ಶನಿವಾರ, ಡಿಸೆಂಬರ್ 5, 2020
23 °C

ಬೆರಗಿನ ಬೆಳಕು: ದಣಿಯದ ವಿಧಿಯಾಟ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಗುಣಿಗುಣಿಸಿ ತಿಣುಕುತ್ತ ಹೆಣಗಾಡಿ ಫಲವೇನು ? |
ಗಣನೆಗೆಟುಕದದೊಂದಚಿಂತ್ಯವೆತ್ತಲೊ ತಾನ್ ||
ಅಣಗಿರ್ದು ನಿನ್ನೆಲ್ಲ ಗಣಿತಗಳನಣಕಿಪುದು |
ದಣಿಯದಾ ವಿಧಿ ವಿಕಟ – ಮಂಕುತಿಮ್ಮ || 355 ||

ಪದ-ಅರ್ಥ: ಗಣನೆಗೆಟುಕದದೊಂದಚಿಂತ್ಯವೆತ್ತಲೊ=ಗಣನೆಗೆ(ಲೆಕ್ಕಕ್ಕೆ)+ಎಟುಕದ (ನಿಲುಕದ)+ಒಂದು+ಅಚಿಂತ್ಯವು (ಚಿಂತೆಯನ್ನು ಮೀರಿದ್ದು)+ಎತ್ತಲೊ, ಅಣಗಿರ್ದು(ಅಡಗಿದ್ದು), ಗಣಿತಗಳನಣಕಿಪುದು=ಗಣಿತಗಳನು(ಲೆಕ್ಕಗಳನ್ನು)+ಅಣಕಿಪುದು(ಅಣಿಕಿಸುತ್ತದೆ)
ವಾಚ್ಯಾರ್ಥ: ಒದ್ದಾಡುತ್ತ, ಬರೀ ಲೆಕ್ಕಾಚಾರ ಮಾಡುತ್ತ ಹೆಣಗಾಡಿದರೆ ಫಲವೇನು? ನಮ್ಮ ಲೆಕ್ಕಕ್ಕೆ ಸಿಕ್ಕದ, ನಮ್ಮ ಚಿಂತನೆಗಳನ್ನು ಮೀರಿದ ಒಂದು ಶಕ್ತಿ ಎಲ್ಲೋ ಅಡಗಿದ್ದು ನಮ್ಮ ಲೆಕ್ಕಚಾರಗಳನ್ನೆಲ್ಲ ಬುಡಮೇಲು ಮಾಡಿಬಿಡುತ್ತದೆ. ವಿಧಿಯ ಈ ವಿಕಟದ ಆಟ ಎಂದೂ ದಣಿಯದೆ ನಡೆಯುವಂಥದ್ದು.

ವಿವರಣೆ: ವೈಕುಂಠದಲ್ಲಿ ಮಹಾವಿಷ್ಣುವನ್ನು ಕಾಣಲು ಒಂದು ದಿನ ಯುಮರಾಜ ಹೊರಟ. ವೈಕುಂಠದ ಮಹಾದ್ವಾರವನ್ನು ಪ್ರವೇಶಿಸುವಾಗ ಅವನ ದೃಷ್ಟಿ ಬಲಗಡೆಗೆ ಮರದ ಕೆಳಗೆ ಕಲ್ಲುಮಂಚದ ಮೇಲೆ ಕುಳಿತಿದ್ದ ಪಕ್ಷಿಯ ಮೇಲೆ ಬಿತ್ತು. ಅವನಿಗೆ ಯಾಕೋ ಆಶ್ಚರ್ಯವಾದಂತಾಯಿತು. ಹುಬ್ಬೇರಿಸಿ ಅದನ್ನು ದಿಟ್ಟಿಸಿ ನೋಡಿ, ಭುಜ ಕುಣಿಸಿ ಒಳಗಡೆಗೆ ಹೋದ. ಪಕ್ಷಿಗೆ ತುಂಬ ಭಯವಾಯಿತು. ಯುಮರಾಜ ತನ್ನನ್ನು ನೋಡಿದ ಪರಿಯಿಂದ ಅದಕ್ಕೆ ತನ್ನ ಸಾವು ಬಂದೇ ಬಿಟ್ಟಿತು ಎನ್ನಿಸಿತು. ಅದು ಬಿಕ್ಕಿ, ಬಿಕ್ಕಿ ಅಳತೊಡಗಿತು. ಅದನ್ನು ಕಂಡು ಮಹಾದ್ವಾರದ ಇನ್ನೊಂದು ಬದಿಗೆ ಕುಳಿತಿದ್ದ ಗರುಡನಿಗೆ ಕರುಣೆ ಉಕ್ಕಿತು. “ಯಾಕಯ್ಯ ಅಳುತ್ತೀಯಾ?” ಎಂದು ಕೇಳಿದ. ಪುಟ್ಟ ಪಕ್ಷಿ ನಡೆದಿದ್ದೆನ್ನಲ್ಲ ಹೇಳಿ ತನ್ನ ಆಯಸ್ಸು ಮುಗಿಯಿತು ಎಂದು ಅತ್ತಿತು. ಗರುಡ ವಿಷ್ಣುವಿನ ವಾಹನವಾದರೂ ಪಕ್ಷಿಯೇ ತಾನೆ? ಅದಕ್ಕೂ ಸ್ವಜಾತಿ ಮೋಹ ಇದ್ದದ್ದೇ. “ಚಿಂತೆ ಮಾಡಬೇಡ. ಯಮನ ದೃಷ್ಟಿಗೂ ಬೀಳದಂತೆ ನಿನ್ನನ್ನು ಪಾರು ಮಾಡುತ್ತೇನೆ” ಎಂದು ಪುಟ್ಟ ಪಕ್ಷಿಯನ್ನು ತನ್ನ ಚುಂಚಿನಲ್ಲಿ ಮೆತ್ತಗೆ ಹಿಡಿದು ಮನೋವೇಗದಲ್ಲಿ ಹಾರಿ ಅದನ್ನು ಗಂಧಮಾದನ ಪರ್ವತದ ಶಿಖರದ ಮೇಲೆ ಇಳಿಸಿ, ಮರಳಿ ಬಂದು ತನ್ನ ಸ್ಥಾನದಲ್ಲಿ ಕುಳಿತ. ಸ್ವಲ್ಪ ಹೊತ್ತಿನ ಮೇಲೆ ಹೊರಗೆ ಬಂದ ಯಮರಾಜ ಪಕ್ಷಿ ಕುಳಿತಿದ್ದ ಸ್ಥಳವನ್ನು ನೋಡಿ, ಆಶ್ಚರ್ಯದಿಂದ ಹುಬ್ಬೇರಿಸಿ, ಮಗುಳುನಗೆ ನಕ್ಕ. ಗರುಡ ಕೇಳಿದ, “ಯಾಕೆ ಯಮರಾಜ, ಆ ಪುಟ್ಟ ಪಕ್ಷಿಯನ್ನು ಇಲ್ಲಿ ಕೊಲ್ಲಬೇಕೆಂದು ಮಾಡಿದ್ದೆಯಾ?” ಯಮರಾಜ ಹೇಳಿದ, “ಪಕ್ಷಿ ಇಲ್ಲೇ ಇತ್ತಲ್ಲ. ಅದಕ್ಕೇ ಆಶ್ಚರ್ಯ. ಯಾಕೆಂದರೆ ಅದರ ಹಣೆಬರಹದಲ್ಲಿ ಈ ಕ್ಷಣ ಅದು ಗಂಧಮಾದನ ಪರ್ವತದ ಶಿಖರದ ಮೇಲೆ ಸಾಯಬೇಕೆಂದಿತ್ತು. ಅದು ಇಲ್ಲಿದ್ದರೆ ಅಲ್ಲಿ ಹೇಗೆ ಅಷ್ಟು ಬೇಗ ಹೋದೀತು ಎಂದು ಆಶ್ಚರ್ಯವಾಗಿತ್ತು. ನಿನ್ನ ಹೊರತು ಯಾರು ಈ ಮನೋವೇಗದಲ್ಲಿ ಅದನ್ನು ಅಲ್ಲಿ ತಲುಪಿಸಿಯಾರು? ಅಂತೂ ಸರಿಯಾಗಿ ಅದನ್ನು ಮುಟ್ಟಿಸಿದ್ದಕ್ಕೆ ಧನ್ಯವಾದಗಳು”. ಪಕ್ಷಿಯನ್ನು ಪಾರುಮಾಡಲು ಹೋಗಿ ಗರುಡ ಅದನ್ನು ತಾನೇ ಸಾವಿನ ಬಾಯಿಗೆ ತಳ್ಳಿ ಬಂದಂತಾಗಿತ್ತು.

ಈ ಕಗ್ಗದ ಸಂದೇಶ ಇದೇ. ಏನೋ ಮಾಡಲು ಹೋಗಿ ಏನೆಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ಗುಣಾಕಾರ, ಭಾಗಾಕಾರ ಮಾಡಿ ಯೋಜನೆಗಳನ್ನು ಹಾಕುತ್ತೇವೆ. ಆದರೆ ನಮ್ಮ ಎಲ್ಲ ಲೆಕ್ಕಗಳನ್ನು ತಲೆಕೆಳಗೆ ಮಾಡಿ ಬೇರೊಂದನ್ನೇ ಸಾಧಿಸುವ, ನಮ್ಮ ಕಣ್ಣಿಗೆ ಕಾಣದ ಶಕ್ತಿಯೊಂದಿದೆ. ಅದೇ ವಿಧಿ. ನಮ್ಮನ್ನು ಪರೀಕ್ಷೆಗೆ ಒಡ್ಡಿ, ಶಕ್ತಿಗಳನ್ನು ಪರೀಕ್ಷಿಸಿ, ತನಗೆ ಬೇಕಾದದನ್ನೇ ಮಾಡುವ ವಿಧಿಯ ಆಟ ಎಂದಿಗೂ ದಣಿಯದ, ಮುಗಿಯದ ಆಟ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.