ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವಿವೇಕವನ್ನು ಕೆಡಿಸದ ಭಾವನೆಗಳು

Last Updated 31 ಮೇ 2021, 19:30 IST
ಅಕ್ಷರ ಗಾತ್ರ

ಭಾವರಾಗೋದ್ರೇಕ ತಾನೆ ತಪ್ಪೇನಲ್ಲ |
ಧೀವಿವೇಕದ ಸಮತೆಯದರಿನದಿರದಿರೆ ||
ಸ್ವಾವಿದ್ಯೆಯಾ ಮೋಹ ಮಮತೆಯದನಂಟದಿರೆ |
ಪಾವನವೊ ಹೃನ್ಮಥನ – ಮಂಕುತಿಮ್ಮ || 423 ||

ಪದ-ಅರ್ಥ: ಭಾವರಾಗೋದ್ರೇಕ= ಭಾವ+ ರಾಗ+ ಉದ್ರೇಕ, ಧೀವಿವೇಕ= ಧೀ (ಮನಸ್ಸು, ಬುದ್ಧಿ, ಆತ್ಮಗಳ ಸಂಯೋಗ, ಆತ್ಮದ ತಿಳುವಳಿಕೆ)+ ವಿವೇಕ, ಸಮತೆಯದರಿನದಿರದಿರೆ= ಸಮತೆ (ಸಮತ್ವ)+ ಅದರಿಂ (ಅದರಿಂದ)+ ಅದಿರದಿರೆ (ಚಂಚಲವಾಗದಿದ್ದರೆ), ಸ್ವಾವಿದ್ಯೆಯಾ= ಸ್ವ+ಅವಿದ್ಯೆ (ಅಜ್ಞಾನ), ಮಮತೆಯದನಂಟದಿರೆ= ಮಮತೆ+ ಅದನು +ಅಂಟದಿರೆ, ಹೃನ್ಮಥನ+ ಹೃದಯದ ಮಂಥನ.

ವಾಚ್ಯಾರ್ಥ: ಭಾವರಾಗ ಉದ್ರೇಕಗಳು ಸಾಮಾನ್ಯ. ಅವಿದ್ದರೆ ತಪ್ಪಲ್ಲ. ಆದರೆ ಅವು ನಮ್ಮ ಮನಸ್ಸಿನ, ಬುದ್ಧಿಯ ಸ್ಥಿಮಿತವನ್ನು ಅಲುಗಾಡಿಸಬಾರದು. ಅಜ್ಞಾನ, ಮೋಹ, ಮಮತೆಗಳು ಅದಕ್ಕೆ ಅಂಟದಿದ್ದರೆ, ಈ ಹೃದಯ ಮಂಥನ ಬದುಕಿಗೆ ಪಾವನತೆಯನ್ನು ನೀಡುತ್ತದೆ.

ವಿವರಣೆ: ಪ್ರಪಂಚದಲ್ಲಿರುವಾಗ, ಅಲ್ಲಿಯ ಅನುಭವಗಳು, ಮನಸ್ಸಿನಲ್ಲಿ ಭಾವ, ರಾಗ, ಉದ್ರೇಕಗಳನ್ನು ಉಂಟು ಮಾಡುವುದು ಸಹಜ. ಅವುಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳು. ಅವುಗಳಿಂದ ನಮಗೆ ತೊಂದರೆ ಎನ್ನಿಸಿದರೂ, ಅವುಗಳೇ ನಮ್ಮ ಬದುಕಿನ ಚಾಲಕ, ಪ್ರೇರಕ ಶಕ್ತಿಗಳು. ಆದರೆ ಅವುಗಳ ಪ್ರಭಾವದಿಂದ ನಮ್ಮ ವಿವೇಕದ ಸ್ಥಿಮಿತ, ಸಮತ್ವ ಅಲುಗಾಡಬಾರದು. ಅದು ವಿಚಲಿತವಾದರೆ ಅನಾಹುತ ಕಟ್ಟಿಟ್ಟಿದ್ದು. ಅಪೇಕ್ಷೆ ಒಳ್ಳೆಯದು ಆದರೆ ಅದು ಅತಿಯಾದ ಮಹತ್ವಾಕಾಂಕ್ಷೆಯಾದಾಗ ತನ್ನ ದೊರೆಯನ್ನೇ ಕೊಲ್ಲುವ ಮ್ಯಾಕ್‌ಬೆಥ್‍ನಂತಾಗುತ್ತದೆ. ರಾಜಕೀಯ ಒಳನೋಟಗಳು ಭಿನ್ನವಾಗಿರುವುದು ಸರಿಯೆ, ಆದರೆ ಅದು ತಡೆಯಲಾರದ ಅಸಹನೆಯಾದಾಗ, ಗೋಡ್ಸೆ ಮನೋಧರ್ಮವಾಗಿ ಅನಾಹುತವನ್ನು ಮಾಡುತ್ತದೆ. ಮಕ್ಕಳ ಬಗೆಗಿನ ಮೋಹ ಯಾರನ್ನೂ ಬಿಟ್ಟಿದ್ದಲ್ಲ ಆದರೆ ಅದೂ ಅತಿಯಾದಾಗ ಕಣ್ಣು ಕಟ್ಟಿಸಿಬಿಡುತ್ತದೆ. ಅಂಥ ಪ್ರಸಂಗಗಳಲ್ಲೇ ರಾಜಾಲಿಯರನಂಥವರು, ಧೃತರಾಷ್ಟ್ರನಂಥವರು ಕಂಡುಬರುತ್ತಾರೆ. ಶೇಕ್ಸ್‌ಪಿಯರನ ಯಾವುದೇ ದುರಂತನಾಟಕವನ್ನು ಗಮನಿಸಿ. ಅದರಲ್ಲಿ ಪ್ರಧಾನರಾದವರು ತಮ್ಮ ಭಾವ, ರಾಗ, ಉದ್ರೇಕಗಳನ್ನು ಹತೋಟಿಯಲ್ಲಿಟ್ಟುಕೊಳ್ಳದೆ, ತಮಗೆ ಸಾಧ್ಯವಾಗಬಹುದಾಗಿದ್ದ ಎತ್ತರದ ನೆಲೆಗಳನ್ನು ತಪ್ಪಿಸಿಕೊಳ್ಳುತ್ತಾರೆ. ಹೆಂಡತಿಯ ಮೇಲಿನ ಪ್ರೀತಿ ಸಹಜ ಮತ್ತು ಅವಶ್ಯಕ. ಆದರೆ ಅತಿಯಾದ ಮೋಹ ಸಂಶಯವನ್ನು ಹುಟ್ಟುಹಾಕುತ್ತದೆ. ಚಾಡಿಬುರುಕ ಇಯಾಗೋನ ಮಾತು ಕೇಳಿದ ನಾಯಕ ಒಥೆಲ್ಲೊ ತನ್ನ ನವವಧು ಡೆಸ್ಡಿಮೊನಾಳ ನಡತೆಯನ್ನು ಸಂಶಯಿಸಿ ಕೊಂದುಹಾಕಿ ದುರಂತಕ್ಕೆ ನಾಂದಿ ಹಾಡುತ್ತಾನೆ. ಇಂಥವೆಷ್ಟವನ್ನೋ ನಾವು ನಮ್ಮ ಸುತ್ತಮುತ್ತಲೇ ಕಾಣುತ್ತೇವೆ. ಹಾಗಾದರೆ ಈ ಭಾವನೆಗಳೇ ಇರಬಾರದೆ? ಭಾವನೆಗಳಿಲ್ಲದ ಜೀವನಕ್ಕೆ ಯಾವ ಸೊಗಸೂ ಇಲ್ಲ. ಆದರೆ ನಮ್ಮ ಅತಿಯಾದ ಅಜ್ಞಾನ, ಮೋಹ, ಮಮತೆಗಳು ನಮ್ಮ ಧೀವಿವೇಚನೆಯನ್ನು ತಟ್ಟಿ ಅದರ ಸ್ಥಿಮಿತತೆಯನ್ನು ಹಾಳು ಮಾಡಬಾರದು. ನಮ್ಮ ಧೀಶಕ್ತಿ ನಮ್ಮ ನಿಗ್ರಹದಲ್ಲಿಯೇ ಇದ್ದರೆ ಈ ಭಾವ, ರಾಗಗಳೇ ನಮ್ಮ ಮನಸ್ಸಿನ ಮಂಥನಕ್ಕೆ ಕಾರಣವಾಗಿ, ವಿಷವನ್ನೇ ನೀಡುವ ಬದಲು ಅಮೃತವನ್ನು ನೀಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT