ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಅಗತ್ಯವಾದ ಸೌಮ್ಯಭಾವ

Last Updated 15 ನವೆಂಬರ್ 2022, 20:15 IST
ಅಕ್ಷರ ಗಾತ್ರ

ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ |
ಭೀಮಸಾಹಸವಿರಲಿ ಹಗೆತನವನುಳಿದು ||
ನೇಮನಿಷ್ಠೆಗಳಿರಲಿ ಡಂಭ ಕಠಿಣತೆ ಬಿಟ್ಟು |
ಸೌಮ್ಯವೆಲ್ಲೆಡೆಯಿರಲಿ - ಮಂಕುತಿಮ್ಮ || 757 ||

ಪದ-ಅರ್ಥ: ನಿರ್ಭರವಿರಲಿ=ತುಂಬಿರಲಿ, ಹಗೆತನವನುಳಿದು=ಹಗೆತನವನು+ಉಳಿದು(ಬಿಟ್ಟು), ಡಂಭ=ಡಂಭಾಚಾರ, ತೋರಿಕೆ, ಸೌಮ್ಯವೆಲ್ಲೆಡೆಯಿರಲಿ=ಸೌಮ್ಯ (ಶಾಂತತೆ)+ಎಲ್ಲೆಡೆ+ಇರಲಿ.

ವಾಚ್ಯಾರ್ಥ: ಪ್ರೇಮ ವ್ಯಾಮೋಹವಾಗದೆ ತುಂಬಿರಲಿ, ಅಸಾಧ್ಯ ಸಾಹಸವಿರಲಿ ಆದರೆ ದ್ವೇಷ ಬೇಡ. ಆಚರಣೆಗಳಲ್ಲಿ ನೇಮನಿಷ್ಠೆಗಳು ಇರಲಿ, ಅವು ಕಠಿಣವೂ, ತೋರಿಕೆಯೂ ಆಗದಿರಲಿ. ಎಲ್ಲೆಡೆಯಲ್ಲಿ ಸೌಮ್ಯತೆ ಇರಲಿ.

ವಿವರಣೆ: ಮನುಷ್ಯನ ಜೀವನದಲ್ಲಿ ಸಾಧನೆಗೆ ಅನೇಕ ಗುಣಗಳಿವೆ. ಆದರೆ ಆ ಗುಣಗಳಿಗೆ ಕಸರು ಸೇರುವ ಸಾಧ್ಯತೆ ಹೆಚ್ಚು. ಹಾಗೆ ಆದಾಗ ಒಳ್ಳೆಯ ಗುಣವೇ ದೋಷವಾಗುತ್ತದೆ. ಪ್ರೇಮ ಅತ್ಯಂತ ಮಧುರವಾದ ಮತ್ತು ಅವಶ್ಯಕವಾದ ಭಾವ. ಅದು ಜೀವ-ಜೀವಗಳನ್ನು ಬೆಸೆಯುವ ಕೊಂಡಿ. ಅದುಸಂಪರ್ಕವನ್ನು ಸಂಬಂಧವನ್ನಾಗಿಸುತ್ತದೆ. ಆದರೆ ಉತ್ಕಟವಾದಾಗ ವ್ಯಾಮೋಹವಾಗುತ್ತದೆ. ವ್ಯಾಮೋಹ ಒಂದು ಬಂಧನ. ಅದು ಕಣ್ಣು ಕಟ್ಟಿಸುತ್ತದೆ. ತನ್ನವರ ದೋಷಗಳನ್ನು ಮುಚ್ಚಿಡುತ್ತದೆ. ಅವರ ಏಳ್ಗೆಗಾಗಿ, ಕಾಪಾಡುವುದಕ್ಕಾಗಿ ಅನ್ಯಾಯಗಳನ್ನು ಮಾಡಿಸುತ್ತದೆ. ಮಕ್ಕಳ ಮೇಲೆ ಪ್ರೇಮವಿರುವುದು ನ್ಯಾಯ ಮತ್ತು ಸಹಜ. ಆದರೆ ಮಗ ದುರ್ಯೋಧನ ಮಾಡಿದ ಪಾಪಕಾರ್ಯಗಳನ್ನು ಅನುಮೋದಿಸುತ್ತ ವಂಶಹಾನಿಗೆ ಕಾರಣವಾದದ್ದು ಧೃತರಾಷ್ಟ್ರನ ವ್ಯಾಮೋಹ. ಕಗ್ಗದ ಮೊದಲನೆಯ ಸಾಲಿನ ಆಶಯ ಇದು. ವ್ಯಾಮೋಹವಾಗದ ಪ್ರೇಮ ತುಂಬಿರಲಿ.

ಮನುಷ್ಯನಲ್ಲಿರುವ ಉತ್ಸಾಹ, ಕುತೂಹಲ ಮತ್ತು ಅದಮ್ಯ ಶಕ್ತಿಗಳು ಅನೇಕ ಸಾಹಸಕಾರ್ಯಗಳಿಗೆ ಪ್ರೇರಕವಾಗಿವೆ. ಸಾಹಸವೂ ಒಂದು ಮನೋಧರ್ಮ, ಪರಿಶುದ್ಧ ರೂಪದಲ್ಲಿ. ಅದು ಮನುಷ್ಯನನ್ನು ಅಂತರಿಕ್ಷಕ್ಕೆ ಹಾರಿಸುತ್ತದೆ, ಸಮುದ್ರದ ತಳವನ್ನು ಸವರುವಂತೆ ಮಾಡುತ್ತದೆ, ಪರ್ವತದ ಶಿಖರಗಳನ್ನು ಏರಿಸುತ್ತದೆ. ಇವೆಲ್ಲ ಒಳ್ಳೆಯವೆ. ಆದರೆ ಸಾಹಸವೃತ್ತಿಯಲ್ಲಿ ದ್ವೇಷ ಸೇರಿಕೊಂಡರೆ ಅನಾಹುತವನ್ನು ಉಂಟುಮಾಡುತ್ತದೆ. ದೊಡ್ಡ ದೊಡ್ಡ ವ್ಯವಹಾರಗಳನ್ನು ನಡೆಸುವುದು ಸಾಹಸ. ಆದರೆ ತಮ್ಮ ಉದ್ಯಮ ದೊಡ್ಡದಾಗಲಿಯೆಂದು ಪ್ರತಿಸ್ಪರ್ಧಿಗಳನ್ನು ನಾಶಮಾಡುವುದು ಅಪಚಾರ.

ಸಂಶೋಧನೆ ಒಂದು ಸಾಹಸ ಆದರೆ ಆ ಸಂಶೋಧನೆಯಿಂದ ಇತರರನ್ನು ನಾಶಮಾಡುವುದು ನೀಚತನ. ಭೀಮಸಾಹಸವೆಂದರೆ ಅಪರಿಮಿತವಾದ, ಅನೂಹ್ಯವಾದ ಸಾಹಸ. ಅದರಲ್ಲಿ ದ್ವೇಷವಿಲ್ಲದಿದ್ದರೆ ಅದು ಲೋಕೋಪಕಾರಿ.ನೇಮನಿಷ್ಠೆಗಳು ಬದುಕಿನ ಅಲಂಕಾರಗಳು. ಅವುಬದುಕಿನ ನಡೆಯನ್ನು ನೇರಗೊಳಿಸುವ ಸಾಧನಗಳು.ಆದರೆ ಅವು ತೋರಿಕೆಯವಾದರೆ, ಕೇವಲ ಪ್ರದರ್ಶನಕ್ಕೆಸೀಮಿತವಾದರೆ, ಮುಖವಾಡಗಳಾಗುತ್ತವೆ.

ನಮ್ಮ ನೇಮನಿಷ್ಠೆಗಳಲ್ಲಿ ಕಠಿಣತೆ, ಜಡತೆ ಬೇಡ, ಅವುಗಳಲ್ಲಿ ಡಂಭಾಚಾರ ಬೇಡ. ನಮಗೆ ಬೇಕಾದದ್ದು ಸೌಮ್ಯತೆ. ಸೌಮ್ಯತೆಯೆಂದರೆ ಅಶಕ್ತತೆಯಲ್ಲ, ಹೇಡಿತನವಲ್ಲ. ಶಕ್ತಿ ಇದ್ದೂ ಅದರ ದುರ್ಬಳಕೆಯಾಗದಂತೆ ನೋಡಿಕೊಳ್ಳುವ ಸಂಯಮವೇ ಸೌಮ್ಯಭಾವ. ಅದು ಯಾವುದರಲ್ಲಿಯೂ ಅತಿಯಾಗಬಾರದು. ಈ ಸೌಮ್ಯಭಾವ ಎಲ್ಲೆಡೆಗೆ ಹರಡಿದಾಗಲೇ ಬಾಳಿಗೊಂದು ಸುಗಂಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT