ಶುಕ್ರವಾರ, ಮೇ 14, 2021
27 °C

ಬೆರಗಿನ ಬೆಳಕು: ನವತೆ ಯಮನ ಕಾಣಿಕೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಜವನ ನಿಂದಿಪುದೇಕೆ ಸರ್ವಘಾತಕನೆಂದು ?|
ಭುವಿಗೆ ವೃದ್ಧ ಸಮೃದ್ಧಿಯವನು ಸಮ್ಮನಿರಲ್ ||
ನವ ಜನಕ್ಕೆಡೆಯೆತ್ತಲಾರುಮೆಡೆಬಿಡದೆ ನಿಲೆ ?|
ನವತೆಯವನಿಂ ಜಗಕೆ – ಮಂಕುತಿಮ್ಮ || 402 ||

ಪದ-ಅರ್ಥ: ಜವನ=ಯುಮರಾಜನ, ಭುವಿಗೆ=ಭೂಮಿಗೆ,  ನವಜನಕ್ಕೆಡೆಯೆತ್ತಲಾರುಮೆಡೆಬಿಡದೆ=ನವಜನಕ್ಕೆ+ಎಡೆ+ಎತ್ತ+ಯಾರೂ+ಎಡೆಬಿಡದೆ(ಜಗವನ್ನು ಬಿಡದೆ), ನವತೆಯವನಿಂ=ನವತೆ(ಹೊಸತನ)+ಅವನಿಂ(ಅವನಿಂದ)

ವಾಚ್ಯಾರ್ಥ: ಎಲ್ಲವನ್ನು ಘಾತಿಸುವವನೆಂದು ಯಮನನ್ನು ಹಳಿಯುವುದೇಕೆ? ಅವನು ಕರ್ತವ್ಯವನ್ನು ಮಾಡದೆ ಸುಮ್ಮನಿದ್ದರೆ ಭೂಮಿಯಲ್ಲಿ ವೃದ್ಧರದೇ ಸಮೃದ್ಧಿಯಾಗುತ್ತಿತ್ತು. ಯಾರೂ ತಮ್ಮ ತಮ್ಮ ಸ್ಥಾನಗಳನ್ನು ಖಾಲಿ ಮಾಡದಿದ್ದರೆ ಹೊಸಬರಿಗೆ ಜಾಗವೆಲ್ಲಿ? ಅವನಿಂದಲೇ ಜಗತ್ತಿಗೆ ಹೊಸತನ ಬರುತ್ತದೆ.

ವಿವರಣೆ: ಎಲ್ಲರ ಪ್ರಾಣಹರಣ ಮಾಡುತ್ತಾನೆಂದು ಯಮನನ್ನು ಎಲ್ಲರೂ ಟೀಕಿಸುತ್ತಾರೆ. ಅವನು ಮಹಾಕ್ರೂರಿ, ಘಾತಕನೆಂದು ಜರೆಯುತ್ತಾರೆ. ನಾವು ಚಲನಚಿತ್ರಗಳಲ್ಲಿ, ದೂರದರ್ಶನದಲ್ಲಿ ಯಮನನ್ನು ತೋರಿಸುವುದು ಭಯಂಕರವಾಗಿಯೇ. ಕಪ್ಪು, ಧಡೂತಿ ಆಸಾಮಿ, ಕಪ್ಪು ಕೋಣವನ್ನೇರಿಕೊಂಡು. ಖಳನಾಯಕರಂತೆ ಕಣ್ಣು ಕೆಂಪುಮಾಡಿಕೊಂಡು, ಅಬ್ಬರಿಸುತ್ತ, ಕೈಯಲ್ಲಿಯ ಹಗ್ಗವನ್ನು ಗರಗರನೆ ತಿರುಗಿಸುತ್ತ, ಬರುವುದೇ ನಮಗೆ ತೋರುವ ದೃಶ್ಯ. ನಾನು ಅವನನ್ನು ಇದುವರೆಗೂ ಕಂಡಿಲ್ಲ. ಆದರೆ ಅವನು ಹಾಗಿರುವುದು ಸಾಧ್ಯವಿಲ್ಲವೆಂಬುದು ನನ್ನ ನಂಬಿಕೆ. ಯಾಕೆಂದರೆ ಕಠೋಪನಿಷತ್ತಿನಲ್ಲಿ ಬರುವ ಯಮಧರ್ಮ ವಿನಯಮೂರ್ತಿ, ಕರ್ತವ್ಯನಿಷ್ಠ. ತನ್ನ ಧರ್ಮವನ್ನು ಬಿಗಿಯಾಗಿ ನಿರ್ವಹಿಸುವುದರಿಂದ ಆತ ಯಮಧರ್ಮ.

ಯಮಧರ್ಮ ತನ್ನ ಕೆಲಸವನ್ನು ನಿಭಾಯಿಸದೆ ಸುಮ್ಮನಿದ್ದು ಬಿಟ್ಟರೆ ಏನಾದೀತು? ಪ್ರಪಂಚದಲ್ಲಿ ಯಾರೂ ಸಾಯದೇ ಉಳಿದರೆ ಆಗುವ ಅನಾಹುತವೇ ಆಗುತ್ತದೆ. ಹೊಸ ಜೀವಗಳು ಬರುವುದು ತಪ್ಪುವುದಿಲ್ಲ, ಹಳೆಯ ಜೀವಗಳು ಇಲ್ಲಿಂದ ಹೊರಡುವುದಿಲ್ಲ. ಬದುಕು ಅಸಹನೀಯವಾಗುತ್ತದೆ. ಆಗ ಆಗುವುದನ್ನೇ ಕಗ್ಗ ಸುಂದರವಾಗಿ ‘ವೃದ್ಧ ಸಮೃದ್ಧಿ’ ಎಂದು ಕರೆಯುತ್ತದೆ. ಹಾಗೆಂದರೆ ಪ್ರಪಂಚದಲ್ಲಿ ವೃದ್ಧರ ಸಂಖ್ಯೆಯ ಸಮೃದ್ಧಿಯಾಗುತ್ತದೆ. ತರುಣರು ಮತ್ತು ಸಣ್ಣ ವಯಸ್ಸಿನವರು ಸಾಯುತ್ತಾರಲ್ಲವೇ? ಹೌದು. ಆದರೆ ಜಗತ್ತನ್ನು ತೊರೆದು ಹೋಗುವ ವೃದ್ಧರ ಸಂಖ್ಯೆಗೆ ಹೋಲಿಸಿದರೆ ಅವರ ಸಂಖ್ಯೆ ಕಡಿಮೆ. ಹೀಗಾಗಿ ಇಡೀ ಪ್ರಪಂಚ ವೃದ್ಧರಿಂದ ತುಂಬಿ ಹೋಗಬಹುದು. ಜಗತ್ತು ವೃದ್ಧರಿಂದಲೇ ಭರ್ತಿಯಾಗಿ ಹೋದರೆ ಹೊಸ ಪೀಳಿಗೆಗೆ ಸ್ಥಳವೆಲ್ಲಿ ದೊರೆತೀತು?

ಈ ದೃಷ್ಟಿಯಿಂದ ನೋಡಿದಾಗ ಯಮರಾಜ ದೊಡ್ಡ ಉಪಕಾರಿ ಎನ್ನಿಸುತ್ತದೆ. ಜಗತ್ತಿನಲ್ಲಿ ಹಳೆಯದಾದ ಜೀವಗಳನ್ನು ತೆಗೆದುಕೊಂಡು ಹೊಸಜೀವಗಳಿಗೆ ಸ್ಥಳ ಮಾಡಿಕೊಟ್ಟು ಅದು ಸದಾಕಾಲ ನವನವೀನವಾಗಿರುವಂತೆ ನೋಡಿಕೊಳ್ಳುತ್ತಾನೆ. ನವೀನತೆಯ ಸೃಷ್ಟಿ ಯಮರಾಜನ ಕೊಡುಗೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.