾನ ಮಾಡಿಸುತ್ತದೆ. ನಮ್ಮಲ್ಲಿ ಭಾವಗಳ ಜ್ವರವನ್ನುಂಟುಮಾಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.