ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪುಸತಿಯ ಜನ್ಮ

Last Updated 4 ಜೂನ್ 2021, 18:47 IST
ಅಕ್ಷರ ಗಾತ್ರ

ಹಿಂದೆ ವಿಪಶ್ಶೀ ಎಂಬ ಶಾಸ್ತರು ಭೂಮಿಯಲ್ಲಿ ಅವತರಿಸಿದರು. ಅವರು ಬಂಧುವತಿ ಎಂಬ ನಗರದ ಉದ್ಯಾನವನದಲ್ಲಿ ವಿಹಾರ ಮಾಡುತ್ತಿದ್ದಾಗ, ಆ ನಗರದ ರಾಜ ಬಂಧುಮರಾಜನಿಗೆ ಶ್ರೀಮಂತನೊಬ್ಬ ಅತ್ಯಂತ ಅಪೂರ್ವವಾದ ಚಂದನದ ತುಂಡನ್ನು ಮತ್ತು ಲಕ್ಷ ಬೆಲೆಬಾಳುವ ಬಂಗಾರದ ಮಾಲೆಯನ್ನು ಕಾಣಿಕೆಯಾಗಿ ಇತ್ತ. ರಾಜನಿಗೆ ಇಬ್ಬರು ಹೆಣ್ಣುಮಕ್ಕಳು. ರಾಜ ಚಂದನವನ್ನು ಹಿರಿಯಳಿಗೆ ಮತ್ತು ಸುವರ್ಣಮಾಲೆಯನ್ನು ಕಿರಿಯಳಿಗೆ ಕೊಟ್ಟ. ಅವರಿಬ್ಬರೂ ಧರ್ಮಿಷ್ಠರು. ಅವುಗಳನ್ನು ತಮ್ಮ ದೇಹದ ಮೇಲೆ ಧರಿಸಲು ಇಚ್ಛಿಸದೆ. ಅದನ್ನು ಶಾಸ್ತರಿಗೆ ಅರ್ಪಿಸಬೇಕೆಂದು ತೀರ್ಮಾನಿಸಿದರು. ಹಿರಿಯ ಮಗಳು ಚಂದನವನ್ನು ಅರೆಸಿ, ಅದನ್ನು ಚಿನ್ನದ ಪೆಟ್ಟಿಗೆಯಲ್ಲಿ ತೆಗೆದುಕೊಂಡು ಉದ್ಯಾನವನಕ್ಕೆ ಹೋದಳು. ತಂಗಿ ಸುವರ್ಣಮಾಲೆಯನ್ನು ಚಿನ್ನದ ಪೆಟ್ಟಿಗೆಯಲ್ಲಿಟ್ಟು ಅಲ್ಲಿಗೇ ಬಂದಳು.

ಅಕ್ಕ ಗಂಧದ ಪುಡಿಯನ್ನು ಶಾಸ್ತರ ಸುವರ್ಣಕಾಂತಿಯ ಮೈಗೆ ಲೇಪಿಸಿ, ಉಳಿದದ್ದನ್ನು ಅವರ ಸುತ್ತ ಹರಡಿ, ‘ಭಂತೇ ನಾನು ಮುಂದೆ ನಿನ್ನಂಥ ಬುದ್ಧನ ತಾಯಿಯಾಗುವಂತೆ ಅನುಗ್ರಹಿಸಿ’ ಎಂದು ಕೇಳಿದಳು. ತಂಗಿ ‘ಭಂತೇ, ನಾನು ಅರ್ಹತ್ವವನ್ನು ಪಡೆಯುವವರೆಗೆ ಈ ಸುವರ್ಣಮಾಲೆ ನನ್ನ ದೇಹದಲ್ಲೇ ಇರುವಂತೆ ಕರುಣಿಸಿ’ ಎಂದು ಬೇಡಿದಳು. ಶಾಸ್ತರು ಇಬ್ಬರಿಗೂ ಅನುಮೋದನೆ ಕೊಟ್ಟರು. ಅಕ್ಕ ಮುಂದೆ ಜನ್ಮಾಂತರಗಳಲ್ಲಿ ದೇಹ ಧರಿಸುತ್ತ ಕೊನೆಗೆ ಬುದ್ಧನ ತಾಯಿ ಮಾಯಾದೇವಿಯಾದಳು. ತಂಗಿಯೂ ಅನೇಕ ಜನ್ಮಗಳನ್ನು ಪಡೆದಳು. ಆಕೆ ಹಿಂದೆ ಶಾಸ್ತರನ್ನು ಪೂಜಿಸಿದ್ದರಿಂದ ಆಕೆ ಕಾಂತಿಯುತ ದೇಹದವಳಾಗಿ ಮುಂದೆ ಶಕ್ರದೇವರಾಜನ ಪಟ್ಟದರಸಿಯಾಗಿ ಹುಟ್ಟಿದಳು. ಎಷ್ಟೋ ಕಾಲ ದೇವಲೋಕದಲ್ಲಿ ಇದ್ದ ಮೇಲೆ, ಶಕ್ರನಿಗೆ ಆಕೆಯ ಆಯಸ್ಸು ಅಲ್ಲಿ ಮುಗಿಯುತ್ತ ಬಂದದ್ದು ತಿಳಿಯಿತು. ಆಕೆಯನ್ನು ಶಕ್ರ ತನ್ನ ನಂದನವನಕ್ಕೆ ಕರೆದೊಯ್ದು ಕುಳ್ಳಿರಿಸಿ ಹೇಳಿದ, ‘ಪ್ರಿಯೆ, ಈಗ ನೀನು ಸ್ವರ್ಗದಲ್ಲಿರುವ ಸಮಯ ಮುಗಿಯುತ್ತ ಬಂದಿದೆ. ನೀನು ಮತ್ತೆ ಭೂಲೋಕಕ್ಕೆ ಮರಳಿ ಹೋಗಬೇಕಾಗುತ್ತದೆ’. ಆಕೆಗೆ ಚಿಂತೆಯಾಯಿತು. ‘ದೇವರಾಜ, ನನ್ನನ್ನು ಇಂಥ ರಮಣಿಯವಾದ ಸ್ವರ್ಗದಿಂದ ಕಳಿಸುವಂತಹ ಯಾವ ಅಪರಾಧವನ್ನು ಮಾಡಿದ್ದೇನೆ? ಬಿರುಗಾಳಿ ಮರವನ್ನು ಬೀಳಿಸುವಂತೆ ಯಾಕೆ ನನ್ನನ್ನು ಕೆಳಗೆ ತಳ್ಳುತ್ತಿದ್ದೀರಿ?’ ಎಂದು ಕೇಳಿದಳು. ಶಕ್ರ ಹೇಳಿದ, ‘ಪ್ರಿಯೆ, ನಿನ್ನಿಂದ ಯಾವ ಪಾಪವೂ ಆಗಿಲ್ಲ. ನೀನು ನನಗೆ ಅಪ್ರಿಯಳೂ ಅಲ್ಲ. ಆದರೆ ನಿನ್ನ ಪುಣ್ಯ ಮುಗಿದುಹೋಗುತ್ತಿದೆ. ಪುಣ್ಯ ಮುಗಿದ ಯಾರೂ ಇಲ್ಲಿ ಇರುವಂತಿಲ್ಲ’. ‘ಹಾಗಾದರೆ ಮುಂದೆ ನನ್ನ ಗತಿ ಏನು? ನಾನು ಎಲ್ಲಿಗೆ ಹೋಗಬೇಕು?’ ಎಂದು ಕೇಳಿದಳು. ಶಕ್ರ, ‘ನಿನಗೆ ಯಾವ ವರವನ್ನು ಬೇಕಾದರೂ ಕೊಡುತ್ತೇನೆ. ಅವುಗಳನ್ನು ಪಡೆದು ಭೂಲೋಕದಲ್ಲಿ ಸುಖವಾಗಿರು’ ಎಂದ.

ಹಾಗಾದರೆ ತನ್ನ ಅವಧಿ ಮುಗಿಯಿತು ಎಂದರಿತು, ‘ದೇವರಾಜ, ನನಗೆ ಸಿವಿರಾಜನ ಅರಮನೆಯಲ್ಲಿ ಪಟ್ಟದರಸಿಯಾಗುವ ವರ ಕೊಡು. ನನಗೆ ನೀಲಿ ಕಣ್ಣುಗಳು, ನೀಲಿ ಹುಬ್ಬುಗಳಿರಲಿ, ನನಗೆ ಅತ್ಯಂತ ಉದಾರಿಯಾದ, ಜಗತ್ತಿಗೆ ಗುರುವಾಗುವ ಮಗ ಜನಿಸಲಿ, ನನ್ನ ಹೆಸರು ಪುಸತಿ ಎಂದಾಗಲಿ, ನನ್ನ ಸ್ತನಗಳು ಎಂದಿಗೂ ಜೋತು ಬೀಳದಂತೆ ಬಿಗಿಯಾಗಿರಲಿ, ನನ್ನ ದೇಹಕ್ಕೆ ಮುಪ್ಪು ಬಾರದಿರಲಿ ಮತ್ತು ನನಗೆ ಸದಾಕಾಲ ಜನರ ಪ್ರೀತಿ ದೊರಕಲಿ’ ಎಂದ ಬೇಡಿದಳು. ಶಕ್ರ ವರಕೊಟ್ಟೆ ಎಂದು ಅನುಮೋದನೆ ಮಾಡಿ ಆಕೆ ಮದ್ರರಾಜನ ಪಟ್ಟದರಸಿಯ ಗರ್ಭದಲ್ಲಿ ಜನಿಸುವಂತೆ ಮಾಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT