ಬುಧವಾರ, ಜನವರಿ 19, 2022
27 °C

ಬೆರಗಿನ ಬೆಳಕು: ಪಾಪ-ಪುಣ್ಯದ ತಕ್ಕಡಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಡಿ.ವಿ.ಗುಂಡಪ್ಪ

ತಕ್ಕಡಿಯದೈವ ಪಿಡಿದದರೊಂದು ತಟ್ಟೆಯಲಿ |
ಒಕ್ಕುವುದು ಬಿಡದೆ ಜೀವಿಯ ಪಾಪಚಯವ ||
ಇಕ್ಕುವುದು ಸುಕೃತಗಳನಿನ್ನೊಂದರೊಳಗಲ್ಲಿ |
ಭಕ್ತಿ ಪಶ್ಚಾತ್ತಾಪ-ಮಂಕುತಿಮ್ಮ || 508 ||

ಪದ-ಅರ್ಥ: ಪಿಡಿದದರೊಂದು=ಪಿಡಿದು(ಹಿಡಿದು)+ಅದರ+ಒಂದು, ಒಕ್ಕುವುದು=ಗುಡ್ಡೆ ಹಾಕುವುದು, ಪಾಪಚಯ=ಪಾಪದ ರಾಶಿ, ಇಕ್ಕುವುದು=ಇಡುವುದು, ಸುಕೃತಗಳನಿನ್ನೊಂದರೊಳಗಲ್ಲಿ=ಸುಕೃತಗಳನ್ನು (ಒಳ್ಳೆಯ ಕಾರ್ಯಗಳನ್ನು)+ಇನ್ನೊಂದರೊಳಗೆ+ಅಲ್ಲಿ

ವಾಚ್ಯಾರ್ಥ: ದೈವ ತಕ್ಕಡಿಯನ್ನು ಹಿಡಿದುಕೊಂಡು, ಒಂದು ತಟ್ಟೆಯಲ್ಲಿ ಜೀವಿಯ ಪಾಪರಾಶಿಯನ್ನು ಬಿಡದೆ ತುಂಬುತ್ತದೆ. ಇನ್ನೊಂದು ತಟ್ಟೆಯಲ್ಲಿ ಅವನ ಪುಣ್ಯ ಕಾರ್ಯಗಳನ್ನು ಪೇರಿಸುತ್ತದೆ. ಪಶ್ಚಾತ್ತಾಪವೇ ಭಕ್ತಿ.

ವಿವರಣೆ: ಬದುಕಿನಲ್ಲಿ ಕರ್ಮ ಮಾಡದೆ ಇರುವುದು ಸಾಧ್ಯವಿಲ್ಲ. ಪ್ರತಿಯೊಂದು ಕರ್ಮಕ್ಕೂ ಕರ್ಮಫಲವನ್ನು ಅನುಭವಿಸಲೇಬೇಕೆನ್ನುವುದು ಕರ್ಮಸಿದ್ಧಾಂತ. ಒಳ್ಳೆಯ ಕರ್ಮಗಳನ್ನು ಮಾಡಿದಾಗ ಪುಣ್ಯವೂ, ಕೆಟ್ಟ ಕಾರ್ಯಗಳನ್ನು ಮಾಡಿದಾಗ ಪಾಪವೂ ಬರುತ್ತವೆಂದೂ, ಸುಖದುಃಖಗಳು ಈ ಪುಣ್ಯ-ಪಾಪಗಳ ಫಲವೆಂದೂ, ಜನರು ನಂಬಿದ್ದಾರೆ. ಪುರಾಣಗಳಲ್ಲಿ, ‘ಪರೋಪಕಾರಃ ಪುಣ್ಯಾಯ, ಪಾಪಾಯ ಪರಿಪೀಡನಂ’ ಎಂದಿದೆ. ಪರೋಪಕಾರ ಮಾಡಿದರೆ ಪುಣ್ಯವೂ, ಪರರಿಗೆ ಹಿಂಸೆ ಮಾಡಿದರೆ ಪಾಪವೂ ಲಭಿಸುತ್ತವೆ. ಎಲ್ಲರೂ ಪುಣ್ಯದ ಫಲವಾದ ಸುಖವನ್ನು ಅಪೇಕ್ಷಿಸುತ್ತಾರೆಯೇ ವಿನಃ ಪುಣ್ಯಕಾರ್ಯಗಳನ್ನು ಮಾಡುವುದಿಲ್ಲ. ಪಾಪದ ಫಲವಾದ ದುಃಖವನ್ನು ಯಾರೂ ಬಯಸುವುದಿಲ್ಲ. ಆದರೆ ಪಾಪಕಾರ್ಯಗಳನ್ನು ಬಿಡುವುದಿಲ್ಲ, ಎನ್ನುತ್ತದೆ ಪುರಾಣದ ನುಡಿ.

ಈ ಕಗ್ಗ ಪ್ರತಿಮೆಯೊಂದನ್ನು ಸೃಷ್ಟಿಸುತ್ತದೆ. ದೈವ ಒಬ್ಬ ವ್ಯಾಪಾರಿಯಂತೆ ತಕ್ಕಡಿಯನ್ನು ಹಿಡಿದುಕೊಂಡು ಕುಳಿತಿದೆ. ನಾವು ಮಾಡಿದ ಪ್ರತಿಯೊಂದು, ಚಿಕ್ಕ ಪಾಪವನ್ನು ಬಿಡದೆ ತಂದು ತಕ್ಕಡಿಯ ಒಂದು ತಟ್ಟೆಯಲ್ಲಿ ಪೇರಿಸುತ್ತದೆ. ಅಂತೆಯೇ ನಾವು ಮಾಡಿದ ಚಿಕ್ಕಪುಟ್ಟ ಒಳ್ಳೆಯ ಕಾರ್ಯಗಳನ್ನು ತಂದು ಮತ್ತೊಂದು ತಟ್ಟೆಯಲ್ಲಿ ಹಾಕುತ್ತದೆ. ಎರಡನ್ನು ತೂಕಕ್ಕೆ ಹಾಕಿ, ಪಾಪ-ಪುಣ್ಯಗಳಿಗೆ ತಕ್ಕಂತೆ ಕೃಪೆಯನ್ನೋ, ಶಿಕ್ಷೆಯನ್ನೋ ನೀಡುತ್ತದೆ. ಅದರಿಂದ ಬಿಡುಗಡೆ ಸಾಧ್ಯವಿಲ್ಲ. ಹಾಗಾದರೆ ಪಾಪ ಪರಿಹಾರಕ್ಕೆ ಏನು ಉಪಾಯ? ಬಸವಣ್ಣನವರು ಒಂದು ಉಪಾಯವನ್ನು ಸೂಚಿಸುತ್ತಾರೆ. ‘ಕೂಡಲ ಸಂಗಯ್ಯನ ನೆನೆದಡೆ ಪಾಪವು ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ’ ಎನ್ನುತ್ತಾರೆ. ಅಂದರೆ ಭಕ್ತಿಯಿಂದ ಪಾಪನಾಶ ಸಾಧ್ಯ. ‘ಪ್ರಾಣಿಹತ್ಯೆ ಮಾಡುವ ಸೂನೆಗಾರನ ಕತ್ತಿ ಪರುಷವ ಮುಟ್ಟಲೊಡನೆ ಹೊನ್ನಾಗದೆ?’ ಎಂದು ಕೇಳುತ್ತಾರೆ. ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ ಪಡುವುದೇ ಭಕ್ತಿಯ ದಾರಿ. ಹಿಂದೆ ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು, ಮತ್ತೊಮ್ಮೆ ಅಂಥ ತಪ್ಪುಗಳನ್ನು ಮಾಡದಿರುವುದೆ ಪಾಪನಾಶದ ಪಥ.

ಆದರೆ ಪ್ರಶ್ನೋಪನಿಷತ್ತು ಪಾಪ-ಪುಣ್ಯಗಳೆರಡೂ ಬಂಧವೇ ಎನ್ನುತ್ತದೆ. ಪುಣ್ಯ ಚಿನ್ನದ ಸರಪಳಿ, ಪಾಪ ಕಬ್ಬಿಣದ ಸರಪಳಿ ಎರಡೂ ಬಂಧಗಳೇ. ಪುಣ್ಯಸಂಪಾದನೆ ಪಾಪದ ಸಾಲವನ್ನು ತೀರಿಸಲಿಕ್ಕಾಗಿ. ಸಾಲ ತೀರಿದ ಮೇಲೆ ಪುಣ್ಯಕ್ಕೆ ದಾಸನಾಗಬೇಕಿಲ್ಲ. ಉಪನಿಷತ್ತು ಹೇಳುತ್ತದೆ, ‘ತದಾ ವಿದ್ವಾನ್ ಪುಣ್ಯಪಾಪೇ ವಿದೂಯ ನಿರಂಜನಃ ಪರಮಂ ಸಾಮ್ಯಮುಪೈತಿ’. ವಿದ್ವಾಂಸನು ಪುಣ್ಯ-ಪಾಪಗಳಿಂದ ಪಾರಾಗಿ ನಿರಂಜನನಾಗಿ ಪರಮಶಾಂತಿಯನ್ನು ಪಡೆಯುತ್ತಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು